ಸರ್ಕಾರವೇಕೆ ಕೆಂಪೇಗೌಡರ ಪ್ರತಿಮೆ ನಿರ್ಮಿಸಿದೆ?: ಸಚಿವ ಸುಧಾಕರ್‌

By Govindaraj S  |  First Published Nov 9, 2022, 2:31 PM IST

ನಾಡಪ್ರಭು ಕೆಂಪೇಗೌಡರ ಆಡಳಿತದ ಮಾದರಿ, ಆಶಯ ಹಾಗೂ ಬದ್ಧತೆಯು ಬೆಂಗಳೂರು ಸೇರಿದಂತೆ ಜಗತ್ತಿನ ಎಲ್ಲಾ ಮಹಾನಗರಗಳ ಸಮಸ್ಯೆಗಳಿಗೂ ಪರಿಹಾರ ಸೂಚಿಸಬಲ್ಲದು. ಬೆಂಗಳೂರಿನಲ್ಲಿ ಸ್ಥಾಪಿಸಿರುವ ಕೆಂಪೇಗೌಡರ ‘ಪ್ರಗತಿಯ ಪ್ರತಿಮೆ’ಯ ಮೂಲಕ ಇತಿಹಾಸ ಮತ್ತೊಮ್ಮೆ ಮನನವಾಗಲಿ.


ಡಾ.ಕೆ.ಸುಧಾಕರ್‌, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

ಯಾವತ್ತೋ ನಡೆದ ಇತಿಹಾಸದ ಘಟನೆಗಳು ನಮಗೆ ಇಂದೇಕೆ ಪ್ರಸ್ತುತ ಎಂದು ಯುವಕ ಯುವತಿಯರು ಪ್ರಶ್ನೆ ಮಾಡುವುದು ಸಹಜ. ಆದರೆ ನಾವು ಭವಿಷ್ಯ ರೂಪಿಸಿಕೊಳ್ಳಬೇಕಾದರೆ ಇತಿಹಾಸ ತಿಳಿದಿರಲೇಬೇಕು. ಚರಿತ್ರೆ ತಿಳಿಯದವರು ಚರಿತ್ರೆ ಸೃಷ್ಟಿಸಲಾರರು. ನಮ್ಮ ನಾಡು, ನುಡಿಯ ಪ್ರಗತಿಗೆ ಮುನ್ನುಡಿ ಬರೆದ, ಭದ್ರ ಬುನಾದಿ ಹಾಕಿಕೊಟ್ಟಅನೇಕ ಮಹಾನುಭಾವರು ನಮಗೆ ಆದರ್ಶಪ್ರಾಯರು. ನಮ್ಮ ನಾಡು ಕಟ್ಟಿದ ಅಂತಹ ಪ್ರಾತಃಸ್ಮರಣೀಯರಲ್ಲಿ ಕೆಂಪೇಗೌಡರು ಅಗ್ರಗಣ್ಯರು. ನಾಡಪ್ರಭು ಕೆಂಪೇಗೌಡರ ಭವ್ಯ ಪ್ರತಿಮೆ ನಿರ್ಮಿಸುವ ಮೂಲಕ ನಾಡಿನ ಇತಿಹಾಸವನ್ನು ಅಜರಾಮರಗೊಳಿಸುವ ಮಹತ್ವದ ಹೆಜ್ಜೆಯೊಂದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇರಿಸುತ್ತಿದೆ.

Tap to resize

Latest Videos

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ‘ಪ್ರಗತಿಯ ಪ್ರತಿಮೆ’ಯನ್ನು ಪ್ರತಿಷ್ಠಾಪಿಸುವ ಮೂಲಕ ಬೆಂಗಳೂರಿಗೆ ಬಂದಿಳಿಯುವ ಪ್ರತಿಯೊಬ್ಬರಿಗೂ ಈ ವಿಶ್ವನಗರಿಯ ನಿರ್ಮಾತೃವನ್ನು ಪರಿಚಯಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಅತಿ ಹೆಚ್ಚು ಜನರ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿಯವರು ಈ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಇನ್ನಷ್ಟುಅರ್ಥಪೂರ್ಣ.

ಆರೋಗ್ಯ ಬಿಕ್ಕಟ್ಟು ಎದುರಿಸಲು ರಾಜ್ಯ ಸಮರ್ಥ: ಸಚಿವ ಸುಧಾಕರ್‌

ಪ್ರಧಾನಿ ಮೋದಿಯವರ ಹಾದಿಯಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಯುವಕರಾಗಿದ್ದಾಗಲೇ ದೇಶ ಪರ್ಯಟನೆ ಕೈಗೊಂಡು, ದೇಶದ ಬಹು ಸಂಸ್ಕೃತಿ, ಭಾಷೆ, ಪರಂಪರೆ ಹಾಗೂ ಜನಜೀವನ ಅರಿತಿದ್ದರು. ಭಾರತೀಯರ ಶಕ್ತಿ, ಸಾಮರ್ಥ್ಯದ ಬಗ್ಗೆ ಭಾರತೀಯರಾದ ನಮಗೇ ಅಳುಕು ಇದೆ. ಇದನ್ನು ಅರಿತಿದ್ದ ಸ್ವಾಮಿ ವಿವೇಕಾನಂದರು ಚಿಕಾಗೋದ ಧರ್ಮ ಸಮ್ಮೇಳನ ಸೇರಿದಂತೆ ಹಲವು ರೀತಿಯಲ್ಲಿ ಭಾರತೀಯ ಪರಂಪರೆಯ ಹಿರಿಮೆಯನ್ನು ತಿಳಿಸುವ ಕೆಲಸ ಮಾಡಿದರು. ಆ ಆದರ್ಶದ ಹೆಜ್ಜೆಯನ್ನೇ ತುಳಿದ ಪ್ರಧಾನಿ ನರೇಂದ್ರ ಮೋದಿ, ಕಾಶಿ ವಿಶ್ವನಾಥ ಕಾರಿಡಾರ್‌, ಉಜ್ಜಯನಿಯ ಮಹಾಕಾಲ ಕಾರಿಡಾರ್‌ ಸೇರಿದಂತೆ ಹಲವಾರು ರೀತಿಯಲ್ಲಿ ಪಾರಂಪರಿಕ, ಐತಿಹಾಸಿಕ ಕ್ಷೇತ್ರಗಳ ಹಿರಿಮೆಯನ್ನು ಸಾರಿ, ಅವುಗಳ ಸಂರಕ್ಷಣೆಗೆ ಆದ್ಯತೆ ನೀಡಿದರು. ಈ ತತ್ವವನ್ನೇ ರಾಜ್ಯದಲ್ಲೂ ಅನುಷ್ಠಾನ ಮಾಡಿದ ಹಿಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರು, ಬಸವಾದಿ ಶರಣರ ‘ಅನುಭವ ಮಂಟಪ’ದ ಆಧುನಿಕ ರೂಪವನ್ನು ಸಾಕಾರಗೊಳಿಸುವ ಯೋಜನೆಗೆ ಚಾಲನೆ ನೀಡಿದರು. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಈವರೆಗೆ ಮರೆಯಾದ ಇತಿಹಾಸವನ್ನು ಮತ್ತೆ ಮುಖ್ಯವಾಹಿನಿಗೆ ಎಳೆದುತಂದು ನಾಡಪ್ರಭುಗಳ ಚರಿತ್ರೆಯನ್ನು ಸಾರುವ ಕೆಲಸ ಮಾಡುತ್ತಿದ್ದಾರೆ.

ಕೆಂಪೇಗೌಡರ ಚರಿತ್ರೆಯ ಮನನ: ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ, ಅಭಿವೃದ್ಧಿಯಲ್ಲಿ ಮೂರು ದೃಷ್ಟಿಕೋನಗಳನ್ನು ಹೊಂದಿದೆ. ಅದುವೇ ಈ ಹಿಂದೆ ಹೇಳಿದ ಭೂತ, ವರ್ತಮಾನ ಹಾಗೂ ಭವಿಷ್ಯ. ಕೆಂಪೇಗೌಡರ ವಿಚಾರದಲ್ಲೂ ಈ ದೃಷ್ಟಿಕೋನವನ್ನು ಸರ್ಕಾರ ಹೊಂದಿದೆ. ಕೆಂಪೇಗೌಡರ ಇತಿಹಾಸವನ್ನು ಅರಿಯುವುದು, ಆ ಇತಿಹಾಸವನ್ನು ಪ್ರಚಾರ ಮಾಡಲು ಪ್ರಸ್ತುತ ಕ್ರಮ ವಹಿಸುವುದು ಹಾಗೂ ಭವಿಷ್ಯದಲ್ಲಿ ಮುಂದಿನ ಪೀಳಿಗೆಗೂ ಅವರ ಸ್ಮರಣೆಯನ್ನು ಮುಂದುವರಿಸುವುದೇ ಪ್ರಗತಿಯ ಪ್ರತಿಮೆಯ ಧ್ಯೇಯೋದ್ದೇಶ. ಇದನ್ನೇ ಬಿಜೆಪಿ ಪರಂಪರೆ, ಸಂಸ್ಕೃತಿಗಳ ರಕ್ಷಣೆಯ ಯೋಜನೆಗಳಲ್ಲೂ ಮಾಡಿಕೊಂಡು ಬಂದಿದೆ. ಇದು ಇತಿಹಾಸದ ಪುನರುಜ್ಜೀವನದ ಮಹಾ ಕಾರ್ಯ.

ನವ ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರು, ಆ ಕಾಲದಲ್ಲೇ ಬೆಂಗಳೂರು ಹೇಗಿರಬೇಕೆಂಬ ಕಲ್ಪನೆ ಇಟ್ಟುಕೊಂಡು ನಾಡು ಕಟ್ಟಿದ್ದರು. ಆಯಾ ವೃತ್ತಿಗಳ ಹೆಸರಿನಲ್ಲಿದ್ದ 54 ಪೇಟೆಗಳನ್ನು ಒಂದೇ ನಗರದಲ್ಲಿ ಬೆಳೆಸಿ, ಜನರ ಆರ್ಥಿಕತೆಗೆ ಶಕ್ತಿ ನೀಡಿದ್ದರು. ಇದರಿಂದಾಗಿ ಎಲ್ಲಾ ಜಾತಿ, ಧರ್ಮ, ಸಮುದಾಯಗಳ ಜನರು ಸಹಬಾಳ್ವೆಯಿಂದ ಒಂದೇ ಕಡೆಗೆ ಜೀವನ ಸಾಗಿಸಲು ಸಾಧ್ಯವಾಯಿತು. ಅಲ್ಲದೆ, ಪ್ರತಿ ವೃತ್ತಿಗಳಿಗೂ ಸಮಾನ ಸ್ಥಾನ ದೊರೆಯಿತು. ಈ ಮೂಲಕ ನಾಡಪ್ರಭುಗಳು ಎಲ್ಲರನ್ನೂ ಒಂದಾಗಿ ಒಯ್ಯುವ ಹೊಸ ಮಾರ್ಗವನ್ನು ನಿರ್ಮಾಣ ಮಾಡಿದರು. ಇದು ಅಪ್ರತಿಮ ಜನಸೇವಕ ದೀನದಯಾಳ್‌ ಉಪಾಧ್ಯಾಯರ ‘ಅಂತ್ಯೋದಯ’ ಪರಿಕಲ್ಪನೆಯ ಸಾಕಾರ ಎನ್ನಬಹುದು. ಇಷ್ಟೇ ಅಲ್ಲದೆ, ಕೆರೆ ಕಟ್ಟೆಗಳ ನಿರ್ಮಾಣದ ಮೂಲಕ ಬೆಂಗಳೂರಿಗೆ ನಿರ್ದಿಷ್ಟವಾದ ಜಲಶಕ್ತಿಯನ್ನು ಕಲ್ಪಿಸಿದರು. 

ಕೆಂಪಾಂಬುಧಿ ಕೆರೆ, ಧರ್ಮಾಂಬುಧಿ ಕೆರೆ, ಸಂಪಂಗಿರಾಮ ಕೆರೆ, ಚೆನ್ನಮ್ಮನ ಕೆರೆ, ಕಾರಂಜಿ ಕೆರೆ, ಹಲಸೂರು ಕೆರೆ, ಕೆಂಪಾಪುರ ಅಗ್ರಹಾರ ಕೆರೆ, ಸಿದ್ದಿಕಟ್ಟೆಕೆರೆ, ಗಿಡ್ಡಪ್ಪನ ಕೆರೆ ಮೊದಲಾದ 300ಕ್ಕೂ ಅಧಿಕ ಕೆರೆ, ಕಟ್ಟೆಗಳನ್ನು ನಿರ್ಮಾಣ ಮಾಡಿ, ಜನರಿಗೆ ಕುಡಿಯಲು ಹಾಗೂ ಕೃಷಿಗೆ ನೀರೊದಗಿಸುವ ಕೆಲಸ ಮಾಡಿದರು. ಇದೇ ಹಾದಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯವರು ‘ಜಲಜೀವನ್‌ ಮಿಷನ್‌’ ಎಂಬ ಅಭೂತಪೂರ್ವ ಯೋಜನೆ ಜಾರಿ ಮಾಡಿದ್ದು, ಇಂದು ಅತ್ಯಂತ ಜನಪ್ರಿಯ ಯೋಜನೆಯಾಗಿದೆ. ಜನರ ಮನೆಯ ಒಳಗಿನ ಕೊಳಾಯಿಯಲ್ಲಿ ನೀರು ಬರುವಂತೆ ಮಾಡುವುದೇ ಅಂತ್ಯೋದಯ ಎಂಬ ಬಗ್ಗೆ ಕಳೆದ 60 ವರ್ಷಗಳಲ್ಲೂ ಯಾರೂ ಯೋಚಿಸಿರಲಿಲ್ಲ. ಆದರೆ ಪ್ರಧಾನಿ ಮೋದಿಯವರು ಅದನ್ನು ಜಾರಿ ಮಾಡಿ ಕೆಂಪೇಗೌಡರ ಜಲ ಕ್ರಾಂತಿಯನ್ನು ಇತಿಹಾಸದಿಂದ ಮತ್ತೆ ಹೊರಗೆಳೆದು ತಂದರು.

ಕೆಂಪೇಗೌಡ ಮತ್ತು ಮೋದಿ ಸಾಮ್ಯತೆ: ಹಲವು ವರ್ಷಗಳ ಕಾಲ ವಿವಾದವಾಗಿಯೇ ಉಳಿದಿದ್ದ ಅಯೋಧ್ಯೆ ರಾಮ ಮಂದಿರದ ವಿಚಾರ ತಾರ್ಕಿಕ ಅಂತ್ಯ ಕಾಣುವ ಬಗ್ಗೆ ಅನುಮಾನ ಎದ್ದಿತ್ತು. ಆದರೆ ಈ ಸಮಸ್ಯೆಗೆ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಂಡ ಪ್ರಧಾನಿ ನರೇಂದ್ರ ಮೋದಿ ಸರ್ಕಾರ, ಭವ್ಯವಾದ ಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿತು. ಭಾರತದ ಪ್ರತಿ ಮನೆ ಮನದಲ್ಲಿ ರಾಮಾಯಣ ನೆಲೆಯಾಗಿದೆ. ಅಂತಹ ಮಹೋನ್ನತ ಆದರ್ಶ ಚರಿತ್ರೆಯನ್ನು ವರ್ತಮಾನದಲ್ಲೂ ಸ್ಮರಿಸುವ ಹಾಗೂ ಭವಿಷ್ಯದಲ್ಲೂ ಉಳಿಸುವಂತೆ ಮಾಡುವುದೇ ಅಯೋಧ್ಯೆ ಕ್ಷೇತ್ರ. ಧಾರ್ಮಿಕತೆ ಜನರ ಜೀವನದ ಅವಿಭಾಜ್ಯ ಅಂಗ ಎಂಬುದನ್ನು ಬಹಳ ವರ್ಷಗಳ ಹಿಂದೆಯೇ ಅರಿತಿದ್ದ ಕೆಂಪೇಗೌಡರು, ಧಾರ್ಮಿಕ ಕೇಂದ್ರಗಳ ಜೀರ್ಣೊದ್ಧಾರ, ಹೊಸ ದೇವಾಲಯಗಳ ಮೂಲಕ ಧಾರ್ಮಿಕ ಬದುಕಿಗೆ ಒತ್ತು ನೀಡಿದ್ದರು. ದೊಡ್ಡ ಗಣಪತಿ ದೇವಸ್ಥಾನ, ಗವಿ ಗಂಗಾಧರೇಶ್ವರ ದೇವಸ್ಥಾನ ಹಲಸೂರು ಸೋಮೇಶ್ವರ ಸೇರಿದಂತೆ ಅನೇಕ ಧಾರ್ಮಿಕ ಕೇಂದ್ರಗಳು, ಬೆಂಗಳೂರಿನ ಅಧ್ಯಾತ್ಮ ಕ್ಷೇತ್ರವನ್ನು ಬೆಳಗುತ್ತಿವೆ. ಇದೇ ಮಾದರಿಯಲ್ಲಿ ನಡೆದ ಕೇಂದ್ರ ಸರ್ಕಾರ, ಅಧ್ಯಾತ್ಮ ಹಾಗೂ ಪರಂಪರೆಯನ್ನು ಧರ್ಮ ಕ್ಷೇತ್ರಗಳ ಸಂರಕ್ಷಣೆಯ ಮೂಲಕ ಉಳಿಸುತ್ತಿದೆ.

ವೈದ್ಯರ ಹಾಜರಾತಿ ಮೇಲೆ ನಿಗಾಕ್ಕೆ ಬಯೋಮೆಟ್ರಿಕ್‌: ಸಚಿವ ಸುಧಾಕರ್‌

ಇತಿಹಾಸದ ಪುನರ್‌ಮನನ: ನಾಡಿನ ಇತಿಹಾಸದಲ್ಲಿ ನಾಡಪ್ರಭು ಕೆಂಪೇಗೌಡರದ್ದು ಚಿರಸ್ಮರಣೀಯ ವ್ಯಕ್ತಿತ್ವ. ಅವರ ಗತ ಆಡಳಿತವನ್ನು ಮತ್ತೆ ತರುವುದು ಹಾಗೂ ಮುಂದಿನ ಪೀಳಿಗೆ ಕೂಡ ಅದನ್ನು ಸ್ಮರಿಸುವಂತೆ ಮಾಡುವುದು ಅಗತ್ಯ. ಈ ನಿಟ್ಟಿನಲ್ಲಿ ಪ್ರಗತಿಯ ಪ್ರತಿಮೆ ಆಳವಾದ ಚಿಂತನೆಯನ್ನು ಹುಟ್ಟುಹಾಕಲು ಸಹಾಯಕವಾಗಲಿದೆ. ಮಹಾನಗರ ಬೆಂಗಳೂರು ಇಂದು ಸಂಚಾರ ದಟ್ಟಣೆ, ವಾಯುಮಾಲಿನ್ಯ, ರಾಜಕಾಲುವೆ ಒತ್ತುವರಿ ಹಾಗೂ ಪ್ರವಾಹ, ಜನಸಾಂದ್ರತೆಯ ಹೆಚ್ಚಳ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಆಧುನಿಕ ತಂತ್ರಜ್ಞಾನಗಳ ಲಭ್ಯತೆ ಇದ್ದರೂ ಈ ಸಮಸ್ಯೆಗಳನ್ನು ಬಗೆಹರಿಸುವುದು ಸವಾಲಾಗಿಯೇ ಉಳಿದಿದೆ. ಇಂತಹ ಸಮಯದಲ್ಲಿ ನಾಡಪ್ರಭುಗಳ ಆಡಳಿತದ ಅಧ್ಯಯನ ಹಾಗೂ ಅನುಕರಣೆ ಬಹಳ ಪರಿಣಾಮಕಾರಿ. ಇಂದಿನಂತೆ ತಂತ್ರಜ್ಞಾನಗಳು ಇಲ್ಲದಿದ್ದ ಕಾಲದಲ್ಲೂ, ಸರ್ವೋದಯದ ಆಶಯದೊಂದಿಗೆ ಕೆಂಪೇಗೌಡರು ಬೆಂಗಳೂರು ಕಟ್ಟಿದ್ದರು. ಅವರ ಆಡಳಿತದ ಮಾದರಿ, ಆಶಯ ಹಾಗೂ ಬದ್ಧತೆಯು ಬೆಂಗಳೂರು ಸೇರಿದಂತೆ ಜಗತ್ತಿನ ಎಲ್ಲಾ ಮಹಾನಗರಗಳ ಸಮಸ್ಯೆಗಳಿಗೂ ಪರಿಹಾರ ಸೂಚಿಸಬಲ್ಲದು. ‘ಪ್ರಗತಿಯ ಪ್ರತಿಮೆ’ಯ ಮೂಲಕ ಇತಿಹಾಸ ಮತ್ತೊಮ್ಮೆ ಮನನವಾಗಲಿ.

click me!