ಉಡುಪಿ: ಇಲ್ಲಿ ದೇವಿಗೆ ಯಕ್ಷಗಾನ ಹರಕೆ ತೀರಿಸಲು 2043ರವರೆಗೂ ಕಾಯಬೇಕು!

By Suvarna NewsFirst Published Jun 25, 2022, 6:18 PM IST
Highlights

ಯಕ್ಷಗಾನ ಕ್ಷೇತ್ರದಲ್ಲಿ ಐತಿಹಾಸಿ ದಾಖಲೆ
ಮಂದಾರ್ತಿ ಮೇಳದ ಯಕ್ಷಗಾನ ಆಡಿಸಲು 25 ವರ್ಷ ಕಾಯಬೇಕು
ಒಟ್ಟು 15 ಸಾವಿರಕ್ಕೂ ಅಧಿಕ ಯಕ್ಷಗಾನ ಬುಕ್ಕಿಂಗ್
ಮಂದಾರ್ತಿ ಅಮ್ಮನ ಸನ್ನಿಧಿಯಲ್ಲಿ ಮಳೆಗಾಲದಲ್ಲೂ ಯಕ್ಷಗಾನ ಹರಕೆ
ಮಂದಾರ್ತಿ ಅಮ್ಮನಿಗೆ ದಾಖಲೆ ಪ್ರಮಾಣದ ಹರಕೆ

ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಪ್ರಪಂಚದ ಯಾವುದೇ ಕಲಾ ಮಾಧ್ಯಮ ಹೀಗೊಂದು ದಾಖಲೆ ಬರೆದಿರಲು ಸಾಧ್ಯವಿಲ್ಲ, ಕರ್ನಾಟಕ(Karnataka)ದ ಹೆಮ್ಮೆಯ ಕಲೆ ಯಕ್ಷಗಾನ ಸದ್ದಿಲ್ಲದೆ ಅಂತಹಾ ಸಾಧನೆ ಮಾಡಿದೆ. ಉಡುಪಿ ಜಿಲ್ಲೆ ಮಂದಾರ್ತಿ(Mandarti) ಕ್ಷೇತ್ರದಲ್ಲಿ ನಡೆಯುವ ಬೆಳಕಿನ ಸೇವೆ ಅಥವಾ ಯಕ್ಷಗಾನ ಬಯಲಾಟ ಮುಂದಿನ 25 ವರ್ಷಗಳಿಗೆ ಬುಕ್ ಆಗಿವೆ ಅಂದ್ರೆ ನಂಬ್ತೀರಾ? ಹೌದು ಹಾಗಾಗಿ ಭಕ್ತರ ಅನುಕೂಲಕ್ಕಂತಲೇ ಮಂದಾರ್ತಿ ದೇವಸ್ಥಾನ ಮಹತ್ವದ ನಿರ್ಧಾರ ಕೈಗೊಂಡು ಈ ಬಾರಿಯೂ‌ ಮಳೆಗಾಲದ ಹರಕೆ ಸೇವೆ ಆರಂಭಿಸಿದೆ. ಇನ್ನು ಮುಂದೆ ಮಳೆಗಾಲದಲ್ಲೂ ಚಂಡೆ ಮದ್ದಳೆಯ ನಾದ ಕೇಳಿ ಬರಲಿದೆ.

ಜಗತ್ತಿನಲ್ಲಿ ಸಾಂಪ್ರದಾಯಿಕ ಕಲೆಗಳು(traditional art) ಅವನತಿಯತ್ತ ಸಾಗುತ್ತಿದ್ದರೆ, ಕರ್ನಾಟಕ ಕರಾವಳಿಯಲ್ಲಿ ಮಾತ್ರ ಯಕ್ಷಗಾನ ತನ್ನ ಉಚ್ಛ್ರಾಯ ಸ್ಥಿತಿಯಲ್ಲಿದೆ. ದೇವರ ಸೇವೆಯ ಯಕ್ಷಗಾನ ಆಡಿಸ್ಬೇಕು ಅಂದ್ರೆ ನೀವು 2043 ರ ವರೆಗೆ ಕಾಯಲೇಬೇಕು. ಭಕ್ತರ ಈ ಕಷ್ಟವನ್ನು‌ ಮನಗಂಡು ಮಂದಾರ್ತಿ ದೇವಸ್ಥಾನದವರು ಮಳೆಗಾಲದಲ್ಲೂ ಹರಕೆ ಸೇವೆ ಆರಂಭಿಸಿದ್ದಾರೆ. ಹಿಂದೆಲ್ಲಾ ಮಳೆಗಾಲದಲ್ಲಿ ಮೇಳದ ತಿರುಗಾಟ ಇರುತ್ತಿರಲಿಲ್ಲ. ಆದರೆ  ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಹಾಲ್ ನಲ್ಲೇ ಬೆಳಕಿನ ಸೇವೆಗೆ ವ್ಯವಸ್ಥೆ ಮಾಡಲಾಗಿದೆ. ಮಳೆಗಾಲದ ಪ್ರತಿದಿನವೂ ಎರಡು ಯಕ್ಷಗಾನ ಹರಕೆ ಸ್ವರೂಪದಲ್ಲಿ ಪ್ರದರ್ಶಿಸಲಾಗುತ್ತದೆ. ದೇವಳದ ಆವರಣದಲ್ಲೇ ಪ್ರದರ್ಶನ‌ ನಡೆಯುವುದರಿಂದ ಭಕ್ತರಿಗೂ ಖುಷಿಯಾಗಿದೆ. ಈ ಮೂಲಕ ಹರಕೆಯ ಒತ್ತಡವನ್ನು ನಿಭಾಯಿಸಲಾಗುತ್ತಿದೆ.

ಬುದ್ಧಿವಂತಿಕೆಯಿಂದಲೇ ಕೆಲಸದಲ್ಲಿ ಯಶ ಸಾಧಿಸೋ ರಾಶಿಗಳಿವು!

ಯಕ್ಷಗಾನದ ಹರಕೆಯ ವಿಶೇಷತೆ- ಏನಿದು ದಾಖಲೆ (record)?
ಒಂದು ಸಿನಿಮಾ ವಾರ ಪೂರೈಸಿದ್ರೆ ಪಟಾಕಿ ಹೊಡಿತೇವೆ. ಯಶಸ್ವೀ ಪ್ರದರ್ಶನ ಭಿತ್ತಿಪತ್ರಗಳು ರಾರಾಜಿಸುತ್ತವೆ. ಐವತ್ತು ದಿನ, ನೂರು ದಿನ ಪೂರೈಸಿದ್ರೆ ಕೇಳೋದೇ ಬೇಡ. ಆದ್ರೆ ನಿಮ್ಗೆ ಗೊತ್ತಾ? ಕರಾವಳಿಯ ಹೆಮ್ಮಯ ಕಲೆ ಯಕ್ಷಗಾನದ ದಾಖಲೆಯ ಬಗ್ಗೆ ಕೇಳಿದ್ರೆ ನಿಮಗೆ ಅಚ್ಚರಿಯಾಗುತ್ತೆ.  ಉಡುಪಿಯ ಮಂದಾರ್ತಿ ಕ್ಷೇತ್ರದಲ್ಲಿ ಹರಕೆಯ ರೂಪದಲ್ಲಿ ಯಕ್ಷಗಾನ ಆಡಿಸೋದು ಸಂಪ್ರದಾಯ. ಇಲ್ಲಿನ ದುರ್ಗಾಪರಮೇಶ್ವರಿ ಅಮ್ಮನವರಿಗೆ ಬೆಳಕಿನ ಸೇವೆ ಅಥವಾ ರಾತ್ರಿಯಿಡೀ ನಡೆಯುವ ಯಕ್ಷಗಾನ ಬಯಲಾಟವೆಂದರೆ ತುಂಬಾ ಪ್ರೀತಿ. ಕ್ಷೇತ್ರದಲ್ಲಿ ಐದು ಯಕ್ಷಗಾನ ಮೇಳಗಳಿವೆ. ಪ್ರತಿದಿನವೂ ಐದೂ ಮೇಳಗಳು ಕರಾವಳಿ-ಮಲೆನಾಡು ಭಾಗದ ನಾನಾ ಹಳ್ಳಿಗಳಲ್ಲಿ ಬಯಲಾಟದ ಸೇವೆ ನಡೆಸುತ್ತವೆ. ಅಚ್ಚರಿಯ ವಿಷಯ ಅಂದ್ರೆ ಕ್ಷೇತ್ರದ ಹರಕೆಯಾಗಿ ನೀವೊಂದು ಯಕ್ಷಗಾನ ಆಡಿಸಬೇಕು ಅಂದ್ರೆ 2043ನೇ ಇಸವಿವರೆಗೆ ಕಾಯಬೇಕು!

ವರ್ಷಂಪ್ರತಿ ಒಂದು ಸಾವಿರ ಯಕ್ಷಗಾನ ಪ್ರದರ್ಶನ ನೀಡಿದರೂ 25 ವರ್ಷಕ್ಕಾಗುವಷ್ಟು ಯಕ್ಷಗಾನ ಈಗಾಗಲೇ ಮುಂಗಡ ಬುಕ್ ಆಗಿವೆ.
ಕಲಾ ಕ್ಷೇತ್ರದಲ್ಲಿ ಇದೊಂದು ದಾಖಲೆಯೇ ಸರಿ. ಸಂತಾನಾಪೇಕ್ಷಿಗಳು, ಭೂ ವ್ಯಾಜ್ಯಗಳಲ್ಲಿ ನೊಂದವರು, ಆರೋಗ್ಯ ಸಂಬಂಧೀ ಬಾಧೆಯುಳ್ಳವರು ಹೀಗೆ ನಾನಾ ಬಗೆಯ ಸಮಸ್ಯೆಗಳಿಂದ ಬಳಲುವವರು ಮಂದಾರ್ತಿ ದೇವಿಗೆ ಯಕ್ಷಗಾನದ ಹರಕೆ ಹೊರುತ್ತಾರೆ. 

ನೂರಾರು ಕಲಾವಿದರು ದಿನವೂ ಆರಾಧನೆ ಸ್ವರೂಪದಲ್ಲಿ ಯಕ್ಷಗಾನ ವೇಷ ಧರಿಸಿ ಕುಣಿಯುತ್ತಾರೆ. ಇಲ್ಲಿ ಕಲೆಯೇ ಪೂಜೆ. ಒಂದಲ್ಲ ಎರಡಲ್ಲ ಐದು ಮೇಳಗಳು ಹತ್ತಾರು ವರ್ಷಗಳಿಂದ ದಿನವೂ ಪ್ರದರ್ಶನ ನೀಡಿದರೂ ದಣಿದಿಲ್ಲ, ಕಲಾರಸಿಕರಿಗೂ ಅಷ್ಟೇ ಮಂದಾರ್ತಿ ಮೇಳದ ಆಟ ನೋಡಿದಷ್ಟೂ ತೃಪ್ತಿಯಿಲ್ಲ.

ಮಂಗಳ ರಾಶಿ ಪರಿವರ್ತನೆ - ಈ ನಾಲ್ಕು ರಾಶಿಯವರಿಗೆ ಮಂಗಳಕರ!

ಮಂದಾರ್ತಿ ಮೇಳದಲ್ಲಿ ಒಟ್ಟು 15000 ಕ್ಕೂ ಅಧಿಕ ಯಕ್ಷಗಾನಗಳು ಫಿಕ್ಸ್ ಆಗಿವೆ. ದೇವರ ಆರಾಧನೆಯ ಜೊತೆಗೆ ಸತತ 12 ಗಂಟೆಗಳ ಕಾಲ ನೂರಾರು ಕಲಾವಿದರು ಸ್ವಚ್ಛ ಕನ್ನಡ ಭಾಷೆಯನ್ನು ಮಾತ್ರ ಬಳಸೋದು ಒಂದು ಅಪ್ರತಿಮ ಕನ್ನಡಸೇವೆಯೂ ಹೌದು.

click me!