Eid Milad Un Nabi 2022: ಸರಳ ಜೀವನದ ಆದರ್ಶ ದಾರಿ ತೋರಿದ ಪ್ರವಾದಿ

By Govindaraj SFirst Published Oct 9, 2022, 8:02 AM IST
Highlights

ಪ್ರವಾದಿ ಮುಹಮ್ಮದರು ಜನಿಸಿದ, ಇಸ್ಲಾಮಿಕ್‌ ಕ್ಯಾಲೆಂಡರ್‌ನ 3ನೇ ತಿಂಗಳು ರಬೀವುಲ್‌ ಅವ್ವಲ್‌ ಮತ್ತೊಮ್ತೆ ಬಂದಿದೆ. ಈ ತಿಂಗಳು ಜಾಗತಿಕ ಮುಸ್ಲಿಮರಿಗೆ ಅತ್ಯಂತ ಪುಣ್ಯದ ಮಾಸ. ಈ ರಬೀವುಲ್‌ ಅವ್ವಲ್‌ ತಿಂಗಳ 12ರಂದು ಜಗತ್ತಿನೆಲ್ಲೆಡೆ ಮೀಲಾದುನ್ನಬಿ ಅಥವಾ ಈದ್‌ ಮಿಲಾದ್‌ ಆಚರಿಸಲಾಗುತ್ತದೆ.

ಸಬೀಹಾ ಫಾತಿಮಾ, ಮಂಗಳೂರು

ಇಂದು ಪ್ರವಾದಿ ಮುಹಮ್ಮದರು ಜನಿಸಿದ ದಿನ. ವಿಶ್ವಕ್ಕೇ ಮಾದರಿ ಎಂದು ಕುರ್‌ಆನ್‌ ಪರಿಚಯಿಸಿದ ಮುಹಮ್ಮದರ ಜನ್ಮದಿನವನ್ನು ವಿಶ್ವದೆಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ. ಅತಿರೇಕವಿಲ್ಲದ ಸರಳ ಜೀವನ ವಿಧಾನವನ್ನು ಬೋಧಿಸಿದ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಿದರೆ ನಮ್ಮದು ಮಾದರಿ ಸಮಾಜವಾಗುವುದರಲ್ಲಿ ಸಂಶಯವಿಲ್ಲ.

Latest Videos

ಪ್ರವಾದಿ ಮುಹಮ್ಮದರು ಜನಿಸಿದ, ಇಸ್ಲಾಮಿಕ್‌ ಕ್ಯಾಲೆಂಡರ್‌ನ 3ನೇ ತಿಂಗಳು ರಬೀವುಲ್‌ ಅವ್ವಲ್‌ ಮತ್ತೊಮ್ತೆ ಬಂದಿದೆ. ಈ ತಿಂಗಳು ಜಾಗತಿಕ ಮುಸ್ಲಿಮರಿಗೆ ಅತ್ಯಂತ ಪುಣ್ಯದ ಮಾಸ. ಈ ರಬೀವುಲ್‌ ಅವ್ವಲ್‌ ತಿಂಗಳ 12ರಂದು ಜಗತ್ತಿನೆಲ್ಲೆಡೆ ಮೀಲಾದುನ್ನಬಿ ಅಥವಾ ಈದ್‌ ಮಿಲಾದ್‌ ಆಚರಿಸಲಾಗುತ್ತದೆ. ಇಡೀ ವಿಶ್ವಕ್ಕೇ ಮಾದರಿಯಾಗಿ ತಮ್ಮನ್ನು ಸೃಷ್ಟಿಸಲಾಗಿದೆ ಎಂದು ಪ್ರವಾದಿ ಮುಹಮ್ಮದ್‌ ಅವರ ಬಗ್ಗೆ ಕುರ್‌ಆನ್‌ ಹೇಳುತ್ತದೆ. ಮದ್ಯಪಾನ, ಮಹಿಳಾ ಶೋಷಣೆ, ಅನ್ಯಾಯ, ಕರಿಯ ಬಿಳಿಯನೆಂಬ ಭೇದಭಾವಗಳನ್ನೆಲ್ಲಾ ತೊಡೆದು ಹಾಕಿದ ಮುಹಮ್ಮದರು ಜಗತ್ತಿಗೆ ಶಾಂತಿಯ ಸಂದೇಶಗಳನ್ನು ಪಸರಿಸಿದರು.

ಪ್ರವಾದಿಯವರು ತಮ್ಮ ಅನುಯಾಯಿಗಳಿಗೆ ಬೋಧಿಸಿದ ಪ್ರಮುಖ ವಿಚಾರಗಳಲ್ಲಿ ಒಂದು ಮದ್ಯ ನಿಷೇಧ. ಮದ್ಯವು ಪಾಪದ ಜನನಿ, ಎಲ್ಲ ಕೆಡುಕುಗಳ ಕೀಲಿಕೈ ಎಂದು ಪ್ರವಾದಿಯವರು ಎಚ್ಚರಿಸಿದರು. ಮುಹಮ್ಮದರು 1400 ವರ್ಷಗಳ ಹಿಂದೆ ಮಕ್ಕಾದಲ್ಲಿ ಜನಿಸಿದಾಗ ಮದ್ಯಪಾನ ಅಲ್ಲಿ ಸಾಮಾನ್ಯ ವಿಷಯವಾಗಿತ್ತು. ಇಂದಿನಂತೆ ಬಹಳ ಸುಲಭದಲ್ಲಿ ಮದ್ಯ ಲಭಿಸುತ್ತಿತ್ತು. ಮದ್ಯಪಾನ ಮಾಡಿ ನಶೆಯಲ್ಲಿರುವುದನ್ನು ಜನರು ಬಹಳ ಇಷ್ಟಪಡುತ್ತಿದ್ದ ಕಾಲವಾಗಿತ್ತು. ಮುಹಮ್ಮದರು ಅಂತಹ ವಾತಾವರಣದಲ್ಲಿ ಜನಿಸಿದರೂ ಎಂದಿಗೂ ಮದ್ಯವನ್ನು ಮುಟ್ಟಿರಲಿಲ್ಲ. ಅವರು ಸಮಾಜವನ್ನು ಸುಧಾರಣೆ ಮಾಡಲು ಪ್ರಯತ್ನಿಸಿದಾಗ ಮೊದಲು ಎತ್ತಿಕೊಂಡ ವಿಷಯ ಮದ್ಯ ನಿಷೇಧವಾಗಿತ್ತು.

Gandhi Jayanti 2022: ಲೈಫ್‌ನಲ್ಲಿ ಅಳವಡಿಸಿಕೊಳ್ಳಬೇಕಾದ ಗಾಂಧೀಜಿಯವರ ಮಾತುಗಳು

ತಾವು ಸಚ್ಚಾರಿತ್ರ್ಯವಂತರು, ಸಜ್ಜನರು ಎಂದು ಕರೆಸಿಕೊಳ್ಳುವ ವ್ಯಕ್ತಿಗಳು ಕೂಡ ಮದ್ಯಪಾನಿಗಳಾಗಿ ಮಾರ್ಪಟ್ಟಿರುವ ಸಮಾಜದಲ್ಲಿ ಬದುಕುತ್ತಿರುವ ನಮಗೆ ಮದ್ಯವು ಸಮಾಜದಲ್ಲಿ ಉಂಟುಮಾಡುವ ವಿನಾಶಗಳ ಬಗ್ಗೆ ಆಗಲೇ ಎಚ್ಚರಿಸಿದ್ದ ಪ್ರವಾದಿಯವರು ಆದರ್ಶರಾಗಿ ನಿಲ್ಲುತ್ತಾರೆ. ಮದ್ಯವನ್ನು ಸಂಪೂರ್ಣವಾಗಿ ನಿಷೇಧಿಸದೆ ಯಾವುದೇ ಸಮಾಜವನ್ನು ಕೆಡುಕಿನಿಂದ ಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಸಾರಿದ ಅವರು, ಸಂಪೂರ್ಣ ಪಾನ ನಿಷೇಧ ಕಾಯ್ದೆಯನ್ನು ತಮ್ಮ ಆಡಳಿತ ಕಾಲದಲ್ಲಿ ಜಾರಿಗೆ ತಂದರು.

ಧರ್ಮ ವೈಯಕ್ತಿಕ ವಿಷಯವಲ್ಲ: ಪ್ರವಾದಿಯಾಗಿ ನಿಯುಕ್ತಿಗೊಂಡ ಬಳಿಕ ತಮ್ಮ 40ನೇ ವರ್ಷದಿಂದ ಮುಹಮ್ಮದರು ತಮ್ಮ ಸಂಪೂರ್ಣ ಜೀವನವನ್ನು ದೇವನ ಸಂದೇಶವನ್ನು ಜನರಿಗೆ ತಲುಪಿಸುವುದಕ್ಕೆ ಮುಡಿಪಾಗಿಟ್ಟರು. ಧರ್ಮವು ಕೇವಲ ವೈಯಕ್ತಿಕ ವಿಷಯವಲ್ಲ. ಧರ್ಮವು ದೇವನೊಂದಿಗೆ ಮನುಷ್ಯನ ಸಂಬಂಧವನ್ನು ಜೋಡಿಸುವಂತೆ, ಮನುಷ್ಯರ ಮಧ್ಯೆಯು ಸಂಬಂಧವನ್ನು ಜೋಡಿಸುತ್ತದೆ. ಪರಸ್ಪರ ಮನುಷ್ಯರ ನಡುವಿನ ಸಂಬಂಧವನ್ನು ಜೋಡಿಸುತ್ತದೆ. ದೇವನೊಂದಿಗಿನ ಸರಿಯಾದ ಸಂಬಂಧವನ್ನು ಹೊಂದಿದ ವ್ಯಕ್ತಿಗೆ ಮಾತ್ರ ತನ್ನ ಜೀವನದ ಎಲ್ಲ ಸಂಬಂಧದಲ್ಲಿಯೂ ಪ್ರೀತಿ, ವಾತ್ಸಲ್ಯ, ನ್ಯಾಯ ಮತ್ತು ಬದ್ಧತೆಯೊಂದಿಗೆ ವ್ಯವಹರಿಸಲು ಸಾಧ್ಯ ಎಂಬುದನ್ನು ತಮ್ಮ ಜೀವನದಲ್ಲಿ ಪ್ರಾಯೋಗಿಕವಾಗಿ ತೋರಿಸಿಕೊಟ್ಟರು. ಕೇವಲ ತಮ್ಮ 23 ವರ್ಷದ ಹೃಸ್ವವಾದ ಪ್ರವಾದಿತ್ವದ ಜೀವನದಲ್ಲಿ ಮುಹಮ್ಮದರು ಪ್ರಾಯೋಗಿಕವಾಗಿ ಈ ಮಾದರಿಯನ್ನು ಜಗತ್ತಿನ ಮುಂದಿಟ್ಟರು.

ಮೇಲು-ಕೀಳು ಮುಕ್ತ ಸಮಾಜ: ಸಮಾನತೆ ಮೇಲು-ಕೀಳು ಎಂಬ ಭಾವನೆಯು ತಾಂಡವವಾಡುತ್ತಿರುವ ಒಂದು ಸಮಾಜದಲ್ಲಿ ನಾವಿಂದು ಬದುಕುತ್ತಿದ್ದೇವೆ. ಜಾತಿ, ಪಂಗಡ, ವರ್ಣಗಳ ಆಧಾರದಲ್ಲಿ ತುಳಿತಕ್ಕೆ ಒಳಗಾಗುತ್ತಿರುವ ಇಂದಿನ ಸಮಾಜದಲ್ಲಿ ಪ್ರವಾದಿಯವರ ಸಮಾನತೆಯ ಸಂದೇಶವು ಬಹಳ ಪ್ರಾಮುಖ್ಯವೆನಿಸುತ್ತದೆ.

ಎಲ್ಲ ಮನುಷ್ಯರು ಒಂದೇ ದೇವನ ಸೃಷ್ಟಿಗಳು. ಮನುಷ್ಯರೆಂಬ ನೆಲೆಯಲ್ಲಿ ನಮ್ಮ ಮಧ್ಯೆ ಯಾವುದೇ ವ್ಯತ್ಯಾಸವಿರಕೂಡದು. ವ್ಯಕ್ತಿ ಒಳ್ಳೆಯವನಾಗಬೇಕಾದರೆ ಅವನಲ್ಲಿ ಧರ್ಮ ನಿಷ್ಠೆ ಇರಬೇಕು. ಯಾರು ಹೆಚ್ಚು ದೇವನ ಆದೇಶಕ್ಕೆ ಬದ್ಧರಾಗಿ ನಡೆದುಕೊಳ್ಳುತ್ತಾರೋ ಅಂತಹ ವ್ಯಕ್ತಿಗಳು ದೇವನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಮನುಷ್ಯ ಸೃಷ್ಟಿಸಿಕೊಂಡ ಈ ಉಚ್ಚ ನೀಚತೆಯ ವ್ಯವಸ್ಥೆಗೆ ಅವನ ಬಳಿ ಕವಡೆ ಕಾಸಿನ ಬೆಲೆಯೂ ಇಲ್ಲ ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಮಹಾನ್‌ ಸಮಾನತೆಯ ಬೋಧಕರಾದ ಪ್ರವಾದಿ ಮುಹಮ್ಮದ್‌, ಮನುಷ್ಯ ಸಮಾನತೆಯ ಅತ್ಯುಜ್ವಲ ಮಾದರಿಯಾಗಿದ್ದರು.

ಕರಿಯ, ನೀಗ್ರೋ, ಗುಲಾಮರಾಗಿದ್ದ ಬಿಲಾಲ್‌ರನ್ನು ಪ್ರವಾದಿಯವರು ತಮ್ಮ ಎದೆಗೆ ಸೇರಿಸಿಕೊಂಡು ಅಪ್ಪಿಕೊಂಡರು. ಮಕ್ಕಾ ವಿಜಯದ ಸಂದರ್ದಲ್ಲಿ ಆಝಾನ್‌ ಕರೆ ನೀಡಲು ಬಿಲಾಲ್‌ರನ್ನೇ ನೇಮಿಸಿ ಕಪ್ಪು ವರ್ಣ ತಿರಸ್ಕರಿಸುವಂತಹುದಲ್ಲ ಎಂದು ಸಾರಿದರು. ಅಲ್ಲಿಂದ ಬಿಲಾಲ್‌ ವಿಶ್ವಸಮಾನತೆ ಮತ್ತು ಮಾನವ ಏಕತೆಯ ಪ್ರತಿರೂಪವಾಗಿ ‘ಆಝಾನ್‌’ ಕರೆಯನ್ನು ಮೊಳಗಿಸಿದರು. ಸದಾ ಬಡವ-ಬಲ್ಲಿದರ, ಹಿಂದುಳಿದ ವ್ಯಕ್ತಿಗಳ ಜೊತೆ ನಿಂತಿದ್ದ ಪ್ರವಾದಿ ಮುಹಮ್ಮದರು ಆ ಕಾರಣಕ್ಕಾಗಿ ಕುರೈಶ್‌ ಗೋತ್ರದ ಶ್ರೀಮಂತ ವ್ಯಕ್ತಿಗಳ ಮಧ್ಯೆ ಅಪಹಾಸ್ಯಕೀಡಾಗಿದ್ದರು. ಆದರೆ ಅವರು ಅದನ್ನು ಪರಿಗಣಿಸಲಿಲ್ಲ. ಮನುಷ್ಯತ್ವಕ್ಕೆ ಮಾನವೀಯತೆಗೆ ಪ್ರವಾದಿಯವರು ನೀಡಿದ ಮಹತ್ವವೇನು ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದಾಗಿದೆ.

ಸ್ತ್ರೀ ರಕ್ಷಣೆಗೆ ಪಣ ತೊಟ್ಟಿದ್ದ ಪ್ರವಾದಿ: ಎಲ್ಲ ಸಮಾಜಗಳಲ್ಲಿಯೂ ಅಸ್ತಿತ್ವದಲ್ಲಿದ್ದಂತೆ ಆ ಕಾಲದಲ್ಲಿಯೂ ಮಹಿಳೆಯರ ಪಾಡು ಶೋಚನೀಯವಾಗಿತ್ತು. ಆದರೆ ಪ್ರವಾದಿ ಮುಹಮ್ಮದರು ಹೆಣ್ಣಿನ ಜೀವನವನ್ನು ಸುರಕ್ಷಿತಗೊಳಿಸಿದರು. ಹೆಣ್ಣು ದೇವನ ಅನುಗ್ರಹ. ಹೆಣ್ಣನ್ನು ತಾಯಿ, ಸಹೋದರಿ, ಪತ್ನಿ ಮತ್ತು ಮಗಳು ಎಂಬ ನೆಲೆಯಲ್ಲಿ ಗೌರವದೊಂದಿಗೆ ಸ್ವೀಕರಿಸಿ. ಮಹಿಳೆಯ ಹಕ್ಕು ಬಾಧ್ಯತೆಗಳನ್ನು ಈಡೇರಿಸಿದರೆ ನಿಮಗೆ ಸ್ವರ್ಗ ಲಭಿಸುತ್ತದೆ ಎಂಬ ವಾಗ್ದಾನವನ್ನು ಜಗತ್ತಿನ ಮುಂದಿಟ್ಟರು. ಹೆಣ್ಣು, ಕಾಮುಕರ ಬಲೆಗೆ ಬೀಳದಂತೆ ಸಮಾಜದಲ್ಲಿ ನೈತಿಕ ಮೌಲ್ಯಗಳನ್ನು ವ್ಯಾಪಕಗೊಳಿಸಿದರು. ವ್ಯಭಿಚಾರದ ಕಡೆಗೆ ಮನುಷ್ಯನನ್ನು ಪ್ರೇರೇಸುವ ಎಲ್ಲ ವಿಭಾಗಗಳಿಗೂ ಇತಿಶ್ರೀ ಹಾಡಿದರು.

ಸಲಿಂಗಕಾಮ, ಲಿವಿಂಗ್‌ ಟುಗೆದರ್‌ ಎಂಬಂತಹ ಸಂಸ್ಕೃತಿರಹಿತ ಸಮಾಜದಲ್ಲಿ ಬದುಕುತ್ತಿರುವ ನಾವು ಪ್ರವಾದಿ ಮುಹಮ್ಮದರು ಹೆಣ್ಣು-ಗಂಡಿನ ಸಂಬಂಧಕ್ಕೆ ಹಾಗೂ ವೈವಾಹಿಕ ಜೀವನದ ಪಾವಿತ್ರ್ಯಕ್ಕೆ ಎಷ್ಟುಮಹತ್ವವನ್ನು ನೀಡಿದ್ದರು ಎಂಬುದನ್ನು ಕಲಿಯಬೇಕಿದೆ. ಪ್ರಾಯ ಪೂರ್ತಿಯಾದ ಹೆಣ್ಣುಮಗಳನ್ನು ದೇವಭಯವುಳ್ಳ ವ್ಯಕ್ತಿಗೆ ವಿವಾಹ ಮಾಡಿಕೊಡಬೇಕು. ಇದು ಅವಳ ಸಂರಕ್ಷಕರ ಬಹಳ ದೊಡ್ಡ ಹೊಣೆಗಾರಿಕೆಯಾಗಿದೆ. ಸಮಾಜದಲ್ಲಿ ಪ್ರಾಯಪ್ರಬುದ್ಧರು ಅವಿವಾಹಿತರಾಗಿ ಉಳಿಯಬಾರದು. ಯಾವುದಾದರೂ ಕಾರಣಕ್ಕೆ ಅವರು ಅವಿವಾಹಿತರಾಗಿ ಉಳಿದುಬಿಟ್ಟರೆ ಅವರಿಗೆ ವಿವಾಹಕ್ಕೆ ಅನುಕೂಲವನ್ನು ಮಾಡಿಕೊಡುವುದು ಒಟ್ಟು ಸಮಾಜದ ಜವಾಬ್ದಾರಿ ಎಂಬುದಾಗಿ ಕಲಿಸಿಕೊಟ್ಟರು.

ಎಲ್ಲ ಅನಾಚಾರಗಳ ಬಾಗಿಲಿಗೆ ಬೀಗ: ಮನುಷ್ಯನ ಖಾಸಗಿ ಜೀವನದ ಬಗ್ಗೆ ಎಚ್ಚರಿಸಿರುವ ಪ್ರವಾದಿವರ್ಯರು ನಿನ್ನ ದಾಂಪತ್ಯ ಜೀವನದ ರಹಸ್ಯ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಎಂಬುದಾಗಿ ಕಟ್ಟುನಿಟ್ಟಿನ ಆದೇಶವನ್ನು ಜನತೆಗೆ ನೀಡಿದ್ದಾರೆ. ಎಲ್ಲ ರೀತಿಯ ಕೆಡುಕುಗಳು ಬಹಳ ಸುಲಭವೆಂಬಂತೆ ಸಹಜವೆಂಬಂತೆ ಘಟಿಸುತ್ತಿರುವ ಇಂದಿನ ದಿನ ಮಾನಗಳಲ್ಲಿ ಬದುಕಿನ ಪಾವಿತ್ರ್ಯವನ್ನು ಕಾಪಾಡಲಿಕ್ಕಾಗಿ ಪ್ರವಾದಿ ಮುಹಮ್ಮದರು ಕೌಟುಂಬಿಕ ಜೀವನದಲ್ಲಿ ಪಾಲಿಸಬೇಕಾದ ಯಾವ ನಿಯಮ ನಿರ್ದೇಶನಗಳನ್ನು ನೀಡಿರುವರೋ ಅದನ್ನು ಚಾಚೂ ತಪ್ಪದೇ ಪಾಲಿಸುವುದು ಅನಿವಾರ್ಯ. ನೀವು, ನಿಮ್ಮ ಕುಟುಂಬ ಅನ್ಯಾಯವಾಗಿ ಸಂಪಾದಿಸಿದ ಒಂದು ತುತ್ತು ಕೂಡ ಹೊಟ್ಟೆಗೆ ಸೇರದಂತೆ ಜಾಗರೂಕತೆಯನ್ನು ಪಾಲಿಸಬೇಕು ಎಂಬುದಾಗಿ ಆದೇಶಿಸಿದರು. ಬಡ್ಡಿ, ಮೋಸ, ಕಾಳಸಂತೆ, ಜೂಜು, ಲಾಟರಿ, ಲಂಚ ಮುಂತಾದ ಎಲ್ಲ ಅನಾಚಾರದ ಬಾಗಿಲುಗಳನ್ನು ಪ್ರವಾದಿಯವರು ಮುಚ್ಚಿಬಿಟ್ಟರು.

Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌

ಇದು ಸರಳ ಜೀವನ ವಿಧಾನ: ಪ್ರವಾದಿಯವರು ಯಾವ ಆದರ್ಶವನ್ನು ಸಮಾಜದ ಮುಂದಿಟ್ಟರೋ ಅದು ಬಹಳ ಸರಳವಾದ ಜೀವನ ವಿಧಾನವಾಗಿದೆ. ಯಾವುದೇ ಅತಿರೇಕಗಳಿಲ್ಲದ ಸುಲಭದಲ್ಲಿ ಎಲ್ಲರಿಂದಲೂ ಅನುಸರಿಸಲು ಸಾಧ್ಯವಾಗುವ ಜೀವನ ವಿಧಾನ. ಪ್ರವಾದಿಯವರು ಓರ್ವ ಸಮರ್ಥ ಆಡಳಿತಗಾರರಾಗಿದ್ದರು. ಅದೇ ವೇಳೆ ಓರ್ವ ಸಮರ್ಥ ಕುಟುಂಬ ನಾಯಕರೂ ಆಗಿದ್ದರು. ಪ್ರವಾದಿಯಾಗಿದ್ದರೂ ತಮ್ಮ ಮೊಮ್ಮಕ್ಕಳನ್ನು ಹೆಗಲಿಗೇರಿಸಿ ಆಟವಾಡಿಸುವ ವಾತ್ಸಲ್ಯಮಯಿ ಅಜ್ಜ ಕೂಡ ಆಗಿದ್ದರು. ಏಕಕಾಲದಲ್ಲಿ ಹಲವು ರೀತಿಯ ಹೊಣೆಗಾರಿಕೆಗಳನ್ನು ನಿರ್ವಹಿಸಬೇಕಾಗಿ ಬಂದರೂ ಯಾವುದೇ ಹೊಣೆಗಾರಿಕೆಗೆ ಚ್ಯುತಿ ಬಾರದ ರೀತಿಯಲ್ಲಿ ಬಹಳ ಸಮತೋಲನದೊಂದಿಗೆ ಜೀವನವನ್ನು ಮುನ್ನಡೆಸುವ ಮಹಾ ಪಾಠವನ್ನು ಪ್ರವಾದಿಯವರ ಜೀವನದಿಂದ ಕಲಿಯಬೇಕಿದೆ. ಪ್ರವಾದಿಯವರು ತಮ್ಮ ಅನುಯಾಯಿಗಳನ್ನು ‘ಸ್ವಹಾಬಿಗಳು’ ಅಂದರೆ ಸಂಗಾತಿಗಳು ಎಂದು ಕರೆದರು. ಅವರಿಗೆ ಪ್ರವಾದಿಯವರ ಮಾದರಿಯನ್ನು ಅನುಸರಿಸುವುದರಲ್ಲಿ ಬಹಳ ಆಸಕ್ತಿ ಇತ್ತು.

ಇದು ಪ್ರವಾದಿಯವರು ಬೋಧಿಸಿದ ಆದರ್ಶ. ಅತಿರೇಕವಿಲ್ಲದ ಜೀವನ ವಿಧಾನ. ಇದನ್ನು ಅನುಸರಿಸುವುದು ಎಲ್ಲ ಮನುಷ್ಯರಿಗೂ ಸುಲಭ ಸಾಧ್ಯ. ಒಂದು ವೇಳೆ ಪ್ರವಾದಿಯವರ ಆದರ್ಶವನ್ನು ಚಾಚೂ ತಪ್ಪದೇ ಪಾಲಿಸುವ ಸಮಾಜವು ಅಸ್ತಿತ್ವಕ್ಕೆ ಬಂದರೆ ಖಂಡಿತವಾಗಿಯೂ ಆ ಸಮಾಜವು ಮಾದರಿ ಸಮಾಜವಾಗಿ ಬದಲಾಗುವುದರಲ್ಲಿ ಸಂಶಯವಿಲ್ಲ.

click me!