ಸಾರು ಮಾಡೋ ರೆಸಿಪಿ ಹೇಳ್ಕೊಡೋ ಬಾಲ ಬಾಣಸಿಗ, ನೀವು ಕಲ್ತ್‌ಕೊಂಡ್ರಾ?

By Reshma RaoFirst Published Jul 4, 2022, 11:19 AM IST
Highlights

ಸಾರು ಮಾಡೋದ್ ಹೇಗೆ ಅಂತ ಗೊತ್ತಾ? ಅದ್ರಲ್ಲೂ ಮೆಣಸಿನ ಸಾರು.. ಇಲ್ಲೊಬ್ರು ಪುಟ್ಟ ಅಡುಗೆ ಭಟ್ಟರಿದ್ದಾರೆ, ಅವ್ರ್ ಹೇಳ್ಕೊಡ್ತಾರೆ ಕೇಳಿ.. 

ಇಷ್ಟು ಮುದ್ದಾಗಿ ಸಾರು ಮಾಡೋದನ್ನು ನಿಮ್ಗೆ ಯಾರೂ ಹೇಳ್ಕೊಟ್ಟಿರೋಕೆ ಸಾಧ್ಯವಿಲ್ಲ.. ಅದೂ ಖಾರ ಖಾರ ಬೆವರಿಳಿಸೋ ಮೆಣಸಿನ ಸಾರು. 
ಜೀರ್ಗೆ, ಕಾಳ್ಮೆಣ್ಸು ಚೆಂದ ಹುರ್ದು.. ಬಿಲ್ಪತ್ರೆ ಹಾಕ್ಬಿಟ್ಟು ಸಾರು ಮಾಡೋದನ್ನು ಯಾವುದೋ ದೊಡ್ಡಜ್ಜಿ ಹೇಳ್ದಂಗೆ ಹೇಳೋ ಈ ಪೋರ ಸಧ್ಯ ಸಾಮಾಜಿಕ ಜಾಲತಾಣ ಬಳಕೆದಾರರ ಮನ ಗೆದ್ದಿದ್ದಾನೆ. 
ಸಾರು ಮಾಡೋದನ್ನು ಈ ಪುಟಾಣಿ ಅಡುಗೆ ಭಟ್ಟರ ಬಾಯಲ್ಲಿ ಕೇಳಿಯೇ ಅದರ ರುಚಿ ಸವಿಯಬೇಕು. ಬಹಳ ನುರಿತ ಪಾಕಶಾಸ್ತ್ರಜ್ಞನಂತೆ ಪಕ್ಕಾ ಆತ್ಮವಿಶ್ವಾಸದಲ್ಲಿ, ಮಲ್ನಾಡು ಭಾಷೆಯಲ್ಲಿ ಸಾರು ಮಾಡುವುದನ್ನು ಹೇಳಿ ಕೊಡುವ ಈ ಪುಟಾಣಿಯ ಹೆಸರು ಶ್ರೀ ಹರಿ. ವಯಸ್ಸು 4. 

ಕೊಂಚ ನೀರಿಗೆ ಕಡ್ಲೆ ಮೆಂತೆ ಹಾಕಿ ಚೆನ್ನಾಗಿ ಬಾಡಿಸಿ ಕೊತ ಕೊತ ಕುದಿಸಿದರೆ ಸಾರು ಸಾಂಬಾರಾಗುತ್ತೆ ಎಂದು ಈತ ಗಂಭೀರವಾಗಿ, ತಿಳಿದವರಂತೆಯೇ ಹಾವಭಾವ ಮಾಡಿಕೊಂಡು ಹೇಳುವುದನ್ನು ನೋಡಿದಾಗ ನಿಜಕ್ಕೂ ಸಾರು ಮಾಡುವುದು ಹೀಗೇ ಏನೋ ಎನಿಸಿದರೂ ಅಚ್ಚರಿಯಿಲ್ಲ. ಅದ್ರಲ್ಲೂ ಸಾರೆಲ್ಲ ಆದ ಮೇಲೆ ಅದನ್ನು ಲೋಟಕ್ಕೆ ಹಾಕ್ಕೊಂಡು ರುಚಿ ನೋಡಿ ಚೆನಾಗಿದ್ರೆ ಮಾತ್ರ ತಿನ್ನಿ ಎಂದು ಕಡೆಯಲ್ಲಿ ಎಚ್ಚರಿಕೆ ಮಾತು ಬೇರೆ ಹೇಳಿದ್ದಾನೆ. ಕಡೆಗೆ ಆ ಸಾರು ಸಾಂಬಾರಾಗಿ, ಬೀಟ್ರೂಟ್ ಸಾರಾಗಿ, ಪೈನಾಪಲ್ ಸಾರಿನವರೆಗೂ ಬದಲಾಗುತ್ತದೆ. ಆದರೂ, ನಿಜವಾಗಿಯೂ ಇಂಥದೊಂದು ರೆಸಿಪಿ ಇರಬಹುದು ಎನಿಸುವಷ್ಟರ ಮಟ್ಟಿಗೆ ಈ ಪುಟಾಣಿ ಮುಗ್ಧತೆಯ ತನ್ಮಯತೆಯಲ್ಲಿ ಹೇಳುತ್ತಾನೆ. 

ಶಾಪಿಂಗ್‌ ಮಾಡೋದೆ ಈಕೆಯ ಉದ್ಯೋಗ, ದಿನದ ಖರ್ಚು ಭರ್ತಿ 40 ಲಕ್ಷ ರೂಪಾಯಿ !

ಶ್ರೀಹರಿಯ ಈ ವಿಡಿಯೋ ಫೇಸ್ಬುಕ್, ವಾಟ್ಸಾಪ್‌ಗಳಲ್ಲಿ ಸಾವಿರಾರು ಬಾರಿ ಶೇರ್ ಆಗಿದ್ದು, ಎಲ್ಲರ ಮನ ಗೆದ್ದಿದೆ. ಬಹಳಷ್ಟು ಜನ ಈ ಬಾಲ ಬಾಣಸಿಗನ ಪಾಕಜ್ಞಾನ, ಮನೆಯಲ್ಲಿ ಅಡುಗೆ ಮಾಡುವುದನ್ನು ಗಮನಿಸಿದ ರೀತಿ ಮೆಚ್ಚಿದ್ದಾರೆ. ಜೂನಿಯರ್ ನಳ ಮಹಾರಾಜ ಎಂಬ ಬಿರುದನ್ನೂ ಕೆಲವರು ನೀಡಿದ್ದಾರೆ. 

ವಿವರಣೆಯೇ ಇಷ್ಟು ರುಚಿಯಾಗಿರಬೇಕಾದ್ರೆ ಇನ್ನು ಸಾರು ಎಷ್ಟು ರುಚಿಯಾಗಿರಬೇಕು ಎಂದು ಓರ್ವ ಫೇಸ್ಬುಕ್ ಬಳಕೆದಾರರು ಹೇಳಿದ್ದರೆ, ಯಾರೋ ನೀನೂ ಪುಟಾಣಿ ಅಡಿಗೆ ಭಟ್ಟಾ, ಎಂತಾ ನಿರೂಪಣೇ, ಅಭಿನಯ, ತನ್ಮಯತೇ.... ನನಗೆ ಸರಿಯಾಗೇ ಗೊತ್ತಿದೇ ಅನ್ನೋ ಆತ್ಮವಿಶ್ವಾಸ ಅಬ್ಬಬ್ಬ್ಬಾ ಎಂದು ಮತ್ತೋರ್ವರು ಮೆಚ್ಚಿದ್ದಾರೆ. 

ಕೇರಳ ಟ್ರಿಪ್ ಹೋಗೋ ಪ್ಲ್ಯಾನ್ ಇದ್ಯಾ? ಮುನ್ನಾರ್‌ನಲ್ಲಿ ಈ ಪ್ಲೇಸ್ ನೋಡಲು ಮರೀಬೇಡಿ!

ಯಾರು ಈ ಪೋರ?


ಎನ್‌ಎಸ್‌ವಿಕೆಪಿ ಶಾಲೆಯಲ್ಲಿ ಎಲ್‌ಕೆಜಿ ಓದುತ್ತಿರುವ ಶ್ರೀಹರಿ ನೆಮ್ಮಾರಿನ ಶ್ರೀನಿವಾಸ ಮತ್ತು ಸಾಧನಾ ದಂಪತಿಯ ಪುತ್ರ. 'ಕೊರೋನಾ ಸಮಯದಲ್ಲಿ ಊರಿನಲ್ಲಿದ್ದಾಗ ಅಜ್ಜಿ ಮಾಡುತ್ತಿದ್ದ ಅಡುಗೆಯನ್ನು ಗಮನಿಸಿ ತನ್ನದೇ ವಿವರಣೆ ಕಂಡುಕೊಂಡಿದ್ದಾನೆ' ಅಂತಾರೆ ಶ್ರೀಹರಿಯ ತಂದೆ ಶ್ರೀನಿವಾಸ್. ಈ ವಿಡಿಯೋವನ್ನು ಸಹಜವಾಗಿಯೇ ಅವರು ಪೋಸ್ಟ್ ಮಾಡಿದ್ದರೂ ಅದು ವೈರಲ್ ಆಗಿದ್ದು ಅವರಿಗೆ ಖುಷಿ ತಂದಿದೆ. ಈತ ಡಾಕ್ಟರ್ ಬಳಿ ಹೋದಾಗ ಡಾಕ್ಟರಂತೆ, ಅಂಗಡಿಗೆ ಹೋಗಿ ಬಂದಾಗ ಅಂಗಡಿಯವನಂತೆ ನಟಿಸುತ್ತಾ ಆಟ ಆಡುತ್ತಾನೆ. ಅಂತೆಯೇ ಅಜ್ಜಿಯಂತೆ ಸಾರು ಮಾಡಿದ್ದಾನೆ ಎನ್ನುತ್ತಾರೆ ಆತನ ತಂದೆ. 

ಈತನ ವಿಡಿಯೋ ಇನ್ನೂ ನೋಡಿಲ್ಲದವರು, ಸಾರು ಮಾಡುವುದನ್ನು ಕಲಿಯಲು ಈ ವಿಡಿಯೋ ನೋಡಿಕೊಳ್ಳಬಹುದು. 

https://www.facebook.com/nemmar.sreeni/posts/pfbid0RgPdZRAg43gFLC1aM2wYfcLfoJgPNmbMtUmZ4pand9hm8KhsNPjC2nXyCT8hPQ3dl

 

click me!