ಗುರುಭಕ್ತಿಯನ್ನು ಜಗತ್ತಿನಾದ್ಯಂತ ಕೊಂಡಾಡಲಾಗಿದೆ. ಆಚಾರ್ಯರೆಂದ ಕೂಡಲೇ ನಮಗೆ ಮೊದಲು ನೆನಪಾಗುವುದು ತೈತ್ತರೀಯ ಉಪನಿಷತ್ತು. ಕೃಷ್ಣ ಯಜುರ್ವೇದದಲ್ಲಿ ಬರುವ ಈ ಉಪನಿಷತ್ತಿನ ಆರಣ್ಯಕ ಭಾಗದ ಶಿಕ್ಷಾವಲ್ಲಿ ಗುರುಕುಲಗಳಲ್ಲಿ ಗುರುಗಳ ಹಾಗೂ ಶಿಷ್ಯರ ಕರ್ತವ್ಯ ಬಂಧ-ಅನುಬಂಧ, ಗುರುದಕ್ಷಿಣೆಯ ಮಹತ್ವ ಇತ್ಯಾದಿಗಳ ಉಲ್ಲೇಖವಿದೆ.
ಗುರುವು ಪರಿಶುದ್ಧ, ಸತ್ಯನಿಷ್ಠ, ದಯಾಪರ ಮತ್ತು ಮಹಾಜ್ಞಾನಿ. ಭಗವಂತನನ್ನು ನಾವು ಎದುರಿಗೆ ಕಾಣಲಾರೆವು. ಆದರೆ, ಗುರುವನ್ನು ನಿಜಾಕಾರದಲ್ಲಿ ನಮ್ಮೆದುರಿಗೆ ಕಾಣುತ್ತೇವೆ. ಹೀಗಾಗಿ ಈಶ್ವರನನ್ನು ಅಚಲ ಭಕ್ತಿಯಿಂದ ಪ್ರಾರ್ಥಿಸಿದರೆ ಏನೆಲ್ಲ ಅನುಗ್ರಹವನ್ನು ಪಡೆಯುತ್ತೇವೆಯೋ, ಗುರುನ ಪಾದಗಳನ್ನಪ್ಪಿ ಶರಣಾದರೂ ಅವಕ್ಕೆಲ್ಲ ಪಾತ್ರರಾಗುತ್ತೇವೆ ಎನ್ನಲಾಗಿದೆ. ಆದ್ದರಿಂದಲೇ ‘ಗುರುಭಕ್ತಿ’ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಆದರೆ ಇದರರ್ಥ ದೈವಭಕ್ತಿಯನ್ನು ಕೈಬಿಡಬೇಕು ಎಂದಲ್ಲ. ಇಷ್ಟಕ್ಕೂ ಭಕ್ತರನ್ನೂ ಗುರುವನ್ನೂ ಒಂದೆಡೆಗೆ ತರುವವನೇ ದೇವರು. ದೇವರ ದಯೆಯಿಲ್ಲದೆ ಗುರುವು ಹೇಗೆ ತಾನೆ ನಮಗೆ ದೊರೆ ತಾನು?
‘ದೊಡ್ಡ ಮತ್ತು ಅಪರೂಪದ ಮೂರು ಅವಕಾಶಗಳು ಅಥವಾ ವರಗಳು ದೈವಕೃಪೆಯಿಂದ ಮಾತ್ರ ಒದಗುತ್ತವೆ. ಮೊದಲನೆಯದು ಮಾನವ ಜನ್ಮ, ಎರಡನೆಯದು ಸತ್ಯವನ್ನು ಅರಿಯುವ ಅಭಿಲಾಷೆ, ಮೂರನೆಯದು ಮಹಾಪುರುಷರನ್ನು ಗುರುವಾಗಿ ಹೊಂದುವುದು.’
ಗುರುಗಿಂತ ದೊಡ್ಡವನು ಯಾರೂ ಇಲ್ಲ. ನಮಗೆ ಅವನಲ್ಲಿ ಪೂರ್ಣ ವಿಶ್ವಾಸವಿರಬೇಕು. ಗುರುವು ತಂದೆ, ತಾಯಿ, ದೈವ. ಗುರುವೇ ಆಶ್ರಯದಾತ. ಶಿವನು ಮುನಿದರೆ ಗುರು ನಮ್ಮ ರಕ್ಷಣೆಗೆ ಬರುತ್ತಾನೆ. ಆದರೆ ಗುರುವೇ ಮುನಿದರೆ ನಮ್ಮ ನೆರವಿಗೆ ಬರುವವರು ಯಾರು?
ಗುರು ಪೂರ್ಣಿಮೆಯ ಈ ದಿನ ರಾಶಿ ಪ್ರಕಾರ ದಾನ ಮಾಡಿ, ಗುರುವಿನ ಆಶೀರ್ವಾದ ಫಲ ಪಡೆಯಿರಿ!
ಈ ಕಾರಣಕ್ಕಾಗಿಯೇ ಶಾಸ್ತ್ರಗಳು ಗುರುಭಕ್ತಿಯ ಬಗ್ಗೆ ಅತಿಶಯವಾಗಿ ಹಾಡಿ ಹೊಗಳಿವೆ. ಗುರುವು ಮಹಾಗುಣಿಯಲ್ಲದಿದ್ದಾಗಲೂ ಅವರನ್ನು ಒಬ್ಬ ಮಾರ್ಗದರ್ಶಿ ಎಂದು ಪರಿಗಣಿಸಬೇಕು. ಅದೇ ಹೊತ್ತಿಗೆ ಈಶ್ವರನಲ್ಲಿ ಭಕ್ತಿಯನ್ನಿಡಬೇಕು. ನಮ್ಮ ಭಕ್ತಿಯಿಂದ ಗುರುವಿಗಾಗಲಿ, ಈಶ್ವರನಿಗಾಗಲಿ ಏನೂ ಸಿಗಬೇಕಾಗಿಲ್ಲ. ಪ್ರತಿಫಲ ಸಿಗುವುದು ನಮಗೇ.
ನಮ್ಮಲ್ಲಿ ಕಶ್ಮಲ ತುಂಬಿದೆ. ಮನಸ್ಸು ಚಂಚಲವಾಗಿದೆ. ಒಂದು ಬಿಂದುನ ಮೇಲೆ ಒಂದು ಕ್ಷಣವೂ ಸಂಪೂರ್ಣವಾಗಿ ಮನಸ್ಸನ್ನು ಕೇಂದ್ರೀಕರಿಸಲಾರೆವು. ನಿತ್ಯಶುದ್ಧನೂ ಪರಮ ಜ್ಞಾನಿಯೂ ಅಚಲನೂ ದೃಢನೂ ಆದ ಪರಮಾತ್ಮನ ಧ್ಯಾನ ಮಾಡಿದಾಗ ಅವನಂತೆಯೇ ಸಮಸ್ಥಿತಿಯನ್ನೂ ನಿಶ್ಚಲತೆಯನ್ನೂ ಹೊಂದುತ್ತೇವೆ. ನಾವೇ ‘ಅವನು’ ಆಗುತ್ತೇವೆ. (ಅವನೊಡನೆ ಅಭೇದ ಹೊಂದುತ್ತೇವೆ) ಈಶ್ವರನೊಬ್ಬನನ್ನೇ ಹೀಗೆ ಧ್ಯಾನಿಸಬೇಕು ಎಂಬುದಲ್ಲ. ಆ ಲಕ್ಷಣಗಳನ್ನುಳ್ಳ ಮತ್ತಾವುದೇ ವಸ್ತು ಅಥವಾ ಮನುಷ್ಯ ಆಗಬಹುದು.
ಅವನನ್ನೇ ಗುರು ಎಂದು ತಿಳಿದು ಭಕ್ತಿ ಹೊಂದಬೇಕು. ಆಗ ನಾವೇ ಆ ವಸ್ತುವೋ, ಮನುಷ್ಯನೋ ಆಗಿಬಿಡುತ್ತೇವೆ. ಮನಸ್ಸು ನಿಶ್ಚಲವಾದಾಗ ಆತ್ಮವು ಪ್ರಕಾಶಿಸುತ್ತದೆ ಮತ್ತು ನಮಗೆ ಸಹಜಾನಂದಸ್ಥಿತಿ ದಕ್ಕುತ್ತದೆ. ಈಶ್ವರನ ಭಕ್ತಿಗಾಗಲಿ, ಗುರುಭಕ್ತಿಗಾಗಲಿ ಬೇಕಾದುದು ನಿಶ್ಚಲ ಮನಸ್ಸು. ‘ಆಚಾರ್ಯವಾನ್ ಪುರುಷೋ ವೇದ’... ಆಚಾರ್ಯನು ಯಾರಿಗಿದ್ದಾನೋ ಅವನು ಮಾತ್ರ ಜ್ಞಾನವನ್ನು ಹೊಂದುತ್ತಾನೆ ಎಂದು ಛಾಂದೋಗ್ಯೋಪನಿಷತ್ತು ತಿಳಿಸುತ್ತದೆ.
‘ಜಗದ್ಗುರು’ ಎಂದೇ ಖ್ಯಾತರಾದ ಶಂಕರ ಭಗವತ್ಪಾದರು ಗುರುವಿನ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳುತ್ತಾರೆ. ‘ಒಬ್ಬ ಮನುಷ್ಯನು ಅನೇಕ ರೀತಿಯಿಂದ ಗಣ್ಯನಾದರೇನು? ತನ್ನ ಗುರುವಿನ ಪಾದಕಮಲಗಳಲ್ಲಿ ಅವನ ಮನಸ್ಸು ನೆಲೆ ನಿಲ್ಲದ ಮೇಲೆ ಅದರಿಂದೇನು ಪ್ರಯೋಜನ?’ ಎಂದು ಶಂಕರರು ಕೇಳುತ್ತಾರೆ. ಕೊನೆಯದಾಗಿ, ಅವರ ಬಾಳಕೋಟಲೆಯನ್ನು ಕಿತ್ತೊಗೆಯುವ ಮುನ್ನ ಶಂಕರರು ಈ ಶ್ಲೋಕದ ಮೂಲಕ ತಮ್ಮ ಉಪದೇಶವನ್ನು ಹೀಗೆ ಹೇಳುತ್ತಾರೆ.
‘ಸದ್ವಿದ್ವಾನ್ ಉಪಸೃಪ್ಯತಾಮ್ ಪ್ರತಿದಿನಂ ತತ್ಪಾದುಕಾ ಸೇವ್ಯತಾಮ್
ಬ್ರಹ್ಮೈಕಾಕ್ಷರಮರ್ಥ್ಯತಾಮ್ ಶ್ರುತಿಶಿರೋವಾಕ್ಯಂ ಸಮಾಕಣ್ರ್ಯತಾಮ್ .. ಉಪದೇಶಪಂಚಕಮ್’
ಅದರ ಅರ್ಥ ಹೀಗಿದೆ: ‘ನಿನ್ನ ಆಚಾರ್ಯನಾಗಿ ಒಬ್ಬ ಸಾತ್ತಿ$್ವಕನಾದ ವಿದ್ವಾಂಸನನ್ನು ಆರಿಸಿಕೊ. ಆತನ ಪದತಲದಲ್ಲಿ ನಿತ್ಯ ಉಪಾಸಿಸು. ಪ್ರಣವಮಂತ್ರ (ಓಂಕಾರ)ದ ಬಗೆಗೂ ಉಪನಿಷತ್ತಿನ ಮಹಾಕಾವ್ಯಗಳ ಬಗೆಗೂ ಅವನಿಂದ ಉಪದೇಶ ಹೊಂದು’ ಇಂದಿಗೂ ಪ್ರತಿದಿನ ಕಾಂಚಿಮಠದಲ್ಲಿ ಶಂಕರ ಭಗವತ್ಪಾದರ ಪಾದಕಮಲಗಳಿಗೆ ಪೂಜೆ ಮಾಡುವ ಈ ಕ್ರಮ ತಪ್ಪದೇ ನಡೆಯುತ್ತಿದೆ.
ಗುರು ಪೂರ್ಣಿಮೆಯಂದು ಈ ವರ್ಷದ ಅತಿ ದೊಡ್ಡ ಸೂಪರ್‌ಮೂನ್ ದರ್ಶನ
ಗುರುವಿನ ಮಹತ್ವ:
ಮೊದಲು, ವೈದಿಕ ಕರ್ಮವು ಏಕೆ ಬೇಕು ಎಂಬುದನ್ನು ಪರಿಗಣಿಸೋಣ. ಗುರುನಿಂದ ಹೊಮ್ಮುವ ಪ್ರಣವ ಮತ್ತು ಮಹಾಕಾವ್ಯದ ಸಂದೇಶವು ಒಬ್ಬನನ್ನು ಮಾನವನ ಅತ್ಯುನ್ನತ ಗುರಿಯಾದ ಮೋಕ್ಷದೆಡೆಗೆ ಮುನ್ನಡೆಸಬೇಕು. ಅದಕ್ಕಾಗಿ ವ್ಯಕ್ತಿಯೊಬ್ಬನು ತನ್ನ ಮನಸ್ಸನ್ನು ನಿಗ್ರಸಬೇಕು. ಶಾಂತಸ್ಥಿತಿಯಲ್ಲಿಡಬೇಕು. ಮನಸ್ಸನ್ನು ತನ್ನೊಳಗೆ ಪೂರ್ಣವಾಗಿ ಏಕಾಗ್ರಗೊಳಿಸದೆ ಗುರುನ ಮಾತನ್ನು ಶ್ರವಣ ಮಾಡುವುದರಿಂದ ಪ್ರಯೋಜನವಿಲ್ಲ. ಚೆನ್ನಾಗಿ ಉಳುಮೆ ಮಾಡಿದ ಹೊಲದಲ್ಲಿ ಬಿತ್ತಿದ ಬೀಜವು ಮೊಳಕೆಯೊಡೆಯುತ್ತದೆ.
ನಾವು ಧಾರ್ಮಿಕವಾದ ಮತ್ತು ತತ್ವಜ್ಞಾನದ ಅಸಂಖ್ಯಾತ ಪ್ರವಚನಗಳನ್ನು ಕೇಳುತ್ತೇವೆ. ಗೀತೆಯನ್ನೂ ಇತರ ಧರ್ಮಗ್ರಂಥಗಳನ್ನೂ ಪಠಿಸುತ್ತೇವೆ. ಆದರೂ ಏಕೆ ನಮಗೆ ದುಃಖದ ಅನುಭವವಾಗುತ್ತದೆ? ನಾವೇಕೆ ಜ್ಞಾನದೀಪ್ತರಾಗುವುದಿಲ್ಲ? ಏಕೆಂದರೆ ನಮ್ಮ ಚಿತ್ತ ಅಥವಾ ಪ್ರಜ್ಞೆಯನ್ನು ಶುದ್ಧಗೊಳಿಸಿಕೊಳ್ಳದೆ ಧಾರ್ಮಿಕ ಪ್ರವಚನಗಳನ್ನು ಕೇಳುತ್ತೇವೆ, ಧರ್ಮಗ್ರಂಥಗಳನ್ನು ಪಠಿಸುತ್ತೇವೆ. ಹಾಗಾಗಿ ಶಾಶ್ವತವಾದ ಫಲ ಅದರಿಂದ ದೊರಕುವುದಿಲ್ಲ.
‘ಮತ್ತೆ ಮತ್ತೆ ವೈದಿಕ ಕರ್ಮಗಳನ್ನು ಮಾಡಿ ಈಶ್ವರನಿಗೆ ಶರಣಾಗಿ, ಪ್ರತಿಫಲದ ಚಿಂತೆಯನ್ನು ಬಿಡಿ, ಭಗವದಾರಾಧನೆಯೆಂದು ತಿಳಿದು ಮಾಡಿ’ ಆಚಾರ್ಯರು ತಮ್ಮ ಉಪದೇಶದ ಪ್ರಾರಂಭದಲ್ಲಿಯೇ ಹೇಳುವ ಮಾತು ಇದು. ಚಿತ್ತಶುದ್ಧಿಯನ್ನೂ ಮನಶಾಂತಿಯನ್ನೂ ಸಾಧಿಸುವ ಮಾರ್ಗವನ್ನು ತೋರಿಸಲೆಂದು ಅವರು ಹಾಗೆ ಹೇಳಿದ್ದಾರೆ. ವೈದಿಕ ಕರ್ಮಗಳಿಂದ ಮನಸ್ಸನ್ನು ಉಳಬೇಕು. ಅದು ಪ್ರಪ್ರಥಮವಾಗಿ ಆಗಬೇಕು. ಉಳುಮೆ ಮಾಡಿದ ಮೇಲೆ ಮನಸ್ಸಿಗೆ ನೀರು ಹಾಯಿಸಬೇಡವೆ? ಆ ಕೆಲಸವೇ ಭಕ್ತಿ. ಭಕ್ತಿಯೇ ಹೃದಯಕ್ಕೆ ನೀರೆರೆಯುವಂತಹದು. ಈಶ್ವರನಲ್ಲಿ, ಆಚಾರ್ಯನಲ್ಲಿ ಭಕ್ತಿ ಇರಲೇಬೇಕು. ಗುರುಭಕ್ತಿ ಇದ್ದರೆ ನಮ್ಮ ಮನಸ್ಸು ನಿರ್ಮಲವಾಗುತ್ತದೆ. ಮಹಾತ್ಮರ ಮುಂದೆ ಏನನ್ನಾದರೂ ಓದಿದಾಗ ಅಥವಾ ಅವರ ಮಾತನ್ನು ಕೇಳಿದಾಗ, ನಮ್ಮ ಮನಸ್ಸಿನ ಮೇಲೆ ಪ್ರಭಾವವಾಗುತ್ತದೆ.
ಏಕೆಂದರೆ ಅವರ ಸನ್ನಿಧಿಯಲ್ಲಿ ನಮ್ಮ ಮನಸ್ಸು ಸಮಾಧಾನಗೊಳ್ಳುತ್ತದೆ. ಸ್ನೇಹಕೂಟಗಳಲ್ಲಿಯೋ ಗ್ರಂಥಾಲಯದಲ್ಲಿಯೋ ಅದು ಹಾಗಾಗುವುದಿಲ್ಲ. ಅಲ್ಲಿ ಓದಿದ್ದಾಗಲಿ, ಕೇಳಿದ್ದಾಗಲಿ ಭದ್ರವಾಗಿ ಉಳಿಯುವುದೂ ಇಲ್ಲ. ಗುರುಭಕ್ತಿಯಿಂದ ಮನಸ್ಸು ಆದ್ರ್ರವಾದರೆ ತತ್‌ಕ್ಷಣದ ಫಲ ದೊರೆಯುತ್ತದೆ. ಆದ್ದರಿಂದಲೇ ನಾವು ಮಹಾತ್ಮರಿಂದ ಸ್ಫೂರ್ತಿ ಹೊಂದಬೇಕು ಮತ್ತು ಗುರುವಿನಿಂದ ಕಲಿಯಬೇಕು. ನಾವು ಎಷ್ಟೇ ಓದಿದರೂ ನಮ್ಮ ಅಜ್ಞಾನವು ತೊಲಗುವುದಿಲ್ಲ. ನಮ್ಮ ಅಜ್ಞಾನದ ತೆರೆ ಎಲ್ಲಿ ಸರಿಯುವುದೋ ಜ್ಞಾನವು ಉದಿಸುವುದೋ ಅಂತಹ ಜಾಗಕ್ಕೆ ನಾವು ಹೋಗಬೇಕು. ಅದೇ ಆಚಾರ್ಯರ ಸನ್ನಿಧಿಯೇ ಆ ಜಾಗವಾಗಿದೆ.
ಬ್ರಹ್ಮಚರ್ಯಾಶ್ರಮದಲ್ಲಿ ಗುರುಗಳ ಬಳಿಯಿಂದ ವೇದಾಧ್ಯಯನ ಮಾಡಬೇಕು. ಅದರಿಂದ ನಮ್ಮ ಚಿತ್ತಶುದ್ಧಿ ಸಿದ್ಧಿಸುತ್ತದೆ. ಗೃಹಸ್ಥಾಶ್ರಮದಲ್ಲಿ ವೇದ ಕರ್ಮಗಳನ್ನು ಮಾಡಿ ಮನಸ್ಸಿನ ಕಲ್ಮಷಗಳನ್ನೆಲ್ಲ ಹೋಗಲಾಡಿಸಿಕೊಳ್ಳಬೇಕು. ಇದಾದ ಮೇಲೆ ಸನ್ಯಾಸಿಯಾಗಿರುವ ಗುರುವೊಬ್ಬನಿಂದ ಮಹಾವಾಕ್ಯಗಳನ್ನು ಕಲಿಯಬೇಕು. ಹೀಗೆ ಕಲಿತದ್ದು ಮೊಳೆತು ಬೆಳೆಯುತ್ತದೆ. ಬೇರೆ ಮಾತುಗಳಲ್ಲಿ ಹೇಳಬೇಕಾದರೆ ಜೀವವು ಬ್ರಹ್ಮನೊಡನೆ ಒಂದಾಗುತ್ತದೆ. ಈ ಗುರಿಯನ್ನು ತಲುಪುವ ಮಾರ್ಗವನ್ನು ತಿಳಿಯಲು, ನಮ್ಮ ಸಾಧನಾ ಮಾರ್ಗದ ಪ್ರಾರಂಭದಲ್ಲಿಯೂ ಮುಕ್ತಾಯದ ಹಂತದಲ್ಲಿಯೂ ನಮಗೊಬ್ಬ ಗುರು ಬೇಕು.
ಹಿಂದೂ ವೇದಗಳಂತೆ ಆದರ್ಶ ಪುರುಷನ 32 ಗುಣಗಳಿವು...
ಉಪನಿಷತ್ತಿನಲ್ಲಿ ಗುರುಭಕ್ತಿ:
ಈ ಕಾರಣದಿಂದಾಗಿಯೇ ಗುರುಭಕ್ತಿಯನ್ನು ಜಗತ್ತಿನಾದ್ಯಂತ ಕೊಂಡಾಡಲಾಗಿದೆ. ಆಚಾರ್ಯರೆಂದ ಕೂಡಲೇ ನಮಗೆ ಮೊದಲು ನೆನಪಾಗುವುದು ತೈತ್ತರೀಯ ಉಪನಿಷತ್ತು. ಕೃಷ್ಣ ಯಜುರ್ವೇದದಲ್ಲಿ ಬರುವ ಈ ಉಪನಿಷತ್ತಿನ ಆರಣ್ಯಕ ಭಾಗದ ಶಿಕ್ಷಾವಲ್ಲಿ ಗುರುಕುಲಗಳಲ್ಲಿ ಗುರುಗಳ ಹಾಗೂ ಶಿಷ್ಯರ ಕರ್ತವ್ಯ ಬಂಧ-ಅನುಬಂಧ, ಗುರುದಕ್ಷಿಣೆಯ ಮಹತ್ವ ಇತ್ಯಾದಿಗಳ ಉಲ್ಲೇಖವಿದೆ. ಶಿಕ್ಷಾವಲ್ಲಿಯ ಹನ್ನೊಂದನೆಯ ಅನುವಾಹಕದಲ್ಲಿ ಗುರುಕುಲದಲ್ಲಿ ಅಧ್ಯಯನ ಮುಗಿಸಿ ಸ್ವತಂತ್ರ ಬದುಕಿನೆಡೆಗೆ ನಡೆಯುವ ವಿದ್ಯಾರ್ಥಿಗಳಿಗೆ ಗುರುಗಳು ಮಾಡುವ ಅಂತಿಮ ಪಾಠ ಹೀಗಿದೆ:
‘ಮಾತೃ ದೇವೋಭವ, ಪಿತೃ ದೇವೋಭವ, ಆಚಾರ್ಯ ದೇವೋಭವ, ಅತಿಥಿ ದೇವೋಭವ’
ನಿನಗೆ ಜನ್ಮ ಕೊಟ್ಟಮಾತೆಗೆ ಸಮಾನರಾರಯರು? ಆಕೆಯನ್ನು ದೇವತೆಯಂತೆ ಕಾಣು. ಪಿತೃಗಳಿಲ್ಲದೆ ನೀನಿಲ್ಲ, ಅದಕ್ಕಾಗಿ ತಂದೆಯನ್ನು ಪ್ರತ್ಯಕ್ಷ ದೇವರೆಂದು ಪರಿಗಣಿಸು. ಇನ್ನು ನಿನ್ನ ಶಿಲಾಕಾಯಕ್ಕೆ ಜ್ಞಾನ ಪ್ರದಾನ ಮಾಡಿ ರೂಪುಗೊಳಿಸಿದ ಆಚಾರ್ಯರನ್ನು ಮರೆಯಲಾದೀತೆ? ಅವರೂ ನಿನಗೆ ದೇವ ಸಮಾನರೇ. ಅವರ ವಾಕ್ಯವನ್ನು ದೈವ ವಾಕ್ಯವೆಂದೇ ಪರಿಗಣಿಸು. ಕರೆದಾಗ ಬರುವವರು ಅಭ್ಯಾಗತರು. ಆದರೆ ಕರೆಯದೆ ಅನಿರೀಕ್ಷಿತವಾಗಿ ಆಗಮಿಸುಸುವವರು ಅತಿಥಿಗಳು. ಅವರನ್ನು ಅಕ್ಕರೆಯಿಂದ ಪ್ರೀತಿಯಿಂದ ಆದರಿಸು. ಏಕೆಂದರೆ ಅವರ ಆಗಮನ ಆಗಿದ್ದು ಕೂಡ ದೈವ ಸಂಕಲ್ಪದಿಂದಲೇ ಎಂಬುದು ಇದರ ಅರ್ಥವಾಗಿದೆ.
- ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಬೆಂಗಳೂರು