Mysuru Dasara 2022: ಅಂಬಾರಿಗೆ 2ನೇ ಬಾರಿ ಸಿಎಂ ಬೊಮ್ಮಾಯಿ ಪುಷ್ಪಾರ್ಚನೆ!

By Govindaraj S  |  First Published Oct 5, 2022, 7:53 AM IST

ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಇಂದು ಮಧ್ಯಾಹ್ನ 2.36ರಿಂದ 2.50ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ.


ಮೈಸೂರು (ಅ.05): ವಿಜಯದಶಮಿ ಜಂಬೂ ಸವಾರಿ ಮೆರವಣಿಗೆಗೆ ಮೈಸೂರು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಇಂದು ಮಧ್ಯಾಹ್ನ 2.36ರಿಂದ 2.50ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನಂದಿಧ್ವಜಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪುಷ್ಪಾರ್ಚನೆ ಸಲ್ಲಿಸಲಿದ್ದಾರೆ. 2021ರಲ್ಲಿ ಮೊದಲ ಬಾರಿಗೆ ಅಂಬಾರಿಗೆ ಸಿಎಂ ಅವರು ಪುಷ್ಪಾರ್ಚನೆಯನ್ನು ಮಾಡಿದ್ದು, ಇದೀಗ ಸತತ 2ನೇ ಬಾರಿಗೆ ಅವರೇ ಪುಷ್ಪಾರ್ಚನೆಯನ್ನು ಸಲ್ಲಿಸಲಿದ್ದಾರೆ. ಕೋವಿಡ್ ಕಾಲದಲ್ಲಿ ಸರಳವಾಗಿ ದಸರಾ ಆಚರಿಸಿದ್ದ ಸರ್ಕಾರ ಇದೀಗ ಅದ್ದೂರಿ ಮೆರವಣಿಗೆಗೆ ಮೊದಲ ಬಾರಿಗೆ ಚಾಲನೆ ನೀಡಲಿದ್ದಾರೆ. 

ಅರಮನೆ ಅಂಗಳದಲ್ಲಿ ಪುಷ್ಪಾರ್ಚನೆ ಮೂಲಕ ಚಿನ್ನದ ಅಂಬಾರಿಗೆ ಗೌರವ ಸಲ್ಲಿಸುವ ಮೂಲಕ ಸಂಜೆ 5.07ರಿಂದ 5.18ರ ವರೆಗೆ ಸಲ್ಲುವ ಶುಭ ಲಗ್ನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಐತಿಹಾಸಿಕ ದಸರಾ ಜಂಬೂಸವಾರಿ ಮೆರವಣಿಗೆ ಆರಂಭವಾಗಲಿದೆ. ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ಮೂರ್ತಿಯಿದ್ದು, ರಾಜ ವಂಶಸ್ಥ ಯದುವೀರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌, ಮೇಯರ್‌ ಶಿವಕುಮಾರ್‌, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌, ನಗರ ಪೊಲೀಸ್‌ ಆಯುಕ್ತ ಡಾ.ಚಂದ್ರಗುಪ್ತ ಸಾಥ್ ನೀಡಲಿದ್ದಾರೆ. ಸಂಜೆ ಹೊತ್ತಿಗೆ ಚಿನ್ನದ ಅಂಬಾರಿ ಅರಮನೆ ಅಂಗಳದಿಂದ ಬನ್ನಿಮಂಟಪದತ್ತ ಪಯಣಿಸಲಿದ್ದು, ವಿದ್ಯುತ್ ದೀಪಾಲಂಕಾರದಲ್ಲಿ ಚಿನ್ನದ ಅಂಬಾರಿ ಸಾಗಲಿದೆ.

Latest Videos

undefined

ನಂದಿಪೂಜೆಯೊಂದಿಗೆ ವಿಜಯದಶಮಿ ಮೆರವಣಿಗೆಗೆ ಮುನ್ನುಡಿ: ಜಂಬೂಸವಾರಿಯಲ್ಲಿ 47 ಸ್ತಬ್ಧಚಿತ್ರಗಳ ಮೆರವಣಿಗೆ

ಸದ್ಯ ರಾಜಪಥದಲ್ಲಿ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಎರಡು ವರ್ಷದ ಬಳಿಕ ಅರಮನೆ ಹೊರಗೆ ಜಂಬೂ ಸವಾರಿ ಸಾಗಲಿದೆ. ಈ ಹಿಂದೆ ಕೋವಿಡ್‌ ಕಾರಣದಿಂದ ಎರಡು ವರ್ಷ ಅರಮನೆ ಅಂಗಳದಲ್ಲೇ ಮುಕ್ತಾಯವಾಗಿತ್ತು. ಇನ್ನು ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂ ಸವಾರಿ ಮೆರವಣಿಗೆ ನಡೆಯಲಿದ್ದು, ಆಲ್ಬರ್ಟ್‌ ವಿಕ್ಟರ್‌ ರಸ್ತೆ, ನ್ಯೂ ಸಯ್ಯಾಜಿರಾವ್‌ ರಸ್ತೆಯ ಇಕ್ಕೆಲಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ರಾಜಪಥದ ಚಾಮರಾಜ ವೃತ್ತ, ಕೃಷ್ಣರಾಜ ವೃತ್ತ, ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತಗಳಲ್ಲಿ ಸಾರ್ವಜನಿಕರು ರಸ್ತೆಗೆ ಇಳಿಯದಂತೆ ಬ್ಯಾರಿಕೇಡ್‌ ಕೋಟೆಯನ್ನು ನರ್ಮಿಸಲಾಗಿದೆ. 47 ಸ್ತಬ್ಧಚಿತ್ರಗಳು, 50 ಕಲಾತಂಡಗಳು ಸೇರಿ ಒಟ್ಟು 120 ಪ್ರಾಕಾರಗಳು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, ಚಿನ್ನದ ಅಂಬಾರಿಯಲ್ಲಿ ಕುಳಿತ ಚಾಮುಂಡೇಶ್ವರಿಯೇ ಸೆಂಟರ್ ಆಫ್ ಅಟ್ರಾಕ್ಷನ್ ಆಗಲಿದೆ.

ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಮನೆ ಮಾಡಿದ್ದು, ರಾಜವಂಶಸ್ಥರ ವಿಜಯದಶಮಿ ವಿಶಿಷ್ಟ ಕಾರ್ಯಕ್ರಮದ ಆಚರಣೆ ಸಂಪ್ರದಾಯದಂತೆ ಸಾಗುತ್ತಿದೆ. ಇಂದು ಬೆಳಿಗ್ಗೆ 10:15 ಕ್ಕೆ ಸವಾರಿ ತೊಟ್ಟಿಯಲ್ಲಿ ಮೈ ನವಿರೇಳಿಸುವ  ಜಟ್ಟಿ ಕಾಳಗ ನಡೆಯಲಿದ್ದು, ಮೈಸೂರು ಚಾಮರಾಜನಗರ, ಬೆಂಗಳೂರು, ಚನ್ನಪಟ್ಟಣದ ಚಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಇನ್ನು ಈ ಕಾಳಗದಲ್ಲಿ ತಲೆಯಲ್ಲಿ ಸಾಂಕೇತಿಕವಾಗಿ ರಕ್ತ ಚಿಮ್ಮುವ ತನಕ ಜಟ್ಟಿಗಳ ನಡುವೆ ಸೆಣಸಾಟ ನಡೆಯಲಿದೆ. ಈ ಕಾಳಗದಲ್ಲಿ ವಿಜೇತರಾದವರಿಗೆ ಯದುವೀರ್ ಭಕ್ಷಿಸ್ ನೀಡಲಿದ್ದು, ಅನಾದಿ ಕಾಲದಿಂದಲೂ ರಾಜ ಪರಂಪರೆ ಇದನ್ನು ನಡೆಸಿಕೊಂಡು ಬಂದಿದೆ. ಇನ್ನು ಜಟ್ಟಿ ಕಾಳಗದ ನಂತರ ಯದುವೀರ್ ವಿಜಯ ಯಾತ್ರೆ ತೆರಳಲಿದ್ದಾರೆ. 

Mysuru Dasara 2022: ಅದ್ದೂರಿ ದಸರಾ ಜಂಬೂಸವಾರಿಗೆ ಮೈಸೂರು ಸಜ್ಜು

ಹರಿದು ಬರುತ್ತಿರುವ ಪ್ರವಾಸಿಗರ ದಂಡು: ಈ ಮಧ್ಯೆ, ಅಂತಾರಾಜ್ಯ ವಾಹನಗಳಿಗೆ ಮೈಸೂರು ನಗರ ಮತ್ತು ಕೆಆರ್‌ಎಸ್‌ ಪ್ರವೇಶ ತೆರಿಗೆಯಿಂದ ವಿನಾಯ್ತಿ ನೀಡಿರುವುದು, ಶಾಲೆಗಳಿಗೆ ಮಧ್ಯಂತರ ರಜೆ ಸಿಕ್ಕಿರುವುದು, ವಾರಾಂತ್ಯದ ಜೊತೆಗೆ ಸರ್ಕಾರಿ ರಜೆಗಳು ಸಾಲು, ಸಾಲಾಗಿ ಬಂದಿರುವುದರಿಂದ ಪ್ರವಾಸಿಗರು ಸಾವಿರಾರು ಸಂಖ್ಯೆಯಲ್ಲಿ ಮೈಸೂರಿನತ್ತ ಧಾವಿಸುತ್ತಿದ್ದಾರೆ. ಇದರಿಂದಾಗಿ ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿವೆ. ಪ್ರವಾಸಿಗರ ಜೊತೆಗೆ ಸ್ಥಳೀಯರು ದೀಪಾಲಂಕಾರ ವೀಕ್ಷಣೆ ಸೇರಿದಂತೆ ವಿವಿಧೆಡೆ ಭೇಟಿ ನೀಡುತ್ತಿರುವುದರಿಂದ ಅರಮನೆ ಸುತ್ತಮುತ್ತಲಿನ ರಸ್ತೆ ಮತ್ತಿತರ ಕಡೆ ಟ್ರಾಫಿಕ್‌ ಜಾಮ್‌ ಉಂಟಾಗುತ್ತಿದೆ.

click me!