
ಶಿರಸಿ: ರಾಜ್ಯಾದ್ಯಂತ ಪ್ರಸಿದ್ಧಿ ಪಡೆದಿರುವ ಶಿರಸಿಯ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವು ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಜಾತ್ರೆಗೆ ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಮಾರಿಕಾಂಬಾ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ ತಿಳಿಸಿದ್ದಾರೆ. ಮಂಗಳವಾರ ನಗರದ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಈ ಬಾರಿ ಜಾತ್ರೆಯ ಗದ್ದುಗೆ ಮಂಟಪವನ್ನು ವಿಶೇಷ ಆಕರ್ಷಣೆಯಾಗಿ ನಿರ್ಮಿಸಲಾಗುತ್ತಿದ್ದು, ಭಕ್ತರಿಗೆ ಯಾವುದೇ ಅಸೌಕರ್ಯ ಉಂಟಾಗದಂತೆ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಜಾತ್ರೆಯ ಪ್ರಯುಕ್ತ ಗದ್ದುಗೆಯಲ್ಲಿ ಮಂಟಪ ನಿರ್ಮಾಣ ಕಾರ್ಯ ಆರಂಭಗೊಂಡಿದ್ದು, ದೇವಿಯ ದರ್ಶನಕ್ಕಾಗಿ ಸರತಿಯಲ್ಲಿ ನಿಲ್ಲುವ ಭಕ್ತರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಪೆಂಡಾಲ್ ಅಳವಡಿಸಲಾಗುತ್ತದೆ. ಭಕ್ತರ ವಸತಿಗಾಗಿ ಮಾರಿಕಾಂಬಾ ಕಲ್ಯಾಣ ಮಂಟಪ ಹಾಗೂ ಯಾತ್ರಿ ನಿವಾಸದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.
ಫೆಬ್ರವರಿ 25ರಿಂದ ಮಾರ್ಚ್ 4ರವರೆಗೆ (ಮಾರ್ಚ್ 3ರ ಚಂದ್ರ ಗ್ರಹಣ ದಿನ ಹೊರತುಪಡಿಸಿ) ಮಾರಿಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಈ ಬಾರಿ ಭಕ್ತರಿಗೆ ಪ್ರಸಾದ ಭೋಜನ ಸ್ವೀಕರಿಸಲು ಜರ್ಮನ್ ಟೆಂಟ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಆರೋಗ್ಯ, ಸಾರಿಗೆ, ಕಂದಾಯ, ನಗರಸಭೆ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಲ್ಲಿ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ ಹಾಗೂ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ. ಭದ್ರತಾ ದೃಷ್ಟಿಯಿಂದ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಜಾತ್ರಾ ಪ್ರದೇಶದ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಸಂಬಂಧಿಸಿದಂತೆ ಮನವಿ ಮಾಡಲಾಗಿದೆ ಎಂದು ಆರ್.ಜಿ. ನಾಯ್ಕ ವಿವರಿಸಿದರು.
ದೇವಿಗೆ ಉಡಿ ಸಮರ್ಪಣೆ ಸೇವೆಗಾಗಿ 8 ಕೇಂದ್ರಗಳನ್ನು ತೆರೆಯಲಾಗುತ್ತದೆ. ಫೆಬ್ರವರಿ 24ರಂದು ರಾತ್ರಿ 11.36ರ ನಂತರ 11.45ರೊಳಗೆ ದೇವಸ್ಥಾನದ ಸಭಾಮಂಟಪದಲ್ಲಿ ದೇವಿಯ ಜಾತ್ರಾ ಕಲ್ಯಾಣ ಪ್ರತಿಷ್ಠೆ ನಡೆಯಲಿದೆ. ಫೆಬ್ರವರಿ 25ರಂದು ಬೆಳಗ್ಗೆ 7.27ರಿಂದ ದೇವಿಯ ರಥಾರೋಹಣ ಮೆರವಣಿಗೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ ನಗರದ ಬಿಡ್ಕಿಬೈಲ್‌ನ ಜಾತ್ರಾ ಸ್ಥಳದ ಪೀಠದಲ್ಲಿ ದೇವಿಯ ಪ್ರತಿಷ್ಠಾಪನೆ ನಡೆಯಲಿದೆ.
ಫೆ. 26ರಿಂದ ಪ್ರತಿದಿನ ಬೆಳಗ್ಗೆ 5 ಗಂಟೆಯಿಂದ ರಾತ್ರಿ 10ರವರೆಗೆ ಹಣ್ಣುಕಾಯಿ, ಕಾಣಿಕೆ, ಹರಕೆ, ತುಲಾಭಾರ ಸೇರಿದಂತೆ ವಿವಿಧ ಸೇವೆಗಳು ನಡೆಯಲಿವೆ. ಮಾರ್ಚ್ 2ರಂದು ಬೆಳಗ್ಗೆ 6ರಿಂದ ಸಂಜೆ 5 ಗಂಟೆಯವರೆಗೆ ಉಡಿಗೆ ಸೇವೆ ನಡೆಯಲಿದೆ. ಮಾರ್ಚ್ 4ರಂದು ಜಾತ್ರಾ ಮುಕ್ತಾಯದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದ್ದು, ಆ ದಿನ ಬೆಳಗ್ಗೆ 10.47ರವರೆಗೆ ಮಾತ್ರ ಸೇವೆಗಳನ್ನು ಸ್ವೀಕರಿಸಲಾಗುತ್ತದೆ.
ಧರ್ಮದರ್ಶಿ ಸುಧೀರ ಹಂದ್ರಾಳ ಮಾತನಾಡಿ, ದೇವಸ್ಥಾನದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸಿದ್ಧತೆ ನಡೆಸಲಾಗಿದ್ದು, ಅನುಮತಿಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಶಾಶ್ವತ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಚಂದ್ರಶಾಲೆ ಹಾಗೂ ಗಂಟೆ ಮಂಟಪಕ್ಕೆ ತಾಮ್ರದ ಹೊದಿಕೆ ಅಳವಡಿಸಲಾಗಿದೆ. ನಮ್ಮ ಅವಧಿಯಲ್ಲಿ ₹7ರಿಂದ ₹8 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಜಾತ್ರಾ ಪರಿಕರಗಳ ಸಂಗ್ರಹಕ್ಕಾಗಿ ದಾಸ್ತಾನು ಕೊಠಡಿಯೂ ನಿರ್ಮಾಣ ಹಂತದಲ್ಲಿದೆ ಎಂದು ತಿಳಿಸಿದರು.
ಮಾರ್ಚ್ 3ರಂದು ಚಂದ್ರ ಗ್ರಹಣವಿದ್ದರೂ ದೇವಿಯ ದರ್ಶನ ಹಾಗೂ ಸೇವೆಗಳಿಗೆ ಅವಕಾಶ ನೀಡಲಾಗುತ್ತದೆ. ಆದರೆ ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಅನ್ನಪ್ರಸಾದ ಹಾಗೂ ಹಣ್ಣುಕಾಯಿ ಸೇವೆ ಇರುವುದಿಲ್ಲ. ಭಕ್ತರಿಗೆ ವಿತರಿಸಲು ಸುಮಾರು 4 ಲಕ್ಷ ಲಡ್ಡುಗಳನ್ನು ತಯಾರಿಸಲಾಗುತ್ತಿದ್ದು, ಈ ಬಾರಿ ಪ್ರತಿ ಲಡ್ಡಿಗೆ ₹30 ಹಾಗೂ ಉಡಿಗೆ ಸೇವೆಗೆ ₹50 ನಿಗದಿಪಡಿಸಲಾಗಿದೆ ಎಂದು ಆರ್.ಜಿ. ನಾಯ್ಕ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿಗಳಾದ ವತ್ಸಲಾ ಹೆಗಡೆ, ಶಿವಾನಂದ ಶೆಟ್ಟಿ, ವ್ಯವಸ್ಥಾಪಕ ಚಂದ್ರಕಾಂತ, ಬಾಬುದಾರ ಪ್ರಮುಖರಾದ ಜಗದೀಶ ಗೌಡ, ರಮೇಶ್ ದಬ್ಬೆ, ಬಸವರಾಜ ಚಕ್ರಸಾಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.