ಕೋಲಾರ ತಾಲೂಕು ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಗಣಪತಿ ದೇವಾಲಯ ನಿರ್ಮಾಣ ಮಾಡಿ ಶಾಲೆಗೆ ಕೊಡುಗೆಯಾಗಿ ನೀಡಿದ ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯಾಧ್ಯಕ್ಷ ಸೈಯದ್ ಆಸೀಫ್ ವುಲ್ಲಾ
ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಆ.31): ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಕೋಮು ಸೌಹಾರ್ದತೆ ಕದಡುವಂತ ಹತ್ತಾರು ಘಟನೆಗಳು ನಡೆಯುತ್ತಿವೆ. ಮಸೀದಿಯೊಳಗೆ ದೇವಸ್ಥಾನ ಇದೆ, ದೇವಸ್ಥಾನದೊಳಗೆ ಮಸೀದಿ ಎಂದು ಹತ್ತು ಹಲವು ಗೊಂದಲಗಳು ಸಮಾಜದಲ್ಲಿ ಕಾಡುತ್ತಿರುವಾಗ ಇಲ್ಲೊಂದು ಮುಸ್ಲಿಂ ಸಂಘಟನೆ, ಹಿಂದೂ ದೇವಾಲಯ ನಿರ್ಮಾಣ ಮಾಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾಗಿ ಸರ್ಕಾರಿ ಶಾಲೆಗೆ ವಿದ್ಯಾಗಣಪತಿ ದೇವಾಲಯವನ್ನು ಕೊಡಗೆಯಾಗಿ ನೀಡಿರುವ ಸ್ಟೋರಿ ಇಲ್ಲಿದೆ ನೋಡಿ..
ಹೌದು, ಹೀಗೆ ಸರ್ಕಾರಿ ಶಾಲೆಯಲ್ಲಿ ಮುಸ್ಲಿಂ ವ್ಯಕ್ತಿಯಿಂದ ನಿರ್ಮಾಣವಾದ ವಿದ್ಯಾಗಣಪತಿ ದೇವಾಲಯ, ಮತ್ತೊಂದೆಡೆ ಗಣಪನ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ಸಮುದಾಯದ. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ತಾಲ್ಲೂಕಿನ ಸೂಲೂರು ಗ್ರಾಮದಲ್ಲಿ. ಕೋಲಾರದಲ್ಲೊಂದು ಕೋಮು ಸೌಹಾರ್ದತೆಯ ಉಳಿಸುವ ಬೆಳೆಸುವ ಘಟನೆಯೊಂದು ನಡೆದಿದೆ. ಕೋಲಾರ ತಾಲೂಕು ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯಾಧ್ಯಕ್ಷ ಸೈಯದ್ ಆಸೀಫ್ ವುಲ್ಲಾ ಎಂಬಾತ ಸರ್ಕಾರಿ ಶಾಲೆಯಲ್ಲಿ ವಿದ್ಯಾಗಣಪತಿ ದೇವಾಲಯವೊಂದನ್ನು ನಿರ್ಮಾಣ ಮಾಡಿ ಶಾಲೆಗೆ ಕೊಡುಗೆಯಾಗಿ ಕೊಡುವ ಮೂಲಕ ಹಿಂದೂ-ಮುಸ್ಲಿಂ ಎಲ್ಲಾ ಧರ್ಮಗಳು ಒಂದೇ ಎನ್ನುವ ಭಾವನೆಗೆ ಪುಷ್ಠಿ ನೀಡುವಂತ ಕೆಲಸ ಮಾಡಿದ್ದಾರೆ. ಸೂಲೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸುಮಾರು 3.5 ಲಕ್ಷ ರೂಪಾಯಿ ವೆಚ್ಚದಲ್ಲಿ ಪುಟ್ಟದೊಂದು ಗಣೇಶ ದೇವಾಲಯ ನಿರ್ಮಾಣ ಮಾಡಿ ಈ ಬಾರಿ ಗಣೇಶ್ ಹಬ್ಬದ ಅಂಗವಾಗಿ ಗಣಪನ ವಿಗ್ರಹ ಪ್ರತಿಷ್ಠಾಪನೆ ಮಾಡಿ ಪೂಜೆ ಕಾರ್ಯಕ್ರಮಗಳನ್ನು ನಡೆಸಿ ಶಾಲೆಗೆ ಕೊಡುಗೆಯಾಗಿ ನೀಡಿದ್ದಾರೆ.
ಗಣೇಶ ಚತುರ್ಥಿ 2022: ಗಣಪತಿ ಶ್ಲೋಕಗಳು ಮತ್ತು ಅವುಗಳ ಅರ್ಥ
ಟಿಪ್ಪು ಹಲವು ಹಿಂದೂ ದೇವಾಲಯಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ಆಶಯದಂತೆ ನಾವು ಹಿಂದೂ ದೇವಾಲಯ ನಿರ್ಮಾಣ ಮಾಡಿದ್ದೇವೆ, ಆ ಧರ್ಮ ಈ ಧರ್ಮ ಎನ್ನದೇ ಎಲ್ಲರ ಭಾರತೀಯರು ಎಂಬ ಭಾವನೆ ಬಂದಾಗ ಸಮಾಜದಲ್ಲಿ ಶಾಂತಿ ಉಂಟಾಗುತ್ತದೆ ಸಮಾಜದಲ್ಲಿ ಎಲ್ಲರೂ ಸೌಹಾರ್ದತೆ, ಶಾಂತಿಯಿಂದ ಜೀವನ ನಡೆಸಬೇಕು ಎಂಬುದು ನಮ್ಮ ಸಂಘಟನೆಯ ಆಶಯ ಎಂದು ದೇವಾಲಯ ನಿರ್ಮಾಣ ಮಾಡಿದ ಸೈಯದ್ ಅಸಿಫ್ ವುಲ್ಲಾ ಹೇಳಿದರು.
ಇನ್ನೂ ಮೂರು ವರ್ಷಗಳ ಹಿಂದೆಯೇ ದೇವಾಲಯ ನಿರ್ಮಾಣ ಕೆಲಸ ಶುರುಮಾಡಿದ್ದರು, ಆದರೆ ಕೊರೊನಾ ಹಿನ್ನೆಲೆ ಶಾಲೆಗಳು ತೆರೆಯದ ಕಾರಣ ಕಾಮಗಾರಿ ತಡವಾಗಿತ್ತು.ಈಗ ಗಣೇಶ ಹಬ್ಬಕ್ಕೆ ಶಾಲೆ ಆವರಣದಲ್ಲಿ ದೇವಾಲಯ ಉದ್ಘಾಟನೆಯನ್ನು ಪೂಜೆ ವಿಧಿ ವಿಧಾನಗಳಿಂದ ನೇರವೇರಿಸಲಾಗಿದೆ. ಮುಸ್ಲಿಂ ವ್ಯಕ್ತಿಯೊಬ್ಬರು ದೇವಾಲಯ ನಿರ್ಮಾಣ ಮಾಡಿಕೊಡತ್ತೇವೆ ಎಂದಾಗ ಗ್ರಾಮಸ್ಥರು ಹಾಗೂ ಶಾಲೆ ಆಡಳಿತ ಮಂಡಳಿ ಮತ್ತು ಶಿಕ್ಷಕರು ಮುಸ್ಲಿಂ ಸಂಘಟನೆ ಮುಖಂಡರಿಗೆ ಪೂರ್ಣ ಸಹಕಾರ ನೀಡಿದ್ದಾರೆ. ದೇವಾಲಯ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡು ವಿದ್ಯಾಗಣಪತಿ ದೇವಸ್ಥಾನ ನಿರ್ಮಿಸಿದ ಟಿಪ್ಪು ಸೆಕ್ಯೂಲರ್ ಸೇನಾ ರಾಜ್ಯಧ್ಯಕ್ಷ ಸೈಯದ್ ಅಸೀಫ್ ವುಲ್ಲಾ ಅವರನ್ನು ಸಂಘಟನೆ ಸದಸ್ಯರನ್ನು ಗ್ರಾಮಸ್ಥರು ಅಭಿನಂದಿಸಿ ಆತ್ಮೀಯವಾಗಿ ಸನ್ಮಾನಿಸಿದ್ರು.
ಒಟ್ಟಾರೆ ಯಾವುದೇ ಧರ್ಮವಾಗಲಿ ದೇವರು ಒಬ್ಬನೆ, ಎಲ್ಲಾ ಧರ್ಮಗಳನ್ನು ಗೌರವಿಸು ತಮ್ಮ ಧರ್ಮವನ್ನು ಅನುಸರಿಸು ಎಂಬ ಮಾತಿಗೆ ಸಂಘಟನೆ ಅಧ್ಯಕ್ಷ ಸೈಯದ್ ಆಸೀಫ್ ವುಲ್ಲಾ ಅವರು ಮಾದರಿಯಾಗಿದ್ದಾರೆ.