
ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ಕೃಷ್ಣನ ಜನ್ಮದಿನ. ಭಗವಾನ್ ವಿಷ್ಣು ಕೃಷ್ಣಾವತಾರದಲ್ಲಿ ಭೂಮಿಯಲ್ಲಿ ಕಾಣಿಸಿಕೊಂಡ ಶುಭದಿನ. ಈ ದಿನ ಜಗತ್ತಿನಾದ್ಯಂತ ಕೃಷ್ಣ ಭಕ್ತರು ಗೋಕುಲಾಷ್ಟಮಿ ಹಬ್ಬವನ್ನು ಬಹಳ ಸಂಭ್ರಮ ಮತ್ತು ವಿಜೃಂಭಣೆಯಿಂದ ಆಚರಿಸುತ್ತಾರೆ.
ಶ್ರೀ ಕೃಷ್ಣ ಅಲಂಕಾರ ಪ್ರಿಯ. ಆತನ ಅಲಂಕಾರ ಪ್ರಜ್ಞೆ ಕೂಡಾ ವಿಶಿಷ್ಠವಾಗಿದೆ. ಹಾಗಾಗಿಯೇ ಸಣ್ಣ ನವಿಲುಗರಿ ನೋಡಿದರೂ ಕೃಷ್ಣ ನೆನಪಾಗುತ್ತಾನೆ, ಕೊಳಲು ನೋಡಿದರೂ ಆತನೇ ನೆನಪಾಗುತ್ತಾನೆ.
ತನ್ನ ನೀಲವರ್ಣದ ಮೇಲೆ ವೈಜಯಂತಿ ಮಾಲೆ ಹಾಕಿಕೊಳ್ಳುತ್ತಿದ್ದ ಕೃಷ್ಣ ತಲೆಯಲ್ಲಿ ಸದಾ ನವಿಲುಗರಿ ಧರಿಸುತ್ತಿದ್ದ. ಕೈಲಿ ಕೊಳಲು ಹಿಡಿದಿರುತ್ತಿದ್ದ.
ಕೊಳಲು ಮತ್ತು ನವಿಲು ಗರಿಗಳಿಲ್ಲದೆ ಕೃಷ್ಣನ ರೂಪವು ಅಪೂರ್ಣವಾಗಿದೆ. ಶಾಸ್ತ್ರಗಳ ಪ್ರಕಾರ, ವಿಷ್ಣುವಿನ ಅವತಾರಗಳಲ್ಲಿ, ಕೃಷ್ಣನು ಮಾತ್ರ ನವಿಲುಗರಿಯ ಕಿರೀಟವನ್ನು ಧರಿಸಿದ್ದಾನೆ. ಕನ್ಹಾ ನವಿಲು ಗರಿಯನ್ನು ಧರಿಸುವುದು ಅದರ ಮೇಲಿನ ಪ್ರೀತಿ ಅಥವಾ ಬಾಂಧವ್ಯ ಮಾತ್ರವಲ್ಲ, ದೇವರು ಈ ಮೂಲಕ ಅನೇಕ ಸಂದೇಶಗಳನ್ನು ಸಹ ನೀಡಿದ್ದಾನೆ. ಅವನ ತಲೆಯ ಮೇಲೆ ನವಿಲುಗರಿಯನ್ನು ಅಲಂಕರಿಸಲು ಹಲವು ಕಾರಣಗಳಿವೆ.
ರಾಧೆಯ ಮೇಲಿನ ಪ್ರೀತಿಯ ಸಂಕೇತ
ಕನ್ಹಾ ನವಿಲು ಗರಿಗಳನ್ನು ಹೊಂದಿದ್ದು ರಾಧೆಯ ಮೇಲಿನ ಅವನ ಅಚಲ ಪ್ರೀತಿಯ ಸಂಕೇತವಾಗಿದೆ. ನಂಬಿಕೆಗಳ ಪ್ರಕಾರ, ಒಮ್ಮೆ ರಾಧೆಯು ಕೃಷ್ಣನ ಕೊಳಲಿನ ಮೇಲೆ ನೃತ್ಯ ಮಾಡುತ್ತಿದ್ದಳು, ನಂತರ ಅರಮನೆಯಲ್ಲಿ ಅವಳೊಂದಿಗೆ ನವಿಲುಗಳು ಸಹ ನೃತ್ಯ ಮಾಡಲು ಪ್ರಾರಂಭಿಸಿದವು. ಈ ವೇಳೆ ನವಿಲು ಗರಿ ಕೆಳಗೆ ಬೀಳುತ್ತದೆ. ಶ್ರೀ ಕೃಷ್ಣನು ಅದನ್ನು ಎತ್ತಿಕೊಂಡು ಕೂದಲುಗಳ ನಡುವೆ ಸಿಕ್ಕಿಸಿಕೊಂಡು ಅಲಂಕರಿಸಿಕೊಂಡನು. ಈ ನವಿಲುಗರಿಯನ್ನು ರಾಧೆಯ ಪ್ರೀತಿಯ ಸಂಕೇತವಾಗಿ ಕೃಷ್ಣ ಧರಿಸುತ್ತಾನೆ.
ಬಾತ್ ರೂಂನಲ್ಲಿ ಈ 7 ವಸ್ತುಗಳಿದ್ದರೆ ಕಾಡಬಹುದು ದರಿದ್ರ!
ಕಾಳಸರ್ಪ ಯೋಗ
ನವಿಲು ಮತ್ತು ಹಾವಿನ ನಡುವೆ ದ್ವೇಷವಿದೆ. ಈ ಕಾರಣಕ್ಕಾಗಿಯೇ ಕಾಳಸರ್ಪ ಯೋಗ ಎಂಬ ಅಸುಭ ಯೋಗವಿದ್ದಾಗ ನವಿಲು ಗರಿಗಳನ್ನು ಜೊತೆಗೆ ಇಡಲು ಸಲಹೆ ನೀಡಲಾಗುತ್ತದೆ. ಶ್ರೀ ಕೃಷ್ಣನಿಗೂ ಕಾಲಸರ್ಪ ಯೋಗವಿತ್ತು. ಹಾಗಾಗಿ ಆ ದೋಷದ ಪ್ರಭಾವವನ್ನು ಕಡಿಮೆ ಮಾಡಲು ಶ್ರೀಕೃಷ್ಣನು ಯಾವಾಗಲೂ ನವಿಲು ಗರಿಯನ್ನು ತನ್ನೊಂದಿಗೆ ಇಟ್ಟುಕೊಂಡಿರುತ್ತಾನೆ.
ಶತ್ರುಗಳಿಗೂ ವಿಶೇಷ ಸ್ಥಾನ
ಶ್ರೀ ಕೃಷ್ಣನ ಅಣ್ಣ ಬಲರಾಮ ಶೇಷನಾಗನ ಅವತಾರ. ನವಿಲು ಮತ್ತು ನಾಗ ಪರಸ್ಪರ ಶತ್ರುಗಳು. ಆದರೆ ಕೃಷ್ಣನ ಹಣೆಯಲ್ಲಿರುವ ನವಿಲು ಗರಿಯು ಶತ್ರುಗಳಿಗೂ ವಿಶೇಷ ಸ್ಥಾನವನ್ನು ನೀಡಬೇಕು ಎಂಬ ಸಂದೇಶವನ್ನು ನೀಡುತ್ತದೆ.
ಮಳೆ ದೇವರು
ಮಳೆಗಾಲದಲ್ಲಿ ನವಿಲುಗಳು ಮಳೆ ಮತ್ತು ನೃತ್ಯವನ್ನು ಇಷ್ಟಪಡುತ್ತವೆ. ಸಂಪೂರ್ಣವಾಗಿ ಕಪ್ಪು ಮೋಡಗಳಿಂದ ಆವೃತವಾದ ಆಕಾಶದ ದೃಶ್ಯವು ಅವುಗಳಿಗೆ ಸಂತೋಷವನ್ನು ನೀಡುತ್ತದೆ. ಅಂತೆಯೇ, ಕೃಷ್ಣನು ಕಪ್ಪು ಚರ್ಮದವನಾಗಿರುವುದರಿಂದ ಗಾಢವಾದ, ಮಳೆ-ಭಾರೀ ಮೋಡಗಳನ್ನು ಹೋಲುತ್ತಾನೆ. ನವಿಲುಗಳು ಶ್ರೀಕೃಷ್ಣನನ್ನು ನೋಡಿದಾಗ, ಅವುಗಳಿಗೆ ಮಳೆಯ ನೆನಪಾಗಿ ಸಂತೋಷ ಉಕ್ಕಿ ನೃತ್ಯ ಮಾಡುತ್ತವೆ. ನಂತರ ಕೃತಜ್ಞತೆಯಾಗಿ, ಅವು ತಮ್ಮ ಗರಿಗಳನ್ನು ಅವನಿಗೆ ಅರ್ಪಿಸುತ್ತವೆ. ಅದನ್ನು ಕೃಷ್ಣನು ಸಂತೋಷದಿಂದ ಸ್ವೀಕರಿಸುತ್ತಾನೆ.
ಕೃಷ್ಣನಿಗೆ ಇಷ್ಟವಾಗುವ ಈ ಖಾದ್ಯಗಳು ಜನ್ಮಾಷ್ಟಮಿಯಲ್ಲಿ ಇರಲಿ!
ಪ್ರಕೃತಿಯ ಬಣ್ಣ
ನವಿಲು ಗರಿಯು ಪ್ರಕೃತಿಯ ಎಲ್ಲಾ 7 ಬಣ್ಣಗಳನ್ನು ಹೊಂದಿದೆ. ಇದು ಹಗಲಿನಲ್ಲಿ ನೀಲಿ ಮತ್ತು ರಾತ್ರಿಯಲ್ಲಿ ಕಪ್ಪು ಬಣ್ಣದಲ್ಲಿ ಕಾಣುತ್ತದೆ. ಕೃಷ್ಣ ಪರಮಾತ್ಮನೂ ಈ ಎರಡೂ ಬಣ್ಣಗಳಿಂದ ಗುರುತಿಸಿಕೊಂಡಿದ್ದಾನೆ. ಹಗಲಿನ ನೀಲಿ, ರಾತ್ರಿಯ ಕಪ್ಪನ್ನು ಅವನು ಪ್ರತಿನಿಧಿಸುತ್ತಾನೆ. ಈ ಸಂಕೇತವಾಗಿ ನವಿಲುಗರಿ ಧರಿಸುತ್ತಾನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.