ಇಲ್ಲಿ ಹುಟ್ಟೊ ಮಕ್ಕಳಿಗೆ ವರ್ಷಕ್ಕೊಮ್ಮೆ ಮಾತ್ರ ನಾಮಕರಣ!

By Suvarna NewsFirst Published Mar 20, 2022, 11:23 AM IST
Highlights

ಇಲ್ಲಿ ಮಕ್ಕಳು ವರ್ಷದ ಯಾವುದೇ ದಿನ ಜನಿಸಿದರೂ ಹೋಳಿ ಹಬ್ಬದ ದಿನವೇ ಆ ಎಲ್ಲ ಮಕ್ಕಳ ನಾಮಕರಣ ನಡೆಯುತ್ತದೆ. ಎಲ್ಲಿದೆ ಈ ವಿಚಿತ್ರ ಆಚರಣೆ?

ಷಡಕ್ಷರಿ ಕಂಪೂನವರ್‌

ಮನೆಯಲ್ಲಿ ಮಕ್ಕಳು ಹುಟ್ಟಿದ್ರೆ 13 ದಿನಗಳಲ್ಲಿ ಹೆಸ್ರು ಇಡೋದು ವಾಡಿಕೆ. ಕೆಲ ಸಂಪ್ರದಾಯಗಳ ಪ್ರಕಾರ ಜ್ಯೋತಿಷಿ, ಶಾಸ್ತ್ರಿಗಳು ಸೂಚಿಸುವಂತೆ ತಿಂಗಳ ಒಳಗಾಗಿ ಮಗುವಿಗೆ ಹೆಸ್ರು(Name) ಫಿಕ್ಸ್ ಮಾಡಿ ಬಿಡ್ತಾರೆ. ಆದ್ರೆ ವಿಜಯಪುರ(Vijayapura) ಜಿಲ್ಲೆಯ ತಾಂಡಾಗಳಲ್ಲಿ ಜನಿಸುವ ಮಕ್ಕಳಿಗೆ ಹೋಳಿ ಹಬ್ಬಕ್ಕೆ ಮಾತ್ರ ಹೆಸ್ರು ಇಡುತ್ತಾರೆ. ಹೊಳಿ ಹಬ್ಬ ಮುಗಿದ ಮರುದಿನ ಹುಟ್ಟಿದ್ರೂ ಮಕ್ಕಳು ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆಯುತ್ತವೆ.

Latest Videos

ವಿಚಿತ್ರ ಆಚರಣೆ..!
ವಿಜಯಪುರ ಜಿಲ್ಲೆಯ ಬಹುತೇಕ ತಾಂಡಾಗಳಲ್ಲಿ ಇಂಥ ವಿಚಿತ್ರ ಸಂಪ್ರದಾಯ ಬೆಳೆದು ಬಂದಿದೆ. ಇಲ್ಲಿ ಹುಟ್ಟುವ ಮಕ್ಕಳಿಗೆ ವರ್ಷಕ್ಕೊಮ್ಮೆ ಮಾತ್ರ ಹೆಸ್ರು ಇಡ್ತಾರೆ. ಅಯ್ಯೋ ಇದೇನು ಅಂತ ನೀವು ಉದ್ಘಾರ ಎತ್ತಬಹುದು. ಆದ್ರೆ ಇದು ನಿಜ. ಹೋಳಿ(Holi) ಹುಣ್ಣಿಮೆ ಕಳೆದ ನಂತ್ರ ಹುಟ್ಟುವ ಮಕ್ಕಳಿಗೆ ಇಲ್ಲಿ ವರ್ಷ ಪೂರ್ತಿ ಹೆಸರನ್ನೆ ಇಡೋದಿಲ್ಲ. ಬದಲಿಗೆ ಪ್ರತಿ ವರ್ಷ ಬರುವ ಹೋಳಿ ಹುಣ್ಣಿಮೆಯ ದಿನ ಇಲ್ಲಿ ಮಕ್ಕಳಿಗೆ ಹೆಸರಿಡುವ ಕಾರ್ಯ ಮಾಡಲಾಗುತ್ತದೆ. ಕಳೆದ ನೂರಾರು ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯವನ್ನು ಲಂಬಾಣಿ ಸಮುದಾಯದವರು ನಡೆಸಿಕೊಂಡು ಬಂದಿದ್ದಾರೆ.

ನೂರಕ್ಕೂ ಅಧಿಕ ಮಕ್ಕಳಿಗೆ ನಾಮಕರಣ!
ಗಂಡು ಮಗುವಿಗೆ ನಾಮಕರಣ(naming ceremony) ಮಾಡುವ ಮುಂಚೆ ಮಗುವಿನ ತಲೆಗೆ ಕೆಂಪು ಬಟ್ಟೆ ಕಟ್ಟಿ ತಾಂಡಾದ ಹಿರಿಯರ ಸಮಕ್ಷಮ ಹೆಸರಿಡಲಾಗುತ್ತದೆ. ಇಲ್ಲಿ ವರ್ಷಕ್ಕೊಮ್ಮೆ ಹೆಸರಿಡುವ ಕಾರ್ಯ ತುಂಬಾನೇ ವಿಶೇಷವಾಗಿ ನಡೆಯುತ್ತದೆ. ಒಂದೆಡೆ ಸೇರುವ ತಾಂಡಾದ ಪುರುಷರೆಲ್ಲ ಕುಣಿಯುತ್ತಾ, ನಾಮಕರಣ ಶಾಸ್ತ್ರವನ್ನು ಮಾಡ್ತಾರೆ. ಈ ವೇಳೆ ತಾಂಡಾದ ಮಹಿಳೆಯರು ವಿಶೇಷ ಹಾಡುಗಳನ್ನ ಹೇಳುವ ಮೂಲಕ ಮಗುವಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸೋದು ವಿಶೇಷ. ಈ ವರ್ಷ ಅಲ್ಲಾಪೂರ, ಐನಾಪೂರ, ಜಾಲಗೇರಿ ಸೇರಿ ಹಲವು ತಾಂಡಾದಲ್ಲಿ ವರ್ಷ ಪೂರ್ತಿ ಹೆಸರಿಲ್ಲದೆ ಬೆಳೆದ ನೂರಕ್ಕೂ ಅಧಿಕ ಮಕ್ಕಳಿಗೆ ಹೆಸರಿಡಲಾಯಿತು.

Dream Astrology: ಕನಸಲ್ಲಿ ದೆವ್ವ ಕಂಡರೆ ಏನರ್ಥ?

ಮಹಿಳೆಯರ ಸಾಂಪ್ರದಾಯಿಕ ನೃತ್ಯ, ಸಿಹಿ ಪೂರಿ ಊಟ!
ತಾಂಡಾಗಳಲ್ಲಿ ಕಾಮದಹಕ್ಕೂ ಮುನ್ನ ಹುಟ್ಟಿದ ಗಂಡು ಮಗುವಿನ ಜಡೆ ತೆಗೆಯಲಾಗುತ್ತದೆ. ಬಂಧು ಬಾಂಧವರ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಜಡೆ ತೆಗೆದ ನಂತರ ಮಗುವನ್ನು ಕೆಳಗೆ ಕೂರಿಸಿ ಮೇಲಿಂದ ಕೋಲಾಟದ ರೀತಿಯಲ್ಲಿ ಪರಸ್ಪರ ಕೋಲುಗಳನ್ನು ಬಡಿಯಲಾಗುತ್ತದೆ. ಬಳಿಕ ತಾಂಡಾ ಪುರುಷರು ವೃತ್ತಾಕಾರದಲ್ಲಿ ಜಮಾಯಿಸಿ ನೃತ್ಯ ಮಾಡುತ್ತಾರೆ. ಮಹಿಳೆಯರು ನಾವೇನು ಕಮ್ಮಿ ಎಂಬಂತೆ ಸಾಂಪ್ರದಾಯಿಕ ನೃತ್ಯ ಮಾಡುತ್ತಾರೆ. ಇದೇ ವೇಳೆ ಹೆಸರಿಡುವ ಕಾರ್ಯಕ್ರಮಕ್ಕೆಂದೇ ವಿಶೇಷವಾಗಿ ತಯಾರಿಸಲಾದ ಸಿಹಿ ಪೂರಿಯನ್ನು ಹಂಚುತ್ತಾರೆ. ತಾಂಡಾದಲ್ಲಿ ವರ್ಷ ಪೂರ್ತಿ ಹೆಸರಿಡದ ಮಕ್ಕಳಿಗೆ ನಾಮಕರಣ ಕಾರ್ಯ ಮುಗಿದ ಬಳಿಕ ಕಾಮನ ಮೂರ್ತಿಯನ್ನು ದಹನ ಮಾಡುತ್ತಾರೆ. ಕಾಮ ದಹನದ ನಂತ್ರ ಮತ್ಯಾವುದೆ ಮಕ್ಕಳು ಜನಸಿದರೂ ಅವುಗಳ ಹೆಸರಿಡೋದು ಮುಂದಿನ ವರ್ಷ ಹೋಳಿ ಹುಣ್ಣಿಮೆಗೆನೇ.

Weekly Horoscope: ಸಾಡೇಸಾತಿಯಿಂದ ನಲುಗಿರುವ ಈ ರಾಶಿಗೀಗ ಶುಭ ಫಲಗಳ ಆರಂಭ

ಎಲ್ಲೇ ಇದ್ರೂ ತಾಂಡಾಗೆ ಬರಲೇಬೇಕು!
ನೌಕರಿ, ವಲಸೆ ಹೋದ ತಾಂಡಾ ನಿವಾಸಿಗಳು ಪ್ರತಿ ವರ್ಷ ತಾಂಡಾಗೆ ಬಂದು ಹುಟ್ಟಿದ ಮಕ್ಕಳಿಗೆ ನಾಮಕರಣ ಮಾಡಿಕೊಂಡು ಹೋಗೋದು ವಿಶೇಷ. ಈ ದಿನ ಬಂಜಾರಾ ಸಮುದಾಯದ ಕುಟುಂಬಗಳು ದೇಶದ ಯಾವುದೆ ಮೂಲೆಯಲ್ಲಿದ್ದರು ತಮ್ಮ ತಾಂಡಾಗಳಿಗೆ ವಾಪಾಸ್‌ ಬರಲೇ ಬೇಕು.. ತಮ್ಮ ಮಕ್ಕಳಿಗೆ ನಾಮಕರಣ ಆಗಿರದೇ ಹೋಗಿದ್ದರೇ ಇಲ್ಲಿ ಬಂದು ನಾಮಕರಣ ಮಾಡಿಸಿಕೊಂಡು ಹೋಗಲೇ ಬೇಕು. ಇಂಥ ಅಲಿಖಿತ ನಿಮಯ ಬಂಜಾರಾ ತಾಂಡಾಗಳಲ್ಲಿ ಇದೆ. ಇಂಥ ಅಧುನಿಕ ಕಾಲದಲ್ಲು ಲಂಬಾಣಿ ತಾಂಡಾಗಳಲ್ಲಿ ವೈಶಿಷ್ಟ್ಯ ಪೂರ್ಣ ಆಚರಣೆಗಳಿರೋದು ವಿಶೇಷವೇ ಸರಿ..

click me!