ಇದು ಕೇವಲ ಸ್ನಾನವಲ್ಲ, ಇದು ಸನಾತನ ಧರ್ಮ: ಶ್ರೀಕಂಠ ಶಾಸ್ತ್ರಿ

Published : Feb 01, 2025, 06:36 PM ISTUpdated : Feb 01, 2025, 11:03 PM IST
ಇದು ಕೇವಲ ಸ್ನಾನವಲ್ಲ, ಇದು ಸನಾತನ ಧರ್ಮ: ಶ್ರೀಕಂಠ ಶಾಸ್ತ್ರಿ

ಸಾರಾಂಶ

ಪ್ರಪಂಚದ ಕಣ್ಣೆಲ್ಲಾ ಈಗ ಭಾರತದ ಮೇಲಿದೆ. ಕಾರಣ ಒಂದು ಕುಂಭಸ್ನಾನ..! ಒಂದು ಸ್ನಾನಕ್ಕಿಷ್ಟು ಮಹತ್ವವಾ ಅಂದರೆ ಅದು ಸನಾತನ ಧರ್ಮದ ಕಿಮ್ಮತ್ತು. ನಮ್ಮ ಭಾರತ ದೇಶದ ಪ್ರತಿ ಆಚರಣೆಯ ಹಿಂದೆಯೂ ವಿಜ್ಞಾನ ಮೀರಿದ ದೈವಿಕ ಶಕ್ತಿ ಅಡಗಿದೆ.

ಶ್ರೀಕಂಠ ಶಾಸ್ತ್ರಿಗಳು

ಪ್ರಪಂಚದ ಕಣ್ಣೆಲ್ಲಾ ಈಗ ಭಾರತದ ಮೇಲಿದೆ. ಕಾರಣ ಒಂದು ಕುಂಭಸ್ನಾನ..! ಒಂದು ಸ್ನಾನಕ್ಕಿಷ್ಟು ಮಹತ್ವವಾ ಅಂದರೆ ಅದು ಸನಾತನ ಧರ್ಮದ ಕಿಮ್ಮತ್ತು. ನಮ್ಮ ಭಾರತ ದೇಶದ ಪ್ರತಿ ಆಚರಣೆಯ ಹಿಂದೆಯೂ ವಿಜ್ಞಾನ ಮೀರಿದ ದೈವಿಕ ಶಕ್ತಿ ಅಡಗಿದೆ.  ಅದನ್ನು ಬಗೆದುನೋಡಲಿಕ್ಕೆ ಬೇಕಿರುವುದು ಹೊರಗಿನ ಕಣ್ಣುಗಳಲ್ಲ ಅಂತಶ್ಚಕ್ಷು. ಅಂತರಂಗದೃಷ್ಟಿ ಬೇಕು. ಇಡೀ ಪ್ರಪಂಚವೇ ನಮ್ಮ ಪ್ರಯಾಗ ಕ್ಷೇತ್ರವನ್ನ ಹೀಗೆ ಬಿಟ್ಟಕಣ್ಣು ಬಿಟ್ಟಹಾಗೆ ಸೋಜಿಗದಿಂದ ನೋಡ್ತಾ ಇದೆ ಅಂದ್ರೆ ಅದರ ಘನತೆ, ದಿವ್ಯತೆ ಇನ್ನೆಂಥದ್ದು ಊಹಿಸಿ..!

ಇಂಥ ಒಂದು ದಿವ್ಯಾನುಭವ ನಮ್ಮ ಜೀವನಕ್ಕೆ ದಕ್ಕದೆ ಹೋದರೆ, ಇಂಥ ಒಂದು ಪುಣ್ಯ ಸ್ನಾನದಲ್ಲಿ ನಾವು ಪಾಲ್ಗೊಳ್ಳದೇ ಹೋದರೆ ನಮ್ಮ ಹುಟ್ಟೇ ವ್ಯರ್ಥವಾದೀತು ಅನ್ನಿಸಿ ಹೊರಟದ್ದು ಪ್ರಯಾಗ ಕ್ಷೇತ್ರಕ್ಕೆ. ಸುಮಾರು 21 ಜನರ ಸ್ನೇಹಿತರ ಗುಂಪು ನಾಲ್ಕೈದು ದಿನಗಳಲ್ಲಿ ಅಯೋಧ್ಯೆ, ನೈಮಿಷಾರಣ್ಯ, ಪ್ರಯಾಗ, ಕಾಶಿ ಹೀಗೆ ಒಂದು ಪ್ರದಕ್ಷಿಣೆ ಹಾಕಿ ಬರುವ ಯೋಚನೆಯಲ್ಲಿ ಹೊರಟೆವು. ನಮಗೆಲ್ಲಾ ನಿರ್ದೇಶನ ಮಾಡುತ್ತಿದ್ದದ್ದು ಮಹಿಮಾ ಶಕ್ತಿ ಹೊಂದಿದ್ದರೂ ಸರಳವಾಗಿರುವ ಸೌಮ್ಯಾ ಎಂಬ  ಹುಡುಗಿ. ನಾವು ಸುತ್ತಿದ್ದು, ನಡೆದದ್ದು, ದಣಿದದ್ದು ಈ ಯಾತ್ರೆಯ ಪರಿಪಾಟಲು ಪೋಣಿಸುತ್ತಾ ಹೋದರೆ ಅದೇ ಒಂದು ಧಾರಾವಾಹಿಯಾದರೂ ಆಶ್ಚರ್ಯವಿಲ್ಲ. ಹಾಗಾಗಿ ಕಾಶಿ, ಅಯೋಧ್ಯೆ, ನೈಮಿಷಾರಣ್ಯಗಳ ಕಥೆ ಮತ್ತೊಮ್ಮೆ ಎಂದಾದರೂ ವಿವರಿಸುತ್ತೇನೆ. ಸದ್ಯಕ್ಕೆ ಪ್ರಯಾಗದ ಕಡೆ ಪ್ರಯಾಣ ಮಾಡೋಣ. 

ಮಹಾಕುಂಭ ಮೇಳದಲ್ಲೇ ಮುಕ್ತಿ ಪಡೆದ ಅಘೋರಿ ಬಾಬಾ: ವೀಡಿಯೋ ವೈರಲ್

ಸುಮಾರು ಬೆಳಗ್ಗೆ 6 ಗಂಟೆಯ ವೇಳೆಗೆ ಚಿತ್ರಕೂಟದಿಂದ ಪ್ರಯಾಣಗದ ಕಡೆ ಹೊರಟೆವು. ಪ್ರಯಾಗ ತಲುಪುವ ವೇಳೆಗೆ 10 ಗಂಟೆ. ಇನ್ನೂ 10 ಕಿಮಿ ಇದೆ ಅನ್ನುವಾಗಲೇ ನಮ್ಮ ಟಿಟಿ ಒಂದು ಕಡೆ ಟರ್ನ್ ತೆಗೆದುಕೊಂಡಿತು ಎಲ್ಲಿ ಪಾರ್ಕ್ ಮಾಡುವುದು..? ಎತ್ತ ನೋಡಿದರೂ ಕಾರು, ಆಟೋ, ಟೆಂಪೊ, ಟಿಟಿ, ಬಸ್ಸು, ಎಲ್ಲ ವಾಹನಗಳೂ ಅಲ್ಲಿ ನಿಂತಿದ್ದಾವೆ. ಪಾರ್ಕಿಂಗ್ ಪ್ಲೇಸೇ ಒಂದು ಸಮುದ್ರದಹಾಗಿದೆ. ಕಣ್ಣನೋಟ ಕೊನೆಗೊಳ್ಳುವವರೆಗೆ ವಾಹನಗಳು ನಿಂತಿವೆ. ನಾನು ಎಲ್ಲೋ ಒಂದು ಕಡೆ ಪಾರ್ಕ್ ಮಾಡ್ತೀನಿ ಸಮಯ ಹಾಳು ಮಾಡ್ಕೊಬೇಡಿ ಬೇಗ ಹೊರಟುಬಿಡಿ ಅಂತ ನಮ್ಮ ಡ್ರೈವರ್ ಹೇಳಿದರು. ಬಡಬಡ ಇಳಿದು ರಸ್ತೆಗೆ ಬಂದರೆ ರಸ್ತೆಕೂಡ ಭರ್ತಿ ತುಂಬಿಬಿಟ್ಟಿದೆ. 

ಜಿಲ್ಲೆಜಿಲ್ಲೆಯಿಂದ, ರಾಜ್ಯರಾಜ್ಯಗಳಿಂದೆಲ್ಲಾ ಜನ ಬಂದುಬಂದು ಜನ ಸಂಗಮವೂ ದಟ್ಟವಾಗಿ ಹಬ್ತಾ ಇತ್ತು. ನಮ್ಮ ಗುರಿ ತ್ರಿವೇಣಿ ಸಂಗಮ. ಅಲ್ಲಿಗೆ ತಲುಪಲಿಕ್ಕೆ ಇನ್ನೂ ಸಾಕಷ್ಟು ದೂರ ಕ್ರಮಿಸಬೇಕು. ಹೋಗುವುದು ಹೇಗೆ..? ಪುಟ್ಟ-ಪುಟ್ಟ ಮಕ್ಕಳೂ ಜೊತೆಗಿದ್ದಕಾರಣ ನಡೆದುಹೋಗುವುದು ಕಷ್ಟವೆನಿಸಿ ಒಂದು ಸಣ್ಣ ಟೆಂಪೋ ಹಿಡಿದೆವು. ಕುರಿಗಳನ್ನು ತುಂಬಿದಹಾಗೆ ಒಬ್ಬೊಬ್ಬರನ್ನೇ ತುರುಕಿ ಹೊರಟಿತು ಜವಾರಿ. ಭರ್ತಿ 2 ಗಂಟೆಗಳಲ್ಲಿ ಅಲ್ಲಿಂದ 5 ಕಿಮಿ ದೂರ ತಲುಪಿದೆವು. ವಾಹನ ಸಂದಣಿಯಲ್ಲಿ ಮತ್ತೊಂದು ವಾಹನ ಸಾಗುವ ವೇಗದಲ್ಲಿ ಇರುವೆಗಳೇ ಮೊದಲು ಗುರಿತಲುಪಿದ್ದವು ನಾವು ತುಂಬ ತಡವಾಗಿ ತಲುಪಿದೆವು. 

ಅಲ್ಲಿಂದ ಇಳಿದು ಮತ್ತೆ ನಡಿಗೆ. ಹೆಗಲಮಲೆ ಬ್ಯಾಗ್ ಗಳು, ಬಗಲಲ್ಲಿ ಮಕ್ಕಳುಮರಿ ಎಲ್ಲವನ್ನೂ ಹೊತ್ತು ಅಂತೂ ಯಮುನಾ ದಡದಲ್ಲಿರುವ  23ನೇ ಸೆಕ್ಟರ್ ತಲುಪುವಷ್ಟರಲ್ಲಿ ಯಾತ್ರೆಯ ಮಹಾನುಭವ ಕಂಕಳು, ಕುತ್ತಿಗೆ, ಎದೆಯಯಲ್ಲೆಲ್ಲಾ ಪ್ರಕಟವಾಗುತ್ತಿತ್ತು. ಹೆಗಲು-ಬಗಲಲ್ಲಿದ್ದವನ್ನೆಲ್ಲಾ ಕೆಳಗೆ ಕುಕ್ಕಿ ಮರಳಮೇಲೆ ಮೈಚೆಲ್ಲಿ ಸುಧಾರಿಸಿಕೊಂಡೆವು. ನಮ್ಮ ತಂಡದ ಮತ್ತೋರ್ವ ಮುಖ್ಯಸ್ಥರಾದ ಶೋಭಾ ಅವರಿಗೆ ಪರಿಚಿತರಿದ್ದ ವ್ಯವಸ್ಥೆ ನೋಡಿಕೊಳ್ಳುವ ಮುಖ್ಯಸ್ಥರೊಬ್ಬರು ನಮ್ಮನ್ನು ಸ್ವಾಗತಿಸಿ ಸಂಗಮ ಸ್ನಾನಕ್ಕೆ ವ್ಯವಸ್ಥೆ ಮಾಡಿಕೊಟ್ಟರು. ಅಂತೂ ಬೋಟ್ ಗಳನ್ನು ಹತ್ತಿ ಸಂಗಮದ ಕಡೆ ಹೊರಟೆವು. 

ಸೂರ್ಯ-ಸಂಜ್ಞಾದೇವಿಯರಿಗೆ ಮೂರುಜನ ಮಕ್ಕಳು. ಎರಡು ಗಂಡು, ಒಂದು ಹೆಣ್ಣು.  ಮನು, ಯಮ, ಹಾಗೂ ಯಮಿ. ಆ ಮೂರನೇ ಮಗಳಾದ ಯಮಿಯೇ ಇಂದು ಯಮುನೆಯಾಗಿ  ಹರಿದು ಬಂದು ಭೂಮಿಯನ್ನು ಪಾವನಗೊಳಿಸುತ್ತಿದ್ದಾಳೆ. ಅಷ್ಟೇಅಲ್ಲ, ವೇದವ್ಯಾಸರ ಅವತಾರಕ್ಕೆ ಸ್ಥಳಾವಕಾಶ ಮಾಡಿಕೊಟ್ಟ ಯಮುನೆಯ ಕಾರಣದಿಂದ ವೇದವ್ಯಾಸರ ಹೆಸರು ಕೃಷ್ಣದ್ವೈಪಾಯನ ಅಂತಾಯ್ತು. ಅಷ್ಟೇಅಲ್ಲಾ,  ಭರತ ಚಕ್ರವರ್ತಿ ಅಶ್ವಮೇಧ ಯಾಗ ಮಾಡಿದ್ದು ಇಲ್ಲೇ, ಕೃಷ್ಣ ಆಡಿ ಬೆಳೆಯುವಾಗ ಕಾಳಿಂಗಮರ್ದನ ಮಾಡಿದ್ದೂ ಇಲ್ಲಿಯೇ. ಇಷ್ಟೆಲ್ಲಾ  ಪುರಾಣೇತಿಹಾಸ ಘಟನೆಗಳು ಇದೇ ಯಮುನೆಯ ತಟದಲ್ಲೇ ಅಲ್ಲವಾ ನಡೆದದ್ದು ಅಂತ ಒಮ್ಮೆ ಸ್ಮೃತಿ ಪಟಲದಲ್ಲಿ ಅಲೆಯಂತೆ ತೇಲೆಬಂದಂತಾಗಿ ನಡೆದು ನಡೆದು ದೇಹಕ್ಕಾಗಿದ್ದ ಪ್ರಾಯಾಸವೆಲ್ಲಾ ಎಲ್ಲೋ ಹರಿದುಹೋಗಿತ್ತೋ ನೋಡಿ..!

ಅಂತೂ ಕೋಟಿ ಕೋಟಿ ಜನರು ಪರಿತಪಿಸಿ, ಹಸಿವು-ನಿದ್ರೆಗಳನ್ನ ತೊರೆದು, ಜೀವಭಯವನ್ನೂ  ಪಕ್ಕಕ್ಕಿಟ್ಟು ದಂಡುದಂಡಾಗಿ ಧಾವಿಸಿ ಬರುತ್ತಿದ್ದದ್ದು ಇದೇ ಸ್ಥಳಕ್ಕೆ. ಗಂಗಾ-ಯಮುನಾ-ಸರಸ್ವತೀ ಸಂಗಮಕ್ಕೆ. ಅಷ್ಟು ದೂರದಲ್ಲೇ ಸಂಗಮ ಕಣ್ಣಿಗೆ ಕಾಣಿಸುತ್ತಿತ್ತು. ಹರನ ಜಟೆಯಿಂದಿಳಿದವಳು, ಬಹ್ಮಕಮಂಡಲುವಿಂದ ಧುಮಿಕಿದವಳು, ವಿಷ್ಣುಪಾದದಿಂದ ಹರಿದವಳು ತ್ರಿಮೂರ್ತಿಗಳ ಅನುಗ್ರಹ ಫಲದಿಂದ ಶುಭ್ರವಾಗಿ ಕಂಗೊಳಿಸುತ್ತಿದ್ದ ಗಂಗೆಯನ್ನ ನೋಡಿಯೇ ಶುಭ್ರರಾಗಿಬಿಟ್ಟೆವು. 

ಸಂಗಮ ಎಂಬುದು ಬರೀ ನೀರು ಸೇರುವ ಸೋಜಿಗವಲ್ಲ. ಅದು ಪುಣ್ಯ ಸಂಗಮ, ಭಾವ ಸಂಗಮ, ದೈವಾನುಗ್ರಹ ಸಂಗಮ. ಬಂದ ಭಕ್ತರ ಪಾಪಗಳನ್ನು ತೊಳೆಯುತ್ತಾ ಯಮುನೆ ಕಪ್ಪಿಟ್ಟಿದ್ದರೆ, ಬಿಳಿಯ ದೇವಗಂಗೆ ಭಕ್ತರನ್ನು ಶುಚಿಮಾಡುತ್ತಿದ್ದಾಳೇನೋ ಅನ್ನಿಸುತ್ತಿತ್ತು. ಗುಪ್ತವಾಗಿ ಹರಿವ ಸರಸ್ವತಿಯಂತೂ ಅಂತರಂಗದಲ್ಲಿ ಆತ್ಮಜ್ಞಾನವನ್ನು ಪ್ರಕಟಿಸುತ್ತಾ ಎಲ್ಲರಿಗೂ ಮೋಕ್ಷವನ್ನೇ ಕರುಣಿಸುತ್ತಿದ್ದಾಳೇನೋ ಎಂಬಂತೆ ಸಂಗಮ ಸ್ನಾನ ಅಲ್ಲಿಗೆ ಬಂದವರ ಹೊಸ ಹುಟ್ಟಿಗೆ ಕಾರಣವಾಗುತ್ತಿದೆ ಎನ್ನಿಸುತ್ತಿತ್ತು.

ದೇವಗಂಗೆ ಒಮ್ಮೆ ಶಿವನನ್ನು ಕೇಳಿದಳಂತೆ ನಾನು ಭೂಲೋಕದಲ್ಲಿ ಎಲ್ಲರ ಪಾಪಗಳನ್ನು ತೊಳೆದು ತೊಳೆದು ನನ್ನಲ್ಲೇ ಪಾಪ ತುಂಬಿಹೋಗಿದೆ ನನ್ನ ಶುದ್ಧಿಗೆ ಏನು ಮಾಡಬೇಕು ಅಂತ ಪ್ರಾರ್ಥಿಸಿದಳಂತೆ. ಅದಕ್ಕೆ ಶಿವ ನುಡಿದನಂತೆ : ಭಾರತ ಭೂಮಿಯಲ್ಲಿ ನಾಲ್ಕು ಪುಣ್ಯ ಸ್ಥಳಗಳಿವೆ ಒಂದು ಹರಿದ್ವಾರ, ಎರಡನೇದು ಉಜ್ಜೈನಿ ಮೂರನೇದು ನಾಸಿಕ್ ನಾಲ್ಕನೇದು ಪ್ರಯಾಗ ಕ್ಷೇತ್ರ. ಇವುಗಳನ್ನು ಅಲ್ಲಿನ ಜನ ಧರ್ಮ-ಅರ್ಥ-ಕಾಮ-ಮೋಕ್ಷ ಕ್ಷೇತ್ರಗಳು ಅಂತ ನಂಬಿದ್ದಾರೆ. ಅದರಲ್ಲಿ ಪ್ರಯಾಗ ಕ್ಷೇತ್ರ ಎಂಬುದು ಅತ್ಯಂತ ಪವಿತ್ರ ಕ್ಷೇತ್ರ. ಮೋಕ್ಷಕ್ಷೇತ್ರವಾಗಿದೆ. ಅಲ್ಲಿ ಚತುರ್ಮುಖ ಬ್ರಹ್ಮನೂ ಯಾಗ ಮಾಡಿದ್ದ. 

ಹಾಗಾಗಿಯೇ ಆ ಕ್ಷೇತ್ರಕ್ಕೆ ಪ್ರಯಾಗ ಎಂಬ ಹೆಸರೂ ಬಂದಿದೆ. ಆ ಸ್ಥಳದಲ್ಲಿ ಒಂದು ಕಾಲ ವಿಶೇಷ ಸಂದರ್ಭದಲ್ಲಿ ಅಂದರೆ,  ಗುರುಗ್ರಹವು ವೃಷಭರಾಶಿಯಲ್ಲಿ ಸಂಚರಿಸುವಾಗ, ಸೂರ್ಯ ಮಕರ ರಾಶಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಒಂದು ದಿವ್ಯಶಕ್ತಿ ಆವಿರ್ಭವಿಸತ್ತೆ. ಆ ಸಮಯದಲ್ಲಿ ದೇವಸೇನೆಯಂತಿರುವ, ನನ್ನ ಪರಮ ಭಕ್ತರೇ ಆಗಿರುವ ನಾಗಾಸಾಧುಗಳು ಬಂದು ಪುಣ್ಯಸ್ನಾನ ಮಾಡುತ್ತಾರೆ. ಅವರ ಸ್ನಾನದಿಂದಲೇ ನಿನಗೆ ಮತ್ತೆ ನಿರ್ಮಲತೆ, ದಿವ್ಯತೆ, ಶ್ರೇಷ್ಠತೆ, ಪವಿತ್ರತೆ ಎಲ್ಲವೂ ಉಂಟಾಗಲಿದೆ. ಅದನ್ನೇ ಕುಂಭಸ್ನಾನ, ಮಹಾಕುಂಭ ಎಂಬುದಾಗೆಲ್ಲಾ ಕರೆಯುತ್ತಾರೆ ಎಂದು ಅಭಯಕೊಟ್ಟನಂತೆ. 

ನಾವೆಲ್ಲಾ ಸಂಗಮದಲ್ಲಿ ಮುಳುಗೇಳುವಾಗ ಇದೇ ಕಥೆ ಮನಸ್ಸಿನ ತುಂಬ ತುಂಬಿಕೊಂಡಿತ್ತು. ಒಂದು ಸ್ನಾನಕ್ಕೆ ಯಾಕಿಷ್ಟು ಕಿಮ್ಮತ್ತು ಅಂದ್ರೆ ಇಲ್ಲಿ ದೈವ ಶಕ್ತಿ ಪ್ರಕಟವಾಗುತ್ತಿದೆ. ವಿಜ್ಞಾನವರಿಯದ ಅಂತ:ಶಕ್ತಿ ಪ್ರವಹಿಸುತ್ತಿದೆ. ತರ್ಕದಾಟಿದ ಅಲೌಕಿಕ ಅನುಭವ ಉಂಟಾಗುತ್ತಿದೆ. ಹೀಗಾಗೇ ಅಲ್ವಾ ಸ್ಟೀವ್ ಜಾಬ್ಸ್ ನಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೆ,  ಸಂಸಾರಿಗಳಿಂದ ಹಿಡಿದು ಸಂನ್ಯಾಸಿಗಳವರೆಗೆ ಸರ್ವರೂ ಇಲ್ಲಿ ಮಿಂದು ಪವಿತ್ರರಾಗುತ್ತಿರುವುದು..! ಇನ್ನೂ ಕಾಲ ಮಿಂಚಿಲ್ಲ, ನೀವೂ ಪುಣ್ಯಸ್ನಾನಕ್ಕೆ ಸಿದ್ಧರಾಗಬಹುದು. ಸಾಮಾನ್ಯ ಮುಗ್ಧ ಜನರ ಮನಸ್ಸಿನಲ್ಲಿರುವ ತಪ್ಪು ಕಲ್ಪನೆ ಏನ್ ಗೊತ್ತಾ..? ಸ್ನಾನ ಮಾಡುವ ಸಂಗಮ ಸ್ಥಳದಲ್ಲೂ ಜನಸಾಗರ ಒಂದೆಡೆ ಸೇರಿ ನೀರಿಗೆ ಬಿದ್ದು ಸಾಯ್ತೀವಿ, ಕಾಲ್ತುಳಿತಕ್ಕೆ ಸಿಕ್ಕಿಬೀಳ್ತೀವಿ ಅನ್ನೋದು. ಅವರಿವರ ಮಾತುಕೇಳಬೇಡಿ. ಪೊಲೀಸ್ ವ್ಯವಸ್ಥೆ ಸರಿಯಿಲ್ಲ, ಬ್ಯಾರಿಕೇಡ್ ಸರಿಯಾಗಿ ಹಾಕಿಲ್ಲ,

 ಜನರನ್ನ ಕಂಟ್ರೋಲ್ ಮಾಡೋ ಶಕ್ತಿಯಿಲ್ಲ, ಸರಿಯಾಗಿ ಪ್ಲಾನ್ ಮಾಡ್ಕೊಂಡಿಲ್ಲ, ಶಾಸಕರು ಸರಿಯಿಲ್ಲ, ಸರ್ಕಾರ ಸರಿಯಿಲ್ಲ, ಯೋಗಿ ಆಡಳಿತ ಸರಿಯಿಲ್ಲ, ಕುಂಭಮೇಳವೇ ಸರಿಯಿಲ್ಲ, ದೇವತೆಗಳು-ರಾಕ್ಷಸರು ಅಮೃತ ಮಂಥನ ಮಾಡಿದ್ದೇ ತಪ್ಪು, ಭೂಮಿಮೇಲೆ ಅಮೃತ ಬಿದ್ದಿದ್ದೂ  ತಪ್ಪು, ಇಂಥ ತಪ್ಪಿಗೆ ಸರ್ಕಾರ ಸಮೇತ ತ್ರಿಮೂರ್ತಿಗಳನ್ನೂ ಗಲ್ಲಿಗೆ ಏರ್ಸಿಬಿಡಬೇಕು ಅನ್ನೋ ಸಿಡಿಮಿಡಿ ತಾರಕಕ್ಕೇರಿ, ಬಂದಿರುವ ಉದ್ದೇಶವನ್ನೇ ಮರೆತು ಅವರಿವರನ್ನ ಬೈದು ಎಂಜಲನ್ನೆಲ್ಲಾ ಮೈಮೇಲೆ ಹಾರುಸ್ಕಂಡು ಮತ್ತಷ್ಟು ಮೈ-ಮನಸ್ಸುಗಳನ್ನ ಕೊಳಕು ಮಾಡಿಕೊಂಡು ಬಂದುಳಿಯೋದು ಮಾತ್ರ  ಅದೇ ಸಂಗಮಕ್ಕೇ.. ಏನ್ಮಾಡನ ಹೇಳಿ..? 

ಸ್ನಾನದಿಂದ ಬಡತನ ಹೋಗತ್ತಾ? ಟ್ಯಾಕ್ಸ್ ಫ್ರೀ ಆಗತ್ತಾ? ಮನೆ ಸಿಗತ್ತಾ? ಎಂಬಂಥ ಹೇಳಿಕೆಗಳಿಂದ ಹಿಡಿದು, ಎಲ್ಲ ವಸ್ಥೆಯನ್ನ ಬೈಯೋರು, ನಿಂದಿಸೋರು ಇದ್ದೇ ಇರ್ತಾರೆ. ತಲೆ ಕೆಡುಸ್ಕೊಬೇಡಿ. ಒಂದು ಜಾತ್ರೆ, ಒಂದು ಉತ್ಸವ ಅಂದ್ರೆನೇ ಹಾಗಿರತ್ತೆ. ಜನಸ್ತೋಮ ಸೇರಿ ಏನೋ ಒಂದಷ್ಟು ಅವಘಡವಾಗೋದು ಸಹಜ. ನಾವು ತಿರುಪತಿಯನ್ನ ಕಂಡಿಲ್ವಾ..? ಪುರಿ ಜಗನ್ನಾಥೋತ್ಸವ ನೋಡಿಲ್ವಾ..? ಒಂದು ಜಾತ್ರೋತ್ಸವಕ್ಕೇ ಅಷ್ಟಾಗತ್ತೆ ಅಂದ್ರೆ ಇದು ಮಹಾ ಮೇಳ. ಲಕ್ಷವಲ್ಲ ಕೋಟಿಕೋಟಿ ಜನ ಬಂದು ಸೇರುವ ಸ್ಥಳ. ಇಂಥ ಸಂದರ್ಭದಲ್ಲಿ ಸಮಸ್ಯೆಗಳು ಸಹಜ. ಕಾಲ್ತುಳಿತವಾಯ್ತು ಮತ್ತೊಂದಾಯ್ತು ಅಂದ್ರೆ ಕುಂಭಮೇಳವನ್ನೇ ಬೈದ್ರೆ..? 

ಯಾರಿಗೆ ಎಲ್ಲಿ ಸಾವು ಬರ್ದಿದೆಯೋ ಅಲ್ಲಿ ಸಾವುಗಳು ತಪ್ಪಿದ್ದಲ್ಲ. ಬಚ್ಚಲಮನೆಯಲ್ಲಿ ಜಾರಿಬಿದ್ದು ಸತ್ತವರಿದ್ದಾರೆ, ಕುಂಭಮೇಳದಲ್ಲಿ ತುಳಿತಕ್ಕೆ ಬಲಿಯಾದವರೂ ಇದ್ದಾರೆ ಅವರವರ ಕಾಲ ಅಲ್ಲಲ್ಲಿಗೆ ಮುಗಿದಿರತ್ತೆ. ಈ ಸಾವು ಅನ್ನೋದು ಒಂದು ನೆಪದಿಂದ ಬರುವಂಥದ್ದು ಅಷ್ಟೇ.  ಅದೆಲ್ಲದರ ಬಗ್ಗೆ ಕುತರ್ಕಗಳನ್ನು ಮಾಡುತ್ತಾ ಮುಖ್ಯ ಉದ್ದೇಶವನ್ನೇ ಮರೆಯುವುದು ಮೂರ್ಖತನ. ಇಷ್ಟೆಲ್ಲಾ ನಿಂದಿಸಿ, ನೀವಾಳಿಸಿ ಬೆನ್ನು ತಿರುಗಿಸಿಕೊಂಡು ಹೋಗುವ ಇಂಥವರನ್ನೂ ದೇವರು ಅನುಗ್ರಹಿಸಿ ಆಶೀರ್ವದಿಸುತ್ತಾನಲ್ಲದೆ, ಅವರವರ ಮನೆಗೆ ಒಂದು ಕೊಡ ನೀರು ತಗೊಂಡುಹೋಗಕೂ ಅವಕಾಶ ಮಾಡಿಕೊಟ್ಟಿದ್ದಾನೆ..! ದೇವರು ದೊಡ್ಡವನು.

ಹೀಗಾಗಿ ಆತಂಕಕ್ಕೆ ಒಳಗಾಗದೆ ಹೋಗಿಬನ್ನಿ. ಆಗಲೆ ಹೇಳಿದ ಹಾಗೆ ಸಾವು ಒಂದು ನೆಪ. ಆತಂಕಬೇಡ. ಸಾವು ತಪ್ಪಿಸೋದಕ್ಕೆ ಸಾಧ್ಯವೇ ಇಲ್ಲ. ಹಣೆಬರಹ ಗಟ್ಟಿಯಾಗಿದ್ರೆ ಮುಳುಗಿದ್ದೋನು ಎದ್ ಬರ್ತಾನೆ. ಯೋಚಿಸಬೇಡಿ. ಅಲ್ಲಿ ವ್ಯವಸ್ಥೆ ತುಂಬಾ ಚೆನ್ನಾಗೇ ಇದೆ. ಎಷ್ಟು ಕೋಟಿಜನ ಬಂದು ಸಂಗಮದಲ್ಲಿ ನಿಂತರೂ ಜಾಗ ಇದೆ. ಆಕಾಶ ನೋಡೋಕೆ ನೂಕುನುಗ್ಗಲಾ ಅಂತಾರಲ್ಲಾ ಹಾಗೆ ಸ್ನಾನಕ್ಕೂ ಅವಕಾಶ ವಿಶಾಲವಾಗಿದೆ. ಯಾವ ನೂಕುನುಗ್ಗಲೂ ಇಲ್ಲ, ತಳ್ಳಾಟವೂ ಇಲ್ಲ. ತಟಕ್ಕೆ ಬರುವ ಎರಡುಮೂರು ಕಿಲೋಮೀಟರ್ ದೂರದಲ್ಲಿ ಬೇರೆಬೇರೆ ಊರಿಂದ ಬಂದು ಒಂದುಕಡೆ ಸೇರ್ತಾರಲ್ಲ ಅಲ್ಲಿ ಜನಸಂದಣಿಯ ಘೋರರೂಪತೆ ಕಾಣತ್ತೆ ಬಿಟ್ರೆ, ಅಲ್ಲಿಂದ ಮುಂದಕ್ಕೆ ಸಂಗಮ ತೀರಕ್ಕೆ ಬರ್ತಾಬರ್ತಾ ಜನ ಚದುರಿಹೋಗ್ತಾರೆ. ಎಲ್ಲೂ ನಿಮಗೆ ಉಸಿರುಕಟ್ಟುವ ವಾತಾವರಣ ಇಲ್ಲ. 

ಅಘೋರಿ ಬಾಬಾನ ಪ್ರೀತಿಯಲ್ಲಿ ಬಿದ್ದ ರಷ್ಯನ್ ಬಾಲೆ: ಬಾಬಾಗೆ ತಪ್ಪಸಿನ ಫಲ ಸಿಕ್ತು ಎಂದ ನೆಟ್ಟಿಗರು

ನೀರನ್ನ ನೋಡಿದ ಕೂಡ್ಲೇ ನಿಮ್ಮ ಕಣ್ಮನಗಳಲ್ಲಿ ಎಲ್ಲ ಕಿರಿಕಿರಿಗಳೂ ದೂರಾಗಿ ಮನಸ್ಸಿನಲ್ಲಿ ತನಗೆತಾನೇ ಒಂದು ದಿವ್ಯಭಾವನೆ ಪ್ರಕಟವಾಗ್ತಾ ನಿಮ್ಮನ್ನ ಆವರಿಸ್ತಾ ಹೋಗತ್ತೆ. ಇನ್ನು ನೀರಿಗೆ ಇಳಿದಮೇಲೆ ಕೇಳಲೇ ಬೇಡಿ ನೀವು ಅಮರರಾದಿರಿ ಅಂತಲೇ ಅರ್ಥ. ಸಂಶಯವೇ ಬೇಡ. ಫೆಬ್ರವರಿ 26 ರ ವರೆಗೆ ಈ ಪುಣ್ಯಾನುಭವಕ್ಕೆ ಅವಕಾಶ ಇದೆ. ನಿಮ್ಮಲ್ಲಿ ಒಂದು ಬದಲಾವಣೆ ಬೇಕಿದ್ದರೆ, ನೀವೂ ಪೂರ್ಣಕುಂಭದ ದಿವ್ಯಾನುಭವಕ್ಕೆ ಒಳಗಾಗಬೇಕಿದ್ದರೆ ಸರ್ವ ಪ್ರಯತ್ನಪಟ್ಟು ಹೋಗಿಬನ್ನಿ. ಆತ್ಮೀಯರೇ ಇದು ಬರೀ ಸ್ನಾನವಲ್ಲ, ನಮ್ಮ ಸನಾತನ ಸಂಸ್ಕೃತಿಯಲ್ಲಿ ಸ್ನಾನಂ ಧರ್ಮ: ಸನಾತನ: ಅಂತ ಕರೆದಿದ್ದಾರೆ. ಹಾಗಂದರೆ ಸನಾತನ ಧರ್ಮದಲ್ಲಿ ಸ್ನಾನವೂ ಧರ್ಮದ ಒಂದು ಭಾಗ. ಈ ಧರ್ಮ ಪಾಲನೆಗಾಗಿಯೇ ಇಡೀ ವಿಶ್ವ ಹಾತೊರೆದುಬರುತ್ತಿರುವುದು..! ಮತ್ತೂ ಇದನ್ನೇ ವಿಶ್ವಗುರುತ್ವ ಅನ್ನೋದು.

PREV
click me!

Recommended Stories

Bhatkal: ಮರ ಏರಿ ಹರಕೆ ತೀರಿಸುವ ವಿಶಿಷ್ಟ ಆಚರಣೆಗೆ ಸಾಕ್ಷಿಯಾದ ಶೇಡಬರಿ ಜಾತ್ರೆ
Zodiac Love: ನಿಮ್ಮ ಜನ್ಮರಾಶಿಯ ಪ್ರೀತಿಯ ಭಾಷೆ ಇದು!