ಭಾವೈಕ್ಯತೆಯ ಬಾಗಲಕೋಟೆ ಹೋಳಿಯ ಮೊದಲ ದಿನವೇ ಎಲ್ಲೆಡೆ ರಂಗು, ಗಮನ ಸೆಳೆದ ರೇನ್ ಡ್ಯಾನ್ಸ್.
ಬಾಗಲಕೋಟೆ(ಮಾ.09): ಭಾವೈಕ್ಯತೆಯ ಬಾಗಲಕೋಟೆ ಹೋಳಿಯ ಮೊದಲ ದಿನವಾದ ಬುಧವಾರ ಬಣ್ಣದಾಟದ ಸಂಭ್ರಮಕ್ಕೆ ನಗರದ ಜನತೆ ಉತ್ತಮ ಸಹಕಾರ ನೀಡಿದ್ದು, ಯುವಕರು ಸೇರಿದಂತೆ ಮಹಿಳೆಯರು ಸಹ ಬಣ್ಣದಾಟದಲ್ಲಿ ಪಾಲ್ಗೊಳ್ಳುವ ಮೂಲಕ ಹೋಳಿ ಹಬ್ಬದ ರಂಗಿನಾಟಕ್ಕೆ ಕಳೆ ತಂದರು.
ಐತಿಹಾಸಿಕ ಬಾಗಲಕೋಟೆಯ ಹೋಳಿ ಬಣ್ಣದಾಟಕ್ಕೆ ಈ ಬಾರಿ ರಂಗು ಬಂದಿದ್ದು, ಪರಂಪರೆಯ ಬಾಗಲಕೋಟೆಯ ಹೋಳಿ ಆಚರಣೆಯ ಪ್ರಮುಖ ಅಂಗವೇ ಬಣ್ಣದಾಟವಾಗಿದ್ದರಿಂದ ಸಾವಿರಾರು ಯುವಕ, ಯುವತಿಯರು ಭಾಗವಹಿಸಿ ಸಂಭ್ರಮಿಸಿದರು.
undefined
Holi 2023: ಹುಬ್ಬಳ್ಳಿಯಲ್ಲಿ ಇಂದು ಸಂಭ್ರಮದ ಜಗ್ಗಲಗಿ ಹಬ್ಬ
ನವನಗರ ಹಾಗೂ ವಿದ್ಯಾಗಿರಿಯಲ್ಲಿ ಬಣ್ಣದಾಟ ಹಾಗೂ ಬಣ್ಣದ ಬಂಡಿ ಹಾಗೂ ಬಣ್ಣದ ಬ್ಯಾರೇಲ್ ತುಂಬಿದ ಟ್ರ್ಯಾಕ್ಟರ್‌ಗಳಿಗೆ ಅವಕಾಶ ಕಲ್ಪಿಸಿದ್ದರಿಂದ ಸಹಜವಾಗಿ ಯುವ ಸಮೂಹ ಹೆಚ್ಚಾಗಿ ಬಣ್ಣದಾಟದಲ್ಲಿ ಪಾಲ್ಗೊಂಡಿದ್ದರು. ಮೂರು ದಿನಗಳ ಬಣ್ಣದಾಟದ ಸಂಭ್ರಮದಲ್ಲಿ ನಿರೀಕ್ಷೆ ಮಿರಿ ಜನತೆ ಪಾಲ್ಗೊಂಡಿದ್ದು ಬೆಳಿಗ್ಗೆಯಿಂದಲೇ ಹಲಗೆ ಸಪ್ಪಳ ಹಾಗೂ ಚಿನ್ನರ ಬಣ್ಣದಾಟ ಗಮನಸೆಳೆಯಿತು.
ವಿದ್ಯಾಗಿರಿಯ ಪ್ರಮುಖ ಸ್ಥಳಗಳಲ್ಲಿ ಆಯೋಜಿಸಲಾಗಿದ್ದ ಬಣ್ಣದಾಟದಲ್ಲಿ ಸಾವಿರಾರು ಯುವಕ ಯುವತಿಯರು ರೇನ್‌ಡ್ಯಾನ್ಸ್‌ನಲ್ಲಿ ಪಾಲ್ಗೊಂಡು ಕುಣಿದು ಕುಪ್ಪಳಿಸಿದರು. ವಿವಿಧ ಹಾಡುಗಳಿಗೆ ತಕ್ಕಂತೆ ಕುಣಿದ ಯುವಕ ಯುವತಿಯರು ಪರಸ್ಪರ ಬಣ್ಣ ಎರೆಚಾಡಿದರು.
ನಗರ ಹಾಗೂ ನವನಗರದ ಪ್ರಮುಖ ಬಡಾವಣೆಗಳಲ್ಲಿ ಬಣ್ಣದಾಟದಲ್ಲಿ ತೊಡಗಿದ್ದ ಯುವಕರು ಮಧ್ಯಾಹ್ನದ ಹೊತ್ತಿಗೆ ಹಳೇ ನಗರದ ಪ್ರಮುಖ ಬೀದಿಗಳಿಗೆ ತೆರಳಿ ಬಣ್ಣದ ಆಟಕ್ಕೆ ಮತ್ತಷ್ಟುಮೆರಗು ನೀಡಿದರು. ಪ್ರಮುಖವಾಗಿ ಕಾಲೇಜು ರಸ್ತೆ, ಬಸವ ವೃತ್ತದಲ್ಲಿ ಟ್ರ್ಯಾಕ್ಟರ್‌ನಲ್ಲಿ ತುಂಬಿದ ಬಣ್ಣ ಬ್ಯಾರೇಲ್‌ಗಳ ಮೂಲಕ ಪರಸ್ಪರ ಬಣ್ಣ ಎರೆಚಾಡಿ ಸಂಭ್ರಮಿಸಿದರು. ಟ್ರ್ಯಾಕ್ಟರ್ ಹಾಗೂ ಬಂಡಿಗಳಲ್ಲಿ ಬಣ್ಣದ ಬ್ಯಾರೇಲ್‌ಗಳಲ್ಲಿ ಸಂಗ್ರಹಿಸಿದ ಬಣ್ಣವನ್ನು ಪರಸ್ಪರ ಎರೆಚಾಡುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.