ಈ ಬಾರಿ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಡಿಕೆಶಿ ವಿಜಯ ಸಾಧಿಸಿದ್ದಾರೆ. ಆದರೆ ರಾಜಕೀಯ ಬದುಕಿನ ಪ್ರತಿ ಹೆಜ್ಜೆ ಇಡುವಾಗಲೂ ಅವರು ಈ ಅಜ್ಜಯ್ಯನ ಅಪ್ಪಣೆ ಆಶೀರ್ವಾದ ಇಲ್ಲದೆ ಮುನ್ನಡೆಯಲ್ಲ. ಅಷ್ಟಕ್ಕೂ ಈ ಅಜ್ಜಯ್ಯನ ಮಹಾತ್ಮೆ ಏನು?
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಸೋಮೆಕಟ್ಟೆ ಕಾಡಸಿದ್ಧೇಶ್ವರ ಮಠ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಅತ್ಯಧಿಕ ಬಹುಮತ ಗಳಿಸಿದ ಬಳಿಕ ಡಿ ಕೆ ಶಿವಕುಮಾರ್ ಈ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಆಶೀರ್ವಾದ ಪಡೆದರು. ಅವರು ಈ ಮಠಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲಲ್ಲ. ಅವರ ರಾಜಕೀಯ ಬದುಕಿನಲ್ಲಿ ಪ್ರತೀ ಮಹತ್ವದ ಹೆಜ್ಜೆ ಇಡುವ ಮೊದಲು ಅವರು ಇಲ್ಲಿಗೆ ಆಗಮಿಸಿ ಅಜ್ಜಯ್ಯನ ಆಶೀರ್ವಾದ ಬೇಡುತ್ತಾರೆ. ರಾಜಕೀಯ ಕಾರ್ಯತಂತ್ರ ರೂಪಿಸುವ ಹಂತದಲ್ಲೂ ಅಜ್ಜಯ್ಯನ ಅಪ್ಪಣೆ ಬೇಡುತ್ತಾರೆ. ಅವರು ಅಪ್ಪಣೆ ಕೊಟ್ಟ ಬಳಿಕವೇ ಮುಂದಡಿ ಇಡುತ್ತಾರೆ. ನಂಬಿದ ಅಜ್ಜಯ್ಯ ಯಾವತ್ತೂ ಕೈ ಬಿಟ್ಟಿಲ್ಲ ಎಂದೇ ಹೇಳುತ್ತಾರೆ. ಡಿಕೆಶಿ ಅಂತಲ್ಲ, ಈ ಹಿಂದೆ ಸಿಎಂ ಆಗೋ ಮೊದಲು ಬಸವರಾಜ ಬೊಮ್ಮಾಯಿ ಅವರೂ ಅಜ್ಜಯ್ಯನವರ ಆಶೀರ್ವಾದ ಪಡೆದಿದ್ದರು. ಬೊಮ್ಮಾಯಿ ವಿಚಾರದಲ್ಲಿ ಅವರು ನುಡಿದ ಭವಿಷ್ಯ ನಿಜವಾಗಿತ್ತು.
ರಾಜ್ಯದ ರಾಜಕೀಯ ಸ್ಥಿತ್ಯಂತರಗಳಲ್ಲಿ ಮಹತ್ವದ ಪಾತ್ರ ವಹಿಸುವ ಕಾಡ ಸಿದ್ಧೇಶ್ವರ ಮಠಕ್ಕೆ ಐನೂರು ವರ್ಷಗಳ ಇತಿಹಾಸವಿದೆ. ಇಲ್ಲಿ ಸಾಕ್ಷಾತ್ ಶಿವನೇ ನೆಲೆಸಿ ಅಭಯ ನೀಡುತ್ತಾನೆ ಅನ್ನುವ ನಂಬಿಕೆ ಭಕ್ತಾದಿಗಳದು. ಈ ದೇವಸ್ಥಾನದ ಬಗ್ಗೆ ಐತಿಹ್ಯವೂ ಇದೆ. ಇದು ಕಾಡ ಸಿದ್ದೇಶ್ವರ ಎಂಬ ಯತಿಗಳ ನೆಲೆವೀಡು. ಇವರು ಈಶ್ವರನ ಪ್ರತಿರೂಪದ ಎಂಬ ನಂಬಿಕೆಯೂ ಇದೆ. ಒಮ್ಮೆ ಕಾಡ ಸಿದ್ದೇಶ್ವರರು ಸಂಚಾರ ಮಾಡುತ್ತಿರುವಾಗ ಭಕ್ತಿಯಿಂದ ತನ್ನನ್ನು ಪ್ರಾರ್ಥಿಸಿದ ಲಕ್ಷ್ಮೇಶ್ವರದ ಸೋಮೇಶ್ವರನಿಗೆ ವರವನ್ನೂ ನೀಡುತ್ತಾರೆ. ಬಳಿಕ ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸುತ್ತಾರೆ. ಕಾಡಿನ ನಡುವೆ ಶಿವಯೋಗಾನು ಸಂಧಾನ ಸಾಧನೆ ಮಾಡುತ್ತಿರುವ ಸಮಯದಲ್ಲಿ ಆ ನಾಡಿನ ರಾಜ ಹಾಗಲವಾಡಿಯ ಮುದಿಯಪ್ಪ ನಾಯಕ ಬೇಟೆಗೆಂದು ಅದೇ ಕಾಡಿಗೆ ಬಂದ. ಸ್ವಾಮಿಗಳನ್ನು ಮೃಗವೆಂದು ಭಾವಿಸಿ ಬಾಣ ಬಿಟ್ಟ. ಆ ಬಾಣ ಶ್ರೀಗಳನ್ನು ಭೇದಿಸಿಕೊಂಡು ಹೋಗುತ್ತದೆ. ನಿಜ ತಿಳಿದಾಗ ವ್ಯಥೆ ಪಟ್ಟ ರಾಜ ಸ್ವಾಮೀಜಿ ಪಾದಕ್ಕೆ ಬಿದ್ದು ಕ್ಷಮೆ ಕೇಳುತ್ತಾನೆ.
ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿಕೆ ಶಿವಕುಮಾರ್ ವಿಶೇಷ ಸ್ಥಳಕ್ಕೆ ಭೇಟಿ...!
ಇಹದ ಯಾವ ವ್ಯಾಮೋಹವೂ ಇಲ್ಲದ ಆ ಸ್ವಾಮೀಜಿಗಳ ಬಳಿ ರಾಜನೇ ಬೇಡಿಕೊಂಡು ಅವರಿಗೆ ಇಪ್ಪತ್ತು ಅಂಕಣದ ಮಠ ಹಾಗೂ ಮುಂಭಾಗ ಸಣ್ಣ ಗದ್ದುಗೆ ಕಟ್ಟಿಸುತ್ತೇನೆ ಎನ್ನುತ್ತಾನೆ. ಬೇಡಿಕೊಂಡವರ ಮನಸ್ಸು ನೋಯಿಸದ ಶ್ರೀಗಳು ಒಪ್ಪುತ್ತಾರೆ. ಒಂದು ದಿನ ಅರ್ಧ ರಾತ್ರಿ ಹೊತ್ತಿಗೆ ಶ್ರೀಗಳು ಭಕ್ತರೊಂದಿಗೆ ಒಂದು ಜಾಗಕ್ಕೆ ಬರುತ್ತಾರೆ. ಅಲ್ಲಿಗೆ ಬರುವಾಗ ಕರ್ಪೂರ ಧಗ್ಗನೆ ಹೊತ್ತಿ ಉರಿಯುತ್ತದೆ. ಶ್ರೀಗಳು ಅಲ್ಲಿಂದಲೇ ಅದೃಶ್ಯರಾಗುತ್ತಾರೆ. ಅದೇ ಮಠದ ಮೂಲ ಗದ್ದುಗೆಯಾಗುತ್ತದೆ. ಈ ಕಾಡಸಿದ್ದೇಶ್ವರ ಶ್ರೀಗಳು ನಂಬಿದ ಭಕ್ತರ ಕೈ ಬಿಡದೆ ಅಭಯ ನೀಡುತ್ತಾರೆ ಎಂಬ ನಂಬಿಕೆ ಗಾಢವಾಗಿ ನೆಲೆಸಿದೆ. ಕಳೆದ ಮೂವತ್ತೆಂಟು ವರ್ಷಗಳಿಂದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಇಲ್ಲಿನ ಪೀಠಾಧ್ಯಕ್ಷರಾಗಿದ್ದಾರೆ. ಇವರೂ ಮಹಾನ್ ಸಾಧಕರು. ಇವರು ವಾಕ್‌ಸಿದ್ಧಿ ಪಡೆದಿರುವ ಅನುಷ್ಠಾನ ಪುರುಷರೆಂದೇ ಖ್ಯಾತರು. ಇವರಿಗೆ ಜ್ಯೋತಿಷ್ಯದಲ್ಲೂ ಪರಿಣತಿ ಇದೆ.
ಈ ಸ್ವಾಮೀಜಿ ಸೂಚಿಸಿದ ಮಾರ್ಗದಲ್ಲಿ ಮುನ್ನಡೆದರೆ ಯಶಸ್ಸು ಸಿಗುತ್ತದೆ ಎಂಬ ಪ್ರತೀತಿ ಇದೆ. ಹೀಗಾಗಿ ರಾಜಕಾರಣಿಗಳು, ವ್ಯಾಪಾರಸ್ಥರು, ಉದ್ಯಮಿಗಳು, ಜನಸಾಮಾನ್ಯರು ಇವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತಾರೆ. ಡಿಕೆಶಿ ಅವರೂ ಇದಕ್ಕೆ ಹೊರತಾದವರಲ್ಲ. ಮೊನ್ನೆ ಭಾನುವಾರವಷ್ಟೇ ಈ ಮಠಕ್ಕೆ ಭೇಟಿ ನೀಡಿದ ಅವರು, ಅಜ್ಜಯ್ಯನ ಅಪ್ಪಣೆಯಿಲ್ಲದೇ ನಾನು ಮುನ್ನಡೆಯಲ್ಲ ಅನ್ನುವ ಮಾತುಗಳನ್ನು ಹೇಳಿದ್ದಾರೆ. ಈ ಹಿಂದೆ ನಾಮಪತ್ರ ಸಲ್ಲಿಸುವಾಗ, ಬಿ ಫಾರಂ ನೀಡುವಾಗ, ರಾಜ್ಯ ರಾಜಕಾರಣದಲ್ಲಿ ಮಹತ್ವದ ಹೆಜ್ಜೆ ಇಡಬೇಕಾದಾಗ ಅಜ್ಜಯ್ಯನವರ ಅಪ್ಪಣೆ ಪಡೆದೇ ಮುನ್ನಡೆಯುತ್ತಾರೆ.
ಅಲ್ಪಾವಧಿಗೆ ಸಿದ್ಧರಾಮಯ್ಯ, ದೀರ್ಘಾವಧಿಗೆ ಡಿಕೆಶಿ: ಸಿಎಂ ಆಯ್ಕೆ ಬಿಕ್ಕಟ್ಟಿಗೆ ಸುಲಭ ಪರಿಹಾರ ಕೊಟ್ಟ ನಟ ಚೇತನ್