ಗಂಡುಮಕ್ಕಳು ಮಾತ್ರ ತಂದೆತಾಯಿಗಳ ಕಾರ್ಯ ಮಾಡಬಹುದು ಎಂಬ ಸಂಪ್ರದಾಯ ಮುರಿದಿರೋ ಗಾಯಕ ಎಲ್.ಎನ್. ಶಾಸ್ತ್ರಿ ಪುತ್ರಿ, ಇಂದಿಗೂ ತಂದೆಯ ವಾರ್ಷಿಕ ಕಾರ್ಯಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ಆಕೆಗೆ ಶಾಸ್ತ್ರಬದ್ಧವಾಗಿದೆ ಮುಂಜಿಯಾಗಿದೆ, ಜನಿವಾರವೂ ಇದೆ.
3000ಕ್ಕೂ ಅಧಿಕ ಹಾಡುಗಳನ್ನು ಹಾಡಿ, ತಮ್ಮ ವಿಶಿಷ್ಟ ಕಂಠದಿಂದ ಸಂಗೀತ ಪ್ರಿಯರ ಮನಸ್ಸಲ್ಲಿ ಮನೆ ಮಾಡಿದ್ದ ಕನ್ನಡ ಚಿತ್ರರಂಗದ ಹಿರಿಯ ಗಾಯಕ ಎಲ್.ಎನ್.ಶಾಸ್ತ್ರಿ ಅವರು ಸಂಗೀತ ನಿರ್ದೇಶನದಿಂದಲೂ ತಮ್ಮದೇ ವರ್ಚಸ್ಸನ್ನು ರೂಪಿಸಿಕೊಂಡಿದ್ದರು. ಆದರೆ, ದುರದೃಷ್ಟವಶಾತ್, ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಎನ್.ಎಲ್. ಶಾಸ್ತ್ರಿಯವರು 2017ರಲ್ಲಿ ಇಹಲೋಕ ತ್ಯಜಿಸಿದರು.
ಜನುಮದ ಜೋಡಿ ಸೇರಿದಂತೆ 25ಕ್ಕೂ ಹೆಚ್ಚು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಶಾಸ್ತ್ರಿಯವರು ಹೋಗುವಾಗ ಸಾಕಷ್ಟು ಸಾಲ ಹೊಂದಿದ್ದು ದುರಂತ.
ಪತ್ನಿ ಸುಮಾ ಶಾಸ್ತ್ರಿ ಸಂದರ್ಶನವೊಂದರಲ್ಲಿ ಅವರ ಕೊನೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ. ಚಿತ್ರ ನಿರ್ಮಾಪಕರ ಸ್ನೇಹಿತರಾಗಿದ್ದ ಕಾರಣಕ್ಕೆ ಚಿತ್ರವೊಂದರ ಬಿಡುಗಡೆಗಾಗಿ ಮನೆ ಅಡವಿಟ್ಟು 50 ಲಕ್ಷ ಸಾಲ ತೆಗೆದುಕೊಂಡಿದ್ದೇ ಅವರಿಗೆ ಮುಳುವಾಯಿತು. ಬಡ್ಡಿ ಕಟ್ಟಲು ಆಗದೆ ಒದ್ದಾಡಿ, ಕಡೆಗೆ ಶಿಷ್ಯನ ಬಳಿಯೇ ಕೆಲಸಕ್ಕೆ ಹೋಗುವಂತಾಯಿತು ಎಂದು ಪತ್ನಿ ಹೇಳಿದ್ದಾರೆ.
ಅಂತಿಮ ಕಾರ್ಯ ಮಾಡಿದ್ದು ಯಾರು?
ಶಾಸ್ತ್ರಿ ತೀರಿ ಹೋದ ಮೇಲೆ ಅವರ ಕಾರ್ಯ ಮಾಡೋಕೂ ಯಾರು ಇರಲಿಲ್ಲ ಎಂದಿರುವ ಅವರು ಈ ಸಂದರ್ಭದ ಕೆಲ ಅಪರೂಪದ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಶಾಸ್ತ್ರಿ ದಂಪತಿಗೆ ಇದ್ದಿದ್ದು ಓರ್ವ ಮಗಳು. ಆದರೆ, ಗಂಡುಮಕ್ಕಳು ಮಾತ್ರ ಹೆತ್ತವರ ಅಂತ್ಯಸಂಸ್ಕಾರ ಮಾಡುವುದು ಸಂಪ್ರದಾಯ. ಇನ್ನು ಕುಟುಂಬದಲ್ಲಿ ಕಾರ್ಯ ಮಾಡುವಂಥ ಸಂಬಂಧಿಯೊಬ್ಬರು ಇದ್ದರೂ ಅವರು ವಿದೇಶದಲ್ಲಿದ್ದರು. ಹೀಗಾಗಿ, ಅಂತಿಮ ಕಾರ್ಯ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಎದ್ದಾಗ ಪತ್ನಿ ಸುಮಾ ಪತಿಯ ಪಾರ್ಥಿವ ಶರೀರದ ಎದುರೇ, ತಂದತಾಯಿ ಇಲ್ಲದ ತಮ್ಮ ಸಂಗೀತ ಶಿಷ್ಯನೊಬ್ಬನನ್ನು ನೀನು ಮಾಡ್ತೀಯಾ ಎಂದು ಕೇಳಿದರು. ಇದಕ್ಕಾತ ತಕ್ಷಣ ಒಪ್ಪಿದ್ದಲ್ಲದೆ, ತುಂಬಾ ಶ್ರದ್ಧೆಯಿಂದ ಕಾರ್ಯ ನೆರವೇರಿಸಿ ಕೊಟ್ಟಿದ್ದನ್ನು ಅವರು ನೆನೆಸಿಕೊಂಡಿದ್ದಾರೆ.
ಮಗಳಿಗೆ ಮುಂಜಿ
ಇದಾದ ಬಳಿಕ ಮಾಸಿಕ, ವಾರ್ಷಿಕ ಕಾರ್ಯಗಳನ್ನು ಮಾಡುವುದು ಯಾರು ಎಂಬ ಪ್ರಶ್ನೆಯೆದ್ದಿತ್ತು. ಆ ಸಂದರ್ಭದಲ್ಲಿ ಅವರು ನಂಬಿದ ಗುರುಗಳು, ಮಗಳಿಗೆ ಮುಂಜಿ ಮಾಡುತ್ತೇನೆ ಎಂದರಂತೆ. ಮರುದಿನವೇ ಮಗಳಿಗೆ ಶಾಸ್ತ್ರಬದ್ಧವಾಗಿ ಮುಂಜಿ ಮಾಡಿದ್ದಲ್ಲದೆ, ಅದರ ಮರುದಿನ ಮಗಳು ತಂದೆಯ ಮಾಸಿಕ ಕಾರ್ಯ ಮಾಡಿದಳು ಎಂದು ಸುಮಾ ಹೇಳಿದ್ದಾರೆ. ಇಂದಿಗೂ ಮಗಳು ಜನಿವಾರ ಹಾಕಿಕೊಂಡಿದ್ದು, ಪ್ರತಿದಿನ ಗಾಯತ್ರಿ ಜಪ, ಸಂಧ್ಯಾವಂದನೆ ಎಲ್ಲವನ್ನೂ ಮಾಡುತ್ತಾರೆ.