ಏಸುವಿನ ಜನ್ಮದಿನ ವಿಜೃಂಭಣೆ: ಇಂದು ರಾತ್ರಿಯಿಂದಲೇ ಕ್ರಿಸ್ಮಸ್‌ ಆಚರಣೆಗೆ ಸಿದ್ಧತೆ

By Govindaraj SFirst Published Dec 24, 2022, 10:35 AM IST
Highlights

ಸಿಲಿಕಾನ್‌ ಸಿಟಿಯಲ್ಲಿ ಕ್ರಿಸ್ಮಸ್‌ ಸಂಭ್ರಮ ಕಳೆಗಟ್ಟಿದೆ. ಕ್ರಿಸ್ಮಸ್‌ ಈವ್‌ ಆಚರಣೆ ಭಾಗವಾಗಿ ಇಂದು ತಡರಾತ್ರಿ ಚರ್ಚ್‌ಗಳಲ್ಲಿ ಕ್ಯಾರಲ್ಸ್‌, ಬೈಬಲ್‌ ಪಠಣ, ಗೋದಲಿಗಳ ಪೂಜೆ ನೆರವೇರಲಿದ್ದು, ನಾಳೆ (ಡಿ.25) ಏಸುವಿನ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. 

ಬೆಂಗಳೂರು (ಡಿ.24): ಸಿಲಿಕಾನ್‌ ಸಿಟಿಯಲ್ಲಿ ಕ್ರಿಸ್ಮಸ್‌ ಸಂಭ್ರಮ ಕಳೆಗಟ್ಟಿದೆ. ಕ್ರಿಸ್ಮಸ್‌ ಈವ್‌ ಆಚರಣೆ ಭಾಗವಾಗಿ ಇಂದು ತಡರಾತ್ರಿ ಚರ್ಚ್‌ಗಳಲ್ಲಿ ಕ್ಯಾರಲ್ಸ್‌, ಬೈಬಲ್‌ ಪಠಣ, ಗೋದಲಿಗಳ ಪೂಜೆ ನೆರವೇರಲಿದ್ದು, ನಾಳೆ (ಡಿ.25) ಏಸುವಿನ ಜನ್ಮದಿನವನ್ನು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ. ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ ಮಂಕಾಗಿದ್ದ ಕ್ರಿಸ್ಮಸ್‌ಗೆ ಈ ಬಾರಿ ಕಳೆ ಬಂದಿದೆ. ವರ್ಚುವಲ್‌ ಸ್ವರೂಪದ ಬದಲಾಗಿ ಹಿಂದಿನಂತೆ ಭೌತಿಕವಾಗಿ ಎಲ್ಲರೂ ಒಂದೆಡೆ ಸೇರಿ ಪ್ರಾರ್ಥನೆ ಸಲ್ಲಿಸಲು ಉತ್ಸುಕರಾಗಿದ್ದಾರೆ.

ಈಗಾಗಲೆ ಪ್ರಮುಖ ಚರ್ಚ್‌ಗಳು, ಮನೆ, ಶಾಲೆ ಕಾಲೇಜುಗಳಲ್ಲಿ ಏಸುಕ್ರಿಸ್ತ ಜನಿಸಿದ ಗೋದಲಿ (ಕ್ರಿಬ್‌) ಸ್ಥಾಪಿಸಲಾಗಿದೆ. ಅದರಲ್ಲಿ ಕ್ರೈಸ್ತ, ಮೇರಿ, ಜೋಸೆಫ್‌, ತ್ರಿ ಕಿಂಗ್‌್ಸ, ದೇವದೂತರು ಸೇರಿ 18 ಬೊಂಬೆ ಇಡಲಾಗಿದೆ. ಕ್ರಿಸ್ಮಸ್‌ ಟ್ರೀಗೆ ವಿದ್ಯುತ್‌ ಅಲಂಕಾರ, ಗ್ರೇಫ್ಸ್‌, ಬೆಲ್ಸ್‌ ಸೇರಿ ವಿವಿಧ ವಿನ್ಯಾಸದಿಂದ ಅಲಂಕರಿಸಲಾಗಿದೆ. ಸ್ಟಾರ್‌ ಲೈಟ್‌ಗಳು ಕಂಗೊಳಿಸುತ್ತಿವೆ. ಸಂತಾಕ್ಲಾಸ್‌ ವೇಷಧಾರಿಗಳು ಉಡುಗೊರೆ ಕೊಡುಗೆಯಲ್ಲಿ ನಿರತರಾಗಿದ್ದಾರೆ.

ಬಾದಾಮಿ: ತಾಯಿ ಬನಶಂಕರಿದೇವಿ ಜಾತ್ರೆ ಯಶಸ್ವಿಗೊಳಿಸಿ, ಡಿಸಿ ಸುನೀಲಕುಮಾರ

‘ಕನ್ನಡಪ್ರಭ’ ಜತೆ ಮಾತನಾಡಿದ ರೆ.ಫಾ. ಸಿರಿಲ್‌ ವಿಕ್ಟರ್‌ ‘ಇಂದು ರಾತ್ರಿ ನಗರದ ಚರ್ಚ್‌ಗಳಲ್ಲಿ 7 ಗಂಟೆಯಿಂದ ಆರಾಧನಾ ವಿಧಿಗಳು ಆರಂಭವಾಗುತ್ತದೆ. ಮಧ್ಯರಾತ್ರಿ ವಿಶೇಷ ಪ್ರಾರ್ಥನೆಯನ್ನು ಆರ್ಚ್‌ ಬಿಷಪ್‌ ಅವರು ಬೋಧಿಸಲಿದ್ದಾರೆ. ಗೋದಲಿಗಳ ವಿಶೇಷ ಪೂಜೆ ನಡೆಯಲಿದೆ. ಮಕ್ಕಳಿಂದ ಕ್ಯಾರಲ್ಸ್‌ ಸಿಂಗಿಂಗ್‌, ಬೈಬಲ್‌ನ 2ನೇ ಅಧ್ಯಾಯ ಲೂಕನ ಬರೆದಿರುವ ಶುಭ ಸಂದೇಶ ಪಠಿಸಲಾಗುತ್ತದೆ. ಏಸುಕ್ರಿಸ್ತನ ಜನನ, ಮಾನವರಾಗಿ ಜನಿಸಿದರೂ ದೈವತ್ವ ಹೊಂದಿದ್ದ ಬಗೆಯನ್ನು ಸ್ಮರಿಸಲಾಗುತ್ತದೆ’ ಎಂದರು.

ಡಿ.25ರಂದು ಬೆಳಗ್ಗೆ, ಸಂಜೆ ವಿಶೇಷ ಆಚರಣೆಗಳು ನಡೆಯಲಿವೆ. ಸಾಂತಾಕ್ಲಾಸ್‌ ಸ್ವರೂಪದಲ್ಲಿ ಕೊಡುಗೆ, ಕೇಕ್‌, ಸಿಹಿತಿನಿಸುಗಳನ್ನು ಹಂಚಿಕೊಳ್ಳುವ ಮೂಲಕ ಪ್ರೀತಿ ಸಾರಲಾಗುತ್ತದೆ ಎಂದು ತಿಳಿಸಿದರು. ವೃದ್ಧರು, ಮಕ್ಕಳಿಗಾಗಿ ಆನ್‌ಲೈನ್‌, ಯುಟ್ಯೂಬ್‌ಗಳ ಮೂಲಕವೂ ಆಚರಣೆಯನ್ನು ಪ್ರಸಾರ ಮಾಡಲಾಗುತ್ತಿದೆ. ಬೆಂಗಳೂರಲ್ಲಿ 150ಕ್ಕೂ ಹೆಚ್ಚು ಕ್ಯಾಥೊಲಿಕ್‌ ಚರ್ಚ್‌ಗಳಿವೆ. ಈ ವರ್ಷ ಉದ್ಘಾಟನೆಯಾಗಿರುವ ಹೋಲಿ ಫ್ಯಾಮಿಲಿ ಚರ್ಚ್‌, ಸೆಂಟ್‌ ಇಗ್ನೇಷಿಯಸ್‌ ಚರ್ಚ್‌ನಲ್ಲಿ ವಿಶೇಷ ಸಂಭ್ರಮಾಚರಣೆ ನಡೆಯಲಿವೆ ಎಂದು ಅವರು ವಿವರಿಸಿದರು.

200ಕ್ಕೂ ಹೆಚ್ಚು ಚರ್ಚ್‌ಗಳಲ್ಲಿ ಆಚರಣೆ: ನಗರದ ಪ್ರಮುಖವಾದ ಶಿವಾಜಿನಗರ ಸೆಂಟ್‌ ಮೇರಿಸ್‌ ಬೆಸಿಲಿಕಾ ಚರ್ಚ್‌, ಎಂಜಿ ರಸ್ತೆಯ ಸೆಂಟ್‌ ಮಾರ್ಕ್ಸ್ ಕ್ಯಾಥೆಡ್ರಲ್‌ ಚರ್ಚ್‌, ಕ್ಲೈವ್‌ ಲ್ಯಾಂಡ್‌ ಟೌನ್‌ನಲ್ಲಿನ ಸೆಂಟ್‌ ಫ್ರಾನ್ಸಿಸ್‌ ಕ್ಸೆವಿಯರ್‌ ಕೆಥಡ್ರಲ್‌, ಸೆಂಟ್‌ ಜಾನ್ಸ್‌ ಚರ್ಚ್‌, ಚಾಮರಾಜಪೇಟೆಯ ಸೆಂಟ್‌ ಲ್ಯೂಕ್ಸ್‌ ಚರ್ಚ್‌, ಅಶೋಕ ನಗರದ ಸೆಕ್ರೆಡ್‌ ಹಾಟ್ಸ್‌ರ್‍ ಚರ್ಚ್‌, ಪ್ರಿಮ್‌ರೋಸ್‌ ರಸ್ತೆಯ ಮಾರ್‌ಥೋಮಾ ಚರ್ಚ್‌, ಹೋಲಿ ಟ್ರಿನಿಟಿ ಚರ್ಚ್‌, ಬ್ರಿಗೆಡ್‌ ರಸ್ತೆಯ ಸೆಂಟ್‌ ಪ್ಯಾಟ್ರಿಕ್ಸ್‌ ಚರ್ಚ್‌, ಹಡ್ಸನ್‌ ವೃತ್ತದ ಹಡ್ಸನ್‌ ಮೆಮೊರಿಯಲ್‌ ಚರ್ಚ್‌, ವಿವೇಕ ನಗರದ ಇನ್‌ಫಂಟ್‌ ಜೀಸಸ್‌ ಚರ್ಚ್‌, ಟಸ್ಕರ್‌ ಟೌನ್‌ ಸೆಂಟ್‌ ಆ್ಯಂಡ್ರೂಸ್‌ ಚರ್ಚ್‌, ಹೊಸೂರು ರಸ್ತೆಯ ಆಲ್‌ ಸೈಂಟ್ಸ್‌ ಚರ್ಚ್‌, ಹೆಬ್ಬಾಳದ ಬೆಥೆಲ್‌ ಅಸೆಂಬ್ಲಿ ಆಫ್‌ ಗಾಡ್‌, ಎಂಜಿ ರಸ್ತೆಯ ಈಸ್ಟ್‌ ಪರೇಡ್‌, ಸರ್ಜಾಪುರ ರಸ್ತೆಯ ಮೌಂಟ್‌ ಕಾರ್ಮೆಲ್‌ ಚರ್ಚ್‌, ಹೋಲಿ ಗೋಸ್ಟ್‌ ಚರ್ಚ್‌ ಸೇರಿ 200ಕ್ಕೂ ಹೆಚ್ಚಿನ ಚರ್ಚ್‌ಗಳಲ್ಲಿ ಕ್ರಿಸ್ಮಸ್‌ ಆಚರಣೆ ಸಂಭ್ರಮದಿಂದ ನಡೆಯಲಿದೆ.

ಯಾದಗಿರಿಯಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ 'ಚೆರಗ ಚೆಲ್ಲಿದ' ರೈತರು

ಕುಟುಂಬದ ವರ್ಷವಾಗಿ ಆಚರಣೆ: ಕ್ರಿಸ್ಮಸ್‌ ಸಂದೇಶ ನೀಡಿದ ಬೆಂಗಳೂರು ಮಹಾಧರ್ಮಾಧ್ಯಕ್ಷರಾದ ಆರ್ಚ್‌ ಬಿಷಪ್‌ ಡಾ. ಪೀಟರ್‌ ಮಚಾಡೊ ‘ಕ್ರಿಸ್ಮಸ್‌ ಹಬ್ಬದ ಮೂಲಕ ಇತರರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಬೇಕು. ಉಳ್ಳವರು ಬಡವರನ್ನು ಒಳಗೊಂಡು ಹಬ್ಬವನ್ನು ಆಚರಿಸಬೇಕು. ಈ ವರ್ಷ ಧರ್ಮ ಕೇಂದ್ರದ ಮಾರ್ಗಸೂಚಿಯಂತೆ ‘ಕುಟುಂಬದ ವರ್ಷ (ಇಯರ್‌ ಆಫ್‌ ದಿ ಫ್ಯಾಮಿಲಿ)’ ವಾಗಿ ಕ್ರಿಸ್ಮಸ್‌ ಆಚರಿಸುತ್ತಿದ್ದೇವೆ. ಯುವಕರು ದುರಭ್ಯಾಸದಿಂದ ಹೊರಬರಬೇಕು. ಕುಟುಂಬ ಜೀವನದ ಧ್ಯೇಯ ಕಾಪಾಡಿಕೊಂಡು ಹೋಗಲು ಎಲ್ಲರೂ ಮುಂದಾಗಬೇಕು. ಕ್ರಿಸ್ಮಸ್‌ ಎಲ್ಲರಿಗೂ ಶುಭಾಶಯ ಕೋರಿದ್ದಾರೆ.

click me!