ಅದು ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ. ಸಂಕ್ರಾಂತಿ ಜಾತ್ರೆ, ನಮ್ಮೂರ ಜಾತ್ರೆ, ಸಿದ್ದರಾಮೇಶ್ವರ ಜಾತ್ರೆ ಅಂತಾ ಫೇಮಸ್ ಆಗಿರೋ ಜಾತ್ರೆಗೆ ಲಕ್ಷ-ಲಕ್ಷ ಜನರ ದಂಡು ಹರಿದು ಬರುತ್ತೆ. ಇಂದು ನಡೆದ ಸಂಕ್ರಾಂತಿ ಭೋಗಿ ಆಚರಣೆಗು ಸಾವಿರಾರು ಭಕ್ತರು ಸೇರಿದ್ದು ವಿಶೇಷವಾಗಿತ್ತು.
ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.14): ಅದು ಉತ್ತರ ಕರ್ನಾಟಕದ ಅತಿ ದೊಡ್ಡ ಜಾತ್ರೆ. ಸಂಕ್ರಾಂತಿ ಜಾತ್ರೆ, ನಮ್ಮೂರ ಜಾತ್ರೆ, ಸಿದ್ದರಾಮೇಶ್ವರ ಜಾತ್ರೆ ಅಂತಾ ಫೇಮಸ್ ಆಗಿರೋ ಜಾತ್ರೆಗೆ ಲಕ್ಷ-ಲಕ್ಷ ಜನರ ದಂಡು ಹರಿದು ಬರುತ್ತೆ. ಇಂದು ನಡೆದ ಸಂಕ್ರಾಂತಿ ಭೋಗಿ ಆಚರಣೆಗು ಸಾವಿರಾರು ಭಕ್ತರು ಸೇರಿದ್ದು ವಿಶೇಷವಾಗಿತ್ತು. ಇನ್ನು ಇಲ್ಲಿ ನಂದಿಕೋಲು ಹಿಡಿಯುವವರು ಧರಿಸುವ ಶತಮಾನಗಳಷ್ಟು ಹಳೆಯದಾದ ನೀಲುವಂಗಿಗಳ ಹಿನ್ನೆಲೆ ಬಲು ವಿಶೇಷವಾಗಿದೆ. ಸಂಕ್ರಾಂತಿ ಜಾತ್ರೆ ಅಂದ್ರೆ ಉತ್ತರ ಕರ್ನಾಟಕದಲ್ಲಿ ಬಲು ಫೇಮಸ್. ಪ್ರತಿವರ್ಷ ಸಂಕ್ರಾಂತಿ ವೇಳೆ ವಿಜಯಪುರದಲ್ಲಿ ನಡೆಯುವ ಸೊಲ್ಲಾಪೂರ ಸಿದ್ದರಾಮೇಶ್ವರರ ಜಾತ್ರೆ ನಮ್ಮೂರ ಜಾತ್ರೆ ಅಂತಲೇ ಫೇಮಸ್. ದಿನಾಂಕ ಜ. 12 ರಿಂದ ಈಗಾಗಲೇ ಸಂಕ್ರಾಂತಿ ಜಾತ್ರೆ ಶುರುವಾಗಿದೆ. ನಂದಿಕೋಲುಗಳ ಪೂಜೆ, ಮೆರವಣಿಗೆ ಮೂಲಕ ಶುರುವಾಗುವ ಸಂಕ್ರಾಂತಿ ಜಾತ್ರೆ 5 ದಿನಗಳ ಕಾಲ ಅದ್ದೂರಿಯಾಗಿ ಸಾಗುತ್ತೆ. ಈಗಾಗಲೇ ಸುತ್ತಮುತ್ತಲ ಜಿಲ್ಲೆಗಳಿಂದ ಸಾವಿರಾರು ಜನ ತಂಡೋಪ ತಂಡವಾಗಿ ಜಾತ್ರೆಗೆ ಬರ್ತಿದ್ದಾರೆ. ಸಿದ್ದರಾಮೇಶ್ವರ ಭಕ್ತರು ಸಿದ್ದರಾಮೇಶ್ವ ದೇಗುಲದಲ್ಲೆ ಬೀಡು ಬಿಟ್ಟಿದ್ದಾರೆ.
ಸಂಕ್ರಾಂತಿ ಭೋಗಿ ಪೂಜೆ ನೆರವೇರಿಸಿದ ಶಾಸಕ ಯತ್ನಾಳ್
ಸಂಕ್ರಾಂತಿ ಮುನ್ನಾದಿನವನ್ನ ಭೋಗಿ ಎಂದು ಕರೆಯಲಾಗುತ್ತೆ. ಈ ದಿನ ಸಿದ್ದೇಶ್ವರ ದೇಗುಲದ ಎದುರು 7 ನಂದಿಕೋಲುಗಳನ್ನ ಇಟ್ಟು ಪೂಜೆ ನೆರವೇರಿಸಲಾಗುತ್ತೆ. ಬಳಿಕ ದೇಗುಲದ ಎದುರು ಸಿದ್ದರಾಮೇಶ್ವರನ ಮೂರ್ತಿಗು ವಿಶೇಷ ಸಲ್ಲುತ್ತೆ. ಪಲ್ಲಕ್ಕಿ ಸೇವೆ ನಡೆಯುತ್ತೆ. ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದಂಪತಿ ಸಿದ್ದರಾಮೇಶ್ವರ ದೇಗುಲಕ್ಕೆ ಆಗಮಿಸಿ ನಂದಿಕೋಲುಗಳ ಪೂಜೆ ನೆರವೇರಿಸಿದರು. ಸಿದ್ದೇಶ್ವರ ಮೂರ್ತಿ ಪೂಜೆ ಬಳಿಕ ಅಕ್ಷತೆ ಕಾಳು ಹಾಕುವ ಕಾರ್ಯವು ನಡೆಯಿತು. ಈ ವೇಳೆ ಸಿದ್ದರಾಮೇಶ್ವರ ಮೂರ್ತಿ ಇಡಲಾಗಿದ್ದ ಪಲ್ಲಕ್ಕಿ ಸೇವೆಯು ನಡೆಯಿತು.
ಅದ್ದೂರಿಯಾಗಿ ನಡೆದ ನಂದಿಕೋಲುಗಳ ಮೆರವಣಿಗೆ
ಇನ್ನು ನಂದಿಕೋಲುಗಳ ಮೆರವಣಿಗೆ ಸಂಕ್ರಾಂತಿ ಜಾತ್ರೆಯ ವಿಶೇಷತೆಯಾಗಿದೆ. 7 ನಂದಿಕೋಲುಗಳ ಪೂಜೆಯ ಬಳಿಕ ನಗರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ನಂದಿಕೋಲುಗಳ ಮೆರವಣಿಗೆ ನೋಡಲು ಸಾವಿರಾರು ಭಕ್ತರು ಸೇರಿದ್ದು ವಿಶೇಷವಾಗಿತ್ತು.
Sankranti: ಕಬ್ಬಿನ ಗಣೆ ಕಟ್ಟಿ, ಹಾಲುಕ್ಕಿಸಿ ಸಂಭ್ರಮಿಸಿದ ಮುಳ್ಳೂರು ಶಾಲೆ ವಿದ್ಯಾರ್ಥಿಗಳು
ಯುವಕರ ಶತಮಾನದ ನೀಲುವಂಗಿಯೇ ವಿಶೇಷ
ಇನ್ನೊಂದು ವಿಶೇಷ ಅಂದ್ರೆ ಇಲ್ಲಿ ಸಿದ್ದೇಶ್ವರಾಮೇಶ್ವರ ದೇವರ ನಂದಿಕೋಲುಗಳನ್ನ ಹಿಡಿಯುವವರು ತೊಟ್ಟುಕೊಳ್ಳುವ ಬಿಳಿ ಬಣ್ಣದ ದಿರಿಸಿಗೆ ಶತಮಾನದ ಇತಿಹಾಸವಿದೆ. ನೂರಕ್ಕು ಅಧಿಕ ವರ್ಷಗಳ ಹಿಂದೆ ಸಿದ್ರಾಮೇಶ್ವರ ಭಕ್ತರು ತೊಡುತ್ತಿದ್ದ ನೀಲುವಂಗಿಯೇ ಇಂದಿಗು ಇಲ್ಲಿ ಸಾಂಸ್ಕೃತಿಕ ದಿರಿಸಾಗಿದೆ. ಒಂದೆ ಒಂದು ಆಧುನಿಕ ಕಾಲದ ಶರ್ಟ್ ಬಟನ್ ಆಗಲಿ, ಪಾಲಿಸ್ಟರ್ ಬಟ್ಟೆಯಾಗಲಿ, ಫ್ಯಾಶನಿಕ್ ಹೊಲಿಗೆಯಾಗಲಿ ಇರುವುದಿಲ್ಲ. ಹಳೆ ಕಾಲದಂತೆಯೇ ಕಸಿ (ಟ್ಯಾಗ್) ಇರುವ ನೀಲುವಂಗಿಗಳನ್ನ ಬಳಕೆ ಮಾಡಲಾಗುತ್ತೆ. ವಿಶೇಷ ಆಕರ್ಷಣೆಯಾಗಿರುವ ನಂದಿಕೋಲುಗಳನ್ನ ಹಿಡಿಯುವವರು, ಕೊಂಡೊಯ್ಯುವವರು ಧರಿಸುವ ವೇಷಭೂಷಣಗಳು ಸಹ ಬಲು ಆಕರ್ಷನೀಯ. ಶತಮಾನಗಳ ಹಿಂದೆ ಸಿದ್ದರಾಮೇಶ್ವರ ಜಾತ್ರೆ ಆರಂಭಗೊಂಡಾಗ ಜನರು ತೊಡುತ್ತಿದ್ದ ವೇಷಭೂಷಣಗಳನ್ನೆ ಇಂದಿಗೂ ತೊಡವುದು ವಿಶೇಷ.. ನೂರು ವರ್ಷಗಳ ಹಿಂದೆ ತೊಡುತ್ತಿದ್ದ ಧಿರಿಸನ್ನೆ ಇಂದಿಗೂ ಇಲ್ಲಿ ಯುವಕರು ತೊಡುವುದು ಗಮನಾರ್ಹ ಸಂಗತಿ. ಇನ್ನು ನಿಲುವಂಗಿ ತೊಟ್ಟವರು ಮಾತ್ರ ನಂದಿಕೋಲನ್ನ ಹಿಡಿದು ಸಾಗುವುದು ಇಲ್ಲಿನ ಪದ್ಧತಿಯಾಗಿದೆ. ವಿಜಯಪುರ ನಗರದ ಹಳೆ ಓಣಿಗಳಾದ ಜಾಡರ ಓಣಿ, ಶಿಖಾರಖಾನೆ, ಅಡಕಿಗಲ್ಲಿ, ಮಠಪತಿ ಗಲ್ಲಿ ಒಟ್ಟು ಏಳು ಓಣಿಗಳಿಂದ ನಂದಿಕೋಲುಗಳು ಸೇರುವುದು ವಾಡಿಕೆಯಾಗಿದೆ.
Chamarajanagar: ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಸಂಕ್ರಾಂತಿ ರಥೋತ್ಸವ
ಸಂಕ್ರಾಂತಿ ಜಾತ್ರೆಗೆ ದೂರಿಂದ ಬರುವ ಭಕ್ತರು
ಸಂಕ್ರಾಂತಿ ಜಾತ್ರೆಯ ವೀಕ್ಷಣೆಗೆ, ಕಣ್ತುಂಬಿಕೊಳ್ಳಲು ದೂರಿನೂರುಗಳಿಂದ ಭಕ್ತರು ಬರ್ತಾರೆ. ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಕಲಬುರ್ಗಿ, ದಾವಣಗೇರೆ ಸೇರಿ ಮಹಾರಾಷ್ಟ್ರದಿಂದಲು ಇಲ್ಲಿ ಭಕ್ತರು ಬರ್ತಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಸಿದ್ದರಾಮೇಶ್ವರನ ದರ್ಶನಕ್ಕೆ ಹೋಗದವರು, ವಿಜಯಪುರದ ಸಿದ್ದರಾಮೇಶ್ವರ ದರ್ಶನ ಮಾಡೋದು ಉಂಟು.
"ನಾನು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಿಂದ ಬಂದಿದ್ದೀನಿ. ವಿಜಯಪುರದ ಸಂಕ್ರಾಂತಿ ಜಾತ್ರೆ ವಿಶೇಷತೆ ಕೇಳಿದ್ದೆ. ಆದ್ರೆ ನೋಡಿರಲಿಲ್ಲ. ಈ ಬಾರಿ ಸಂಕ್ರಾಂತಿ ಜಾತ್ರೆಯನ್ನ ಕಣ್ತುಂಬಿಕೊಂಡಿದ್ದೀನಿ. ನಂದಿಕೋಲುಗಳ ಮೆರವಣಿಗೆ, ಪೂಜೆ ಆಕರ್ಷಣಿಯವಾಗಿತ್ತು. ವಿಜಯಪುರದಲ್ಲಿ ಸಂಕ್ರಾಂತಿ ತುಂಬಾ ವಿಶೇಷವಾಗಿ ನಡೆಯುತ್ತೆ..
- ನಮೃತಾ ರಾಜಶೇಖರ್ ಟೋಪಗಿ, ಅಥಣಿ