ಹಿಂದೂಗಳಲ್ಲಿ ಯಾರದಾದರೂ ಸಾವು ಸಂಭವಿಸಿದಾಗ ಗರುಡ ಪುರಾಣ ಓದುವ ರೂಢಿಯಿದೆ. ಈ ಗ್ರಂಥವನ್ನು ಕೇವಲ ಸಾವಿನ ಸಂದರ್ಭದಲ್ಲಿ ಓದಲು ಕಾರಣವೇನು?
ಹಿಂದೂ ನಂಬಿಕೆಗಳ ಪ್ರಕಾರ, ಗರುಡ(Garuda)ನು ಪಕ್ಷಿಗಳ ರಾಜ ಮತ್ತು ಭಗವಾನ್ ವಿಷ್ಣುವಿನ ವಾಹನ. ಅದಕ್ಕಾಗಿಯೇ ಗರುಡನನ್ನು ಕಶ್ಯಪ ಋಷಿ(Kashyapa Rishi) ಮತ್ತು ಅವನ ಎರಡನೇ ಪತ್ನಿ ವಿನತಳ ಸಂತತಿ ಎಂದು ಕರೆಯಲಾಗುತ್ತದೆ. ಗರುಡನು ಒಮ್ಮೆ ವಿಷ್ಣು(Lord Vishnu)ವಿಗೆ ಮಾನವರ ಸಾವು, ಯಮಲೋಕ ಯಾತ್ರೆ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ಆ ಸಮಯದಲ್ಲಿ ವಿಷ್ಣುವು ಗರುಡನ ಕುತೂಹಲವನ್ನು ಶಾಂತಗೊಳಿಸುತ್ತಾ ಈ ಪ್ರಶ್ನೆಗಳಿಗೆ ಉತ್ತರಿಸಿದನು. ಈ ಪ್ರಶ್ನೋತ್ತರಗಳನ್ನೇ ಗರುಡ ಪುರಾಣದಲ್ಲಿ ಸಂಕಲಿಸಲಾಗಿದೆ. ಸನಾತನ ಧರ್ಮದಲ್ಲಿ ಮರಣಾನಂತರ ಗರುಡ ಪುರಾಣ(Garuda Purana)ವನ್ನು ಕೇಳಬೇಕೆಂಬ ನಿಯಮವಿದೆ.
ಸಾವನ್ನು ಯಾರಿಂದಲೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹುಟ್ಟಿದವರೆಲ್ಲರೂ ಈ ಅಶಾಶ್ವತವಾದ ದೇಹವನ್ನು ತೊರೆದು ಹೋಗಲೇಬೇಕು. ಕೆಲವರು ಹುಟ್ಟುತ್ತಲೇ ಹೋಗುತ್ತಾರೆ, ಮತ್ತೆ ಕೆಲವರು ತುಂಬು ಜೀವನ ನಡೆಸಿ ಹೋಗುತ್ತಾರೆ, ಇನ್ನೂ ಕೆಲವರಿಗೆ ಮಧ್ಯವಯಸ್ಸಿನಲ್ಲಿ ಸಾವು ಬರುತ್ತದೆ. ಪುರಾಣಗಳ ಪ್ರಕಾರ, ಈ ಜನ್ಮದಲ್ಲಿ ಒಳ್ಳೆಯ ಕೆಲಸ ಮಾಡಿ ಪುಣ್ಯ ಸಂಪಾದಿಸಿದವನು ಸ್ವರ್ಗಕ್ಕೆ ಹೋಗುತ್ತಾನೆ. ಕೆಟ್ಟ ಕೆಲಸಗಳನ್ನು ಮಾಡಿದವನು ನರಕಕ್ಕೆ ಹೋಗುತ್ತಾನೆ. ಆದರೆ, ನಿಜವಾಗಿಯೂ ಸಾವಿನ ನಂತರ ಏನಾಗುತ್ತದೆ ಎಂದು ಕಂಡು ಹೇಳಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ, ನಂಬಿಕೆಗಳನ್ನು ಒಪ್ಪಬೇಕು ಇಲ್ಲವೇ ತಿರಸ್ಕರಿಸಬೇಕು- ಎಲ್ಲವೂ ನಮ್ಮ ನಮ್ಮ ಆಯ್ಕೆಯಾಗಿರುತ್ತದೆ.
ನಂಬಿಕೆಗಳ ಪ್ರಕಾರ, ವ್ಯಕ್ತಿ ಸತ್ತ ಬಳಿಕ ನಡೆಸುವ ಅಂತ್ಯಸಂಸ್ಕಾರವು ಆತ್ಮವನ್ನು ಯಾವುದೇ ಸಮಸ್ಯೆಯಿಲ್ಲದೆ ತಲುಪಬೇಕಾದ ಗುರಿಗೆ ತಲುಪಿಸಲು ಸಹಾಯ ಮಾಡುತ್ತದೆ. ಗರುಡ ಪುರಾಣ ಪಠಣ ಕೂಡಾ ಈ ಸಾವಿನ ನಂತರ ಆಚರಿಸುವ ಸಂಪ್ರದಾಯಗಳಲ್ಲೊಂದು.
Vastu Tips: ಯಶಸ್ಸು - ಹಣಕ್ಕಾಗಿ ಈ ದಿಕ್ಕಲ್ಲಿ ನಿದ್ರಿಸಿ
ನರಕದ ವಿಧಗಳು ಮತ್ತು ಚಲನೆಗಳು ನಿಜವೇ?
ಗರುಡ ಪುರಾಣದಲ್ಲಿ ನರಕದ ವಿವಿಧ ಬಗೆಗಳ ಬಗ್ಗೆ ಹೇಳಲಾಗಿದೆ. ಯಾವೆಲ್ಲ ರೀತಿಯ ತಪ್ಪಿಗೆ ಯಾವೆಲ್ಲ ರೀತಿಯ ನರಕದ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ತಿಳಿಸಲಾಗಿದೆ. ಆದರೆ ಅವೆಲ್ಲ ನಿಜವೇ? ಇಲ್ಲ, ಇವು ಸಾಂಕೇತಿಕವಾಗಿವೆ. ಆದರೆ ನಿಜ ಜೀವನದಲ್ಲಿ ಅದೇ ರೀತಿಯ ಪರಿಣಾಮಗಳನ್ನು ಅನುಭವಿಸಬೇಕಾಗಿರುವುದು ವಾಸ್ತವದ ವಿಷಯವಾಗಿದೆ ಮತ್ತು ಈ ಫಲಿತಾಂಶಗಳು ನೈಜ ಮತ್ತು ಮಾನಸಿಕವಾಗಿವೆ. ಗರುಡ ಪುರಾಣದ ಪ್ರಕಾರ, ಮೋಕ್ಷ ಒಂದೇ ಈ ಹುಟ್ಟು ಸಾವಿನ ಸರಪಳಿಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿದ್ದು, ಅದನ್ನು ಪಡೆಯಲು ವ್ಯಕ್ತಿಯು ಸಾಕಷ್ಟು ಪುಣ್ಯದ ಕೆಲಸ ಮಾಡಬೇಕಾಗುತ್ತದೆ.
ಕೇವಲ ಸಾವಿನ ಸಂದರ್ಭದಲ್ಲಿ ಗರುಡ ಪುರಾಣ ಓದುವುದೇಕೆ?
ಗರುಡ ಪುರಾಣವನ್ನು ವಿವರವಾಗಿ ನೋಡಿದರೆ ಎರಡು ಭಾಗಗಳನ್ನಾಗಿ ವಿಭಾಗಿಸಲಾಗಿದೆ. ಮೊದಲನೇ ಭಾಗವು ವಿಷ್ಣುವಿನ ವಿವಿಧ ರೂಪಗಳ ಬಗ್ಗೆ ಹೇಳಿದರೆ, ಎರಡನೇ ಭಾಗವು ಸಾವಿನ ನಂತರ ಆತ್ಮಕ್ಕೇನಾಗುತ್ತದೆ ಎಂಬುದನ್ನು ತಿಳಿಸಿದೆ. ಇದರಲ್ಲಿ ಸಾವಿನ ನಂತರ ನಡೆಸುವ ಆಚರಣೆಗಳು ಹಾಗೂ ಶ್ರಾದ್ಧದ ಪ್ರಾಮುಖ್ಯತೆಯನ್ನೂ ತಿಳಿಸಲಾಗಿದೆ. ಈ ಸಂಸ್ಕಾರ ಆಚರಣೆ ಸಂದರ್ಭದಲ್ಲಿ ಗರುಡ ಪುರಾಣ ಓದುವುದರಿಂದ ಸಾವಿಗೀಡಾದ ವ್ಯಕ್ತಿಯ ಕುಟುಂಬ ಸದಸ್ಯರ ಮನಸ್ಸಲ್ಲಿ ಹುಟ್ಟಿರಬಹುದಾದ ಎಲ್ಲ ಹುಟ್ಟು ಸಾವುಗಳ ಪ್ರಶ್ನೆಗೆ ಉತ್ತರ ದೊರಕುತ್ತದೆ. ತಮಗೇ ಏಕೆ ಈ ನೋವು ಎನ್ನುವವರರು ತಮಗೇಕಲ್ಲ, ಎಲ್ಲವೂ ದೈವ ಚಿತ್ತ ಎಂದು ಬದುಕನ್ನು ನಡೆಸಲು ಪ್ರೇರಣೆಯಾಗುತ್ತದೆ. ಹೀಗಾಗಿ ಹತಾಶ ಮನಸ್ಸಿಗೆ ಬದುಕನ್ನು ಮುಂದುವರೆಸಲು ಸ್ಪೂರ್ತಿ ದೊರೆಯುತ್ತದೆ. ಕೇವಲ ಬದುಕಲು ಮಾತ್ರವಲ್ಲ, ಹೇಗೆ ಬದುಕಬೇಕೆಂಬುದು ಕೂಡಾ ತಿಳಿಯುತ್ತದೆ. ಸರಿಯಾದ ರೀತಿಯಲ್ಲಿ ಬದುಕುವುದರಿಂದ ಸಾವಿನ ನಂತರ ತಾವು ಉತ್ತಮವಾಗಿರಬಹುದು ಎಂಬ ಆಸೆ ಮೊಳಕೆಯೊಡೆಯುತ್ತದೆ. ಜೊತೆಗೆ, ಸಾವಿಗೀಡಾದವರನ್ನು ಸರಿಯಾದ ರೀತಿಯಲ್ಲಿ ಕಳಿಸಿಕೊಟ್ಟ ತೃಪ್ತಿಯೂ ಸಿಗುತ್ತದೆ.
ಸಂಜೆ ದೀಪ ಹಚ್ಚಿದ ಮೇಲೆ ಉಗುರು ತೆಗೀಬಾರ್ದು ಅನ್ನೋದೇಕೆ?
ಹಾಗಾಗಿ, ಗರುಡ ಪುರಾಣವನ್ನು ಕೇವಲ ಸಾವಿನ ಸಂದರ್ಭದಲ್ಲೇ ಓದಬೇಕೆಂದೇನಿಲ್ಲ. ಆದರೆ, ಆಗ ಓದಿದಾಗ ವ್ಯಕ್ತಿಗಳ ಮನಸ್ಸಿನ ಮೇಲೆ ಅದರ ಪರಿಣಾಮ ಹೆಚ್ಚಾಗುತ್ತದೆ. ಗರುಡ ಪುರಾಣವನ್ನು ಸರಿಯಾಗಿ ಅರ್ಥೈಸಿಕೊಂಡರೆ ಮನುಷ್ಯ ಮನುಷ್ಯತ್ವದಿಂದ ಬದುಕುವುದನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ.