
ಪಿರಿಯಡ್ಸ್ ಮಹಿಳೆಯರ ದೇಹದಲ್ಲಿ ನಡೆಯುವ ಸಹಜ ಪ್ರಕ್ರಿಯೆ. ಇದರಿಂದ ಮನಸ್ಸಿನ ಭಕ್ತಿ ಕಡಿಮೆಯಾಗುವುದಿಲ್ಲ. ಪೀರಿಯಡ್ಸ್ ಸಮಯದಲ್ಲಿ ನವರಾತ್ರಿ ವ್ರತ ಆಚರಿಸಬಹುದು. ಆದ್ರೆ ವ್ರತ ಆಚರಣೆ ವೇಳೆ ಕೆಲ ವಿಷ್ಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಜ್ಯೋತಿಷ್ಯ ತಜ್ಞರ ಪ್ರಕಾರ, ಮುಟ್ಟಾದರೂ ಮಹಿಳೆಯರು ತಮ್ಮ ನಂಬಿಕೆ ಮತ್ತು ಸಂಪ್ರದಾಯಕ್ಕೆ ಅನುಗುಣವಾಗಿ ಒಂಬತ್ತು ದಿನಗಳ ವ್ರತವನ್ನು ಮುಂದುವರಿಸಬಹುದು. ಮುಟ್ಟಾಗುವುದು ಸಹಜ ಪ್ರಕ್ರಿಯೆಯಾಗಿದ್ದು, ಇದರಿಂದ ದೇವಿಯ ಮೇಲಿನ ಭಕ್ತಿ ಕಡಿಮೆಯಾಗುವುದಿಲ್ಲ. ಆದರೆ, ಪೂಜೆ ಮತ್ತು ಆಚರಣೆಗಳಿಗೆ ಸಂಬಂಧಿಸಿದ ನಿಯಮಗಳು ಕುಟುಂಬದ ಸಂಪ್ರದಾಯ, ಧಾರ್ಮಿಕ ನಂಬಿಕೆ ಹಾಗೂ ಪ್ರದೇಶಕ್ಕೆ ಅನುಗುಣವಾಗಿ ಬದಲಾಗಬಹುದು. ಹಾಗಾಗಿ, ನಿಮ್ಮ ಕುಟುಂಬದಲ್ಲಿ ಪಾಲಿಸಿಕೊಂಡು ಬಂದಿರುವ ಪದ್ಧತಿಯನ್ನು ಅನುಸರಿಸಬೇಕು.
• ದೇವರ ಮೂರ್ತಿ ಮುಟ್ಟಬಾರದು : ಕೆಲವು ಸಂಪ್ರದಾಯಗಳಲ್ಲಿ ಮುಟ್ಟಿನ ಸಮಯದಲ್ಲಿ ಮನೆಯ ಪೂಜಾ ಮಂದಿರ, ದೇವರ ಮೂರ್ತಿಗಳು, ಫೋಟೋಗಳು ಮತ್ತು ಪೂಜಾ ಸಾಮಗ್ರಿಗಳನ್ನು ಮುಟ್ಟಬಾರದು ಎಂಬ ನಿಯಮವಿದೆ. ಈ ನಂಬಿಕೆಯನ್ನು ಪಾಲಿಸುವವರು ದೂರದಿಂದಲೇ ದೇವಿಗೆ ನಮಸ್ಕರಿಸಬಹುದು.
• ಮನಸ್ಸಿನಲ್ಲೇ ದೇವಿಯ ನಾಮಸ್ಮರಣೆ ಮಾಡಬಹುದು : ಪೂಜಾ ಸಾಮಗ್ರಿಗಳನ್ನು ಮುಟ್ಟಲು ಸಾಧ್ಯವಾಗದಿದ್ದರೆ ಮನಸ್ಸಿನಲ್ಲೇ ದುರ್ಗಾ ಚಾಲೀಸಾ, ನವಾರ್ಣ ಮಂತ್ರ ಅಥವಾ ದೇವಿಯ ಭಜನೆಗಳನ್ನು ಸ್ಮರಿಸಬಹುದು. ದೇವಿಯ ಬಗ್ಗೆ ಧ್ಯಾನ ಮಾಡುತ್ತಾ ಮನಸ್ಸಿನಲ್ಲಿ ಪ್ರಾರ್ಥನೆ ಸಲ್ಲಿಸಬಹುದು.
• ಮೊದಲ ಮೂರು ದಿನ ನೈವೇದ್ಯ ತಯಾರಿಸಬಾರದು : ಕೆಲವು ಧಾರ್ಮಿಕ ಸಂಪ್ರದಾಯಗಳ ಪ್ರಕಾರ, ಮುಟ್ಟಿನ ಮೊದಲ ಮೂರು ದಿನ ದೇವಿಗೆ ಅರ್ಪಿಸುವ ನೈವೇದ್ಯವನ್ನು ಸ್ವತಃ ತಯಾರಿಸುವುದನ್ನು ತಪ್ಪಿಸುತ್ತಾರೆ. ಈ ಸಂದರ್ಭದಲ್ಲಿ ಮನೆಯ ಇತರ ಸದಸ್ಯರ ಸಹಾಯ ಪಡೆಯಬಹುದು. ಆದರೆ, ಇವು ಸಂಪ್ರದಾಯಕ್ಕೆ ಸಂಬಂಧಿಸಿದ ನಂಬಿಕೆಗಳೇ ಹೊರತು ವೈದ್ಯಕೀಯವಾಗಿ ಮುಟ್ಟಿನ ಸಮಯದಲ್ಲಿ ಅಡುಗೆ ಮಾಡಬಾರದು ಎಂಬ ನಿಯಮವಿಲ್ಲ.
• ಪೂಜೆ ಆರಂಭ ಯಾವಾಗ : ಕೆಲವು ಸಂಪ್ರದಾಯಗಳಲ್ಲಿ ಮುಟ್ಟಿನ ನಾಲ್ಕನೇ ಅಥವಾ ಐದನೇ ದಿನ, ರಕ್ತಸ್ರಾವ ನಿಂತ ಬಳಿಕ ಸ್ನಾನ ಮಾಡಿ ಎಂದಿನಂತೆ ಪೂಜೆ ಆರಂಭಿಸುವ ಪದ್ಧತಿಯಿದೆ. ಆದರೆ ಇದು ಎಲ್ಲ ಕುಟುಂಬಗಳಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ನಿಮ್ಮ ಮನೆಯ ಸಂಪ್ರದಾಯದಂತೆ ನಿರ್ಧರಿಸಬಹುದು.
ನವರಾತ್ರಿಯ ಮೊದಲ ದಿನ ಘಟಸ್ಥಾಪನೆ ಮಾಡುವುದು ಹೇಗೆ?
ನವರಾತ್ರಿಯ ಮೊದಲ ದಿನ ಘಟಸ್ಥಾಪನೆ, ಕಲಶ ಪ್ರತಿಷ್ಠಾಪನೆ, ಅಖಂಡ ಜ್ಯೋತಿ ಬೆಳಗಿಸುವುದು ಮತ್ತು ಜವಾರೆ ಬಿತ್ತುವುದು ಪ್ರಮುಖ ಆಚರಣೆಗಳಾಗಿವೆ. ಈ ದಿನವೇ ಪೀರಿಯಡ್ಸ್ ಆರಂಭವಾದರೆ, ಕೆಲವು ಸಂಪ್ರದಾಯಗಳಲ್ಲಿ ಮನೆಯ ಇತರ ಸದಸ್ಯರ ಸಹಾಯ ಪಡೆಯುವಂತೆ ಸಲಹೆ ನೀಡಲಾಗುತ್ತದೆ. ನಿಮ್ಮ ಸಂಪ್ರದಾಯದಲ್ಲಿ ಅಗತ್ಯವಿದ್ದರೆ, ಕುಟುಂಬದ ಸದಸ್ಯರ ಸಹಾಯದಿಂದ ಸಂಕಲ್ಪ ಮಾಡಬಹುದು.
ವ್ರತ ಮಾಡುವಾಗ ದೇಹದ ಆರೋಗ್ಯಕ್ಕೂ ಆದ್ಯತೆ ನೀಡಬೇಕು. ಹಣ್ಣುಗಳು, ಹಣ್ಣಿನ ರಸ, ತೆಂಗಿನಕಾಯಿ ನೀರು ಮತ್ತು ಸಾಕಷ್ಟು ದ್ರವಾಹಾರ ಸೇವಿಸಬಹುದು. ದೇಹದಲ್ಲಿ ದೌರ್ಬಲ್ಯ ಅಥವಾ ತಲೆಸುತ್ತು ಕಾಣಿಸಿಕೊಂಡರೆ ಉಪವಾಸವನ್ನು ಬಲವಂತವಾಗಿ ಮುಂದುವರಿಸಬಾರದು. ನವರಾತ್ರಿ ಸಮಯದಲ್ಲಿ ಪೀರಿಯಡ್ಸ್ ಆಗುವುದು ಸಹಜ. ಇದಕ್ಕಾಗಿ ಆತಂಕಪಡುವ ಅಗತ್ಯವಿಲ್ಲ. ಪೂಜೆ ಮತ್ತು ವ್ರತಕ್ಕೆ ಸಂಬಂಧಿಸಿದ ಆಚರಣೆಗಳು ಕುಟುಂಬದ ನಂಬಿಕೆ ಹಾಗೂ ಸಂಪ್ರದಾಯಕ್ಕೆ ಅನುಗುಣವಾಗಿ ಬದಲಾಗಬಹುದು.