ಕಳಂಕ ಚತುರ್ಥಿ 2022: ಇಂದು ಚಂದ್ರನನ್ನು ನೋಡಿದ್ರೆ ಅಪವಾದ ತಪ್ಪಿಸೋಕೆ ಈ ಕೆಲಸ ಮಾಡಿ

By Suvarna News  |  First Published Aug 31, 2022, 11:27 AM IST

ಗಣೇಶ ಚತುರ್ಥಿಯ ದಿನ ಚಂದ್ರನನ್ನು ನೋಡಿದ್ರೆ ದೋಷ ಗ್ಯಾರಂಟಿ. ಇದರಿಂದ ಮಾಡದ ತಪ್ಪಿಗೆ ಅಪವಾದ ಎದುರಿಸಬೇಕಾಗುತ್ತದೆ. ಏಕೆ ಹೀಗೆ? ಒಂದು ವೇಳೆ ನೀವು ಈ ದಿನ ಚಂದ್ರನನ್ನು ನೋಡಿದ್ರೆ ಕಳಂಕದಿಂದ ಪಾರಾಗೋಕೆ ಪರಿಹಾರೋಪಾಯಗಳೇನು?


ಗಣೇಶನ ಜನ್ಮವನ್ನು ಸೂಚಿಸುವ ದಿನವನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ. ಇದು ವರ್ಷದ ಬಹಳ ಮಂಗಳಕರ ದಿನವಾಗಿದ್ದು, ಗಣೇಶನನ್ನು ತಮ್ಮ ಮನೆಗಳಿಗೆ ಮಣ್ಣಿನ ವಿಗ್ರಹಗಳ ರೂಪದಲ್ಲಿ ಜನರು ಸ್ವಾಗತಿಸಿ ಪೂಜಿಸಿ, ಆತನಿಗೆ ವಿವಿಧ ಭಕ್ಷ್ಯ ಭೋಜನಗಳನ್ನು ಮಾಡಿ ಬಡಿಸುತ್ತಾರೆ. ಇದು ಗಣೇಶನ ಭಕ್ತರು ಕುತೂಹಲದಿಂದ ಎದುರು ನೋಡುವ ದಿನವಾಗಿದ್ದು, ಇಂಥ ಮಂಗಳಕರ ದಿನದಲ್ಲೂ ಮಾಡಬಾರದ ಅಥವಾ ನೋಡಬಾರದ ಕೆಲಸವೊಂದಿದೆ ಎಂದರೆ ಅಚ್ಚರಿಯಾಗಬಹುದು.  

ಹೌದು, ಗಣೇಶ ಚತುರ್ಥಿಯಂದು ಚಂದ್ರನ ದರ್ಶನವನ್ನು ನಿಷೇಧಿಸಲಾಗಿದೆ. ಗಣೇಶ ಚತುರ್ಥಿಯ ದಿನದಂದು ಚಂದ್ರನನ್ನು ಗೊತ್ತೋ, ಗೊತ್ತಿಲ್ಲದೆಯೋ ನೋಡಿದರೆ ಅಪವಾದ ಎದುರಿಸೋದು ಗ್ಯಾರಂಟಿ ಎನ್ನಲಾಗುತ್ತದೆ. ಇದರಿಂದ ತಪ್ಪು ದೋಷಗಳು ಅಥವಾ ಸುಳ್ಳು ಕಳಂಕವನ್ನು ಎದುರಿಸಬೇಕಾಗುತ್ತದೆ. ಚಂದ್ರನನ್ನು ನೋಡದಿರುವ ಈ ಸಂಪ್ರದಾಯಕ್ಕೆ ಸಂಬಂಧಿಸಿದ ಕಥೆ ಮತ್ತು ನೀವು ಆಕಸ್ಮಿಕವಾಗಿ ಅದನ್ನು ನೋಡಿದರೆ ಏನು ಮಾಡಬೇಕು ಎಂಬುದನ್ನು ತಿಳಿಯಲು ಮುಂದೆ ಓದಿ.

Tap to resize

Latest Videos

ಈ ಚಂದ್ರನ ನೋಡಬಾರದ ಸಮಯಕ್ಕೆ ಕಳಂಕ ಚತುರ್ಥಿ ಎಂದೂ ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ನೀವು ತಪ್ಪಿಯೂ ಆಕಾಶ ನೋಡಬಾರದು. ಆಕಾಶ ನೋಡಬಾರದು, ಚಂದ್ರ ಕಂಡರೆ ಎಂಬ ಭಯದಿಂದ ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದರೆ, ಇಂದು ಮಳೆಯ ಸಂಭವವಿದೆ. ನೀರಿನಲ್ಲಿ ಚಂದ್ರ ಕಾಣಿಸಿಯಾನು ಎಚ್ಚರ!

ಮಕ್ಕಳು ಹಬ್ಬದ ದಿನ ಹೀಗೆಲ್ಲಾ ಮಾಡಿದ್ರೆ ಮೆದುಳು ಚುರುಕಾಗುತ್ತೆ

ಗಣೇಶ ಚತುರ್ಥಿಯಂದು ಚಂದ್ರನನ್ನು ಏಕೆ ನೋಡಬಾರದು?
ಒಂದು ದಂತಕಥೆಯ ಪ್ರಕಾರ, ಒಂದು ರಾತ್ರಿ ಗಣೇಶನು ತನ್ನ ಮೂಷಕನ ಮೇಲೆ ಕುಳಿತು ತನ್ನ ವಾಸಸ್ಥಾನಕ್ಕೆ ಹಿಂದಿರುಗುತ್ತಿದ್ದನು. ಆಕಾಶದಲ್ಲಿ ಚಂದ್ರ ದೇವನನ್ನು ಹೊರತುಪಡಿಸಿ ಬೇರೆ ಯಾರೂ ಇರಲಿಲ್ಲ. ಮೂಷಕನು ಗಣೇಶನ ಭಾರವನ್ನು ಹೊತ್ತುಕೊಂಡು ಕ್ರಮೇಣ ಮುಂದಕ್ಕೆ ಸಾಗುತ್ತಿದ್ದಾಗ, ಅಲ್ಲಿ ಹಾವೊಂದು ಬಂದಿತು. ಅದನ್ನು ಕಂಡ ಇಲಿ ಹೆದರಿ ಓಡಿಹೋಯಿತು. ಆಗ ಇಲಿಯ ಮೇಲಿದ್ದ ಗಣಪ ಕೆಳಗೆ ಬಿದ್ದ. ಈ ಸಮಯದಲ್ಲಿ ಗಣೇಶನು ತನ್ನ ದೊಡ್ಡ ಹೊಟ್ಟೆಯೊಂದಿಗೆ ತನ್ನನ್ನು ತಾನೇ ನಿರ್ವಹಿಸಲು ಹೆಣಗಾಡುತ್ತಿರುವುದನ್ನು ನೋಡಿದ ಚಂದ್ರನು ಅವನನ್ನು ನೋಡಿ ಜೋರಾಗಿ ನಕ್ಕನು. ಅಲ್ಲದೆ, ಅವನ ಆಕಾರದ ಬಗ್ಗೆ  ತಮಾಷೆ ಮಾಡಿದನು. ಆದ್ದರಿಂದ, ಅವನಿಗೆ ಪಾಠ ಕಲಿಸಲು, ಗಣೇಶನು ಚಂದ್ರನನ್ನು ನೋಡುವವರಿಗೆ ದೋಷ (ಅಂದರೆ, ಅವರು ಮಾಡದ ಕಳ್ಳತನ ಅಥವಾ ಅಪರಾಧದ ಕಳಂಕ ಎದುರಿಸುವಂಥ) ಉಂಟಾಗಲಿ ಎಂದು ಶಾಪ ನೀಡಿದನು. ಅಲ್ಲದೆ, ಚಂದ್ರನಿಗೆ ಕಪ್ಪಾಗಿ ಹೋಗಲು ಹೇಳಿದ. 

ಇದರಿಂದ ಭಯಗೊಂಡ, ಚಂದ್ರನು ಗಣೇಶನಲ್ಲಿ ಕ್ಷಮೆ ಕೋರಿದನು. ಚಂದ್ರನು ಪಶ್ಚಾತ್ತಾಪ ಪಡುವುದನ್ನು ನೋಡಿದ ಗಣೇಶನು ಅವನನ್ನು ಕ್ಷಮಿಸಿದನು. ಆದರೆ, ಒಮ್ಮೆ ಹೇಳಿದ ಶಾಪವನ್ನು ಹಿಂಪಡೆಯಲಾಗುವುದಿಲ್ಲ. ಆದಾಗ್ಯೂ, ಅದರ ಪರಿಣಾಮವನ್ನು ಕಡಿಮೆ ಮಾಡಬಹುದು. ಆದ್ದರಿಂದ, ಅಹಂಕಾರವು ತನ್ನ ಅವನತಿಗೆ ಕಾರಣವಾಗುತ್ತದೆ ಎಂಬುದನ್ನು ನೆನಪಿಸಲು ಗಣೇಶ ಚತುರ್ಥಿಯ ದಿನದಂದು ಯಾರೂ ಚಂದ್ರನನ್ನು ನೋಡಬಾರದು ಎಂದು ಗಣೇಶ ಹೇಳಿದನು. ಅಲ್ಲದೆ, ತಿಂಗಳಿಗೊಮ್ಮೆ ಚಂದ್ರನು ತನ್ನ ಪೂರ್ಣ ರೂಪದಲ್ಲಿ ಕಾಣಿಸಬಹುದು ಎಂದ. ಅಂತೆಯೇ ಚಂದ್ರನು ಹುಣ್ಣಿಮೆಯಂದು ಮಾತ್ರ ಪೂರ್ಣ ರೂಪದಲ್ಲಿ ಪ್ರಕಟವಾಗುತ್ತಾನೆ. 

ಚಂದ್ರ ದೋಷ ಪರಿಹಾರ
ಒಂದು ವೇಳೆ ನೀವು ಗಣೇಶ ಚತುರ್ಥಿಯಂದು ಅಪ್ಪಿತಪ್ಪಿ ಚಂದ್ರನನ್ನು ನೋಡಿದಿರಾದರೆ ದೋಷವನ್ನು ತಪ್ಪಿಸಲು ಈ ಪರಿಹಾರಗಳನ್ನು ಮಾಡಿಕೊಳ್ಳಿ. 

ಸಿಂಹಃ ಪ್ರಸೇನಮಾವಧಿತ್ಸಿಂಹೋ ಜಾಮ್ಬವತಾ ಹತಃ ।
ಸುಕುಮಾರಕ ಮರೋದಿಸ್ತವ ಹ್ಯೇಷಾ ಸ್ಯಮಂತಕಃ॥

  • ಗಣೇಶನನ್ನು ಪೂಜಿಸಿ ಮತ್ತು ಅವನಲ್ಲಿ ಕ್ಷಮೆ ಯಾಚಿಸಿ. ನಿಮ್ಮಲ್ಲಿ ಒಂದು ಚೂರೂ ಅಹಂಕಾರವಿಲ್ಲದಿದ್ದರೆ, ಅವನು ನಿಮ್ಮನ್ನು ಕ್ಷಮಿಸುತ್ತಾನೆ ಮತ್ತು ಮಿಥ್ಯ ದೋಷದಿಂದ ಮುಕ್ತನಾಗಿಸುತ್ತಾನೆ.
  • ಕಳಂಕ ದೋಷದಿಂದ ಮುಕ್ತರಾಗಲು 21 ದೂರ್ವೆಗಳಿಂದ ಕಿರೀಟ ತಯಾರಿಸಿ ಗಣೇಶನ ಮುಡಿಯಲ್ಲಿಡಬೇಕು. 
  • ಕಳಂಕ ದೋಷದಿಂದ ಮುಕ್ತರಾಗಲು ಗಣೇಶನ ಎದುರು ನೂರಾ ಒಂದು ಬಾರಿ ಕುಮ್ಚಟ್ಟು ಹೊಡೆಯಬೇಕು. 
  • ಕುತೂಹಲಕಾರಿ ಕತೆಯೆಂದರೆ, ಗಣೇಶ ಚತುರ್ಥಿಯ ದಿನದಂದು ಶ್ರೀಕೃಷ್ಣನು ಚಂದ್ರನನ್ನು ನೋಡಿದನು. ತರುವಾಯ, ಸ್ಯಮಂತಕ ಎಂಬ ಅಮೂಲ್ಯ ರತ್ನವನ್ನು ಕದಿಯಲು ಅವನು ತಪ್ಪಾಗಿ ಆರೋಪಿಸಲ್ಪಟ್ಟನು. ಆದುದರಿಂದ ದೇವರ್ಷಿ ನಾರದ ಮುನಿಯು ಕೃಷ್ಣನಿಗೆ ವ್ರತವನ್ನು ಆಚರಿಸಿ ಗಣಪತಿಯನ್ನು ಪ್ರಾರ್ಥಿಸಬೇಕು ಎಂದು ಸಲಹೆ ನೀಡಿದರು. ಹೀಗಾಗಿ, ಕಳಂಕ ದೋಷದಿಂದ ಮುಕ್ತಿ ಪಡೆಯಲು ಕೃಷ್ಣನ ಈ ಸ್ಯಮಂತಕ ಕತೆಯನ್ನು ಸಂಪೂರ್ಣವಾಗಿ ಓದಬೇಕು ಇಲ್ಲವೇ ಕೇಳಬೇಕು. 
click me!