ಅಮ್ಮನಿಗೆ ಉಘೇ ಉಘೇ... ಎಂದು ರಥೋತ್ಸವದಲ್ಲಿ ಭಾಗಿಯಾದ ಭಕ್ತರು, ತಾವು ತಂದ ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುತ್ತಿರುವ ದೃಶ್ಯ ಜಾತ್ರಾ ಮಂಟಪದವರೆಗೂ ಕಂಡುಬಂತು. ಅಲ್ಲದೇ ಮಾರಿಕಾಂಬೆಯನ್ನು ಹೊತ್ತು ರಥ ಬರುವಾಗ ಜನರು ಹರಕೆಯ ಕೋಳಿಯನ್ನು ಬಿಡುತ್ತಿದ್ದದ್ದು, ಅದನ್ನು ಹಿಡಿಯಲು ಉಳಿದವರು ಮುನ್ನುಗ್ಗುತ್ತಿದ್ದ ದೃಶ್ಯ ಕಂಡುಬಂದಿತು.
ಶಿರಸಿ(ಮಾ.21): ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಂಗಳವಾರದಿಂದ ವಿಧ್ಯುಕ್ತವಾಗಿ ಪ್ರಾರಂಭಗೊಂಡಿದ್ದು, ಬುಧವಾರ ದೇವಾಲಯದಿಂದ ರಥಾರೋಹಣದ ಮೂಲಕ ಬಂದ ಮಾರಿಕಾಂಬೆ ನಗರದ ಬಿಡ್ಕಿಬೈಲ್‌ನ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದಾಳೆ. ಬುಧವಾರ ಬೆಳಗ್ಗೆ ೭.೨೭ರಿಂದ ಅಮ್ಮನ ಮೆರವಣಿಗೆಯ ರಥೋತ್ಸವದ ನಡೆದಿದ್ದು, ಮಧ್ಯಾಹ್ನ ೧೨.೫೭ರಿಂದ ೧.೧೦ಕ್ಕೆ ನಾಡಿನ ಸಾವಿರಾರು ಭಕ್ತರ ಜಯಘೋಷದೊಂದಿಗೆ ಅಧಿದೇವತೆ ಮಾರಿಕಾಂಬೆಯು ಗದ್ದುಗೆಯನ್ನು ಅಲಂಕರಿಸಿದ್ದಾಳೆ.
ಬುಧವಾರ ಬೆಳಗ್ಗೆ ೭.೨೭ರ ಸುಮಾರಿಗೆ ಶಕ್ತಿದೇವತೆ ಮಾರಿಕಾಂಬೆಯು ರಥವನ್ನೇರಿದ್ದು, ೮.೫೯ಕ್ಕೆ ದೇವಾಲಯದ ಆವರಣದಿಂದ ರಥ ಹೊರಟು, ಬಿಡ್ಕಿಬೈಲ್‌ಗೆ ೧೧.೩೦ಕ್ಕೆ ಬಂದಿದೆ. ನಂತರ ಮುಹೂರ್ತದ ಸಮಯಕ್ಕೆ ದೇವಿಯನ್ನು ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಸುಡು ಬಿಸಿಲನ್ನು ಲೆಕ್ಕಿಸದೇ ಅಮ್ಮನ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿಯ ಪರಾಕಾಷ್ಠೆ ಮೆರೆದರು. ರಥೋತ್ಸವದುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಮಾರಿಕಾಂಬೆ ಜಾತ್ರಾ ಗದ್ದುಗೆಗೆ ಆಸೀನಳಾಗುವವರೆಗೂ ಶಾಂತಯುತವಾಗಿ ಪಾಲ್ಗೊಂಡು ಭಕ್ತಿ- ಭಾವದಲ್ಲಿ ಮಿಂದೆದ್ದರು.
ಅದ್ಭುತ! 9 ವರ್ಷದ ಬಾಲಕನಿಗೆ ರಾಮಲಲ್ಲಾ ಮೇಕಪ್ ಮಾಡಿದ ಬೆಂಗಾಲಿ ಜೋಡಿ; ಹೀಗಿದೆ ಓಡಾಡುವ ಬಾಲರಾಮನ ಮೋಡಿ
ಹರಕೆ ತೀರಿಸಿದ ಭಕ್ತರು:
ಅಮ್ಮನಿಗೆ ಉಘೇ ಉಘೇ... ಎಂದು ರಥೋತ್ಸವದಲ್ಲಿ ಭಾಗಿಯಾದ ಭಕ್ತರು, ತಾವು ತಂದ ಬಾಳೆ ಹಣ್ಣುಗಳನ್ನು ರಥಕ್ಕೆ ಎಸೆಯುತ್ತಿರುವ ದೃಶ್ಯ ಜಾತ್ರಾ ಮಂಟಪದವರೆಗೂ ಕಂಡುಬಂತು. ಅಲ್ಲದೇ ಮಾರಿಕಾಂಬೆಯನ್ನು ಹೊತ್ತು ರಥ ಬರುವಾಗ ಜನರು ಹರಕೆಯ ಕೋಳಿಯನ್ನು ಬಿಡುತ್ತಿದ್ದದ್ದು, ಅದನ್ನು ಹಿಡಿಯಲು ಉಳಿದವರು ಮುನ್ನುಗ್ಗುತ್ತಿದ್ದ ದೃಶ್ಯ ಕಂಡುಬಂದಿತು.
ಅಸಂಖ್ಯಾತ ಭಕ್ತಜನರು ಭಾಗಿ:
ಮಾರಿಕಾಂಬೆಯ ಭಕ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ಹೊರರಾಜ್ಯಗಳಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಎಲ್ಲ ಕಡೆಗಳಿಂದಲೂ ಭಕ್ತರು ಆಗಮಿಸಿ ನಾಡಿನ ಶಕ್ತಿದೇವತೆಯಾದ ಶಿರಸಿಯ ಮಾರಿಕಾಂಬೆಯ ಕೃಪೆಗೆ ಪಾತ್ರರಾದರು. ಹಾವೇರಿ, ಹಾನಗಲ್ಲ, ಶಿಗ್ಗಾಂವಿ, ಬ್ಯಾಡಗಿ, ಹುಬ್ಬಳ್ಳಿ, ಧಾರವಾಡ, ಗದಗ, ವಿಜಯಪುರ, ರಾಯಚೂರು, ಬಾಗಲಕೋಟೆ, ಅಲ್ಲದೇ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಜಿಲ್ಲೆಯ ಎಲ್ಲೆಡೆಯಿಂದ ಮಾರಿಕಾಂಬೆಯ ಭಕ್ತರು ಆಗಮಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಧಾರ್ಮಿಕ ವಿಧಿ-ವಿಧಾನಗಳು ಮುಗಿದ ನಂತರ ಶಿರಸಿಯ ಸಿರಿದೇವಿ ಮಾರಿಯಮ್ಮ ಜಾತ್ರಾ ಗದ್ದುಗೆಯಲ್ಲಿ ೧.೧೦ ಸಮಯಕ್ಕೆ ವಿರಾಜಮಾನಳಾಗಿದಳು.
ಜಾತ್ರೆಗೆ ಮೆರುಗು:
ಜಗನ್ಮಾತೆ ಶಿರಸಿಯ ಮಾರಿಕಾಂಬೆಯು ರಥೋತ್ಸವ ಮೂಲಕ ನಗರದ ಬಿಡ್ಕಿಬೈಲ್‌ಗೆ ಆಗಮಿಸಿ, ಗದ್ದುಗೆಯಲ್ಲಿ ಕುಳಿತ ನಂತರ ಜಾತ್ರೆಯ ಮೆರುಗು ಹೆಚ್ಚಾಯಿತು. ಸಾವಿರಾರು ಸಂಖ್ಯೆಯ ಭಕ್ತರು ಜಾತ್ರೆಯ ಸವಿಯನ್ನು ಸವಿದರು.
ಸೆಲ್ಫಿಗೆ ಮುಗಿಬಿದ್ದ ಜನ:
ತಾಯಿ ಮಾರಿಕಾಂಬೆಯನ್ನು ಅತ್ಯಂತ ಭಕ್ತಿಯಿಂದ ರಥದಲ್ಲಿ ಕರೆತರುತ್ತಿರುವ ಭಕ್ತರು ಒಂದೆಡೆಯಾದಲ್ಲಿ ತಮ್ಮ ಇಷ್ಟದೇವತೆಯು ರಥದಲ್ಲಿ ಆಸೀನಳಾಗಿದ್ದ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಜನ ಇನ್ನೊಂದೆಡೆಯಾಗಿದ್ದರು. ಅದರಲ್ಲೂ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲಿ ನೋಡಿದರೂ ಶಿರಸಿ ಜಾತ್ರೆಯ ಹವಾ ಇರುವ ಕಾರಣ ಯುವ ಜನಾಂಗದವರು ಸೆಲ್ಫಿ ತೆಗೆದುಕೊಳ್ಳಲು ತಾ ಮುಂದು ತಾ ಮುಂದು ಎಂದು ಮುಗಿ ಬಿದ್ದದ್ದು ಕಂಡುಬಂದಿತು.
೧ ಲಕ್ಷ ಜನರು ಭಾಗಿ:
ರಾಜ್ಯದ ಸುಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರೆಗೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಕಳೆದ ಜಾತ್ರೆಗೆ ಹೋಲಿಸಿದಾಗ ಈ ವರ್ಷ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಸುಡುವ ಬಿಸಿಲನ್ನು ಲೆಕ್ಕಿಸದೇ ಭಕ್ತರು ಅಮ್ಮನ ರಥೋತ್ಸವದಲ್ಲಿ ಭಾಗವಹಿಸಿದ್ದರು. ಸುಮಾರು ೧ ಲಕ್ಷ ಸಮೀಪ ಭಕ್ತರು ಪಾಳ್ಗೊಂಡಿದ್ದರು ಎಂದು ಅಂದಾಜಿಸಲಾಗಿದೆ.
ಹರಕೆ ತೀರಿಸಿದ ಭಕ್ತರು
ಜಾತ್ರೆ ಹಿನ್ನೆಲೆ ಬುಧವಾರ ಬೆಳಗ್ಗೆ ದೇವಾಲಯದ ಆವರಣದಿಂದ ಆರಂಭವಾದ ಸುಮಾರು ೯೦೦ ಮೀಟರ್ ರಥೋತ್ಸವವು ೨ ತಾಸು ೨೦ ನಿಮಿಷಗಳ ಕಾಲ ಭಕ್ತರ ಜಯಘೋಷದೊಂದಿಗೆ ನಡೆಯಿತು. ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಸಾಕ್ಷಿಯಾಗಿ, ತಮ್ಮ ಹರಕೆಯನ್ನು ತೀರಿಸಿದರು.
ಚಾಮರಾಜನಗರ: 12 ವರ್ಷಗೊಳಿಗೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಬಯ್ಯುವುದೇ ವಿಶೇಷ..!
ಜನಸಾಮಾನ್ಯರಂತೆ ಶಾಸಕ ಭೀಮಣ್ಣ ಭಾಗಿ
ರಥೋತ್ಸವ ಪ್ರಾರಂಭವಾದಾಗಿಂದಲೂ ಬಿಡ್ಕಿಬೈಲ್ ಗದ್ದುಗೆಗೆ ತಾಯಿ ಆಗಮಿಸುವವರೆಗೆ ಶಾಸಕ ಭೀಮಣ್ಣ ನಾಯ್ಕ ರಥೋತ್ಸವದಲ್ಲಿ ಹೆಜ್ಜೆ ಹಾಕಿದರು. ಈ ಮಧ್ಯೆ ಡೊಳ್ಳು ಬಾರಿಸಿ, ಜನಸಾಮಾನ್ಯರಂತೆ ರಥೋತ್ಸವದಲ್ಲಿ ಭಾಗಿಯಾದರು. ಇವರಿಗೆ ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟೇಶ ನಾಯ್ಕ ತಾಳ ಬಾರಿಸುವ ಮೂಲಕ ಸಾಥ್ ನೀಡಿದರು.
ನೃತ್ಯ ಕಲಾತಂಡಗಳು
ಪ್ರತಿವರ್ಷದಂತೆ ಈ ಬಾರಿಯೂ ರಥೋತ್ಸವ ಹಾಗೂ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ವಿವಿಧ ನೃತ್ಯ ಕಲಾ ತಂಡಗಳು ಪಾಲ್ಗೊಂಡಿದ್ದವು. ಸುಮಾರು ೬ ಕ್ಕೂ ಅಧಿಕ ಡೊಳ್ಳು, ಜಾನಪದ ನೃತ್ಯ, ನಗಾರಿ, ಬ್ಯಾಂಡ್ ವಾದ್ಯಗಳು ಸೇರಿದಂತೆ ವಿವಿಧ ತಂಡಗಳು ಭಾಗವಹಿಸಿದ್ದವು. ಇವು ಅಮ್ಮನ ರಥೋತ್ಸವಕ್ಕೆ ಹೆಚ್ಚಿನ ಮೆರುಗನ್ನು ತಂದುಕೊಟ್ಟವು.