ಏಲಕ್ಕಿಯಲ್ಲಿ ಕೀಟನಾಶಕ, ಶಬರಿಮಲೆ ಅರವಣ ಪ್ರಸಾದಕ್ಕೆ ಹೈಕೋರ್ಟ್ ತಡೆ

By Suvarna NewsFirst Published Jan 12, 2023, 10:18 AM IST
Highlights

ಶಬರಿಮಲೆಯ ಪ್ರಸಿದ್ಧ ಅರವಣ ಪ್ರಸಾದಕ್ಕೆ ಬಳಸುವ ಏಲಕ್ಕಿಯಲ್ಲಿ ಕೀಟನಾಶಕ ಕಂಡುಬಂದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್ ಪ್ರಸಾದ ಮಾರಾಟಕ್ಕೆ ತಡೆ ಒಡ್ಡಿದೆ. ಇದರಿಂದ 6.5 ಕೋಟಿ. ರೂ ಮೌಲ್ಯದ ಪ್ರಸಾದ ವ್ಯರ್ಥವಾಗಲಿದೆ. 

ಕೊಚ್ಚಿ: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲದ ‘ಅರವಣ ಪ್ರಸಾದ’ ಮಾರಾಟಕ್ಕೆ ಹಾಗೂ ತಯಾರಿಕೆಗೆ ಕೇರಳ ಹೈಕೋರ್ಟ್ ಬುಧವಾರ ತಡೆ ನೀಡಿದೆ. ಪ್ರಸಾದ ತಯಾರಿಕೆಯಲ್ಲಿ ಬಳಸಲಾಗುವ ಏಲಕ್ಕಿಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಕೀಟನಾಶಕ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಸಾದವನ್ನು ಮಾರಾಟ ಮಾಡದಂತೆ ತಿರುವಾಂಕೂರು ದೇವಸ್ವಂ ಮಂಡಳಿಗೆ ಹೈಕೋರ್ಟ್ ಸೂಚಿಸಿದೆ. ಇದರಿಂದ ಆರೂವರೆ ಕೋಟಿ ರೂ. ಮೌಲ್ಯದ ಅರವಣ ಪ್ರಸಾದ ವ್ಯರ್ಥ ಆಗಲಿದೆ. 

ಪ್ರಸಾದ ತಯಾರಿಸಲು ಖರೀದಿಸುವ ಏಲಕ್ಕಿಯನ್ನು ಪರೀಕ್ಷೆಗೆ ಒಳಪಡಿಸಿದ ವೇಳೆ ಅದರಲ್ಲಿ 14 ವಿವಿಧ ಮಾದರಿಯ ಕೀಟನಾಶಕ ಕಂಡುಬಂದಿತ್ತು. ಗುತ್ತಿಗೆ ಪಡೆಯಲು ವಿಫಲವಾಗಿದ್ದ ಕಂಪನಿಯೊಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಈ ಪರೀಕ್ಷೆಗೆ ಆದೇಶಿಸಿತ್ತು.

ತಿರುಪತಿಯ ಲಡ್ಡು, ಪಳನಿಯ ಪಂಚಾಮೃತ ಹೇಗೆ ಖ್ಯಾತಿ ಪಡೆದಿವೆಯೋ ಅದೇ ಮಟ್ಟದ ಪ್ರಸಿದ್ಧಿ ಪಡೆದಿರುವುದು ಶಬರಿಮಲೆ ಕ್ಷೇತ್ರದ ಪ್ರಸಾದ ಅರಾವಣಂ. ಅಕ್ಕಿ, ಬೆಲ್ಲ ಹಾಗೂ ತುಪ್ಪ ಬಳಸಿ ಮಾಡುವ ಈ ಅರವಣಂ ಪ್ರಸಾದ ಶಬರಿಮಲೆ ಕ್ಷೇತ್ರದ ವಿಶಿಷ್ಠ ಪ್ರಸಾದವಾಗಿ ಪ್ರಸಿದ್ದಿ ಪಡೆದಿದೆ. ಆದರೆ ಇದೀಗ ಈ ಪ್ರಸಾದಕ್ಕೆ ಗುಣಮಟ್ಟದ ಏಲಕ್ಕಿ ಬಳಸಲಾಗುತ್ತಿಲ್ಲ ಎಂಬ ಅಪಖ್ಯಾತಿ ಅಂಟಿಕೊಂಡಿದೆ.

Sabarimala: ಜನಪ್ರಿಯ ಅರಾವಣಂ ಪ್ರಸಾದಕ್ಕೆ ಕೀಟನಾಶಕಯುಕ್ತ ಏಲಕ್ಕಿ ಬಳಕೆ ಆರೋಪ! ಇಷ್ಟಕ್ಕೂ ಏನೀ ಅರಾವಣಂ?

ಶಬರಿಮಲೆಯಲ್ಲಿ ಅರಾವಣ ಪ್ರಸಾದ ತಯಾರಿಕೆಗೆ ಕಡಿಮೆ ಗುಣಮಟ್ಟದ ಏಲಕ್ಕಿಯನ್ನು ಬಳಸಲಾಗುತ್ತಿದೆ ಎಂಬ ವರದಿ ಹೊರಬಿದ್ದ ಮೇಲೂ ಈ ನಿಟ್ಟಿನಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಅನಂತ ಗೋಪನ್ ಹೇಳಿದ್ದರು. ಸದ್ಯದ ಆರೋಪ, ದೂರುಗಳ ಹಿಂದೆ ಗುತ್ತಿಗೆದಾರರ ನಡುವಿನ ಪೈಪೋಟಿ ಇರುವುದೇ ಕಾರಣ ಎಂದೂ ಅವರು  ಹೇಳಿದ್ದರು. ಆದರೆ, ಇದೀಗ ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಹೈಕೋರ್ಟ್, ಅರವಣ ಪ್ರಸಾದ ಮಾರಾಟಕ್ಕೆ ತಡೆ ನೀಡಿದೆ.

ಏಲಕ್ಕಿ ರಹಿತ ಅರವಣ
ಇದೀಗ ಈ ಬಗ್ಗೆ ನಿರ್ಧಾರ ಕೈಗೊಂಡಿರುವ ದೇವಸ್ವಂ ಮಂಡಳಿ, 'ಸದ್ಯಕ್ಕೆ ಎಲ್ಲಾ ಯಂತ್ರಗಳನ್ನು ಸ್ವಚ್ಛಗೊಳಿಸಿ ಏಲಕ್ಕಿ ಇಲ್ಲದೆ 'ಪಾಯಸ' ಮಾಡುತ್ತೇವೆ. ಗುರುವಾರದಿಂದ ನಾವು ಏಲಕ್ಕಿ ರಹಿತ ಪಾಯಸ ವಿತರಿಸುತ್ತೇವೆ ಮತ್ತು ಸಾವಯವ ಏಲಕ್ಕಿಯನ್ನು ಸಂಗ್ರಹಿಸಲು ತೀವ್ರ ಪ್ರಯತ್ನಗಳು ನಡೆಯುತ್ತಿವೆ' ಎಂದು ತಿಳಿಸಿದೆ.

ಶಬರಿಮಲೆಗಿಲ್ಲ ಪೋಸ್ಟರ್ ಪ್ರವೇಶ
ಸೆಲೆಬ್ರಿಟಿಗಳು, ರಾಜಕಾರಣಿಗಳು ಇತ್ಯಾದಿಗಳ ಪೋಸ್ಟರ್‌ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ಹೊಂದಿರುವ ಯಾವುದೇ ಯಾತ್ರಿಕರನ್ನು ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ ಎಂದು ಕೇರಳ ಹೈಕೋರ್ಟ್ ಇತ್ತೀಚೆಗಷ್ಟೇ ಆದೇಶಿಸಿತ್ತು.

Sabarimala: ಕಪ್ಪು ಅಶುಭ ಅಂದ ಮೇಲೆ ಅಯ್ಯಪ್ಪ ಭಕ್ತರು ಕಪ್ಪು ಬಟ್ಟೆ ಧರಿಸುವುದೇಕೆ?

ಅಯ್ಯಪ್ಪ ದೇವರ ಪೂಜ್ಯ ದೇಗುಲದೊಳಗೆ ತಮ್ಮ ನೆಚ್ಚಿನ ಚಲನಚಿತ್ರ ತಾರೆಯರನ್ನು ಪ್ರದರ್ಶಿಸಲು ಭಿತ್ತಿಪತ್ರಗಳು, ಧ್ವಜಗಳು ಮತ್ತು ಇತರ ಸಾಧನಗಳನ್ನು ಹೊತ್ತ ಭಕ್ತರಿಗೆ ಶಬರಿಮಲೆಯೊಳಗೆ ಪ್ರವೇಶ ನಿರಾಕರಿಸಲಾಗುವುದು ಎಂದು ಕೇರಳ ಹೈಕೋರ್ಟ್ ತೀರ್ಪು(Kerala High Court) ನೀಡಿತ್ತು. ಇದೀಗ ಶಬರಿಮಲೆ ದೇವಾಲಯಕ್ಕೆ ಸಂಬಂಧಿಸಿದ ಮತ್ತೊಂದು ತೀರ್ಪು ಅರವಣ ಪ್ರಸಾದಕ್ಕೆ ಸಂಬಂಧಿಸಿದುದಾಗಿದೆ. 

click me!