Makara Sankranti: ಸೂರ್ಯನು ಧನುರ್‌ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಪರ್ವಕಾಲ ಇದು

Published : Jan 15, 2022, 09:42 AM IST
Makara Sankranti: ಸೂರ್ಯನು ಧನುರ್‌ ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಪರ್ವಕಾಲ ಇದು

ಸಾರಾಂಶ

ಸಂಕ್ರಾಂತಿ (Makara Sankranti) ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎಂದು ಕರೆಯುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎಂದೂ ಕರೆಯುತ್ತಾರೆ. ಸಂಕ್ರಾಂತಿಯ ದಿನ ಎಳ್ಳು ದಾನ ಮಾಡಬೇಕು ಎಂಬ ಸಂಪ್ರದಾಯವಿದೆ. 

ವರ್ಷದಲ್ಲಿ ಅಥವಾ ಒಂದು ಸಂವತ್ಸರದಲ್ಲಿ 12 ಮಾಸಗಳಿದ್ದು, ಅವುಗಳನ್ನು ಉತ್ತರಾಯಣ ಮತ್ತು ದಕ್ಷಿಣಾಯನ ಎಂದು ಎರಡು ಭಾಗಗಳನ್ನಾಗಿ ವಿಂಗಡಿಸಲಾಗಿದೆ. ಆಗ ಸೂರ್ಯನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶ ಮಾಡುವ ದಿನವನ್ನು ಸಂಕ್ರಾಂತಿ ಎಂದು ಕರೆಯುತ್ತಾರೆ.

ಸೂರ್ಯನು ಒಂದು ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ. ಹೀಗಾಗಿ ವರ್ಷಕ್ಕೆ 12 ಸಂಕ್ರಾಂತಿಗಳು ಬರುತ್ತವೆ. ಅವುಗಳಲ್ಲಿ ಮಕರ ಸಂಕ್ರಾಂತಿಯು ಹಿಂದುಗಳಿಗೆ ಬಹಳ ವಿಶೇಷ. ಸೂರ್ಯನು ಧನುರ್‌ ರಾಶಿಯಿಂದ ಮಕರ ರಾಶಿಗೆ ಸೇರುವ ಸಮಯವೇ ಮಕರ ಸಂಕ್ರಾಂತಿ.

ಜ್ಞಾನದ ಸಂಕೇತ ಈ ಹಬ್ಬ

ಸೂರ್ಯನು ಜ್ಞಾನದ ಸಂಕೇತ. ಏಕೆಂದರೆ ಸೂರ್ಯ ಇಡೀ ಜಗತ್ತಿಗೆ ಬೆಳಕನ್ನು ನೀಡುತ್ತಾನೆ. ಸೂರ್ಯನಿಲ್ಲದೆ ಹೋದರೆ ಇಡೀ ಜಗತ್ತೇ ಅಂಧಕಾರದಿಂದ ಕೂಡಿ ಎಲ್ಲಾ ಕಾರ್ಯಚಟುವಟಿಕೆಗಳು ನಿಂತು ಹೋಗುತ್ತವೆ. ಆದ್ದರಿಂದ ಸೂರ್ಯನನ್ನು ಜಾತಿ, ಮತ, ಭೇದಗಳಿಲ್ಲದೆ ಪ್ರಪಂಚದ ಎಲ್ಲರೂ ಆರಾಧಿಸುತ್ತಾರೆ.

ಸೂರ‍್ಯದೇವ ಪ್ರತಿ ವರ್ಷ ಜನವರಿ 14 ಅಥವಾ 15ರಂದು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೂ ಅನಂತರ ಆತನ ಪಥವು ಉತ್ತರಾಭಿಮುಖವಾಗಿ ಚಲಿಸಲು ಪ್ರಾರಂಭವಾಗುತ್ತದೆ. ಈ ಸಮಯದಲ್ಲಿ ಬೆಳಕು ಹೆಚ್ಚು ಇರುತ್ತದೆ. 6 ತಿಂಗಳ ಕಾಲ ಉತ್ತರಾಯಣ ನಂತರ ಜೂನ್‌ 15ರ ನಂತರ ದಕ್ಷಿಣಾಯನ ಪ್ರಾರಂಭವಾಗುತ್ತದೆ.

ನಮ್ಮ ಪುರಾಣ ಮತ್ತು ಜ್ಯೋತಿಷ್ಯದ ಪ್ರಕಾರ ಉತ್ತರಾಯಣದಲ್ಲಿ ಸ್ವರ್ಗದ ಬಾಗಿಲು ತೆರೆದಿರುತ್ತದೆ. ಈ ಸಮಯದಲ್ಲಿ ಸತ್ತವರು ನೇರವಾಗಿ ಸ್ವರ್ಗಕ್ಕೆ ಹೋಗುತ್ತಾರೆ ಎಂಬ ನಂಬಿಕೆಯೂ ಇದೆ. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಅಯನದಲ್ಲಿ ಉತ್ತರಾಯಣ ಅತಿ ಶ್ರೇಷ್ಠ ಎಂದು ಹೇಳಿರುವುದನ್ನು ಕಾಣುತ್ತೇವೆ. ಮಹಾಭಾರತದ ಯುದ್ಧದ ನಂತರ ಹಲವಾರು ದಿನಗಳವರೆಗೆ ಭೀಷ್ಮ ಪಿತಾಮಹನು ಬಾಣಗಳ ಮಂಚದ ಮೇಲೆ ಮಲಗಿ ಯಮಯಾತನೆಯನ್ನು ಅನುಭವಿಸುತ್ತಿದ್ದರೂ ದಕ್ಷಿಣಾಯನದಲ್ಲಿ ತನ್ನ ದೇಹವನ್ನು ತ್ಯಜಿಸಲು ಒಪ್ಪದೆ ಉತ್ತರಾಯಣದ ಪುಣ್ಯಕಾಲದ ಅಷ್ಟಮಿ ದಿನ ಸಾವನ್ನು ಬರ ಮಾಡಿಕೊಂಡು ಇಚ್ಛಾಮರಣಿಯಾಗುತ್ತಾನೆ.

ಉತ್ತರಾಯಣ ಏಕೆ ಶ್ರೇಷ್ಠ?

ಕೃತಯುಗದಲ್ಲಿ ಶಿವ ಪಾರ್ವತಿಯರು ವಿವಾಹವಾಗಿದ್ದು ಈ ಉತ್ತರಾಯಣದ ಕಾಲದಲ್ಲಿ. ಬ್ರಹ್ಮದೇವನು ಈ ಜಗತ್ತಿನ ಸೃಷ್ಟಿಯನ್ನು ಪ್ರಾರಂಭಿಸಿದ್ದು ಈ ಸಮಯದಲ್ಲಿಯೇ. ಈ ಕಾಲದಲ್ಲಿ ಇಂದ್ರನಿಗೆ ಗೌತಮ ಋುಷಿಗಳು ಶಾಪ ವಿಮೋಚನೆ ಮಾಡಿದ್ದಾರೆ. ಉತ್ತರಾಯಣದಲ್ಲಿ ಶ್ರೀಹರಿಯು ವರಾಹ ಅವತಾರದಿಂದ ಭೂಮಿಯ ಮೇಲೆ ಪಾದಸ್ಪರ್ಶ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ದೇವತೆಗಳು ಮತ್ತು ರಾಕ್ಷಸರು ಸಮುದ್ರದಲ್ಲಿನ ಅಮೃತ ತೆಗೆಯುವ ಸಲುವಾಗಿ ಮಂಥನ ಮಾಡುವಾಗ ಉತ್ತರಾಯಣ ಸಮಯದಲ್ಲಿ ಮಹಾಲಕ್ಷ್ಮೇ ಅವತರಿಸಿದಳು. ಇಷ್ಟೇ ಅಲ್ಲದೆ ಋುಷಿಮುನಿಗಳು ತಮ್ಮ ತಪಸ್ಸಿಗೆ ಆಯ್ಕೆ ಮಾಡಿಕೊಂಡಿದ್ದೂ ಈ ಉತ್ತರಾಯಣ ಕಾಲವನ್ನು. ಈ ಎಲ್ಲಾ ಕಾರಣಕ್ಕಾಗಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವಿವಾಹ, ನಾಮಕರಣ ಗೃಹಪ್ರವೇಶಗಳಂತಹ ಶುಭ ಕಾರ್ಯಗಳನ್ನು ಉತ್ತರಾಯಣದಲ್ಲಿ ಹೆಚ್ಚಾಗಿ ಮಾಡುವುದನ್ನು ಕಾಣುತ್ತೇವೆ.

ಎಳ್ಳು-ಬೆಲ್ಲ ಹಂಚುವುದೇಕೆ?

ಸಂಕ್ರಾಂತಿ ಹಬ್ಬವನ್ನು ಎಳ್ಳು-ಬೆಲ್ಲದ ಹಬ್ಬ ಎಂದು ಕರೆಯುತ್ತಾರೆ. ರೈತರು ತಾವು ಬೆಳೆದ ಬೆಳೆಗಳನ್ನು ರಾಶಿ ಹಾಕಿ ಅದಕ್ಕೆ ಪೂಜೆ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಸುಗ್ಗಿಯ ಹಬ್ಬ ಎಂದೂ ಕರೆಯುತ್ತಾರೆ. ಸಂಕ್ರಾಂತಿಯ ದಿನ ಎಳ್ಳು ದಾನ ಮಾಡಬೇಕು ಎಂಬ ಸಂಪ್ರದಾಯವಿದೆ. ಎಳ್ಳು ಶನಿ ಗ್ರಹದ ಸಂಕೇತ ಹಾಗೂ ಅವನ ಧಾನ್ಯವಾಗಿದೆ. ಆದರೆ ಶನಿ ಗ್ರಹ ಎಂದೊಡನೆ ಎಲ್ಲರಿಗೂ ಏನೋ ಒಂದು ರೀತಿಯ ಭಯ. ಎಳ್ಳನ್ನು ನಾವು ದಾನ ಮಾಡಲು ಹೋದಾಗ ಸಾಮಾನ್ಯವಾಗಿ ಅದನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ.

ಕಾರಣ ಅವರ ಪಾಪ ತೆಗೆದುಕೊಂಡ ಹಾಗೆ ಎಂದು ಹಾಗೂ ದೋಷ ಉಂಟಾಗುವುದು ಎಂದು ತಿಳಿಯುವರು. ಆದ್ದರಿಂದ ಎಳ್ಳಿನ ಜೊತೆಯಲ್ಲಿ ಬೆಲ್ಲ, ಕಡಲೆಬೀಜ, ಕೊಬ್ಬರಿಯನ್ನು ಮಿಶ್ರಣ ಮಾಡಿ ದಾನ ಮಾಡುವ ಪದ್ಧತಿ ಪ್ರಾರಂಭವಾಗಿದೆ. ಅಲ್ಲದೆ ಬೆಳೆಗಳನ್ನು ಆಗ ತಾನೆ ರೈತರು ಬೆಳೆದು ಮಾರುಕಟ್ಟೆಗೆ ತಂದಿರುತ್ತಾರೆ. ಅವುಗಳನ್ನು ಪೂಜೆ ಮಾಡಿ ದಾನ, ಧರ್ಮ ಮಾಡಿದರೆ ಇನ್ನೂ ಹೆಚ್ಚು ಫಲ ಬರುವುದು ಎಂಬ ನಂಬಿಕೆಯೂ ಇದೆ.

ವೈಜ್ಞಾನಿಕ ಹಿನ್ನೆಲೆಯೂ ಇದೆ

ಸಂಕ್ರಾಂತಿಯ ಸಮಯದಲ್ಲಿ ಹೆಚ್ಚು ಚಳಿ ಇರುತ್ತದೆ. ಎಳ್ಳು ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ಅದರ ಜೊತೆಗೆ ಚರ್ಮದ ಕಾಂತಿಯೂ ಹೆಚ್ಚುತ್ತದೆ ಎಂಬ ವೈಜ್ಞಾನಿಕ ಕಾರಣದಿಂದ ಎಳ್ಳು ಸೇವನೆ ಮಾಡುತ್ತಾರೆ. ಈ ಹಬ್ಬವು ಅತ್ಯಂತ ಪ್ರಾಚೀನ ಕಾಲದಿಂದಲೂ ಆಚರಣೆಗೆ ಬಂದಿದೆ. ಜನಪದ ಗೀತೆಯಲ್ಲೂ ಸಂಕ್ರಾಂತಿಯ ಬಗ್ಗೆ ಹೇಳಿರುವುದನ್ನು ಕಾಣುತ್ತೇವೆ. ಸಂಕ್ರಾಂತಿಯಿಂದ ಶಿವ ಮತ್ತು ಪಾರ್ವತಿಯರು ಲೋಕ ಸಂಚಾರ ಪ್ರಾರಂಭಿಸುತ್ತಾರಂತೆ. ಈ ಸಂಕ್ರಮಣ ಕಾಲದ ಗೋಧೂಳಿ ಲಗ್ನದಲ್ಲಿ ಅವರು ಭೂಲೋಕದಲ್ಲಿರುತ್ತಾರೆ ಎಂದು ನಮ್ಮ ಪುರಾಣದಲ್ಲಿ ಹೇಳಲಾಗಿದೆ. ಈ ಪುಣ್ಯ ದಿನದಲ್ಲಿ ಇಂದ್ರ, ಚಿತ್ರಸೇನ, ಮೊದಲಾದ ದೇವತೆಗಳು ಶಾಪ ವಿಮೋಚನೆ ಮಾಡಿಕೊಂಡಿದ್ದಾರೆ ಎಂಬ ನಂಬಿಕೆಯೂ ಇದೆ.

ಕರ್ನಾಟಕದಲ್ಲಿ ವಿಜಯಪುರ, ಅಜ್ಜಂಪುರ ಸಮೀಪದ ಸೋಲಾಪೂರ, ಮಹಾರಾಷ್ಟ್ರದ ಸೊಲ್ಲಾಪುರ ಮೊದಲಾದ ಕ್ಷೇತ್ರಗಳಲ್ಲಿ ಶಿವಯೋಗಿ ಸಿದ್ಧರಾಮರ ಉತ್ಸವವನ್ನು ಮಾಡುತ್ತಾರೆ. ಪ್ರತಿವರ್ಷ ಸಂಕ್ರಾಂತಿಯ ಹಬ್ಬದ ದಿನ ಸಂಜೆ ಶಬರಿಮಲೆಯಲ್ಲಿ ಅಯ್ಯಪ್ಪ ಸ್ವಾಮಿಯು ಜ್ಯೋತಿ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಗ್ರಾಮೀಣ ಪ್ರದೇಶದಲ್ಲಿ ರೈತರು ಈ ದಿನದಂದು ಎತ್ತುಗಳಿಗೆ ಅಲಂಕರಿಸಿ, ಪೂಜಿಸಿ ಕಿಚ್ಚು ಹಾಯಿಸುತ್ತಾರೆ. ಹೊರ ದೇಶದಲ್ಲೂ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಹೀಗೆ ಈ ಹಬ್ಬವನ್ನು ಸಾಂಪ್ರದಾಯಿಕ ಹಬ್ಬವೆಂದು ಎಲ್ಲರೂ ಆಚರಿಸಿ ಗೌರವಾದರಗಳಿಂದ ಕಾಣುತ್ತಾರೆ.

- ಈಶ್ವರಾನಂದ ಸ್ವಾಮೀಜಿ, ಮುದನೂರು ಮಹಾಸಂಸ್ಥಾನ ಮಠ

ಯಾದಗಿರಿ

PREV
Read more Articles on
click me!

Recommended Stories

Financial success by date of birth: ನಿಮ್ಮ ಜನ್ಮಸಂಖ್ಯೆ ನಿಮ್ಮ ಸಂಪತ್ತಿನ ರಹಸ್ಯವೇ?
ಡಿಸೆಂಬರ್ 8 ರಿಂದ 14 ಲಕ್ಷ್ಮಿ ನಾರಾಯಣ ರಾಜಯೋಗ, 5 ರಾಶಿಗೆ ಸಂಪತ್ತಿನ ಲಾಭ-ಉತ್ತಮ ಯಶಸ್ಸು