Chitradurga : ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಹರಿದು ಬಂದ ಲಕ್ಷಾಂತರ ಭಕ್ತರು

By Gowthami KFirst Published Mar 10, 2023, 10:31 PM IST
Highlights

ಶಿವ ಮಾಡಿದಷ್ಟು ನೀಡು ಭಿಕ್ಷೆ ಎಂಬ ಸಂದೇಶ ಸಾರುವ ಮೂಲಕ ಮಧ್ಯ ಕರ್ನಾಟಕದಲ್ಲಿ ಹೆಸರುವಾಸಿ ಆಗಿರುವ ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನಡೆಯಿತು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಮಾ.10): ಶಿವ ಮಾಡಿದಷ್ಟು ನೀಡು ಭಿಕ್ಷೆ ಎಂಬ ಸಂದೇಶ ಸಾರುವ ಮೂಲಕ ಮಧ್ಯ ಕರ್ನಾಟಕದಲ್ಲಿ ಹೆಸರುವಾಸಿ ಆಗಿರುವ ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ಇಂದು ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಲಕ್ಷಾಂತರ ಭಕ್ತರು ಬೃಹತ್ ಬ್ರಹ್ಮ ರಥೋತ್ಸವದ ಸುಸಂದರ್ಭವನ್ನು ಕಣ್ತುಂಬಿಕೊಂಡರು. ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತವಾಗಿರುವ ಬೃಹತ್ ರಥೋತ್ಸವ. ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆಯುತ್ತಿರುವ ಭಕ್ತರ ಸಮೂಹ. ಮತ್ತೊಂದೆಡೆ ತಮ್ಮ‌ ಇಷ್ಟಾರ್ಥಗಳು ನೆರವೇರಲಿ ಎಂದು ಕೊಬರಿ ಸುಡ್ತಿರುವ ಭಕ್ತರು. ಈ ಎಲ್ಲಾ ದೃಶ್ಯಳಿಗೆ ಸಾಕ್ಷಿಯಾಗಿದ್ದು ಮಧ್ಯ ಕರ್ನಾಟಕದ ಜನರ ಪಾಲಿನ ಪವಾಡ ಪುರುಷ‌,‌ ಸಮಾಜ ಸೇವಕ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಯಲ್ಲಿ ನೆಲೆಸಿರುವ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸನ್ನಿಧಿ. 15ನೇ ಶತಮಾನದ ಪವಾಡ ಪುರುಷ ತಿಪ್ಪೇರುದ್ರಸ್ವಾಮಿ ಜಾತ್ರೆಯನ್ನು ಕೋಟೆನಾಡಿನ ಜನರು ಯಾವುದೇ ಜಾತಿ ಬೇಧವಿಲ್ಲದೇ ಆಚರಣೆ ಮಾಡಿಕೊಂಡು ಬಂದಿದ್ದಾರೆ. ಫಾಲ್ಗುಣ ಮಾಸ, ಚಿತ್ತ ನಕ್ಷತ್ರದಂದು ಸ್ವಾಮಿಯ ಜಾತ್ರೆ ನಡೆಸಲಾಗುತ್ತದೆ.

ಹೀಗೆ ಜಾತ್ರೆಗೆ ಬರುವ ಭಕ್ತರು ಕೊಬ್ಬರಿ ಸುಟ್ಟು ಪೂಜೆ ಸಲ್ಲಿಸೋದು ಇಲ್ಲಿನ ವಿಶೇಷ. ರಾಯದುರ್ಗದಿಂದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಾತ್ರಿ ಹೊತ್ತು ನಡೆದು ಬರವ ವೇಳೆ ಕತ್ತಲಾಗಬಾರದು ಎಂದು ಸ್ವಾಮಿಯ ಭಕ್ತ ಫಣಿಯಪ್ಪ ದಾರಿಯುದ್ದಕ್ಕೂ ಕೊಬ್ಬರಿಯ ಮೂಲಕ ಬೆಳಕು ಮಾಡಿದರು ಎಂಬ ನಂಬಿಕೆ ಜನರಲ್ಲಿದೆ. ಅದಕ್ಕಾಗಿಯೇ ತಮ್ಮ ಇಷ್ಟಾರ್ಥಗಳು ಕೂಡ ನೆರವೇರುತ್ತವೇ ಎಂಬುದು ಇಲ್ಲಿನ‌ ಭಕ್ತರ ನಂಬಿಕೆ.

ಇನ್ನೂ ಈ ಜಾತ್ರೆಯ ವಿಶೇಷ ಅಂದ್ರೆ, ರಥೋತ್ಸವದ ಮೇಲೆ ಇರುವ ಮುಕ್ತಿ ಭಾವುಟ. ಸಾಕಷ್ಟು ರಾಜಕಾರಣಿಗಳು ಆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆಯಲು ಪೈಪೋಟಿ ಬೀಳುತ್ತಾರೆ. ಪ್ರತೀ ಬಾರಿಯೂ ಲಕ್ಷಾಂತರ ರೂ ಗೆ ಮುಕ್ತಿ ಭಾವುಟ ಹರಾಜು ಆಗುತ್ತದೆ. ಈ ಬಾರಿಯೂ ಕೂಡ ಹಿರಿಯೂರು ಕ್ಷೇತ್ರದ ಮಾಜಿ ಶಾಸಕರಾದ ಡಿ.ಸುಧಾಕರ್ ಅವರು ಬರೋಬ್ಬರಿ 55 ಲಕ್ಷಕ್ಕೆ ಮುಕ್ತಿ ಭಾವುಟವನ್ನು ಹರಾಜಿನಲ್ಲಿ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದರು. ಬಳಿಕ ಸಂಜೆ ವೇಳೆಗೆ ಶುರುವಾಗುವ ರಥೋತ್ಸವ ಮೆರವಣಿಗೆ ವೇಳೆ ಸಾಕಷ್ಟು ಕಲಾ‌ ತಂಡಗಳು ಮೆರಗು ತರುತ್ತವೆ.

ಬಣ್ಣದಾಟದಲ್ಲಿ ಮಿಂದೆದ್ದ ಬಾಗಲಕೋಟೆ ಜನ..!

ರಥೋತ್ಸವ ಎಳೆಯುವ ವೇಳೆ‌ ಲಕ್ಷಾಂತರ ಭಕ್ತರು ಬಾಳೆಹಣ್ಣನ್ನು ತೇರಿಗೆ ಎಸೆಯುವ ಪದ್ದತಿ ಈ ಜಾತ್ರೆಯ ಮತ್ತೊಂದು ವಿಶೇಷವಾಗಿದೆ‌. ಕಳಸಕ್ಕೆ ಹೊಡೆಯುವ ಮೂಲಕ ತಮ್ಮ ಹರಕೆಯನ್ನು ತೀರಿಸುವ ಕೆಲಸವನ್ನು ಭಕ್ತರು ಮಾಡುತ್ತಾರೆ. ರಾಜ್ಯದ ನಾನಾ ಭಾಗ ಹಾಗೂ‌ ಹೊರ ರಾಜ್ಯಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಟ್ಟಿ ತಿಪ್ಪಜ್ಜನ ಜಾತ್ರೆಯ ವಿಶೇಷತೆಗಳನ್ನು ಕಣ್ತುಂಬಿಕೊಳ್ತಾರೆ.

ಚಿತ್ರದುರ್ಗ: ನಾಯಕನಹಟ್ಟಿತಿಪ್ಪೇರುದ್ರಸ್ವಾಮಿ ರಥೋತ್ಸವಕ್ಕೆ ಕ್ಷಣಗಣನೆ

ಒಟ್ಟಾರೆ ಬಯಲು ಸೀಮೆಯ ಜನರ ಪಾಲಿನ ಆರಾಧ್ಯ ಧೈವ ಆಗಿರುವ ತಿಪ್ಪೇರುದ್ರಸ್ವಾಮಿಯ ಜಾತ್ರೆಯು ವಿಜೃಂಭಣೆಯಿಂದ ಜರುಗಿದ್ದು ಭಕ್ತರಲ್ಲಿ ಆಸಕ್ತಿ ಹಿಮ್ಮಡಿಗೊಳಿಸಿದೆ. ಇದೇ ರೀತಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂದೆಯೂ ವಿಶೇಷವಾಗಿ ನಡೆಯಲು ಎಂಬುದು ಎಲ್ಲಾ ಭಕ್ತರ ಆಶಯ.

click me!