ಕೆಲವೊಮ್ಮೆ ಮನೆಯ ದಿಕ್ಕುಗಳು ವಾಸ್ತು ಪ್ರಕಾರವಿದ್ದರೂ ಹಣ ಮಾತ್ರ ವ್ಯಯವಾಗುತ್ತಲೇ ಇರುತ್ತವೆ. ಕೆಲವು ವಸ್ತುಗಳನ್ನು ಮನೆಯಲ್ಲಿ ಇಂಥದ್ದೇ ದಿಕ್ಕಿಗೆ ಇಡುವುದರಿಂದ ಅಭಿವೃದ್ಧಿಹೊಂದಬಹುದು ಎಂಬ ಬಗ್ಗೆಯೂ ವಾಸ್ತು ಶಾಸ್ತ್ರ ಹೇಳುತ್ತದೆ. ಲಕ್ಷ್ಮೀಯನ್ನು ಪ್ರಸನ್ನಗೊಳಿಸಿಕೊಳ್ಳಲು ಕೆಲವೊಂದು ವಸ್ತುಗಳನ್ನು ಮನೆಯಲ್ಲಿಟ್ಟರೆ ಆರ್ಥಿಕ ಸ್ಥಿತಿ ಉತ್ತಮವಾಗುತ್ತದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಹಾಗಾದರೆ ಆ ವಸ್ತುಗಳು ಯಾವುದೆಂದು ತಿಳಿಯೋಣ…
ಲಕ್ಷ್ಮೀದೇವಿಯ ಕೃಪೆ ಎಲ್ಲರಿಗೂ ಬೇಕು. ಧನ-ಧಾನ್ಯಗಳ ಅಧಿದೇವತೆ ಲಕ್ಷ್ಮೀಯೇ ಆಗಿದ್ದು, ಸಮಸ್ತ ಜಗತ್ತಿಗೂ ಯಶಸ್ಸು, ವೈಭವ ಮತ್ತು ಕೀರ್ತಿಯನ್ನು ಪಾಲಿಸುವ ದೇವತೆಯಾಗಿದ್ದಾಳೆ. ಲಕ್ಷ್ಮೀಯ ಕೃಪೆಯುಳ್ಳವರಿಗೆ ಯಾವುದೇ ಆತಂಕವಿರುವುದಿಲ್ಲ, ಅಂಥ ಮನೆಯಲ್ಲಿ ಧನ-ಧಾನ್ಯ ಮತ್ತು ಸಮೃದ್ಧಿಯು ಅಪಾರವಾಗಿರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ದೇವಿಗೆ ಸಂಬಂಧಪಟ್ಟ ಕೆಲವು ವಸ್ತುಗಳನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮೀದೇವಿಯ ಕೃಪೆ ಸದಾ ಮನೆಯ ಮೇಲಿರುತ್ತದೆ.
ಲಕ್ಷ್ಮೀಯು ನಿಮ್ಮ ಮನೆಯಲ್ಲಿ ವಾಸ ಮಾಡಬೇಕೆಂದರೆ ಮನೆಯನ್ನು ಶುಚಿಯಾಗಿಟ್ಟಿರಬೇಕು. ಯಾವ ಮನೆಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವುದಿಲ್ಲವೋ ಅಂಥವರ ಮನೆಗೆ ಲಕ್ಷ್ಮೀದೇವಿ ಪ್ರವೇಶಿಸುವುದಿಲ್ಲ. ತುಳಸಿ ಗಿಡದಲ್ಲಿ ಲಕ್ಷ್ಮೀ ವಾಸವಿರುತ್ತಾಳೆ ಎಂಬ ನಂಬಿಕೆ ಇದೆ. ತುಳಸಿ ಗಿಡದ ಸುತ್ತ ಮುತ್ತ ಸಾರಿಸಿ, ರಂಗವಲ್ಲಿಯನ್ನು ಹಾಕಿ, ನಂತರ ಶುಚಿಯಾಗಿ ತುಳಸಿ ದೇವಿಗೆ ನೀರೆರೆದು, ದೀಪ ಬೆಳಗಿಸಬೇಕು. ಆನಂತರ ಮನಸ್ಸಿನ ಇಚ್ಛೆಯನ್ನು ಕೇಳಿಕೊಂಡರೆ, ಆ ಪ್ರಾರ್ಥನೆಯನ್ನು ಆಲಿಸಿ ಲಕ್ಷ್ಮೀದೇವಿಯು ಬೇಡಿಕೊಂಡಿದ್ದನ್ನು ಈಡೇರಿಸುತ್ತಾಳೆ.
ಇದನ್ನು ಓದಿ: ಈ ಜೀವಿಗಳನ್ನು ಕನಸಿನಲ್ಲಿ ಕಂಡರೆ ಧನಲಾಭ..!
ವಾಸ್ತು ಶಾಸ್ತ್ರವು ಜ್ಯೋತಿಷ್ಯ ಶಾಸ್ತ್ರದ ಅಂಗವಾಗಿದೆ. ವಾಸ್ತು ಶಾಸ್ತ್ರವನ್ನು ಸರಿಯಾಗಿ ಪಾಲನೆ ಮಾಡಿ, ವಾಸ್ತು ಪ್ರಕಾರ ಎಲ್ಲವೂ ಇರುವಂತೆ ನೋಡಿಕೊಂಡರೆ, ಅಂಥವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲ. ಹಾಗೆಯೇ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ವಾಸ್ತು ಶಾಸ್ತ್ರ ಹೇಳಿರುವ ಈ ಉಪಾಯಗಳನ್ನು ನೋಡೋಣ....
“ಶ್ರೀ” ಯಂತ್ರವನ್ನು ಮನೆಯಲ್ಲಿಡಬೇಕು
ದೇವಿಗೆ ಸಂಬಂಧಪಟ್ಟ “ಶ್ರೀ” ಯಂತ್ರದಲ್ಲಿ ಲಕ್ಷ್ಮೀ ವಾಸವಾಗಿರುತ್ತಾಳೆ ಎಂಬ ನಂಬಿಕೆ ಇದೆ. ಹಾಗಾಗಿ ಲಕ್ಷ್ಮೀಯು ತಮ್ಮ ಮನೆಯಲ್ಲಿ ವಾಸಿಸಬೇಕು, ಧನ-ಧಾನ್ಯಗಳು ಸಮೃದ್ಧಿಯಾಗಿರಬೇಕೆಂದು ಬಯಸುವವರು ಮನೆಯಲ್ಲಿ “ಶ್ರೀ” ಯಂತ್ರವನ್ನು ಪ್ರತಿಷ್ಠಾಪಿಸಬೇಕು. ಪ್ರತಿಷ್ಠಾಪಿಸಿದ ನಂತರ ಕ್ರಮಬದ್ಧವಾಗಿ ಅದಕ್ಕೆ ಪೂಜೆಯನ್ನು ಸಹ ಮಾಡಬೇಕು. “ಶ್ರೀ” ಯಂತ್ರವನ್ನು ಮನೆಯ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿ ಇಡಬೇಕು. ಮನೆಯ ಎಲ್ಲ ಸದಸ್ಯರು ಇದಕ್ಕೆ ನಮಸ್ಕರಿಸಿ, ಆರಾಧಿಸಿದರೆ ಉತ್ತಮ.
ಲಕ್ಷ್ಮೀ ನಾರಾಯಣ ಪ್ರತಿಮೆ ಅಥವಾ ಫೋಟೋ
ಯಾವ ಮನೆಯಲ್ಲಿ ನಾರಾಯಣನಿಗೆ ಅಂದರೆ ವಿಷ್ಣುವಿಗೆ ಪೂಜೆ ಸಲ್ಲುತ್ತದೆಯೋ ಅಂಥಹ ಮನೆಯಲ್ಲಿ ಧನ-ಧಾನ್ಯಗಳಿಗೆ ಕೊರತೆ ಇರುವುದಿಲ್ಲವೆಂದು ಹೇಳಲಾಗುತ್ತದೆ. ಲಕ್ಷ್ಮೀ ಸಹಿತ ನಾರಾಯಣನ ಆರಾಧನೆ, ಪೂಜೆ ಮಾಡಿದವರಿಗೆ ಆರ್ಥಿಕ ತೊಂದರೆಗಳು ಎದುರಾಗುವುದಿಲ್ಲ. ಹಾಗಾಗಿ ಲಕ್ಷ್ಮೀ ನಾರಾಯಣ ಪ್ರತಿಮೆ ಅಥವಾ ಫೋಟೋವನ್ನು ಮನೆಯಲ್ಲಿಟ್ಟು, ಮುಂಜಾನೆ ಮತ್ತು ಸಂಜೆ ಲಕ್ಷ್ಮೀನಾರಾಯಣನನ್ನು ಆರಾಧಿಸಿದರೆ ಹಣದ ಸಮಸ್ಯೆ ದೂರಾಗುತ್ತದೆ.
ಇದನ್ನು ಓದಿ: ಮನೆಯ ದಕ್ಷಿಣ ದ್ವಾರ ಯಾವ ರಾಶಿಯವರಿಗೆ ಶುಭ-ಅಶುಭ..!?
ಮನೆಗೆ ಗಣೇಶನನ್ನು ತರಬೇಕು
ಪ್ರಥಮ ಪೂಜಕ ಗಣೇಶ ಶುಭದ ಸಂಕೇತ. ಗಣೇಶನಿರುವಲ್ಲಿ ಲಕ್ಷ್ಮೀ ನೆಲೆಸಿರುತ್ತಾಳೆ ಎಂಬ ನಂಬಿಕೆ ಇದೆ. ಯಾರು ಮನೆಗೆ ಗಣೆಶನನ್ನು ತಂದಿಡುತ್ತಾರೋ ಅಂಥವರ ಮನೆಯು ಅಭಿವೃದ್ಧಿಯತ್ತ ಸಾಗುತ್ತದೆ. ಹಣ ಬರಬೇಕು, ಆರ್ಥಿಕ ಸ್ಥಿತಿ ಉತ್ತಮವಾಗಬೇಕೆಂದು ಬಯಸುವವರು ಮನೆಗೆ ಗಣೇಶನ ಪ್ರತಿಮೆಯನ್ನು ತಂದಿಡಬೇಕು. ಅದನ್ನು ನಿತ್ಯವೂ ಪೂಜಿಸಬೇಕು.
ಇದನ್ನು ಓದಿ: ಪ್ರತಿ ರಾಶಿಗೊಂದು ವಿಶೇಷ ಗುಣ, ನಿಮ್ಮದ್ಯಾವ ರಾಶಿ….!?
ಶ್ರೀಫಲ ಅಂದರೆ ತೆಂಗಿನಕಾಯಿ
ತೆಂಗಿನಕಾಯಿಯು ದೇವರಿಗೆ ಶ್ರೇಷ್ಠವೆಂದು ಹೇಳಲಾಗುತ್ತದೆ. ಶುಕ್ರವಾರದ ದಿನ ಮಹಾಲಕ್ಷ್ಮೀಗೆ ತೆಂಗಿನಕಾಯಿಯನ್ನು ಒಡೆದು ಅರ್ಪಿಸಬೇಕು. ಸಂಪತ್ತಿಗೆ ಅಧಿದೇವತೆಯಾದ ಲಕ್ಷ್ಮೀಯ ಉಪಾಸನೆ ಶ್ರೇಷ್ಠವಾದ ದಿನ ಶುಕ್ರವಾರ. ಅಂದು ಲಕ್ಷ್ಮೀದೇವಿಯು ಪ್ರಸನ್ನಗೊಳ್ಳಲೆಂದು ವ್ರತವನ್ನೂ ಆಚರಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಶುಕ್ರವಾರದಂದು ವ್ರತವನ್ನು ಆಚರಿಸುವವರಿಗೆ ಲಕ್ಷ್ಮೀ ಕೃಪೆಯಿಂದಾಗಿ ಸುಖ-ಸೌಭಾಗ್ಯಗಳನ್ನು ಹೊಂದುತ್ತಾರೆ. ಲಕ್ಷ್ಮೀದೇವಿಗೆ ತೆಂಗಿನಕಾಯಿ ನೈವೇದ್ಯ ಅತಿ ಪ್ರಿಯವೆಂದು ಹೇಳಲಾಗುತ್ತದೆ. ಯಾರು ಶುಕ್ರವಾರ ಸಂಜೆ ಲಕ್ಷ್ಮೀಗೆ ಶ್ರೀಫಲವನ್ನು ಅರ್ಪಿಸುತ್ತಾರೋ ಅಂಥವರ ದರಿದ್ರ ದೂರವಾಗಿ ಸುಖ-ಸಮೃದ್ಧಿ ನೆಲೆಸುತ್ತದೆ.