
ಬೆಂಗಳೂರು (ಜ.12): ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯ ಸಡಗರಕ್ಕೆ ನಾಡು ಸಜ್ಜಾಗುತ್ತಿದೆ. ಎಳ್ಳು-ಬೆಲ್ಲ ಸವಿಯುತ್ತಾ, ಪ್ರೀತಿ ಹಂಚುವ ಈ ಸಂಭ್ರಮಕ್ಕೆ ದಿನಾಂಕ ಮತ್ತು ರಜೆಯ ವಿಚಾರದಲ್ಲಿ ಸಾರ್ವಜನಿಕರಲ್ಲಿ ಸಣ್ಣದೊಂದು ಗೊಂದಲ ಮನೆಮಾಡಿದೆ. ಕರ್ನಾಟಕದಲ್ಲಿ ಸಂಕ್ರಾಂತಿ ಹಬ್ಬ ಜ.14ರಂದು ನಡೆಯಲಿದೆ. ಆದರೆ, ಕ್ಯಾಲೆಂಡರ್ ಹಾಗೂ ಸರ್ಕಾರಿ ರಜಾ ಪಟ್ಟಿಯನ್ನು ಗಮನಿಸಿದರೆ ಒಂದು ವ್ಯತ್ಯಾಸ ಕಂಡುಬರುತ್ತದೆ. ಕರ್ನಾಟಕ ಸೇರಿ ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬಕ್ಕೆ ಜ.15ರಂದು ಸರ್ಕಾರದ ರಜೆಯಿದೆ.
'ನಾವು ಯಾವ ದಿನ ಹಬ್ಬ ಮಾಡಬೇಕು?" ಎಂದು ನೀವು ಗೊಂದಲ ಮಾಡಿಕೊಳ್ಳಬೇಡಿ. ಪಂಚಾಂಗದ ಪ್ರಕಾರ ಮಕರ ಸಂಕ್ರಮಣವು ಜನೆವರಿ 14ರಂದೇ ಸಂಭವಿಸುವುದರಿಂದ, ಎಂದಿನಂತೆ ಸಂಕ್ರಾಂತಿ ಹಬ್ಬವನ್ನು ಜ.14ರಂದೇ ಆಚರಣೆ ಮಾಡಬಹುದು. ಆದರೆ, ರಜೆಯ ಮಜಾವನ್ನು ಮಾತ್ರ ಜ.15ರಂದು ಅನುಭವಿಸಬಹುದು. ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಹಬ್ಬದ ಮಾರನೇ ದಿನ ರಜೆ ಸಿಗುತ್ತಿರುವುದು ವಿಶ್ರಾಂತಿ ಪಡೆಯಲು ಅನುಕೂಲಕರವಾಗಿದೆ.
ಇನ್ನು ಪೋಷಕರಿಗೆ ತಮ್ಮ ಮಕ್ಕಳ ಶಾಲೆಯ ಬಗ್ಗೆ ಆತಂಕವಿರುತ್ತದೆ. ಹಾಗಾದರೆ ಮಕ್ಕಳ ಶಾಲೆಗೆ ಯಾವ ದಿನ ರಜೆ ಇರುತ್ತದೆ ಎಂಬ ಚಿಂತೆಯೂ ಬೇಡ. ಸರ್ಕಾರಿ ನಿಯಮದಂತೆ, ಎಲ್ಲರಿಗೂ ಇರುವಂತೆ ಸರ್ಕಾರಿ ದಿನವಾದ ಜ.15ರಂದೇ ರಜೆಯಿದೆ. ಸಾಮಾನ್ಯವಾಗಿ ಅಧಿಕ ವರ್ಷಗಳು (Leap Year) ಬಂದಾಗ ಮಾತ್ರ ಸಂಕ್ರಾಂತಿ ಹಬ್ಬ ಜ.15ರಂದು ಬರುತ್ತದೆ. ಈ ಅಧಿಕ ವರ್ಷಗಳು ಪ್ರತಿ 4 ವರ್ಷಗಳಿಗೊಮ್ಮೆ ಬರುತ್ತದೆ. ನೀವು ಜ.15ರಂದೇ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡಬೇಕು ಎಂದರೆ 2028ನೇ ಇಸವಿಯವರೆಗೆ ಕಾಯಬೇಕು. ಅಲ್ಲಿಯವರೆಗೆ ಸಂಕ್ರಾಂತಿ ಹಬ್ಬ ಜ.14ರಂದೇ ಇರಲಿದೆ.
ಸಂಕ್ರಾಂತಿ ಹಬ್ಬವೆಂದು ಜನರು ಸಾಲು ಸಾಲು ರಜೆಗಳ ಲಾಭ ಪಡೆಯಲು ಸಜ್ಜಾಗುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ಹಬ್ಬದ ಸಮಯದಲ್ಲಿ ಪ್ರವಾಸಿ ತಾಣಗಳು, ದೇವಾಲಯಗಳು ಹಾಗೂ ನೀರು ಹರಿಯುವ ಸ್ಥಳಗಳಿಗೆ ಹೋಗುವುದು ಹೆಚ್ಚಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ ಬಹಳ ಮುಖ್ಯ. ಮಕ್ಕಳನ್ನು ಕರೆದುಕೊಂಡು ದೇವಾಲಯ ಹಾಗೂ ನೀರು ಹರಿಯುವ ಪ್ರವಾಸಿ ತಾಣಗಳಿಗೆ ಹೋದಾಗ ಮಕ್ಕಳ ಬಗ್ಗೆ ಹೆಚ್ಚಿನ ಗಮನವಿರಲಿ. ಪ್ರಮುಖವಾಗಿ ನೀರು ಹರಿಯುವ ಜಾಗಗಳಾದ ನದಿ, ಹಳ್ಳ, ಕೆರೆ, ಕಟ್ಟೆಗಳು, ಜಲಪಾತ ಹಾಗೂ ಸಮುದ್ರ ತಟಗಳಿಗೆ ಹೋದಲ್ಲಿ ಮಕ್ಕಳ ಬಗ್ಗೆ ಹೆಚ್ಚು ನಿಗಾವಹಿಸಿ. ಆಟದ ಖುಷಿಯಲ್ಲಿ ಅಥವಾ ಸೆಲ್ಫಿ ವ್ಯಾಮೋಹದಲ್ಲಿ ಮಕ್ಕಳನ್ನು ಸ್ವತಂತ್ರವಾಗಿ ಬಿಟ್ಟರೆ ಅನಾಹುತಕ್ಕೆ ದಾರಿಯೂ ಆಗಬಹುದು. ಪ್ರಕೃತಿಯ ಸೌಂದರ್ಯವನ್ನು ಸವಿಯುವಾಗ ಎಚ್ಚರಿಕೆ ವಹಿಸುವುದು ಸುಖಕರ ಪ್ರಯಾಣಕ್ಕೆ ನಾಂದಿ ಹಾಡುತ್ತದೆ.
ಸಂಕ್ರಾಂತಿ ಎಂದರೆ ಕೇವಲ ರಜೆಯಲ್ಲ, ಅದು ಸಂಪ್ರದಾಯದ ಸಂಗಮ. ಸಂಕ್ರಾಂತಿ ಹಬ್ಬದಲ್ಲಿ ಸಿಹಿ ಮತ್ತು ಖಾರದ ಪೊಂಗಲ್‌ಗಳು, ಎಳ್ಳು, ಸಕ್ಕರೆ ಅಚ್ಚು ಹಾಗೂ ಕಬ್ಬು ಹಂಚುವುದು ಹೆಂಗಳೆಯರಿಗೆ ಸಂತಸ ಇಮ್ಮಡಿಗೊಳಿಸುತ್ತದೆ. ಮನೆ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿ, ಎಳ್ಳು-ಬೆಲ್ಲ ಬೀರುವುದು ಹಬ್ಬದ ಕಳೆ ಹೆಚ್ಚಿಸುತ್ತದೆ. ಇನ್ನು ಪುರುಷರಿಗೆ ಹೋರಿಗಳನ್ನು, ದನಗಳನ್ನು ಕಿಚ್ಚು ಹಾಯಿಸುವುದು ಸಂಭ್ರಮ ನೂರ್ಮಡಿ ಮಾಡುತ್ತದೆ. ಹಳ್ಳಿಗಳಲ್ಲಿ ಎತ್ತುಗಳನ್ನು ಸಿಂಗರಿಸಿ ಮೆರವಣಿಗೆ ಮಾಡುವುದು ಹಬ್ಬದ ಪ್ರಮುಖ ಆಕರ್ಷಣೆ.
ಒಟ್ಟಾರೆಯಾಗಿ, ನಾಡಿನ ಹಳ್ಳಿ ಹಳ್ಳಿಗಳಲ್ಲಿ ಸಂಕ್ರಾಂತಿ ಸಂಭ್ರಮ ಮನೆ ಮಾಡಿರುತ್ತದೆ. ನಗರದ ಜಂಜಾಟದಿಂದ ದೂರ ಸರಿದು, ಹಳ್ಳಿಯ ಸೊಗಡಿನೊಂದಿಗೆ ಈ ಮಣ್ಣಿನ ಹಬ್ಬವನ್ನು ಬರಮಾಡಿಕೊಳ್ಳಲು ಜನರು ಸಜ್ಜಾಗಿದ್ದಾರೆ. ಹಬ್ಬದ ಸಂತಸವನ್ನು ರಜೆಯೊಂದಿಗೆ ಮಜಾ ಮಾಡಿ.
ಸೂರ್ಯನು ಜನವರಿ 14, 2026 ರಂದು ಮಧ್ಯಾಹ್ನ 3:13ಕ್ಕೆ ಮಕರ ರಾಶಿಗೆ ಸಾಗುತ್ತಾನೆ. ಅಂದರೆ, ಮಕರ ಸಂಕ್ರಾಂತಿ ಪುಣ್ಯ ಕಾಲ ಜನವರಿ 14- ಬುಧವಾರ- ಮಧ್ಯಾಹ್ನ 03:13 ರಿಂದ ಸಂಜೆ 06:15 (03 ಗಂಟೆ 02 ನಿಮಿಷಗಳು). ಪಂಚಾಂಗದ ಪ್ರಕಾರ, ಜನವರಿ 14 ರಂದು ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಅದು ಮಧ್ಯಾಹ್ನ 3:13 ರಿಂದ ಸಂಜೆ 5:45 ರವರೆಗೆ ಇರುತ್ತದೆ. (ಅವಧಿ: 2 ಗಂಟೆ 32 ನಿಮಿಷಗಳು) ಇಲ್ಲದಿದ್ದರೆ, ಮಕರ ಸಂಕ್ರಾಂತಿಯ ಮಹಾ ಶುಭ ಅವಧಿ ಮಧ್ಯಾಹ್ನ 3:13 ರಿಂದ ಸಂಜೆ 4:58 ರವರೆಗೆ ಇರುತ್ತದೆ. ಪವಿತ್ರ ಸ್ನಾನ, ಸೂರ್ಯನಿಗೆ ನೈವೇದ್ಯ, ದಾನ, ಭಕ್ತಿ ಆಚರಣೆಗಳು ಮತ್ತು ಉಪವಾಸ ಮುರಿಯುವುದು ಈ ಸಮಯದಲ್ಲಿ ಮಾತ್ರ ಮಾಡಬೇಕು ಎಂದು ವಿದ್ವಾಂಸರು ಹೇಳುತ್ತಾರೆ.