ತುಳುನಾಡಿನ ರೋಚಕ: ಮುಸ್ಲಿಂ ಯುವಕನ ಮೇಲೆ ದೈವ ಆವಾಹನೆ, ದೈವಸ್ಥಾನ ಕಾಮಗಾರಿ ಹೊತ್ತಲ್ಲಿ ಹುಲಿ ಹೆಜ್ಜೆ ಪವಾಡ!

By Suvarna News  |  First Published Jan 2, 2024, 4:55 PM IST

ಎರಡು ತಿಂಗಳ ಹಿಂದೆ ಮುಸ್ಲಿಂ ಯುವಕನ ಮೇಲೆ ಬಂದು ಆವೇಶ ತೋರಿದ್ದ ದೈವ ಎರಡೇ ತಿಂಗಳಲ್ಲಿ ಮಂಗಳೂರಿನ ಪೆರ್ಮುದೆಯಲ್ಲಿ ಮತ್ತೊಂದು ಪವಾಡ ತೋರುವ ಮೂಲಕ ಅಚ್ಚರಿ ಸೃಷ್ಟಿಸಿದೆ.


ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಜ.2): ಇದು ತುಳುನಾಡಿನ ದೈವಾರಾಧನೆಯ ಮತ್ತೊಂದು ರೋಚಕ ಸ್ಟೋರಿ. ಮುಸ್ಲಿಂ ಯುವಕನ ಮೇಲೆ ಆವೇಷ ಬಂದು ಪವಾಡ ಸೃಷ್ಟಿಸಿದ ದೈವದ ಮೈ ನವಿರೇಳಿಸೋ ಕಥೆ. ಎರಡು ತಿಂಗಳ ಹಿಂದೆ ಮುಸ್ಲಿಂ ಯುವಕನ ಮೇಲೆ ಬಂದು ಆವೇಶ ತೋರಿದ್ದ ದೈವ ಎರಡೇ ತಿಂಗಳಲ್ಲಿ ಮಂಗಳೂರಿನ ಪೆರ್ಮುದೆಯಲ್ಲಿ ಮತ್ತೊಂದು ಪವಾಡ ತೋರುವ ಮೂಲಕ ಅಚ್ಚರಿ ಸೃಷ್ಟಿಸಿದೆ.

Tap to resize

Latest Videos

ದೈವದ ಮುನಿಸಿನ ಬೆನ್ನಲ್ಲೇ ಮಂಗಳೂರಿನ ಪೆರ್ಮುದೆಯಲ್ಲಿ ನೇಮೋತ್ಸವಕ್ಕೆ ತಯಾರಿ ನಡೆದಿದ್ದು, 18 ವರ್ಷಗಳ ಬಳಿಕ ಪೆರ್ಮುದೆಯ ಕಾಯರ್ ಕಟ್ಟೆಯಲ್ಲಿ ದೈವದ ನೇಮೋತ್ಸವ ನಡೆಯಲಿದೆ. ಪಾಳು ಬಿದ್ದಿದ್ದ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಎರಡೇ ತಿಂಗಳಲ್ಲಿ ದೈವಸ್ಥಾನಕ್ಕೆ ದ್ವಾರ, ಮೆಟ್ಟಿಲು ನಿರ್ಮಾಣವಾಗಿದೆ. ಜ.4 ರಂದು 18 ವರ್ಷಗಳ ಬಳಿಕ ಪಿಲಿಚಾಮುಂಡಿ ನೇಮೋತ್ಸವ ನಡೆಯಲಿದೆ.

ಇನ್ಸ್ಟಾಗ್ರಾಮ್ ಪ್ರಭಾವಿಗಳಿಗೆ ಅಯೋಧ್ಯೆ ಹಾಟ್ಸ್ಪಾಟ್… ಎಲ್ಲಿ ನೋಡಿದ್ರೂ ರೀಲ್ಸ್.. ರೀಲ್ಸ್!

ಎರಡು ತಿಂಗಳ ಹಿಂದೆ ಮುಸ್ಲಿಂ ಯುವಕನ ಮೂಲಕ  ಪಿಲಿಚಾಮುಂಡಿ ದೈವ ಮುನಿಸು ತೋರಿಸಿತ್ತು. 18 ವರ್ಷಗಳಿಂದ ದೈವಾರಾಧನೆ ನಿಲ್ಲಿಸಿದ್ದಕ್ಕೆ ಗಂಡಾಂತರದ ಎಚ್ಚರಿಕೆ ನೀಡಿತ್ತು. ಕೊನೆಗೂ ದೈವದ ಎಚ್ಚರಿಕೆ ಬೆನ್ನಲ್ಲೇ ಪ್ರಶ್ನಾ ಚಿಂತನೆ ನಡೆಸಿ ಕಾಯರ್ ಕಟ್ಟೆಯ ಪಾಳುಬಿದ್ದ ದೈವಸ್ಥಾನದ ಪುನರ್ ಅಭಿವೃದ್ಧಿ ಮಾಡಲಾಗಿದೆ. ಜ.4ರಂದು ಅದ್ದೂರಿಯಾಗಿ  ಪಿಲಿಚಾಮುಂಡಿ ನೇಮೋತ್ಸವ ನಡೆಯಲಿದೆ. ದೈವಾರಾಧನೆ ನಿಲ್ಲಿಸಿದ್ದ ಗ್ರಾಮಸ್ಥರನ್ನ ಎಚ್ಚರಿಸಲು ಮುಸ್ಲಿಂ ಯುವಕನ ಮೇಲೆ ದೈವ ಆವಾಹನೆ ಆಗಿತ್ತು. ಒರಿಸ್ಸಾ ಮೂಲದ ಕಾರ್ಮಿಕ ಮುಸ್ಲಿಂ ಯುವಕ ಜೋರ್ ಆಲಿ ಮೇಲೆ ದೈವದ ಆವೇಷವಾಗಿತ್ತು.‌ 

ಪೆರ್ಮುದೆ ಸೋಮನಾಥೇಶ್ವರ ದೇಗುಲದ ಬಳಿಯ ಪಿಲಿಚಾಮುಂಡಿ ದೈವಸ್ಥಾನದ ತಡೆಗೋಡೆ ಕಾಮಗಾರಿ ವೇಳೆ ಘಟನೆ ನಡೆದಿತ್ತು‌. ಕೆಲಸ ನಿರ್ವಹಿಸುತ್ತಿದ್ದ ಹೊತ್ತಲ್ಲೇ ಮುಸ್ಲಿಂ ಯುವಕನಿಗೆ ದೈವದ ಆವಾಹನೆ ಆಗಿತ್ತು.

ದೈವಾರಾಧನೆ ಬಿಸ್ನೆಸ್‌: ಅಪಚಾರ, ಅವಹೇಳನ ವಿರುದ್ಧ ಹೋರಾಡಲು ಹೊಸ ಸಂಘಟನೆ ಅಸ್ತಿತ್ವಕ್ಕೆ!

18 ವರ್ಷಗಳ ಬಳಿಕ ಅನುಮತಿ ಕೊಟ್ಟ ಎಂಆರ್‌ಪಿಎಲ್‌ !
ಇನ್ನು ದೈವ ಎಚ್ಚರಿಕೆಗೆ ಮಣಿದು 18 ವರ್ಷಗಳ ಬಳಿಕ ಪಿಲಿಚಾಮುಂಡಿ ದೈವದ ನೇಮೋತ್ಸವಕ್ಕೆ ಎಂಆರ್‌ಪಿಎಲ್‌ ಅನುಮತಿ ನೀಡಿದೆ. ಬೃಹತ್ ಕೈಗಾರಿಕೆ ಕಾರಣಕ್ಕೆ 18 ವರ್ಷಗಳಿಂದ ಇಲ್ಲಿ ಪಿಲಿಚಾಮುಂಡಿ ದೈವದ ನೇಮೋತ್ಸವ ಸ್ಥಗಿತವಾಗಿತ್ತು. ಪೆರ್ಮುದೆ ಬಳಿಯ ಎಂಆರ್‌ಪಿಎಲ್‌ ತೈಲ ಶುದ್ದೀಕರಣ ಘಟಕದ ಕಾರಣದಿಂದ ನೇಮೋತ್ಸವ ಸ್ಥಗಿತವಾಗಿತ್ತು. ಮುಸ್ಲಿಂ ಯುವಕನ ಮೇಲೆ ದೈವದ ಆವೇಶದ ಬಳಿಕ ಕಂಪೆನಿಗೂ ಗಂಡಾಂತರದ ಸೂಚನೆ ಇದ್ದು, ನೇಮೋತ್ಸವ ನಡೆಯದೇ ಇದ್ದರೆ ಇಡೀ‌ ಗ್ರಾಮ ಮತ್ತು ಕಂಪೆನಿಗೆ ಗಂಡಾಂತರದ ಸೂಚನೆ ಪ್ರಶ್ನಾ ಚಿಂತನೆ ವೇಳೆಯೂ ಸಿಕ್ಕಿತ್ತು. ಇದಾದ ಬೆನ್ನಲ್ಲೇ ಪಿಲಿಚಾಮುಂಡಿ ದೈವದ ಪವಾಡ ಕಂಡು ಕಂಪೆನಿ ಅಧಿಕಾರಿಗಳಿಗೂ ದಿಗ್ಭ್ರಮೆ ಮೂಡಿದೆ‌‌.

ಹೀಗಾಗಿ 18 ವರ್ಷಗಳ ಬಳಿಕ ದೈವಾರಾಧನೆ ನಡೆಸಲು ಎಂಆರ್‌ಪಿಎಲ್‌ ಅನುಮತಿ ನೀಡಿದೆ. ಕಂಪೆನಿಯ ಸನಿಹದಲ್ಲೇ  ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆಯಲಿದೆ‌. 18 ವರ್ಷಗಳಿಂದ ಆ ಒಂದು ಜಾಗದಲ್ಲಿ ಪಿಲಿ ಚಾಮುಂಡಿ ದೈವದ ಆರಾಧನೆ ನಿಂತೇ ಹೋಗಿತ್ತು. ಕುತ್ತೆತ್ತೂರು ಗ್ರಾಮದ ಪೆರ್ಮುದೆಯ ಕಾಯರ್ ಕಟ್ಟೆ ಗಡುವಿನಲ್ಲಿ ಪಿಲಿ ಚಾಮುಂಡಿ ಆರಾಧನೆ ಸ್ಥಗಿತವಾಗಿತ್ತು. ಹಲವು ಬಾರಿ ಈ ಬಗ್ಗೆ ಗ್ರಾಮದ ಜನರಿಗೆ ಎಚ್ಚರಿಸಿತ್ತು ಪಿಲಿ ಚಾಮುಂಡಿ ದೈವ.

1994ರಲ್ಲಿ ಎಂಆರ್‌ಪಿಎಲ್‌ ಗಾಗಿ ಪೆರ್ಮುದೆ ಭಾಗದಲ್ಲಿ ಭೂ ಸ್ವಾಧೀನವಾಗಿತ್ತು. ಆ ಸಂದರ್ಭ ಅಲ್ಲಿದ್ದ ಪಿಲಿಚಾಮುಂಡಿ ದೈವಸ್ಥಾನವನ್ನು ಪೆರ್ಮುದೆ ಸೋಮನಾಥ ಧಾಮಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಇದೇ ಪೆರ್ಮುದೆ ಗ್ರಾಮಕ್ಕೆ ಸಂಬಂಧಿಸಿ ದೈವಗಳ ನಾಲ್ಕು ಗಡು ಇದ್ದು, ಇದರಲ್ಲಿ ಕಾಯರ್ ಕಟ್ಟೆಯೂ ಒಂದು. ಸದ್ಯ ಎಂಆರ್‌ಪಿಎಲ್‌ ತಡೆಗೋಡೆಗೆ ತಾಗಿಕೊಂಡ ಜಾಗದಲ್ಲೇ ಈ ದೈವಸ್ಥಾನ ಇದೆ.‌ ಇದೇ ಜಾಗ ಪಿಲಿಚಾಮುಂಡಿ ದೈವದ ಮೂಲಸ್ಥಾನ ಎಂದು ನಂಬಲಾಗ್ತಿದೆ. 18 ವರ್ಷಗಳ ಹಿಂದೆ ಇಲ್ಲಿ ಕೊನೆಯ ಬಾರಿ ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆದಿತ್ತು. 

ಆದರೆ ಆ ಬಳಿಕ ಎಂಆರ್‌ಪಿಎಲ್‌ ಸಂಸ್ಥೆ ತಾಂತ್ರಿಕ ಕಾರಣದಿಂದ ನಿರ್ಬಂಧ ಹಾಕಿತ್ತು.‌ ಬೆಂಕಿಯ ಜೀಟಿಗೆ, ದೀಪ ಹಚ್ಚುವುದು, ಪಟಾಕಿ ಸಿಡಿಸುವುದಕ್ಕೆ ‌ನಿರ್ಬಂಧ ವಿಧಿಸಲಾಗಿತ್ತು. ಪೆಟ್ರೋಲಿಯಂ ಕಂಪೆನಿಯಾದ ಕಾರಣ ಸುರಕ್ಷತಾ ದೃಷ್ಟಿಯಿಂದ ನಿರ್ಬಂಧ ಹಾಕಲಾಗಿತ್ತು. ಹೀಗಾಗಿ 18 ವರ್ಷಗಳಿಂದ ನೇಮೋತ್ಸವ ನಡೆಯದೇ ಪಿಲಿಚಾಮುಂಡಿ ದೈವ ಮುನಿದಿತ್ತು. 2023ರ ಎಪ್ರಿಲ್ ನಲ್ಲೂ ಗ್ರಾಮದ ನೇಮೋತ್ಸವದಲ್ಲಿ‌ ಮುನಿಸು ತೋರಿದ್ದ ದೈವ. ಕಾಯರ್ ಕಟ್ಟೆಯಲ್ಲಿ ನೇಮೋತ್ಸವ ನಿಲ್ಲಿಸಿದ್ದ ಬಗ್ಗೆ ಮುನಿದಿತ್ತು ದೈವ.‌ ಈ ವೇಳೆ‌ ಗ್ರಾಮಸ್ಥರು ಯೋಚಿಸುವುದಾಗಿ ಹೇಳಿ ಸುಮ್ಮನಾಗಿದ್ದರು.‌

ಇದೀಗ ಕೊನೆಗೂ ದೈವದ ಮುನಿಸಿಗೆ ಮಣಿದ ಎಂಆರ್‌ಪಿಎಲ್‌ , ಕಾಯರ್ ಕಟ್ಟೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸಲು ಗ್ರೀನ್ ಸಿಗ್ನಲ್ ನೀಡಿದೆ. ಎಂಆರ್‌ಪಿಎಲ್ ಚಿಮಿಣಿ ದೀಪದ ಅಡಿಯಲ್ಲೇ ದೈವಾರಾಧನೆ ನಡೆಯಲಿದೆ. 

ಪೆರ್ಮುದೆಯ ಪಿಲಿಚಾಮುಂಡಿ ದೈವಸ್ಥಾನದಲ್ಲಿ ಹುಲಿ ಹೆಜ್ಜೆಯ ಪವಾಡ!
ಇನ್ನು ದೈವಸ್ಥಾನದ ಅಭಿವೃದ್ದಿ ಕಾಮಗಾರಿ ಹೊತ್ತಲ್ಲಿ ಪವಾಡ ಕಂಡು ದೈವಾರಧಕರಲ್ಲಿ ಅಚ್ಚರಿ ಮೂಡಿದೆ. 18 ವರ್ಷಗಳಿಂದ ದೈವಾರಧನೆ ಸ್ಥಗಿತಗೊಂಡ ಜಾಗದಲ್ಲಿ ಇರುವಿಕೆ ತೋರಿಸಿತಾ ಪಿಲಿಚಾಮುಂಡಿ ದೈವ? ಎಂಬ ಆಶ್ಚರ್ಯ ಹುಟ್ಟಿಸಿದೆ. ಹುಲಿ ಹೆಜ್ಜೆ ಗುರುತಿನ ಮೂಲಕ ಕಾಯರ್ ಕಟ್ಟೆಯಲ್ಲಿ ದೈವ ಪವಾಡ ಮತ್ತೆ ಸಾಬೀತಾಗಿದೆ. ದೈವಸ್ಥಾನದ ಅಭಿವೃದ್ಧಿ ಕಾಮಗಾರಿ ವೇಳೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಪಿಲಿಚಾಮುಂಡಿ ದೈವದ ಜೊತೆಗೆ ನಂಟು ಹೊಂದಿರೋ ವ್ಯಾಘ್ರನ ಹುಲಿ ಹೆಜ್ಜೆ ಇದಾಗಿದೆ ಎಂದು ಜನ ನಂಬಿದ್ದಾರೆ.

ದೈವಸ್ಥಾನದ ಮೇಲೆ ಹಾಗೂ ಮಣ್ಣಿನಲ್ಲಿ ಹುಲಿ ಹೆಜ್ಜೆ ಗುರುತು ಇದ್ದು, ಕೆಲಸ ಮಾಡುತಿದ್ದ ಸ್ಥಳೀಯ ಯುವಕರಿಗೆ ಹುಲಿ ಹೆಜ್ಜೆ ಗುರುತು ಕಂಡಿದೆ. ಸಾರ್ವಜನಿಕವಾಗಿ ಕಾಣ ಸಿಗದೇ ಇದ್ದರೂ ದೈವಸ್ಥಾನದ ಜಾಗದಲ್ಲಿ ಹುಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ತುಳುವರು ಬಹಳ ನಂಬುಗೆಯಿಂದ ಪಿಲ್ಚಂಡಿ ಅಥವಾ ಪಿಲಿಚಾಮುಂಡಿ ಅಂತ ಕರೆಯುತ್ತಾರೆ. ಕನ್ನಡದಲ್ಲಿ ವ್ಯಾಘ್ರ ಚಾಮುಂಡಿ ಅಂತಲೂ ಕರೆಯೋ ದೈವ ಇದಾಗಿದೆ.

ತುಳುನಾಡಿನ ಲಕ್ಷಾಂತರ ಜನರ ಸಾವಿರ ವರ್ಷಗಳ ನಂಬಿಕೆಯ ಪ್ರತೀಕವಾಗಿದ್ದು, ಈಶ್ವರ ದೇವರ ಅಪ್ಪಣೆ ಪ್ರಕಾರ ತುಳುನಾಡಿನ ಜನರನ್ನ ರಕ್ಷಿಸಲು ಭೂಮಿಗಿಳಿದು ಬಂದ ದೈವಶಕ್ತಿ ಅನ್ನೋ ನಂಬಿಕೆ ಇದೆ. ಇದೀಗ ಕಾಯರ್ ಕಟ್ಟೆಯಲ್ಲಿ ಹುಲಿ ಹೆಜ್ಜೆ ಗುರುತು ಕಂಡು ಭಕ್ತರು ಪುಳಕಿತರಾಗಿದ್ದು, ಜ. 4ರಂದು ಅದ್ದೂರಿಯಾಗಿ ನಡೆಯಲಿದೆ ನೇಮೋತ್ಸವ. ಗ್ರಾಮಸ್ಥರು ಮತ್ತು ಎಂಆರ್‌ಪಿಎಲ್‌ ಸಹಕಾರದಲ್ಲಿ ನೇಮೋತ್ಸವ ನಡೆಯಲಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನ ಪಾಲಿಸಿ ನೇಮೋತ್ಸವ ನಡೆಸಲು ಸಿದ್ದತೆ ನಡೆದಿದೆ.

click me!