ಹಿಂದೂ ಧರ್ಮದಲ್ಲಿ ದಾನಕ್ಕೆ ಮಹತ್ವವಿದೆ. ಕನ್ಯಾದಾನವನ್ನು ಮಹಾದಾನ ಎನ್ನಲಾಗುತ್ತದೆ. ಮಗಳನ್ನು ಬೇರೆಯವರ ಕೈಗೆ ನೀಡುವುದು ಮಾತ್ರ ಇದ್ರ ಅರ್ಥವಲ್ಲ. ಇದ್ರ ಹಿಂದೆ ನಾನಾ ಕಾರಣವಿದೆ. ಹಾಗೆಯೇ ಇದ್ರ ಇತಿಹಾಸ ಸಾಕಷ್ಟು ಹಳೆಯದು.
ದಾನಗಳಲ್ಲಿ ಅನೇಕ ರೀತಿಯ ದಾನಗಳಿವೆ. ರಕ್ತದಾನ, ಗೋದಾನ, ವಸ್ತ್ರದಾನ, ಭೂದಾನ ಹೀಗೆ ಹಲವಾರು ರೀತಿಯ ದಾನಗಳನ್ನು ನಾವು ನಿತ್ಯದ ಜೀವನದಲ್ಲಿ ಕಾಣ್ತೇವೆ. ಪ್ರತಿಯೊಂದು ದಾನಕ್ಕೂ ಅದರದೇ ಆದ ಮಹತ್ವವಿದೆ. ಕೆಲವರು ತಮಗೆ ಬಂದ ಕಷ್ಟಗಳನ್ನು ದೂರಮಾಡಿಕೊಳ್ಳಲು ದಾನವನ್ನು ನೀಡ್ತಾರೆ. ಇನ್ನೂ ಕೆಲವರು ಬಡವರ ಸಹಾಯಕ್ಕಾಗಿ ಅನೇಕ ರೀತಿಯ ದಾನಗಳನ್ನು ಮಾಡುತ್ತಾರೆ. ಒಟ್ಟಿನಲ್ಲಿ ಎಲ್ಲ ದಾನವೂ ಶ್ರೇಷ್ಠವೇ ಆಗಿದೆ. ಈ ಎಲ್ಲ ದಾನದಿಂದಲೂ ಪುಣ್ಯ ಸಿಗುತ್ತದೆ. ಅಂತಹ ದಾನಗಳಲ್ಲಿ ಕನ್ಯಾದಾನ ಕೂಡ ಒಂದು.
ಒಂದು ಮದುವೆ (Marriage) ಯೆಂದರೆ ಅಲ್ಲಿ ಅನೇಕ ರೀತಿಯ ಆಚರಣೆ, ಪದ್ಧತಿಗಳು ಇರುತ್ತವೆ. ಅವುಗಳನ್ನು ಏಕೆ ಮಾಡುತ್ತಾರೆ, ಅದರ ಅರ್ಥ ಏನು, ಅದು ಆರಂಭವಾಗಿದ್ದು ಯಾವಾಗ ಎಂಬುದು ನಮಗೆ ತಿಳಿದೇ ಇರುವುದಿಲ್ಲ. ಹಾಗೆಯೇ ಕನ್ಯಾದಾನ (Kanyadan) ದ ಬಗ್ಗೆಯೂ ಹಲವರಿಗೆ ತಿಳಿದಿಲ್ಲ. ಕನ್ಯಾದಾನ ಎಂದರೆ ಬರೀ ಕನ್ಯೆಯನ್ನು ದಾನ ಮಾಡುವುದು ಎಂದಲ್ಲ. ಕನ್ಯಾದಾನ ಕೂಡ ಅದರದೇ ಆದ ವಿಶೇಷತೆ ಮತ್ತು ಹಿನ್ನಲೆಯನ್ನು ಹೊಂದಿದೆ.
Palmistry; ಅಂಗೈಯ ಈ 5 ರೀತಿಯ ರೇಖೆಗಳು ದುರದೃಷ್ಟದ ಸೂಚನೆ
ಕನ್ಯಾದಾನ ಆರಂಭ ಹೀಗಾಯ್ತು ? : ಬಹಳ ಹಿಂದೆ ವೇದ (Veda) ಗಳ ಕಾಲದಲ್ಲಿ ಸ್ವಯಂವರಗಳು ನಡೆಯುತ್ತಿತ್ತು. ಆಗ ಸ್ತ್ರೀ ಮತ್ತು ಪುರುಷ (male) ರನ್ನು ಸಮಾನವಾಗಿ ಪರಿಣಿಸಲಾಗುತ್ತಿತ್ತು. ಹಾಗಾಗಿ ಸಮಾನತೆಯ ಆಧಾರದ ಮೇಲೆ ವಿವಾಹ ನಡೆಯುತ್ತಿತ್ತು. ಸ್ವಯಂವರದಲ್ಲಿ ಒಬ್ಬ ಸ್ತ್ರೀ ತನಗೆ ಬೇಕಾದ ವರನನ್ನು ತಾನೇ ಆರಿಸಿಕೊಳ್ಳುತ್ತಿದ್ದಳು. ಹಾಗಾಗಿ ಅಲ್ಲಿ ಕನ್ಯಾದಾನದ ಬಗ್ಗೆ ಉಲ್ಲೇಖವಿಲ್ಲ. ನಂತರ ಮನುಸ್ಮೃತಿಯ ಸಮಯದಲ್ಲಿ ಕನ್ಯಾದಾನದ ವಿಧಿಗಳು ಆರಂಭವಾಗಿ ನಂತರದ ದಿನಗಳಲ್ಲಿ ಇದು ಹೆಚ್ಚು ಮಹತ್ವ ಪಡೆಯಿತು.
ಮನುಸ್ಮೃತಿಯಲ್ಲಿ 8 ರೀತಿಯ ವಿವಾಹದ ವರ್ಣನೆ ಮಾಡಲಾಗಿದೆ. ಇದರಲ್ಲಿ ಪ್ರಮುಖವಾದುದ್ದು ಬ್ರಹ್ಮ ವಿವಾಹ. ಈ ವಿವಾಹದಲ್ಲಿ ಹುಡುಗಿಯ ತಂದೆಯು ತನ್ನ ಮಗಳಿಗೆ ಯೋಗ್ಯ ವರನನ್ನು ಆರಿಸಿ ಹಣ ಅಥವಾ ಬಂಗಾರವನ್ನು ವರನಿಗೆ ಕೊಟ್ಟು ಕನ್ಯಾದಾನ ಮಾಡುತ್ತಾನೆ. ಮನುಸ್ಮೃತಿಯ ಸಮಯದಲ್ಲಿ ಪುರುಷರಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಪ್ರತಿಯೊಬ್ಬ ಸ್ತ್ರೀ, ಪುರುಷನನ್ನು ಅವಲಂಬಿಸಬೇಕಾಗಿತ್ತು.
ಕನ್ಯಾದಾನದ ಹಿನ್ನಲೆ : ಹಿಂದೆ ದಕ್ಷ ಮಹಾರಾಜನು ತನ್ನ 27 ಹೆಣ್ಣು ಮಕ್ಕಳನ್ನು ಚಂದ್ರನಿಗೆ ದಾನವಾಗಿ ನೀಡಿದ್ದನಂತೆ. ಅಂದಿನಿಂದ ಕನ್ಯಾದಾನದ ಆಚರಣೆಗಳು ಶುರುವಾದವು ಎಂದು ಪುರಾಣಗಳು ಹೇಳುತ್ತವೆ.
ಕನ್ಯಾದಾನ ಮಹಾದಾನ ಏಕೆ ಗೊತ್ತಾ? : ಕನ್ಯಾದಾನ ವಿಶೇಷ ಮಹತ್ವವನ್ನು ಹೊಂದಿದೆ. ವಧುವಿನ ತಂದೆ ತಾಯಿ ತಮ್ಮ ಮಗಳ ಕೈಯನ್ನು ಅಳಿಯನ ಕೈಯ ಮೇಲೆ ಇಟ್ಟು ಗಂಡನ ಮನೆ ಮತ್ತು ತವರು ಮನೆಯ ಕೀರ್ತಿಯನ್ನು ಹೆಚ್ಚಿಸು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ. ಕನ್ಯಾದಾನದ ಸಮಯದಲ್ಲಿ ವಧು-ವರರನ್ನು ವಿಷ್ಣು ಮತ್ತು ಲಕ್ಷ್ಮಿಯ ರೂಪದಲ್ಲಿ ಕಾಣಲಾಗುತ್ತದೆ. ಹೆತ್ತವರು ಲಕ್ಷ್ಮಿ ಸ್ವರೂಪಳಾದ ಮಗಳನ್ನು ಧಾರೆ ಎರೆಯುವಾಗ ಎಲ್ಲ ಸುಖ ಸಮೃದ್ಧಿಯನ್ನೂ ಅವಳಿಗೆ ಧಾರೆ ಎರೆಯುತ್ತಾರೆ. ಹಾಗಾಗಿಯೇ ಕನ್ಯಾದಾನಕ್ಕೆ ಅಷ್ಟೊಂದು ಮಹತ್ವದ ಸ್ಥಾನ ನೀಡಲಾಗಿದೆ.
Hindu Religion: ಲೋಕ ಕಲ್ಯಾಣಕ್ಕಾಗಿ ವಿಷ್ಣು ತಾಳಿದ್ದ ಈ ಎಲ್ಲ ರೂಪ
ಕನ್ಯಾದಾನದ ಮಾಡುವ ವಿಧಾನ : ಕನ್ಯಾದಾನ ಮಾಡುವ ವಿಧಾನ ಸಂಪ್ರದಾಯಕ್ಕೆ ತಕ್ಕಂತೆ ಸ್ಥಳದಿಂದ ಸ್ಥಳಕ್ಕೆ ಬೇರೆ ಬೇರೆಯಾಗಿದೆ. ಸಾಮಾನ್ಯವಾಗಿ ಇದರಲ್ಲಿ ವಧುವಿನ ಕೈ ಮೇಲೆ ಕಳಶವನ್ನು ಇಡಲಾಗುತ್ತದೆ. ನಂತರ ವಧುವಿನ ತಂದೆ ಮಗಳ ಕೈಯನ್ನು ವರನ ಕೈಯ ಮೇಲೆ ಇಟ್ಟು ಅದರ ಮೇಲೆ ಹೂವು, ವೀಳ್ಯದೆಲೆ ಇಟ್ಟು ಗಂಗೆಯ ನೀರನ್ನು ಹಾಕಿ ಮಂತ್ರ ಹೇಳಲಾಗುತ್ತದೆ. ನಂತರ ವಧುವಿನ ತಂದೆ ತಾಯಿ ಮಗಳ ಕೈಗೆ ಅರಿಶಿನವನ್ನು ಹಚ್ಚುತ್ತಾರೆ. ಕನ್ಯಾದಾನ ಮಾಡುವ ಮೂಲಕ ಹೆಣ್ಣಿನ ತಂದೆ ತಾಯಿ ಮಗಳ ಉಜ್ವಲ ಭವಿಷ್ಯದ ಹಾಗೂ ಅವಳ ಕುಟುಂಬದ ಏಳ್ಗೆಯನ್ನು ಕೋರುತ್ತಾರೆ.