ಗಳಿಸಿದ್ದ ಹಣವನ್ನೆಲ್ಲ ಸೀರೆಗೆ ಮೀಸಲಿಟ್ಟ : ಅಯೋಧ್ಯೆ ರಾಮ ಮಂದಿರಕ್ಕೆ ಸಿದ್ಧವಾಯ್ತು ದೊಡ್ಡ ರೇಷ್ಮೆ ಸೀರೆ

By Suvarna News  |  First Published Jan 12, 2024, 12:25 PM IST

ರಾಮನ ಭಕ್ತರು ತಮ್ಮದೇ ರೀತಿಯಲ್ಲಿ ರಾಮನ ಸೇವೆ ಮಾಡ್ತಿದ್ದಾರೆ. ಈಗ ಮತ್ತೊಬ್ಬ ರಾಮಭಕ್ತ ತನ್ನ ಜೀವನದಲ್ಲಿ ದುಡಿದ ಎಲ್ಲ ಹಣವನ್ನು ದೇವರಿಗೆ ಸಮರ್ಪಿಸಿದ್ದಾನೆ. ರಾಮ – ಸೀತೆಗೆ ಉಡುಗೊರೆಯಾಗಿ ಅಧ್ಬುತ ಸೀರೆ ಸಿದ್ಧಪಡಿಸಿದ್ದಾನೆ.
 


ವನವಾಸ ಮುಗಿಸಿ ರಾಮ ಅಯೋಧ್ಯೆಗೆ ಹಿಂತಿರುಗಿದಾಗ ಅಯೋಧ್ಯೆ ಹೇಗೆ ಕಂಗೊಳಿಸುತ್ತಿತ್ತೋ ಅದೇ ರೀತಿ ರಾಮಲಾಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದಲ್ಲೂ ಅಯೋಧ್ಯೆ ಬೆಳೆಗುತ್ತಿದೆ. ಆಗ ಸಾವಿರಾರು ಭಕ್ತರು ರಾಮನ ಬರುವಿಕೆಗೆ ಕಾದಂತೆ ಈಗ್ಲೂ ಕೋಟ್ಯಾಂತರ ರಾಮನ ಭಕ್ತರು ರಾಮನ ದರ್ಶನಕ್ಕೆ ಕಾದಿದ್ದಾರೆ. ರಾಮನ ಕೆಲಸದಲ್ಲಿ ನಮ್ಮಲ್ಲಾದ ಅಳಿಲು ಸೇವೆಯನ್ನು ಜನರು ಮಾಡ್ತಿದ್ದಾರೆ. ಒಂದೊಂದು ರೀತಿಯಲ್ಲಿ ಭಕ್ತರು ತಮ್ಮ ರಾಮ ಭಕ್ತಿಯನ್ನು ಪ್ರದರ್ಶನ ಮಾಡ್ತಿದ್ದಾರೆ. ಈಗ ಆಂಧ್ರಪ್ರದೇಶದ ವ್ಯಕ್ತಿಯೊಬ್ಬರ ರಾಮಭಕ್ತಿ ಸುದ್ದಿ ಮಾಡಿದೆ. ತಮ್ಮ ಇಡೀ ಜೀವನದಲ್ಲಿ ಗಳಿಸಿದ್ದ ಹಣವನ್ನು ರಾಮನಿಗೆ ಅರ್ಪಿಸಿದ್ದಾರೆ.  ರಾಮನಿಗಾಗಿ ಅವರು ಮಾಡಿದ ಕಾರ್ಯಕ್ಕೆ ಎಲ್ಲಡೆಯಿಂದ ಶ್ಲಾಘನೆ ಕೇಳಿ ಬರ್ತಿದೆ. ರಾಮನಿಗಾಗಿ 196 ಅಡಿ ಸೀರೆಯನ್ನು ಸ್ವತಃ ಸಿದ್ಧಪಡಿಸಿದ್ದಾರೆ ಈ ವ್ಯಕ್ತಿ.

ಸೀತೆ (Sita) ಗಾಗಿ ಸಿದ್ಧವಾಗಿದೆ 196 ಅಡಿ ರೇಷ್ಮೆ ಸೀರೆ (Saree) : 196 ಅಡಿ ಉದ್ದದ ಈ ರೇಷ್ಮೆ ಸೀರೆಯನ್ನು ಆಂಧ್ರಪ್ರದೇಶ (Andhra Pradesh) ದ ಧರ್ಮಾವರಂ ನಿವಾಸಿ ನೇಕಾರ ಜುಜಾರು ನಾಗರಾಜು ಸಿದ್ಧಪಡಿಸಿದ್ದಾರೆ. ಸಾಮಾನ್ಯ ಸೀರೆಗಿಂತ ಇದು 11 ಪಟ್ಟು ಹೆಚ್ಚು ಉದ್ದವಿದೆ. ಜುಜಾರು ನಾಗರಾಜು  2022 ರಲ್ಲಿ ಈ ಸೀರೆ ತಯಾರಿಸುವ ಕೆಲಸವನ್ನು ಪ್ರಾರಂಭಿಸಿದರು.  ಪ್ರತಿದಿನ 10 ಗಂಟೆಗಳನ್ನು ಈ ಸೀರೆ ಸಿದ್ಧಪಡಿಸಲು ಮೀಸಲಿಡುತ್ತಿದ್ದರು. ಈಗ ಸೀರೆ ಸಂಪೂರ್ಣ ಸಿದ್ಧವಾಗಿದೆ. ಜನವರಿ 22 ರಂದು ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು ಅಯೋಧ್ಯೆಗೆ ಬಂದು, ಇದನ್ನು ದೇವಸ್ಥಾನದ ಸಮಿತಿಗೆ ಹಸ್ತಾಂತರಿಸುವ ಗುರಿ ಹೊಂದಿದ್ದಾರೆ. ಈ ಬಗ್ಗೆ ಟ್ರಸ್ಟ್ ಜೊತೆ ಮಾತನಾಡಿದ್ದೇನೆ. ಅವರು ಒಪ್ಪಿಗೆ ನೀಡಿದ್ರೆ ಅಲ್ಲಿಗೆ ಹೋಗ್ತೇನೆ. ಒಂದ್ವೇಳೆ ಸಾಧ್ಯವಿಲ್ಲ ಎಂದಾದ್ರೆ ಇನ್ನೊಂದು ಬಾರಿ ಅಯೋಧ್ಯೆಗೆ ಹೋಗಿ ಈ ಸೀರೆ ಅರ್ಪಿಸಿ ಬರುತ್ತೇನೆ ಎಂದು ನಾಗರಾಜು ಹೇಳಿದ್ದಾರೆ.
ತಾಯಿ ಸೀತೆಗಾಗಿ ಈ ಸೀರೆ ಸಿದ್ಧಪಡಿಸಿರುವುದಾಗಿ ನಾಗರಾಜು ಹೇಳಿದ್ದಾರೆ. ಈ ಸೀರೆಯನ್ನು ನಾಗರಾಜು ರೇಷ್ಮೆಯಿಂದ ತಯಾರಿಸಿದ್ದು ಇಲ್ಲಿನ ಮತ್ತೊಂದು ವಿಶೇಷ.

Tap to resize

Latest Videos

ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ಇಬ್ಬರು ಶಂಕರಾಚಾರ್ಯರ ವಿರೋಧ: ಕಾರ್ಯಕ್ರಮಕ್ಕೆ ಪುರಿ, ಬದರಿ ಸ್ವಾಮೀಜಿ ಗೈರು

ಸೀರೆ ಮೇಲಿದೆ ಜೈ ಶ್ರೀರಾಮ್ : ಈ ಸೀರೆ ಮೇಲೆ ನಾಗರಾಜು ಜೈ ಶ್ರೀ ರಾಮ್ ಎಂದು ಬರೆದಿದ್ದಾರೆ. ಬರೀ ಒಂದೇ ಭಾಷೆ ಅಥವಾ ಒಂದೇ ಕಡೆ ಇದನ್ನು ಬರೆಯಲಾಗಿಲ್ಲ. ಸೀರೆ ಪೂರ್ತಿ ಹದಿಮೂರು ಭಾಷೆಯಲ್ಲಿ ಜೈ ಶ್ರೀರಾಮ್ ಎಂದು ಬರೆದಿರೋದನ್ನು ನೀವು ನೋಡಬಹುದು. ನಾಗರಾಜು, ಮರಾಠಿ, ತಮಿಳು, ತೆಲುಗು, ಉರ್ದು ಸೇರಿದಂತೆ ಇತರ ಭಾಷೆಗಳಲ್ಲಿ 32 ಸಾವಿರಕ್ಕೂ ಹೆಚ್ಚು ಬಾರಿ ಬರೆದಿದ್ದಾರೆ. ಅಲ್ಲದೆ ರಾಮಾಯಣದ ಕೆಲ ಚಿತ್ರಗಳನ್ನು ನೀವು ಸೀರೆ ಮೇಲೆ ನೋಡಬಹುದು.

ಎಷ್ಟು ತೂಕವಿದೆ ಈ ಸೀರೆ? : ಇದು ಸಾಮಾನ್ಯ ಸೀರೆಗಿಂತ ಹೆಚ್ಚು ತೂಕವನ್ನೂ ಹೊಂದಿದೆ. ಈ ಸೀರೆ ತೂಕ 16 ಕೆ.ಜಿಯಷ್ಟಿದೆ. ಒಬ್ಬ ವ್ಯಕ್ತಿ ಈ ಸೀರೆಯನ್ನು ಹಿಡಿದುಕೊಳ್ಳೋದು ಕಷ್ಟ.  

ಅಯೋಧ್ಯೆ ರಾಮಮಂದಿರ ಅಲಂಕರಿಸಲು ಬೃಹತ್‌ 2100 ಕಿಲೋಗ್ರಾಂ ಗಂಟೆ!

ಈ ಸೀರೆಗೆ ಬಂದ ಖರ್ಚು ಎಷ್ಟು? : ಮಾರುಕಟ್ಟೆಯಲ್ಲಿ ಈ ಸೀರೆ ಬೆಲೆ ಸುಮಾರು 3.5 ಲಕ್ಷ ರೂಪಾಯಿ ಇದೆ. ನಾಗರಾಜುವಿಗೆ ಈ ಸೀರೆ ತಯಾರಿಸಲು ಸುಮಾರು 1.5 ಲಕ್ಷ ರೂಪಾಯಿ ಖರ್ಚಾಗಿದೆ.  ಜೀವನದ ಎಲ್ಲ ಉಳಿತಾಯವನ್ನು ಸೀರೆಗೆ ಖರ್ಚು ಮಾಡಿದ ನಾಗರಾಜು : ರಾಮನ ಭಕ್ತ ನಾಗರಾಜು ಮಾಡಿರೋದು ಸಾಮಾನ್ಯ ಕೆಲಸವಲ್ಲ. ತಮ್ಮ ಇಡೀ ಜೀವನದ ಗಳಿಕೆಯನ್ನು ಅವರು ಈ ಸೀರೆಗಾಗಿ ಖರ್ಚು ಮಾಡಿದ್ದಾರೆ. ಆರು ತಿಂಗಳ ಸಮಯವನ್ನು ಸೀರೆಗೆ ಮೀಸಲಿಟ್ಟಿದ್ದಾರೆ. ಸ್ವತಃ ತಾವೇ ಸೀರೆಯನ್ನು ತಯಾರಿಸಿರುವ ನಾಗರಾಜು ರಾಮ ಕೋಟಿ ವಸ್ತ್ರಂ ಎಂಬ ವಿಶೇಷ ಬಟ್ಟೆಯನ್ನು ಬಳಸಿದ್ದಾರೆ. 

click me!