ಶ್ರೀಕೃಷ್ಣನನ್ನು ಅನೇಕ ಹೆಸರುಗಳಿಂದ ಕರೆಯಲಾಗುತ್ತದೆ. ಬಾಲ ಗೋಪಾಲ ಭಕ್ತರಿಗೆ ಪ್ರಿಯವಾದ ರೂಪ. ಅದ್ರಲ್ಲೂ ಲಡ್ಡು ಗೋಪಾಲನ ಪೂಜೆಯನ್ನು ಭಕ್ತರು ಭಕ್ತಿಯಿಂದ ಮಾಡ್ತಾರೆ. ಕಾರ್ತಿಕ ಮಾಸದಲ್ಲಿ ಬಾಲ ಕೃಷ್ಣನ ಪೂಜೆ ವಿಧಾನ ಬದಲಾಗುತ್ತದೆ. ನಿಯಮದಂತೆ ಬಾಲ ಕೃಷ್ಣನ ಆರಾಧನೆ ಮಾಡಿದ್ರೆ ಶೀಘ್ರ ಫಲ ಪ್ರಾಪ್ತಿಯಾಗುತ್ತದೆ.
ಅಕ್ಟೋಬರ್ 9 ರಿಂದ ಕಾರ್ತಿಕ ಮಾಸ ಶುರುವಾಗಿದೆ. ಹಿಂದೂ ಧರ್ಮದಲ್ಲಿ ಕಾರ್ತಿಕ ಮಾಸಕ್ಕೆ ವಿಶೇಷ ಮಹತ್ವವಿದೆ. ಕಾರ್ತಿಕ ಮಾಸದಲ್ಲಿ ಶಿವ ಹಾಗೂ ವಿಷ್ಣುವಿನ ಆರಾಧನೆ ಹೆಚ್ಚಾಗಿ ನಡೆಯುತ್ತದೆ. ಸೂರ್ಯನಿಗೆ ಈ ತಿಂಗಳು ಅರ್ಪಿತವಾಗಿದೆ. ಕಾರ್ತಿಕ ಮಾಸ ಹಬ್ಬದ ತಿಂಗಳು. ಈ ಶುಭ ತಿಂಗಳಿನಲ್ಲಿ ದೀಪ ಬೆಳಗುವುದು, ಪವಿತ್ರ ನದಿಯ ಸ್ನಾನ ಹಾಗೂ ಪವಿತ್ರ ಗಿಡಗಳ ಪೂಜೆಗೆ ಆದ್ಯತೆ ನೀಡಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಶ್ರೀಕೃಷ್ಣನ ದಾಮೋದರ ರೂಪವನ್ನು ಪೂಜಿಸಲಾಗುತ್ತದೆ.
ಶ್ರೀಕೃಷ್ಣ (Krishna) ನು ತನ್ನ ಬಾಲ್ಯದಲ್ಲಿ ತುಂಟತನ ಮಾಡ್ತಿದ್ದನಂತೆ. ಆಗ ಆತನ ತಾಯಿ ಯಶೋದೆ (Yashode) ಕೋಪಗೊಂಡು ಕೃಷ್ಣನ ಹೊಟ್ಟೆಗೆ ಹಗ್ಗ ಬಿಗಿದು ಆತನನ್ನು ಕಟ್ಟಿ ಹಾಕಿದ್ದಳಂತೆ. ಇದೇ ಕಾರಣಕ್ಕೆ ಆತನಿಗೆ ದಾಮೋದರ (Damodar) ಎಂಬ ಹೆಸರು ಬಂದಿದೆ ಎನ್ನಲಾಗುತ್ತದೆ. ಕಾರ್ತಿಕ ಮಾಸ (Kartika month) ದಲ್ಲಿಯೇ ಶ್ರೀಕೃಷ್ಣನನ್ನು ಕಟ್ಟಿ ಹಾಕಿದ್ದರಿಂದ ಈ ಮಾಸದಲ್ಲಿ ಕೃಷ್ಣನ ಪೂಜೆ ಕೂಡ ನಡೆಯುತ್ತದೆ. ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಶ್ರೀಕೃಷ್ಣನ ಮೂರ್ತಿ ಇರುತ್ತದೆ. ಆದ್ರೆ ಶ್ರೀಕೃಷ್ಣನ ದಾಮೋದರ ಪ್ರತಿಮೆ ಇಲ್ಲದೆ ಹೋದ್ರೆ ಲಡ್ಡನ್ನು ಹಿಡಿದಿರುವ ಕೃಷ್ಣನ ಪ್ರತಿಮೆಯನ್ನು ನೀವು ಈ ತಿಂಗಳಿನಲ್ಲಿ ಪೂಜೆ ಮಾಡಬಹುದು.
ಲಡ್ಡು ಗೋಪಾಲನ ಪೂಜೆ ಮಾಡುವ ವೇಳೆ ಕೆಲ ವಿಷ್ಯಗಳನ್ನು ತಿಳಿದಿರಬೇಕಾಗುತ್ತದೆ. ಅನೇಕರು ಬೆಳಗ್ಗೆ ಬೇಗ ಎದ್ದು ದೇವರ ಪೂಜೆ ಮಾಡ್ತಾರೆ. ಕೃಷ್ಣನ ಭಕ್ತರು ಬೆಳಿಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು, ಸ್ನಾನ ಮಾಡಿ, ಕೃಷ್ಣನಿಗೆ ಪೂಜೆ ಮಾಡ್ತಾರೆ. ಹಾಗೆಯೇ ರಾತ್ರಿ ಕೂಡ ಕೃಷ್ಣನಿಗೆ ಆರತಿ ಮಾಡ್ತಾರೆ. ಆದ್ರೆ ಕಾರ್ತಿಕ ಮಾಸದಲ್ಲಿ ಲಡ್ಡು ಗೋಪಾಲನ ಪೂಜೆಯ ಸಮಯ ಬದಲಿಸಬೇಕಾಗುತ್ತದೆ.
ಲಡ್ಡು ಗೋಪಾಲ, ಬಾಲ ಕೃಷ್ಣನ ರೂಪ. ಹಾಗಾಗಿ ಅವನ ಪೂಜೆಯನ್ನು ನೀವು ಬ್ರಾಹ್ಮಿ ಮುಹೂರ್ತದಲ್ಲಿ ಮಾಡಬೇಕಾಗಿಲ್ಲ. ನೀವು ಸೂರ್ಯೋದಯದ ನಂತರವೂ ಲಡ್ಡು ಗೋಪಾಲನನ್ನು ಪೂಜಿಸಬಹುದು.
ಕಾರ್ತಿಕ ಮಾಸವೆಂದ್ರೆ ಚಳಿಗಾಲ ಶುರುವಾಗುವ ಸಮಯ. ಹಾಗಾಗಿ ನೀವು ಲಡ್ಡು ಗೋಪಾಲನನ್ನು ಬೇಗ ಏಳಿಸಬೇಕಾಗಿಲ್ಲ. ಆದ್ರೆ ಸಂಜೆ ಬೇಗ ಆರತಿ ಮಾಡಬೇಕು ಎನ್ನುತ್ತಾರೆ ಪಂಡಿತರು. ಚಳಿ ಹೆಚ್ಚಿರುವ ಕಾರಣ ರಾತ್ರಿ 8 ರಿಂದ 9 ಗಂಟೆಯೊಳಗೆ ಲಡ್ಡು ಗೋಪಾಲನಿಗೆ ಆರತಿ ಮಾಡಬೇಕು.
ವಿವಾಹದಲ್ಲಿನ ಅಡೆತಡೆ ನಿವಾರಿಸುತ್ತೆ ಈ ಮದರಂಗಿ !
ಕಾರ್ತಿಕ ಮಾಸದಲ್ಲಿ ಹೀಗಿರಲಿ ಲಡ್ಡು ಗೋಪಾಲನ ಪೂಜೆ: ಭಕ್ತರು ಬಾಲ ಗೋಪಾಲನ ಮೂರ್ತಿಗೆ ಸ್ನಾನ ಮಾಡಿಸುವುದಿದ್ದರೆ ಬೆಚ್ಚಗಿನ ನೀರನ್ನು ಬಳಸಿ. ನೀರಿಗೆ ಕಪ್ಪು ಎಳ್ಳನ್ನು ಹಾಕಿ. ಮೈಗೆ ಸ್ವಲ್ಪ ಎಳ್ಳೆಣ್ಣೆಯನ್ನೂ ಹಚ್ಚಬೇಕು. ಹೀಗೆ ಮಾಡುವುದರಿಂದ ದೇಹದ ಶಾಖ ಹೆಚ್ಚಾಗುತ್ತದೆ. ಸ್ನಾನದ ನಂತ್ರ ಹೊಸ ಬಟ್ಟೆ ಹಾಕಬೇಕು. ಬಟ್ಟೆ ಬೆಚ್ಚಗಿರಬೇಕು. ಗಾದಿಯನ್ನು ಕೂಡ ನೀವು ಹಾಕಬಹುದು. ಚಳಿಗಾಲದಲ್ಲಿ ಲಡ್ಡು ಗೋಪಾಲನಿಗೆ ಬೆಲ್ಲ, ಎಳ್ಳು ಅಥವಾ ಒಣ ಶುಂಠಿಯನ್ನು ಪ್ರಸಾದವಾಗಿ ನೀಡಬೇಕು. ಆರತಿ ಮಾಡಿ, ಕರ್ಪೂರ ಹಚ್ಚಿ, ಲಡ್ಡು ಗೋಪಾಲನ ಪೂಜೆ ಮಾಡಬೇಕು. ಹೀಗೆ ಮಾಡಿದ್ರೆ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸುತ್ತದೆ.
Deepavali Vastu Tips: ಮನೆಯನ್ನು ಹೀಗೆ ಕ್ಲೀನ್ ಮಾಡಿದ್ರೆ ಲಕ್ಷ್ಮೀ ಕೃಪೆ ನಿಮ್ಮ ಮೇಲಿರುತ್ತೆ!
ಲಡ್ಡು ಗೋಪಾಲ ಮನೆಯಲ್ಲಿದ್ದರೆ ಆತನ ಆರತಿ ಬಗ್ಗೆ ಕಾಳಜಿವಹಿಸಬೇಕು. ಸಂಜೆ ಆರತಿಯನ್ನು 5 ಗಂಟೆಗೆ ಅಥವಾ ರಾತ್ರಿ 8 ಗಂಟೆಗೆ ಮಾಡಬೇಕು. ನೈವೇದ್ಯಕ್ಕೆ ಬೆಲ್ಲ ಮತ್ತು ರಾಗಿ ರೊಟ್ಟಿ ಅಥವಾ ಬಿಸಿ ಹಾಲು, ಜೋಳದ ರೊಟ್ಟಿಯನ್ನು ನೀವು ಅರ್ಪಿಸಬೇಕು ಎನ್ನುತ್ತಾರೆ ತಜ್ಞರು.ಲಡ್ಡು ಗೋಪಾಲನ ಮೂರ್ತಿ ದೇವರ ಮನೆಯಲ್ಲಿದ್ದರೆ ಚಳಿಗಾಲದಲ್ಲಿ ಪೂಜೆ ವಿಧಾನವನ್ನು ಬದಲಿಸಬೇಕಾಗುತ್ತದೆ. ಬರೀ ಒಂದು ದಿನವಲ್ಲ, ಕಾರ್ತಿಕ ಮಾಸ ಪೂರ್ಣಗೊಳ್ಳುವವರೆಗೂ ಇದೇ ರೀತಿ ಪೂಜೆ ಮಾಡಿದ್ರೆ ಮಾತ್ರ ಫಲ ಸಿಗಲು ಸಾಧ್ಯ.