Soma Pradosh Vrat katha: ಭಿಕ್ಷುಕನನ್ನು ರಾಜ್ಯವಾಳಿಸಬಲ್ಲ ಮಹಿಮೆಯ ಪ್ರದೋಷ ವ್ರತ

By Suvarna NewsFirst Published Apr 3, 2023, 10:09 AM IST
Highlights

ಸೋಮವಾರದಂದು ತ್ರಯೋದಶಿ ತಿಥಿ ಬಂದಾಗ ಅದನ್ನು ಸೋಮ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಸೋಮ ಪ್ರದೋಷ ಉಪವಾಸವನ್ನು ಆಚರಿಸುವ ಭಕ್ತರು ಶಿವನಿಗೆ ತುಂಬಾ ಪ್ರಿಯರು. ಪ್ರದೋಷಕಾಲದಲ್ಲಿ ಶಿವನ ಆರಾಧನೆ ಮಾಡುವವರಿಗೆ ಶಿವನು ಖಂಡಿತವಾಗಿ ಒಲಿಯುತ್ತಾನೆ.

ಭಗವಾನ್ ಶಿವನಿಗೆ ಸಮರ್ಪಿತವಾದ ಮಂಗಳಕರ ದಿನ ಪ್ರದೋಷವು ಹಿಂದೂ ಮಾಸದಲ್ಲಿ ಎರಡು ಬಾರಿ ಸಂಭವಿಸುತ್ತದೆ. ಪ್ರದೋಷ ವ್ರತ ಉಪವಾಸವು ಎರಡು ಪಾಕ್ಷಿಕಗಳಲ್ಲಿ ತ್ರಯೋದಶಿಯಂದು ನಡೆಯುತ್ತದೆ. ಈ ತ್ರಯೋದಶಿಯು ಸೋಮವಾರ ಬಂದರೆ ಅದನ್ನು ಸೋಮ ಪ್ರದೋಷ ಎಂದು ಕರೆಯಲಾಗುತ್ತದೆ. ಇದು ಉಳಿದೆಲ್ಲ ಪ್ರದೋಷ ವ್ರತಕ್ಕಿಂತ ಹೆಚ್ಚು ಶ್ರೇಷ್ಠತೆ ಹೊಂದಿದೆ. ಇದಕ್ಕೆ ಕಾರಣ, ಸೋಮವಾರ ಶಿವನಿಗೆ ಸಮರ್ಪಿತವಾಗಿರುವುದು. ಶಿವನಿಗಾಗಿ ಆಚರಿಸುವ ಪ್ರದೋಷ ವ್ರತವು ಶಿವನ ದಿನವೇ ಬರುವುದು ಬಹಳ ವಿಶೇಷವಾಗಿದೆ. ವ್ರತವು ಸಮೃದ್ಧಿ ಮತ್ತು ಶಾಂತಿಯುತ ಕುಟುಂಬ ಜೀವನವನ್ನು ಪಡೆಯಲು ಸಹಾಯ ಮಾಡುತ್ತದೆ. ಸೋಮ ಪ್ರದೋಷದ ಮಹತ್ವ ಮತ್ತು ಅದನ್ನು ಹೇಗೆ ಆಚರಿಸಬೇಕು ಎಂಬುದನ್ನು ತಿಳಿಯೋಣ. 

ಸೋಮ ಪ್ರದೋಷದ ಮಹತ್ವ
ಪ್ರದೋಷ ಉಪವಾಸವು ಮೂಲಭೂತವಾಗಿ ಶಿವನೊಂದಿಗೆ ಸಂಬಂಧ ಹೊಂದಿದ್ದರೂ, ಸೋಮವಾರದ ದಿನವನ್ನು ವಿಶೇಷವಾಗಿ ಶಿವನಿಗೆ ಸಮರ್ಪಿಸಲಾಗಿದೆ. ಆದ್ದರಿಂದ, ಸೋಮವಾರದಂದು ಬೀಳುವ ಪ್ರದೋಷವನ್ನು ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪ್ರದೋಷ ಎಂಬ ಹೆಸರು ಮುಸ್ಸಂಜೆಯ ಅವಧಿಯನ್ನು ಸೂಚಿಸುತ್ತದೆ, ಅಂದರೆ ಸೂರ್ಯಾಸ್ತದ ಮೊದಲು ಮತ್ತು ಸೂರ್ಯಾಸ್ತದ ನಂತರದ ಅವಧಿ. ಸಾಮಾನ್ಯವಾಗಿ, ಈ ಅವಧಿಯು ಸೂರ್ಯಾಸ್ತದ ಒಂದೂವರೆ ಗಂಟೆಗಳ ಮೊದಲು ಮತ್ತು ಸೂರ್ಯಾಸ್ತದ ನಂತರದ 1 ಗಂಟೆಯ ನಡುವೆ ಇರುತ್ತದೆ. ಈ ಅವಧಿಯಲ್ಲಿ, ಶಿವ ಮತ್ತು ಪಾರ್ವತಿ ತಮ್ಮ ಅತ್ಯುತ್ತಮ ಹರ್ಷಚಿತ್ತದಿಂದ ಇರುತ್ತಾರೆ ಎಂದು ಹಿಂದೂ ಭಕ್ತರು ನಂಬುತ್ತಾರೆ. ಹಾಗಾಗಿ, ಈ ಸಮಯದಲ್ಲಿ ಭಕ್ತರಿಗೆ ಬೇಗ ಆಶೀರ್ವದಿಸುತ್ತಾರೆ.

Latest Videos

Temple Entry Rules: ದೇವಾಲಯದ ಮೆಟ್ಟಿಲನ್ನು ಮುಟ್ಟಿ ಒಳ ಪ್ರವೇಶಿಸುವುದೇಕೆ?

ಪ್ರದೋಷ ಕಾಲದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳಲ್ಲಿ ಶಿವನಿಗೆ ಪೂಜೆ ಮತ್ತು ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಮನೆಯಲ್ಲಿಯೇ ಇರುವ ಭಕ್ತರು ಶಿವ ಮಂತ್ರಗಳನ್ನು ಪಠಿಸುವುದರಲ್ಲಿ ಅಥವಾ ಶಿವ ಪುರಾಣವನ್ನು ಓದುವುದರಲ್ಲಿ ತಮ್ಮ ದಿನವನ್ನು ಕಳೆಯುತ್ತಾರೆ. ಉಪವಾಸವು ಸೂರ್ಯೋದಯದಿಂದ ಪ್ರಾರಂಭವಾಗುತ್ತದೆ ಮತ್ತು ಸಂಜೆ ಶಿವಪೂಜೆಯ ಬಳಿಕ ಪ್ರಸಾದವನ್ನು ಸೇವಿಸುವ ಮೂಲಕ ಕೊನೆಗೊಳ್ಳುತ್ತದೆ. ನಿಷ್ಠಾವಂತ ಭಕ್ತರು ಹಗಲಿನಲ್ಲಿ ನೀರಿನ ಹೊರತಾಗಿ ಏನನ್ನೂ ಸೇವಿಸುವುದಿಲ್ಲ. ಹಣ್ಣುಗಳು ಮತ್ತು ನೀರನ್ನು ಸೇವಿಸುವ ಮೂಲಕ ಭಾಗಶಃ ವ್ರತವನ್ನು ಆಚರಿಸುವ ಭಕ್ತರೂ ಇದ್ದಾರೆ. 

ಸೋಮ ಪ್ರದೋಷ ವ್ರತದ ಪುರಾಣ
ಸೋಮ ಪ್ರದೋಷ ವ್ರತದ ಕಥೆಯ ಪ್ರಕಾರ, ಒಂದು ನಗರದಲ್ಲಿ ಒಬ್ಬ ಬ್ರಾಹ್ಮಣ ವಿಧವೆ ವಾಸಿಸುತ್ತಿದ್ದಳು. ಹೊಟ್ಟೆಪಾಡಿಗಾಗಿ ಆಕೆ ತನ್ನ ಮಗನೊಂದಿಗೆ ಭಿಕ್ಷೆಗೆ ಹೋಗುತ್ತಿದ್ದಳು. ಒಂದು ದಿನ ಮಹಿಳೆ ಮನೆಗೆ ಹಿಂದಿರುಗುತ್ತಿದ್ದಾಗ, ಗಾಯಗೊಂಡ ಸ್ಥಿತಿಯಲ್ಲಿ ಒಬ್ಬ ಹುಡುಗ ನರಳುತ್ತಿರುವುದನ್ನು ಕಂಡಳು. ಕರುಣೆಯಿಂದ ಅವನನ್ನು ಅವಳ ಮನೆಗೆ ಕರೆತಂದಳು. ಆ ಹುಡುಗ ವಿದರ್ಭದ ರಾಜಕುಮಾರ. ಶತ್ರು ಸೈನಿಕರು ಅವನ ರಾಜ್ಯವನ್ನು ಆಕ್ರಮಿಸಿ, ಅವನ ತಂದೆಯನ್ನು ಸೆರೆ ಹಿಡಿದು ರಾಜ್ಯವನ್ನು ವಶಪಡಿಸಿಕೊಂಡಿದ್ದರು. ಆದ್ದರಿಂದ ಅವನು ಅಲ್ಲಿ ಇಲ್ಲಿ ಅಲೆದಾಡುತ್ತಿದ್ದನು. ರಾಜಕುಮಾರನು ಬ್ರಾಹ್ಮಣ ಮಹಿಳೆಯ ಮನೆಯಲ್ಲಿ ಆಕೆಯ ಮಗನೊಂದಿಗೆ ವಾಸಿಸಲು ಪ್ರಾರಂಭಿಸಿದನು. ಆಗ ಒಂದು ದಿನ ಅಂಶುಮತಿ ಎಂಬ ಗಂಧರ್ವ ಹುಡುಗಿ ರಾಜಕುಮಾರನನ್ನು ನೋಡಿದಳು ಮತ್ತು ಅವಳು ಅವನನ್ನು ಪ್ರೀತಿಸಲಾರಂಭಿಸಿದಳು. 

Panchang: ಇಂದು ಸೋಮ ಪ್ರದೋಷ, ಮೌನ ವ್ರತ ಆಚರಿಸಿ

ಮರುದಿನ ಅಂಶುಮತಿ ತನ್ನ ಹೆತ್ತವರನ್ನು ರಾಜಕುಮಾರನನ್ನು ಭೇಟಿಯಾಗಲು ಕರೆತಂದಳು. ಅವರಿಗೂ ರಾಜಕುಮಾರ ಇಷ್ಟವಾದನು. ಕೆಲವು ದಿನಗಳ ನಂತರ, ಅಂಶುಮತಿಯ ಹೆತ್ತವರಿಗೆ ಶಂಕರನು ಕನಸಿನಲ್ಲಿ ಬಂದು ರಾಜಕುಮಾರ ಮತ್ತು ಅಂಶುಮತಿಯ ಮದುವೆ ಮಾಡಲು ಆದೇಶಿಸಿದನು. ಅವರು ಹಾಗೆಯೇ ಮಾಡಿದರು. ಬ್ರಾಹ್ಮಣ ಮಹಿಳೆ ಪ್ರದೋಷ ವ್ರತವನ್ನು ಆಚರಿಸುತ್ತಿದ್ದಳು. ಅವರ ಮನೆ ಸೇರಿದ ಮೇಲೆ ರಾಜಕುಮಾರನೂ ಆ ವ್ರತ ಆಚರಿಸುತ್ತಿದ್ದನು. ತನ್ನ ಉಪವಾಸದ ಪ್ರಭಾವದಿಂದ ಮತ್ತು ಗಂಧರ್ವರಾಜನ ಸೈನ್ಯದ ಸಹಾಯದಿಂದ, ರಾಜಕುಮಾರನು ವಿದರ್ಭದಿಂದ ಶತ್ರುಗಳನ್ನು ಓಡಿಸಿದನು ಮತ್ತು ತನ್ನ ತಂದೆಯ ರಾಜ್ಯವನ್ನು ಮರಳಿ ಪಡೆದು ಸಂತೋಷದಿಂದ ರಾಜ್ಯವಾಳತೊಡಗಿದನು. ರಾಜಕುಮಾರನು ಬ್ರಾಹ್ಮಣ ಮಹಿಳೆಯ-ಮಗನನ್ನು ತನ್ನ ಪ್ರಧಾನ ಮಂತ್ರಿಯನ್ನಾಗಿ ಮಾಡಿಕೊಂಡನು. 
ಪ್ರದೋಷ ವ್ರತದ ಹಿರಿಮೆಯಿಂದ ರಾಜಕುಮಾರ ಮತ್ತು ಬ್ರಾಹ್ಮಣ ಮಹಿಳೆ ಮತ್ತು ಮಗನ ದಿನಗಳು ಹೇಗೆ ಬದಲಾಗುತ್ತವೆಯೋ ಅದೇ ರೀತಿ ಶಂಕರನು ತನ್ನ ಇತರ ಭಕ್ತರ ದಿನಗಳನ್ನು ಬದಲಾಯಿಸುತ್ತಾನೆ. ಆದ್ದರಿಂದ, ಸೋಮ ಪ್ರದೋಷ ಉಪವಾಸವನ್ನು ಆಚರಿಸುವ ಎಲ್ಲಾ ಭಕ್ತರು ಈ ಕಥೆಯನ್ನು ಓದಬೇಕು ಅಥವಾ ಕೇಳಬೇಕು.

click me!