ಮಾಡಿದ ಕೆಲಸ ಕೈಗೂಡದಿದ್ದರೆ, ಶುಭವಾಗದಿದ್ದರೆ, ಮನೆಯಲ್ಲಿ ಅಶಾಂತಿ ನೆಲೆಸಿದರೆ, ಸಂತಾನ ಸಮಸ್ಯೆಯಾಗಿದ್ದರೆ ಪಿತೃದೋಷವೂ ಕಾರಣವಿರಬಹುದು. ಹೀಗಾಗಿ ಪಿತೃಪಕ್ಷದಲ್ಲಿ ಪಿತೃಗಳನ್ನು ಸಂತೃಪ್ತಿಪಡಿಸಿದಲ್ಲಿ, ಅಗತ್ಯ ಪೂಜೆಗಳನ್ನು, ದಾನಗಳನ್ನು ಮಾಡಿದಲ್ಲಿ ದೋಷವನ್ನು ನಿವಾರಣೆ ಮಾಡಿಕೊಳ್ಳಬಹುದು. ಹೀಗಾಗಿ ಯಾವೆಲ್ಲ ಕ್ರಮಗಳನ್ನು ಅನುಸರಿಸಿದರೆ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು ಎಂಬ ಬಗ್ಗೆ ನೋಡೋಣ.
ಹಿಂದೂ ಧರ್ಮದ ಅನೇಕ ಆಚರಣೆಗಳಲ್ಲಿ ಪಿತೃಪಕ್ಷದ ಆಚರಣೆಯು ಮಹತ್ವದ್ದಾಗಿದೆ. ಇದು ಭಾದ್ರಪದ ಮಾಸದ ಹುಣ್ಣಿಮೆಯಂದು ಆರಂಭವಾಗಿ ಆಶ್ವಯುಜ ಮಾಸದ ಅಮಾವಾಸ್ಯೆಯಂದು ಪೂರ್ಣಗೊಳ್ಳುತ್ತದೆ. ಈ ಹದಿನೈದು ದಿನಗಳ ಪಿತೃಪಕ್ಷ ಈ ಬಾರಿ ಇದೇ ಸೆಪ್ಟೆಂಬರ್ 2ರಿಂದ ಆರಂಭವಾಗಲಿದೆ. ಪಿತೃ ದೋಷವನ್ನು ಹೊಂದಿದವರು ದೋಷವನ್ನು ನಿವಾರಿಸಿಕೊಳ್ಳಲು ಇದು ಪ್ರಶಸ್ತವಾದ ಕಾಲವಾಗಿದೆ.
ಪಿತೃಪಕ್ಷದಲ್ಲಿ ನಮ್ಮ ಪೂರ್ವಜರಿಗೆ ಜಲ ತರ್ಪಣ ನೀಡುವ ಮೂಲಕ ಅವರನ್ನು ಸಂತುಷ್ಟಿಗೊಳಿಸುವುದಾಗಿದೆ. ಪೂರ್ವಜರು ಮೃತ್ಯು ಹೊಂದಿದ ತಿಥಿಯಲ್ಲಿ ಅವರ ಶ್ರಾದ್ಧವನ್ನು ನೇರವೇರಿಸುವುದು ಸಹ ಒಂದು ಮಹತ್ವದ ಕಾರ್ಯವಾಗಿರುತ್ತದೆ. ತಂದೆ-ತಾಯಿ ಅಥವಾ ಪರಿವಾರದ ಇತರ ಸದಸ್ಯರು ಮೃತ್ಯು ಹೊಂದಿದ್ದಲ್ಲಿ ಅವರ ತೃಪ್ತಿಗಾಗಿ ಶ್ರಾದ್ಧವನ್ನು ಮಾಡಲಾಗುತ್ತದೆ. “ಶ್ರದ್ಧಯಾ ಇದಂ ಶ್ರಾದ್ಧಮ್” ಅಂದರೆ ಶ್ರದ್ಧೆಯಿಂದ ಮಾಡುವ ಕಾರ್ಯವೇ ಶ್ರಾದ್ಧವೆಂದು ಕರೆಸಿಕೊಳ್ಳುತ್ತದೆ. ಹಾಗಾಗಿ ಶ್ರದ್ಧೆಯಿಂದ ಹಿರಿಯರ ಕಾರ್ಯವನ್ನು ಮಾಡಿವುದಲ್ಲದೇ, ಜ್ಯೋತಿಷ್ಯದಲ್ಲಿ ಹೇಳಿದ ಕೆಲವು ಉಪಾಯಗಳನ್ನು ಈ ಸಮಯದಲ್ಲಿ ಮಾಡಿದರೆ ಒಳಿತಾಗುತ್ತದೆ. ಜಾತಕದಲ್ಲಿ ಪಿತೃದೋಷವನ್ನು ಹೊಂದಿದವರು ಪಿತೃಪಕ್ಷದಲ್ಲಿ ಕೆಲವು ಪರಿಹಾರಗಳನ್ನು ಮಾಡಿಕೊಂಡಲ್ಲಿ ದೋಷದಿಂದ ಮುಕ್ತಿಯನ್ನು ಪಡೆಯಬಹುದಾಗಿದೆ.
ಇದನ್ನು ಓದಿ: ನಿಮ್ಮ ಜಾತಕದಲ್ಲೂ ಈ ದೋಷಗಳಿರಬಹುದು, ಚೆಕ್ ಮಾಡಿಕೊಳ್ಳಿ!
ಪಿತೃದೋಷ ಯಾರಿಗೆ ಬರುತ್ತದೆ?
ಪಿತೃದೋಷದಿಂದ ಅನೇಕ ತೊಂದರೆಗಳು ಉಂಟಾಗುತ್ತದೆ.ಪಿತೃದೋಷವು ಅಶುಭ ಪ್ರಭಾವವನ್ನು ಬೀರುತ್ತದೆ. ತಂದೆ-ತಾಯಿಗೆ ಗೌರವ ಕೊಡದಿರುವುದು,ಮಾತನ್ನು ಅಲ್ಲಗಳೆಯುವುದನ್ನು ಮಾಡಿದಾಗ, ಅಥವಾ ಅವರ ಮೃತ್ಯುವಿನ ನಂತರ ಶ್ರಾದ್ಧ ಮಾಡದಿದ್ದಾಗ ಪಿತೃದೋಷ ಬರುತ್ತದೆ. ಸರ್ಪಹತ್ಯೆ ಮಾಡಿದರು ಸಹ ಈ ದೋಷ ಉಂಟಾಗುತ್ತದೆ. ಜಾತಕದಲ್ಲಿ ಈ ದೋಷವಿದ್ದಾಗ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆ ಎದುರಾಗುತ್ತದೆ. ಕುಟುಂಬದಲ್ಲಿ ಕಲಹ ಉಂಟಾಗುವುದು ಮುಂತಾದ ಸಮಸ್ಯೆಗಳು ಕಂಡುಬರುತ್ತವೆ. ಹೀಗಾಗಿ ದೋಷ ಪರಿಹಾರಕ್ಕೆ ಪಿತೃಪಕ್ಷದಲ್ಲಿ ಕೆಲವು ಆಚರಣೆಗಳನ್ನು ಮಾಡಬೇಕು.
ಪಿತೃಗಳಿಗೆ ಪಿಂಡಪ್ರದಾನ ಮಾಡುವುದು
ಪಿತೃಪಕ್ಷದಲ್ಲಿ ಪೂರ್ವಜರನ್ನು ಸಂತೃಪ್ತಿಗೊಳಿಸುವ ಸಲುವಾಗಿ ಪಿಂಡಪ್ರದಾನ ಮಾಡುವುದು ರೂಢಿಯಲ್ಲಿದೆ. ಪಿತೃಪಕ್ಷದಲ್ಲಿ ಹೀಗೆ ಮಾಡುವುದರಿಂದ ಮನೆಯಲ್ಲಿ ಮತ್ತು ಕುಟುಂಬದಲ್ಲಿ ಅಭಿವೃದ್ಧಿಯನ್ನು ಕಾಣಬಹುದಾಗಿದೆ. ಹಿರಿಯರ ಆಶೀರ್ವಾದ ಮನೆಯ ಸದಸ್ಯರ ಮೇಲೆ ಸದಾ ಇರುತ್ತದೆ.
ಬ್ರಾಹ್ಮಣರಿಗೆ ಭೋಜನ
ಪಿತೃಪಕ್ಷದಲ್ಲಿ ಬ್ರಾಹ್ಮಣರಿಗೆ ಅನ್ನದಾನವನ್ನು ನೀಡುವುದರಿಂದ ಪಿತೃಗಳು ಪ್ರಸನ್ನರಾಗುತ್ತಾರೆ. ಅಷ್ಟೇ ಅಲ್ಲದೇ ಮನೆಯಲ್ಲಿ ಮತ್ತು ಕಾರ್ಯಸ್ಥಳದಲ್ಲಿ ಹಿರಿಯರ ಫೋಟೋವನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಬೆಳಗ್ಗೆ ಎದ್ದಾಗ ಹಿರಿಯರ ಫೋಟೋವನ್ನು ನೋಡಿ ನಮಸ್ಕರಿಸಬೇಕು ಮತ್ತು ಅದಕ್ಕೆ ಹೂವನ್ನು ಅರ್ಪಿಸಿ ಆಶೀರ್ವಾದವನ್ನು ಪಡೆಯಬೇಕು.
ಇದನ್ನು ಓದಿ: ಅಮವಾಸ್ಯೆಯಂದು ಈ ವಸ್ತುಗಳನ್ನು ಮನೆಗೆ ತರುವುದು ಅಶುಭ..!
ಪಿತೃಪಕ್ಷದಲ್ಲಿ ಕಾಗೆಗಳಿಗೆ ಅನ್ನ ನೀಡುವುದು
ಪಿತೃಪಕ್ಷದಲ್ಲಿ ಕಾಗೆಗಳಿಗೆ ಅನ್ನವನ್ನು ನೀಡುವದರಿಂದ ಪಿತೃಗಳು ಸಂತೃಪ್ತಿ ಹೊಂದುತ್ತಾರೆಂಬ ನಂಬಿಕೆ ಇದೆ. ಅಷ್ಟೇ ಅಲ್ಲದೇ ಶ್ರಾದ್ಧದ ದಿನ ಸಹ ಕಾಗೆಗಳಿಗೆ ಅನ್ನ ನೀಡಲಾಗುತ್ತದೆ. ಹಿರಿಯರ ದಿನವನ್ನು ಆಚರಿಸುವುದರಿಂದ ಕುಟುಂಬಕ್ಕೆ ಹಿರಿಯರ ಆಶೀರ್ವಾದವಿರುತ್ತದೆ.
ಆಶ್ರಯ ವ್ಯವಸ್ಥೆ
ಪಿತೃಪಕ್ಷದಲ್ಲಿ ಆಶ್ರಯವಿಲ್ಲದವರಿಗೆ ಆಶ್ರಯ ನೀಡುವುದರಿಂದ ಪಿತೃಗಳು ಸಂತೃಪ್ತಿ ಹೊಂದುತ್ತಾರೆಂಬ ನಂಬಿಕೆ ಇದೆ. ಅಷ್ಟೇ ಅಲ್ಲದೆ ಪಿತೃಗಳ ಹೆಸರಿನಲ್ಲಿ ಸ್ಮಶಾನದಲ್ಲಿ ಆಸನದ ವ್ಯವಸ್ಥೆ ಮಾಡುವುದು ಸಹ ಉತ್ತಮ ಕಾರ್ಯಗಳಲ್ಲೊಂದಾಗಿದೆ. ಹೀಗೆ ಮಾಡುವುದರಿಂದ ಪರಿವಾರದಲ್ಲಿ ಸುಖ-ಶಾಂತಿ ನೆಲೆಸುತ್ತದೆ.
ಇದನ್ನು ಓದಿ: ನೀವು ಆರಾಧಿಸಬೇಕಾದ ದೇವರ ಬಗ್ಗೆ ಹಸ್ತರೇಖೆಯಿಂದ ತಿಳಿಯಿರಿ.
ದಾನ ನೀಡುವುದು
ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ದಾನ ನೀಡುವುದರಿಂದ ಹಿರಿಯರ ಆಶೀರ್ವಾದ ಲಭಿಸುತ್ತದೆ. ಹಿರಿಯರ ಆತ್ಮಕ್ಕೆ ಶಾಂತಿ ಲಭಿಸುವುದಲ್ಲದೇ, ಜಾತಕದಲ್ಲಿ ಪಿತೃದೋಷವಿದ್ದರೆ ಅದರ ಪ್ರಭಾವ ಕಡಿಮೆಯಾಗುತ್ತದೆ. ದೇವಸ್ಥಾನಗಳಿಗೆ, ನಿರ್ಗತಿಕರಿಗೆ, ಬಡವರಿಗೆ ಕೈಲಾದಷ್ಟು ಸಹಾಯ ಮಾಡುವುದರಿಂದ ಸಹ ಒಳಿತಾಗುತ್ತದೆ.