Navratri 2023: ಪ್ರಯಾಗ್ ರಾಜ್‌ನಲ್ಲಿ ವಿಜಯದಶಮಿಯಂದು ರಾವಣನಿಗೆ ಸಮ್ಮಾನ: ಹೀಗ್ಯಾಕೆ?

By Suvarna NewsFirst Published Oct 20, 2023, 12:41 PM IST
Highlights

ವಿಜಯದಶಮಿಯಂದು ಸಾಮಾನ್ಯವಾಗಿ ರಾವಣನ ಪ್ರತಿಕೃತಿ ದಹನ ಮಾಡುವ ಪದ್ಧತಿ ಉತ್ತರ ಭಾರತದ ಎಲ್ಲೆಡೆ ಇದೆ. ಆದರೆ, ಪವಿತ್ರ ಸ್ಥಳಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ವಿಜಯದಶಮಿಯಿಂದು ರಾವಣನನ್ನು ಆರಾಧಿಸಲಾಗುತ್ತದೆ, ಶೋಭಾಯಾತ್ರೆ ನಡೆಸಲಾಗುತ್ತದೆ. 
 

ನವರಾತ್ರಿ ಮುಗಿದ ಮರುದಿನ ಬರುವ ವಿಜಯದಶಮಿಯನ್ನು ದುಷ್ಟ ಶಕ್ತಿಗಳ ವಿರುದ್ಧ ದೇವತೆಗಳ ವಿಜಯದ ದಿನವೆಂದು ಹೇಳಲಾಗುತ್ತದೆ. ಜಗತ್ತಿಗೆ ಉಪಟಳ ನೀಡುತ್ತಿದ್ದ ಮಹಿಷಾಸುರನನ್ನು ದುರ್ಗಾ ದೇವಿ ವಿಜಯದಶಮಿಯಂದು ವಧೆ ಮಾಡಿದಳು. ದುಷ್ಟ ಸಂಕಲ್ಪದ ಸಂಕೇತವಾಗಿರುವ ರಾವಣನನ್ನು ಶ್ರೀರಾಮ ಸಂಹಾರ ಮಾಡಿದನು. ಈ ದಿನವನ್ನೇ ವಿಜಯದಶಮಿ ಎಂದು ಆಚರಿಸಲಾಗುತ್ತದೆ. ಉತ್ತರ ಭಾರತದ ಎಲ್ಲೆಡೆ ವಿಜಯದಶಮಿಯಂದು ರಾವಣನ ಮೂರ್ತಿಯನ್ನು ದಹಿಸುವ ಸಂಪ್ರದಾಯವಿದೆ. ಕೆಟ್ಟ ಶಕ್ತಿಯ ನಿವಾರಣೆಯ ಸ್ವರೂಪವಾಗಿ ರಾವಣದ ದೊಡ್ಡ ಪ್ರತಿಕೃತಿ ಮಾಡಿ ಅದನ್ನು ಸುಟ್ಟುಹಾಕಲಾಗುತ್ತದೆ. ಆದರೆ, ಸಂಗಮ ನಗರವೆಂದೇ ಪ್ರಸಿದ್ಧವಾಗಿರುವ ಪ್ರಯಾಗ್ ರಾಜ್ ನಲ್ಲಿ ವಿಜಯದಶಮಿಯ ಉತ್ಸವದ ಆರಂಭ ರಾವಣದ ಪೂಜೆಯಿಂದ ಆರಂಭವಾಗುತ್ತದೆ ಎಂದರೆ ಅಚ್ಚರಿಯಾಗಬಹುದು. 

ಲಂಕಾಧಿಪತಿ ರಾವಣ ಮೂರೂ ಲೋಕಗಳನ್ನು ಜಯಿಸಿದ ವೀರಾಧಿವೀರನಾಗಿದ್ದ. ವಿಜಯದಶಮಿ ಹೇಳಿಕೇಳಿ ವಿಜಯದ ಸಂಕೇತವಾಗಿರುವ ಆಚರಣೆ. ಹೀಗಾಗಿ, ಈ ದಿನದಂದು ಪ್ರಯಾಗ್ ರಾಜ್ ನಲ್ಲಿ ರಾವಣನನ್ನು ಅರ್ಚಿಸಲಾಗುತ್ತದೆ, ಪೂಜಿಸಲಾಗುತ್ತದೆ. ಭವ್ಯವಾದ ಶೋಭಾಯಾತ್ರೆಯೊಂದಿಗೆ ರಾವಣ ಮೆರವಣಿಗೆ ಮಾಡಲಾಗುತ್ತದೆ. ಕುದುರೆ, ರಥ, ಬ್ಯಾಂಡ್ ಗಳು, ಆಕರ್ಷಕ ದೀಪಗಳೊಂದಿಗೆ ಮಹಾರಾಜ ರಾವಣನ ಶೋಭಾಯಾತ್ರೆ ನಡೆಯುತ್ತದೆ. ಈ ಸಮಯದಲ್ಲಿ ಪ್ರಯಾಗ್ ರಾಜ್ ನಲ್ಲಿ ರಾವಣನ ಮಾಯಾವಿ ಸೇನೆಯೂ ಸಾಗುತ್ತದೆ ಎಂದು ಭಾವಿಸಲಾಗಿದೆ. ಹೀಗಾಗಿ, ರಾವಣನ ಸ್ವಾಗತಕ್ಕೆ ಜನಜಾತ್ರೆಯೇ ನೆರೆಯುತ್ತದೆ.

ಜಗದೇಕ ವೀರನಾಗಿದ್ದ ರಾವಣನ ರಾಜವೈಭೋಗದ ಸವಾರಿ ಪ್ರತಿಬಾರಿಯೂ ಇಲ್ಲಿ ವಿಧಿವತ್ತಾಗಿ ಜರುಗುತ್ತದೆ. ಭಾರದ್ವಾಜ ಮಹರ್ಷಿಗಳ ಮಂದಿರದಿಂದ ರಾಜಸವಾರಿಯನ್ನು ಹೊರಡಿಸಲಾಗುತ್ತದೆ. ಬಳಿಕ, ಅತ್ಯಂತ ಪುರಾತನವಾಗಿರುವ ಶಿವ ದೇವಾಲಯದಲ್ಲಿ ಮಹಾರಾಜ ರಾವಣನಿಗೆ ಆರತಿ ಬೆಳಗಲಾಗುತ್ತದೆ. ಪೂಜೆ ಸಲ್ಲಿಸಿ, ರಾವಣನಿಗೆ ಜೈಕಾರವನ್ನೂ ಹಾಕಲಾಗುತ್ತದೆ. 

ರಾವಣ್ ಬಾರಾತ್ (Ravan Barat)
ಈ ಶೋಭಾಯಾತ್ರೆ (Procession) “ರಾವಣ್ ಬಾರಾತ್’ ಎಂದೇ ಪ್ರಸಿದ್ಧವಾಗಿದೆ. ಈ ಯಾತ್ರೆಯ ಸಂದರ್ಭದಲ್ಲಿ ದಶಾನನ ರಾವಣನ ಪತ್ನಿ ಮಂಡೋದರಿ ದೇವಿಯೂ ಜತೆಗಿರುತ್ತಾಳೆ. ವಿಶಾಲವಾದ ರಥದಲ್ಲಿ ರಾವಣ ಹಾಗೂ ಆತನ ಪತ್ನಿಯನ್ನು ಕುಳ್ಳಿರಿಸಲಾಗುತ್ತದೆ. ಕುಟುಂಬದ ಜನರು ಕುದುರೆಗಳ ಮೇಲೆ ಸಾಗುತ್ತಾರೆ. ಈ ಸಮಯದಲ್ಲಿ ರಾವಣನ ಮಾಯಾವಿ ಸೇನೆಯನ್ನೂ (Army) ಸಹ ಸೃಷ್ಟಿಸಲಾಗುತ್ತದೆ. 

ಈ ದೇವಸ್ಥಾನದಲ್ಲಿ ಅಲ್ಲಾ-ಉದಲ್ ನಿತ್ಯವೂ ಅದೃಶ್ಯವಾಗಿ ಬಂದು ಶಾರದೆಯನ್ನು ಪೂಜಿಸುತ್ತಾನಂತೆ!

ಇನ್ನೂ ಅಚ್ಚರಿ ಎಂದರೆ, ಲಂಕಾಧಿಪತಿ ರಾವಣನ ವೇಷ ಹಾಕಲಾಗುತ್ತದೆ. ಈ ಸಮಯದಲ್ಲಿ ಕೇವಲ ಮೂರ್ತಿ ಅಥವಾ ಪ್ರತಿಕೃತಿ ನಿರ್ಮಿಸುವುದಿಲ್ಲ. ರಾಣಿ ಮಂಡೋದರಿಯ ವೇಷವನ್ನೂ ಹಾಕಲಾಗುತ್ತದೆ. 

ಯಾಕಾಗಿ ಪೂಜೆ?
ಪುರಾಣಗಳ ಪ್ರಕಾರ, ರಾವಣ ಪ್ರಖರ ವಿದ್ವಾಂಸವಾಗಿದ್ದ (Scholar). ಪ್ರಯಾಗ್ ರಾಜ್ ಅನ್ನು ವಿದ್ಯಾದೇವಿ ಸರಸ್ವತಿ (Saraswathi) ಉದಯಿಸಿದ ಪ್ರದೇಶ ಎನ್ನಲಾಗುತ್ತದೆ. ಹಾಗೂ ಇಲ್ಲಿ ಭಾರದ್ವಾಜ (Bharadwaj) ಮುನಿಗಳ ಆಶ್ರಮವಿದೆ. ರಾವಣನ ವಿದ್ವತ್ತನ್ನು ಗಮನಿಸಿ ಇಂಥದ್ದೊಂದು ಆಚರಣೆ ಇಲ್ಲಿ ಪ್ರಚಲಿತದಲ್ಲಿದೆ. ಇಲ್ಲಿ, ವಿಜಯದಶಮಿಯಂದು ರಾವಣ ಪುತ್ಥಳಿಯನ್ನು ಸುಡುವುದಿಲ್ಲ. ಅಚ್ಚರಿ ಎಂದರೆ, ಇಲ್ಲಿ ರಾಮನಾಮವನ್ನು ಭಜಿಸುವ ಜನರ ಮೂಗು ಮತ್ತು ಕಿವಿಗಳನ್ನು ಕತ್ತರಿಸುವ ಪ್ರಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ಮಾಡಲಾಗುತ್ತದೆ! 

ದೇವಿ ದುರ್ಗಾ ಕೈಯಲ್ಲಿರೋ ಒಂದೊಂದೂ ಆಯುಧಕ್ಕಿದೆ ಮಹತ್ವ, ಕಥೆ!

ಶತಮಾನಗಳ ಹಿಂದಿನ ಆಚರಣೆ
ಪ್ರಯಾಗ್ ರಾಜ್ ನಲ್ಲಿರುವ ಶ್ರೀ ಕತ್ರಾ ರಾಮಲೀಲಾ ಸಮಿತಿ ಈ ರಾವಣ್ ಬಾರಾತ್ ಉತ್ಸವವನ್ನು ನಡೆಸುತ್ತದೆ. ವಿಜಯದಶಮಿಯಂದು ರಾವಣನನ್ನು ಆರಾಧಿಸುವ ಶ್ರೀ ಕತ್ರಾ ರಾಮಲೀಲಾ ಸಮಿತಿಯ ಜನ ತಮ್ಮನ್ನು ಋಷಿ ಭಾರದ್ವಾಜರ ವಂಶಜರು ಎಂದು ಹೇಳಿಕೊಳ್ಳುತ್ತಾರೆ. ರಾವಣನನ್ನು ಪೂಜಿಸುವ ಈ ಪರಂಪರೆ ಇಲ್ಲಿ ಶತಮಾನಗಳಿಂದಲೂ ಕಂಡುಬರುತ್ತದೆ. ನಗರದ ಬೇರೆ ಬೇರೆ ಮೊಹಲ್ಲಾಗಳ ವಿವಿಧ ಸಮಿತಿಗಳೂ ಇದರಲ್ಲಿ ಪಾಲ್ಗೊಳ್ಳುತ್ತವೆ. ರಾಮ ದಳ, ಹನುಮಾನ್ ದಳ ಎನ್ನುವ ವಿವಿಧ ಗುಂಪುಗಳೂ ಸಹ ರಾವಣನ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. 

click me!