
ಇನ್ನೆರಡು ದಿನಗಳಲ್ಲಿ ಪಿತೃಪಕ್ಷ ಮುಗಿಯುತ್ತಿದೆ. ಪಿತೃಪಕ್ಷದ ಕೊನೆಯ ದಿನ ಸರ್ವ ಪಿತೃ ಮಹಾಲಯ ಅಮಾವಾಸ್ಯೆ ಆಚರಣೆ ಮಾಡಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ಮಹಾಲಯ ಅಮವಾಸ್ಯೆ ಬಂದಿದೆ. ಇದು ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಮಹಾಲಯ ಅಮವಾಸ್ಯೆ ದಿನ ಏನೆಲ್ಲ ಮಾಡಬೇಕು ಎನ್ನುವ ಮಾಹಿತಿಯನ್ನು ನಟಿ ಕಾವ್ಯಾ ಶಾಸ್ತ್ರಿ ನೀಡಿದ್ದಾರೆ.
ಈ ಬಾರಿ ಮಹಾಲಯ ಅಮವಾಸ್ಯೆ ಅಕ್ಟೋಬರ್ ಹತ್ತರಂದು ಬಂದಿದೆ. ಅಂದ್ರೆ 10/10/2026. ಇಲ್ಲಿ 2026 ರನ್ನು ಲೆಕ್ಕ ಹಾಕಿದಾಗ ಒಟ್ಟೂ ಅಂಕ 10 ಬರುತ್ತದೆ. ಅಂದ್ರೆ 10/10/ 10 ಆಯ್ತು. ಇದು ಸಾಕಷ್ಟು ವಿಶೇಷತೆ ಹೊಂದಿದೆ ಎಂದು ನಟಿ ಕಾವ್ಯಾ ಹೇಳುತ್ತಾರೆ. ಹತ್ತು ಅತ್ಯಂತ ವಿಶೇಷವಾದ ಅಂಕಿ. ಹಾಗೇ ಅಮವಾಸ್ಯೆ ಶನಿವಾರ ಬಂದಿದೆ. ಕಷ್ಟಗಳನ್ನು ಕಳೆದುಕೊಂಡು ಹೊಸದನ್ನು ಶುರುಮಾಡಲು ಇದು ಉತ್ತಮ ಎನ್ನುತ್ತಾರೆ ಕಾವ್ಯ.
ಮಹಾಲಯ ಅಮವಾಸ್ಯೆ ದಿನ ನೀವು ಪ್ರತಿ ವರ್ಷ ಏನು ಮಾಡ್ತೀರೋ ಅದನ್ನು ತಪ್ಪದೆ ಮಾಡಬೇಕು. ಬಹುತೇಕರು ತಮ್ಮ ಪಿತೃಗಳಿಗೆ ಶ್ರಾದ್ಧ, ಪಿಂಡದಾನ, ತರ್ಪಣ ಇಡುವ ಕೆಲಸ ಮಾಡುತ್ತಾರೆ. ಒಂದ್ವೇಳೆ ಇದನ್ನು ಮಾಡ್ಲಿ, ಬಿಡಲಿ, ಮಧ್ಯಾಹ್ನದ ಊಟಕ್ಕಿಂತ ಮೊದಲು ಒಂದು ಕೆಲಸವನ್ನು ಅಗತ್ಯವಾಗಿ ಮಾಡಿ ಎಂದು ಕಾವ್ಯಾ ಹೇಳಿದ್ದಾರೆ.
ಕಾವ್ಯಾ ಪ್ರಕಾರ, ನೀವು ಮಧ್ಯಾಹ್ನ ಊಟಕ್ಕಿಂತ ಮೊದಲು, ನೀವು ಸಿದ್ಧಪಡಿಸಿದ ಊಟವನ್ನು ಒಂದು ಮುಷ್ಠಿ ಮಾಡಿ ಹಿಡಿದುಕೊಂಡು, ನಿಮ್ಮ ಪಿತೃಗಳನ್ನು ನೆನಪು ಮಾಡಿಕೊಂಡು ಅದನ್ನು ಆಕಳು, ನಾಯಿ, ಕಾಗೆ ಸೇರಿದಂತೆ ಯಾವುದೇ ಪ್ರಾಣಿಗೆ ನೀಡಬಹುದು. ನೀವು ಯಾವುದೇ ಆಹಾರ ತಯಾರಿಸಿರಲಿ ಅದನ್ನು ಪ್ರಾಣಿಗೆ ನೀಡಬೇಕು. ಮಧ್ಯಾಹ್ನ ಪಿತೃಗಳು ಭೂಮಿಗೆ ಬರ್ತಾರೆ ಎನ್ನುವ ನಂಬಿಕೆ ಇರೋದ್ರಿಂದ ಮಧ್ಯಾಹ್ನವೇ ಇದನ್ನು ಮಾಡಬೇಕು. ತಪ್ಪುಗಳನ್ನು ಕ್ಷಮಿಸಿ, ಆಶೀರ್ವಾದ ನೀಡುವಂತೆ ಪ್ರಾರ್ಥನೆ ಮಾಡಬೇಕು.
ಸಂಜೆ ಏನು ಮಾಡ್ಬೇಕು?
ಕಾವ್ಯಾ ಅವರ ಪ್ರಕಾರ, ಮಹಾಲಯ ಅಮವಾಸ್ಯೆ ದಿನ ಸಂಜೆ, ನಾಲ್ಕು ಬತ್ತಿ ಇರುವ ಒಂದು ದೀಪವನ್ನು ಸಾಧ್ಯವಾದ್ರೆ ಎಳ್ಳೆಣ್ಣೆ ಹಾಕಿ ಮನೆಯ ಹೊರಗೆ ಹಚ್ಚಬೇಕು. ಮನೆಯ ಒಳಗೆ ಒಂದು ಮಣ್ಣಿನ ಬೌಲ್ ನಲ್ಲಿ ಹತ್ತು ಕರಿ ಎಳ್ಳನ್ನು ಹಾಕಬೇಕು. ಬಿರಿಯಾನಿ ಎಲೆಯನ್ನು ಕೈನಲ್ಲಿ ಹಿಡಿದು ನಿಮ್ಮೆಲ್ಲ ಕಷ್ಟವನ್ನು ನೆನಪು ಮಾಡಿಕೊಂಡು, ಅದೆಲ್ಲ ಹೋಗ್ಲಿ ಅಂತ ಬೇಡಿ, ಅದನ್ನು ಮಣ್ಣಿನ ಪಾತ್ರೆಗೆ ಹಾಕಿ, ಸಣ್ಣ ಕರ್ಪೂರ ಹಚ್ಚಿ ಅದನ್ನು ಸುಡಬೇಕು. ಈ ಸುಟ್ಟ ಬೂದಿಯನ್ನು ನೀವು ಗಿಡಕ್ಕೆ ಹಾಕಬಹುದು.
ನಂತ್ರ ಒಂದು ಪೇಪರ್ ತೆಗೆದುಕೊಂಡು, ಅದರಲ್ಲಿ ಮುಂದಿನ ಅಮವಾಸ್ಯೆಯವರೆಗೆ ನಿಮಗೆ ಏನೆಲ್ಲ ಬೇಕು, ನಿಮ್ಮ ಜೀವನದಲ್ಲಿ ಏನೆಲ್ಲ ಆಗಬೇಕು ಎಂಬುದನ್ನು ಬರೆದು, ಅದನ್ನು ಎಲ್ಲಾದ್ರೂ ಇಡಬೇಕು. ಇದ್ರಿಂದ ನಿಮ್ಮ ಎಲ್ಲ ಕಷ್ಟ ದೂರವಾಗಿ, ಹೊಸ ಜೀವನ ನವರಾತ್ರಿಯಿಂದ ಶುರುವಾಗುತ್ತೆ ಎನ್ನುತ್ತಾರೆ ಕಾವ್ಯಾ.