ನಾಗರ ಪಂಚಮಿ ದಿನದಂದು ಹೆಣ್ಣು ಮಕ್ಕಳು ಕಲ್ಲು ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಚೇಳುಗಳನ್ನು ಹಿಡಿದು ಸಂಭ್ರಮಿಸಿ ಹಬ್ಬ ಆಚರಿಸುತ್ತಾರೆ.
ಎಂ.ಬಿ. ನಾಯಕಿನ್
ಗುರುಮಠಕಲ್ (ಆ.21) : ನಾಗರ ಪಂಚಮಿ ದಿನದಂದು ಹೆಣ್ಣು ಮಕ್ಕಳು ಕಲ್ಲು ನಾಗರಕ್ಕೆ ಹಾಲೆರೆದು ಪೂಜೆ ಸಲ್ಲಿಸುವುದು ಸಾಮಾನ್ಯ. ಆದರೆ ಇಲ್ಲಿ ಮಾತ್ರ ಚೇಳುಗಳನ್ನು ಹಿಡಿದು ಸಂಭ್ರಮಿಸಿ ಹಬ್ಬ ಆಚರಿಸುತ್ತಾರೆ.
undefined
ತಾಲೂಕಿನ ಕಂದಕೂರ ಗ್ರಾಮದಲ್ಲಿರುವ ಕೊಂಡಮ್ಮ ದೇವಿ ಬೆಟ್ಟದ ಮೇಲೆ ಸೋಮವಾರ ಸಂಜೆ ಜನರು ಜಾತ್ರೆಯಂತೆ ಸೇರಿ ಕೊಂಡಮ್ಮ ದೇವಿಗೆ ಪೂಜೆ ಸಲ್ಲಿಸಿ, ಬೆಟ್ಟದ ಕಲ್ಲು ಕೆಳಗಡೆಗೆ ಇರುವ ಚೇಳುಗಳನ್ನು ಹಿಡಿದು ಕೈ ಮತ್ತು ಮೈಮೇಲೆ ಹಾಕಿಕೊಂಡು ಖುಷಿ ಪಡುತ್ತಾರೆ. ತೆಲಂಗಾಣ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಹಾಗೂ ನೆರೆ ಜಿಲ್ಲೆಗಳಿಂದ ಜನಸಾಗರವೆ ಚೇಳಿನ ಸಂಭ್ರಮದಲ್ಲಿ ಬಂದು ಭಾಗವಹಿಸಿ ಆನಂದ ಪಡೆಯುತ್ತಾರೆ.
ನಾಗರ ಪಂಚಮಿ ದಿನ ಚೇಳು ಕಚ್ಚದಿರುವುದು ಇಲ್ಲಿನ ಕೊಂಡಮ್ಮ ದೇವಿ ವಿಶೇಷ. ಸಣ್ಣ ಮಕ್ಕಳಿಂದ ಹಿಡಿದು ಯುವಕರು ಹಾಗೂ ವೃದ್ಧರು ಬೆಟ್ಟದ ಕಲ್ಲುಗಳ ಕೆಳಗಡೆ ಇರುವ ಚೇಳು ಹುಡುಕಿ ಹಿಡಿದು ಕೈ ಮೇಲೆ ಹಾಕಿಕೊಂಡು ಪಂಚಮಿ ಹಬ್ಬ ಆಚರಣೆ ಮಾಡುವ ಸಂಪ್ರದಾಯವಿದೆ.
ಯಾದಗಿರಿ: ನಾಗರಪಂಚಮಿಯಂದು ಇಲ್ಲಿ ಚೇಳಿನ ಜಾತ್ರೆ..!
ಕಂದಕೂರ ಗ್ರಾಮಸ್ಥರು(Kandakuru village) ಸೋಮವಾರ (ಆ.21) ಬೆಳಗ್ಗೆ 9 ಗಂಟೆಗೆ ಆಂಜನೇಯ ದೇವಸ್ಥಾನದಿಂದ ಜಳಕದ ಬಿಂದಿಗೆ ಬೆಟ್ಟದವರೆಗೆ ಮೆರವಣಿಗೆ ನಂತರ ರುದ್ರಾಭಿಷೇಕ, ಪೂಜೆ ರಾತ್ರಿ ಭಜನೆ ಕಾರ್ಯಕ್ರಮ ನಡೆಯಲಿದೆ. ಹೆಣ್ಣು ಮಕ್ಕಳು ಬೆಳಗ್ಗೆ ತೋರಣಗಳಿಂದ ಮನೆ ಸಿಂಗರಿಸಿ ಹೊಸ ಬಟ್ಟೆಧರಿಸಿ, ಸಿಹಿ-ತಿಂಡಿ ಮಾಡಿ, ಬೆಟ್ಟದಲ್ಲಿರುವ ಕೊಂಡಮ್ಮ ದೇವಿ ಅಥವಾ ಕೊಂಡ ಮಹೇಶ್ವರಿ ದೇವಿಗೆ ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ.
ಚೇಳು ಕಚ್ಚಿದರೂ ವಿಷ ಏರುವುದಿಲ್ಲ. ಒಂದು ವೇಳೆ ವಿಷ ಏರಿದರೆ ಕೊಂಡಮಾಯಿ ದೇವಿಯ ಭಂಡಾರ ಹಚ್ಚಿಕೊಂಡರೆ ಕ್ಷಣಮಾತ್ರದಲ್ಲಿ ವಾಸಿಯಾಗುತ್ತದೆ ಎನ್ನುತ್ತಾರೆ ಇಲ್ಲಿನ ಜನ. ಇದು ಕೊಂಡಮಾಯಿ ದೇವಿಯ ಪವಾಡ ಎಂದು ಜನರು ನಂಬಿದ್ದಾರೆ. ಬೇರೆ ಸಮಯದಲ್ಲಿ ಗ್ರಾಮಸ್ಥರಿಗೆ ಕಚ್ಚಬಾರದು ಎನ್ನುವ ದೃಷ್ಟಿಯಿಂದ ಪ್ರತಿ ವರ್ಷ ಚೇಳು ಆರಾಧಿಸಲಾಗುತ್ತದೆ. ರಾಜ್ಯದಲ್ಲಿ ಎಲ್ಲಿಯೂ ಇಲ್ಲದಂತಹ ಒಂದು ವಿಶೇಷ ಆಚರಣೆ ನಮ್ಮ ಗ್ರಾಮದಲ್ಲಿ ನಡೆಯುವುದು ವಿಶೇಷ ಎನ್ನುತ್ತಾರೆ ಭಕ್ತರು.
ಕಂದಕೂರ ಗ್ರಾಮದ ಕೊಂಡಮ್ಮ ದೇವಿ ಬೆಟ್ಟದಲ್ಲಿ ಚೇಳು ಹಿಡಿದು ಸಂಭ್ರಮಿಸುವುದೇ ಒಂದು ಹಬ್ಬದ ಸಂಭ್ರಮವಾಗಿದೆ. ಇಲ್ಲಿನ ಮಣ್ಣಿನ ಗುಣಧರ್ಮದಿಂದ ಚೇಳುಗಳು ಹಬ್ಬದ ದಿನ ಕಚ್ಚದಿರುವುದು ಒಂದು ಮಹಿಮೆ ಆಗಿದೆ.
- ಶ್ರೀ ಶಾಂತವೀರ ಗುರುಮುರುಘ ರಾಜೇಂದ್ರ ಮಹಾಸ್ವಾಮೀಜಿ, ಖಾಸಮಠ, ಗುರುಮಠಕಲ್
ಮಣ್ಣಿನ ಗುಣಧರ್ಮ ಜತೆಗೆ ಕೆಲವು ಚೇಳುಗಳಲ್ಲಿ ವಿಷ ಇರುವುದಿಲ್ಲ. ಅಂಥ ವಿಷ ಇಲ್ಲದ ಚೇಳುಗಳು ಕಂದಕೂರದಲ್ಲಿ ಕಂಡು ಬಂದಿರಬಹುದು. ಆದರೂ ಧಾರ್ಮಿಕ ನಂಬಿಕೆಯ ವಿಷಯವಾಗಿದೆ.
- ಮಾರುತಿ, ಪ್ರಾಣಿ ಶಾಸ್ತ್ರ ಉಪನ್ಯಾಸಕರು, ರಾಯಚೂರ