ದೇವ ನಾಮ ಸ್ಮರಣೆ ಮನಸ್ಸಿನ ನೆಮ್ಮದಿಗೆ ಅಗತ್ಯವೇ?

Published : Mar 20, 2025, 04:25 PM ISTUpdated : Mar 20, 2025, 04:47 PM IST
ದೇವ ನಾಮ ಸ್ಮರಣೆ ಮನಸ್ಸಿನ ನೆಮ್ಮದಿಗೆ ಅಗತ್ಯವೇ?

ಸಾರಾಂಶ

ಎಷ್ಟೋ ಜನರು ಅದರಲ್ಲೂ ಯುವಕರು, ದೇವ ನಾಮಗಳ ಉಚ್ಛರಿಸಲೇನೋ ಹಿಂಜರಿಕೆ, ಬೇಸರ, ನಾಚಿಕೊಳ್ಳುವುದನ್ನು ನೋಡುತ್ತೇವೆ! ಅಸಹಜವಲ್ಲ...ಹಾಗಾಗುತ್ತೆ. ಯಾಕೆಂದರೆ ಅಲ್ಲಿ ಒಳಗೇನೇನಿದೆ, ಏನಿಲ್ಲ ಅಂತ ಇನ್ನೂ ಗೊತ್ತಿಲ್ಲ.

- ಹರೀಶ್ ಕಶ್ಯಪ್ 

ಭಗವನ್ನಾಮಸ್ಮರಣೆ ಮನದಲ್ಲಿ ಹೆಚ್ಚಿದಷ್ಟೂ, ನಾಲಗೆಯಿಂದ ಉಚ್ಛಾರ ಮಾಡುವುದು ಸುಲಭ. ಮೊದಲು ಮನದಲ್ಲಿ ಹರಿನಾಮ ಸಂಸ್ಕಾರ ಬರಬೇಕು, ನಮೋಚ್ಛಾರಣ ಆ ಒಳಗಿನಿಂದ ನಾಲಗೆ ಮೂಲಕ ತಾನೇ ಬರುವಂತೆ ಆಗುತ್ತದೆ! ಹೊರಗಿನಿಂದ ಸಾಧು ಸಜ್ಜನ ಸಂಗ, ಅವರಿಂದ ಕಿವಿಗಳಿಗೆ ಕಣ್ಣುಗಳಿಂದ ಶ್ರವಣ, ದರ್ಶನ. ಅದರಿಂದ ಮನಸ್ಸಿಗೆ ಪರಿಣಾಮವಾಗಿ, ಮನಸ್ಸಿನಿಂದ ಶ್ರೀಕೇಶವನ ನೆನೆವುದು ಇದು ಭಾಗ್ಯ ಇದು ಭಾಗ್ಯವಯ್ಯ ಎನಿಸಿದೆ! ಬರಿದೇ ಹರಿ ನಾರಾಯಣ ವಾಸುದೇವ ಅಂತ ನುಡಿಯಲು ತೋರಿದಷ್ಟು ಸುಲಭವಲ್ಲ! ಅದಕ್ಕೆ ಈ ಮೇಲಿನ ಸಾಧನೆಗೆ ಸಂಸ್ಕಾರಕ್ಕೆ ಒಳಗಾಗಬೇಕು. 

ಎಷ್ಟೋ ಜನರು ಅದರಲ್ಲೂ ಯುವಕರು, ದೇವ ನಾಮಗಳ ಉಚ್ಛರಿಸಲೇನೋ ಹಿಂಜರಿಕೆ, ಬೇಸರ, ನಾಚಿಕೊಳ್ಳುವುದನ್ನು ನೋಡುತ್ತೇವೆ! ಅಸಹಜವಲ್ಲ...ಹಾಗಾಗುತ್ತೆ. ಯಾಕೆಂದರೆ ಅಲ್ಲಿ ಒಳಗೇನೇನಿದೆ, ಏನಿಲ್ಲ ಅಂತ ಇನ್ನೂ ಗೊತ್ತಿಲ್ಲ. ಅಂಥ ಸಂಗ ಸಾಹಿತ್ಯ ಸಂಸ್ಕಾರಕ್ಕೆ ಒಳಗಾಗಿಲ್ಲ. ಹಾಗಾಗಿ, ಸುಲಭ ಸುಖ ಮೋಕ್ಷಕ ನಾಮಗಳ ಹೇಳಲು ಇಂದ್ರಿಯಗಳು ಹಿಂಜರಿಯುತ್ತದೆ.  ಜೀವ ಒಳ್ಳೆಯದಿದ್ದರೂ, ಮನಸ್ಸು ಸುಸಂಸ್ಕಾರಗೊಂಡಿಲ್ಲ! ಹೀಗಾಗಿ ಮಕ್ಕಳಿಗೆ ಬಾಲ್ಯದಲ್ಲೇ ನಾಮಸ್ಮರಣೆ, ದೇವರ ಗುರುಗಳ ನಮಸ್ಕಾರ, ಅಹಿಂಸೆ, ಸತ್ಯ, ಶೌಚ, ಆರ್ಜವ (ಸ್ವ ನಿರ್ಭರತೆ) ಧೈರ್ಯ ಇತ್ಯಾದಿ ಸದ್ವಿಚಾರಗಳ ಕಲಿಸಬೇಕು. 

ಆನಂದ ಎನ್ನುವುದು ಮನಸ್ಸಿನಲ್ಲಿಯೇ ಇರುತ್ತೋ, ಮನುಷ್ಯ ಹುಟ್ಟು ದುಃಖಿಯೋ?

ಗಟ್ಟಿಯಾಗಿ ದೇವರ ನಾಮ ಸ್ಮರಿಸುವುದು ನಾಚಿಕೆ ಪಡುವ ವಿಷಯವಲ್ಲ! ಪ್ರಹ್ಲಾದನು ಹೀಗೆ ನಾಚಿಕೆ ಪಟ್ಟು, ಹಿರಣ್ಯಕನ ಭಯದಿಂದ ಇದ್ದಿದ್ದರೆ, ಆ ಮಹಾ ನರಸಿಂಹನು ಓಡೋಡಿ ಬರುತ್ತಿರಲಿಲ್ಲ. ️ಹರಿನಾಮಗಳ ಬಾಯಿ ಬಿಟ್ಟು ಉಚ್ಛರಿಸಿ, ಹಿಂಜರಿಕೆ ಬೇಡ. ಹರಿದಾಸರು ನಾಮ ಸ್ಮರಣೆಯಿಂದ ತಮ್ಮ ಜೀವಮಾನವನ್ನೇ ಸಮಾಜಕ್ಕಾಗಿ ಕೊಟ್ಟು ಹೋಗಿರುವರು.

ಒಂದೆರಡು ಉದಾಹರಣೆ, ಒಡಲ ಜಾಗಟೆ ಮಾಡಿ ನುಡಿವ ನಾಲಿಗೆಯ ಪಿಡಿದು, 
ಢಂಢಂ ಢಣಾ ಢಣಾರೆಂದು ಬಡಿದು ಚಪ್ಪಾಳಿಕ್ಕುತ. 
ಗುರವಸಾರಿಹರಿಯಡಿಂಗರಿಗರೆಲ್ಲರೂ
ಹೊಟ್ಟೆಯನ್ನೇ ಜಾಗಟೆ , ನಾಲಗೆಯನ್ನೇ ಘಂಟೆಯನ್ನಾಗಿಸಿ, 
ಗಟ್ಟಿಯಾಗಿ ಹರಿನಾಮಗಳ ನುಡಿದು ಹಾಡುವುದು (ಡಿಂಗರಗರು - ಶ್ರೀಹರಿದಾಸರ ಸೇವಕರು) ಇದು "ಭಜನೆಯ" "ನಾಮಸ್ಮರಣೆ" ಅನುಸಂಧಾನ ನಮ್ಮ ಪುರಂದರದಾಸರದ್ದು 

ಇನ್ನೊಂದೆಡೆ ಹಾಡುವರು....
ಕಾಲಿಗೆ ಗೆಜ್ಜೆಕಟ್ಟಿ ನೀಲವರ್ಣನ ಗುಣ
ಆಲಾಪಿಸುತ ಬಲು ಓಲಗ ಮಾಡುವಂಥ....
ಮಧುಕರವೃತ್ತಿಎನ್ನದು ಅದು ಬಲು ಚೆನ್ನದು.....
( ಓಲಗ - ಕೂಡಿಕೊಂಡು, ಸಂತೋಷದಿಂದ)(ಮಧುಕರವೃತ್ತಿ - ಹೇಗೆ ಜೇನು ಕೀಟ ಜೇನನ್ನು ಮಾತ್ರವೇ ಅರಸಿ ಸಂಗ್ರಹಿಸಿಕೊಂಡು ಅನ್ಯ ಯಾವ ವೃತ್ತಿಯೂ ಇಲ್ಲದಂತೆ ಇರುತ್ತದೋ...ಹಾಗೆ, ಶ್ರೀಹರಿ ವಾಯುಗಳ ಸೇವೆ(ದಾಸ್ಯಭಾವ), ಹೊರತಾಗಿ ಅನ್ಯ ಯಾವ ವೃತ್ತಿಯೂ ಇಲ್ಲದಂತೆ, ಭಕ್ತರಲ್ಲಿ ಅಂದಂದಿಗೆ ಭಿಕ್ಷೆ ಬೇಡಿ ಅದನ್ನೇ 'ಕೃಷ್ಣಾರ್ಪಣ'ವೆಂದು ಜೀವಿಸುವುದು)

ಈಗ ಇದೆಲ್ಲ ಮಹತ್ವದ ಭಕ್ತಿ ವಿಷಯಗಳ ಇಲ್ಲೇಕೆ ಹೇಳಿದೆ ಅಂದರೆ, ಪೇಜಾವರ ಶ್ರೀಗಳ ಈ ಸಿಂಪಲ್ ವಿಡಿಯೋ ನೋಡಿ ! ಅದಕ್ಕಾಗಿ ಇಷ್ಟು ಹೇಳಬೇಕಾಯಿತು ವೇದ ವೇದಾಂತ ಮಹಾನ್ ಸದ್ವೈಷ್ಣವ ಪರಂಪರಾ ನಿಷ್ಠರೂ, ತಪಸ್ವಿಗಳೂ, ಸಮಾಜದಲ್ಲಿ ಬಹುದೊಡ್ಡ ಸ್ಥಾನದಲ್ಲಿ ವಿರಾಜರೂ ಆಗಿರುವ ಪೇಜಾವರ ಸ್ವಾಮಿಗಳು, ಜನ ಸಾಮಾನ್ಯರ ಉದ್ಧಾರಕ್ಕಾಗಿ ಜನ ಸಾಮಾನ್ಯರಂತೆಯೇ 'ಜೈ ಶ್ರೀ ರಾಮ್' ಅಂತ ಗಟ್ಟಿಯಾಗಿ ಕೂಗಿ ಕರೆ ಕೊಡುತ್ತಿರುವುದು ನೋಡಿ ಮನಸ್ಸು ಅವರ ಮುಗ್ದ ಸ್ನಿಗ್ಧ ಉಪಸ್ಥಿತಿಯಲ್ಲಿ ಕರಗಿ ನಮಿಸಿತು.  ಶ್ರೀರಾಮಜಯರಾಮಜಯಜಯರಾಮ  ಇದು ಶ್ರೀರಾಮತಾರಕಮಂತ್ರ ಎಂದೇ ಪ್ರಸಿದ್ಧಿಯು, ತ್ರಯೋದಶಾಕ್ಷರೀ (13 ಅಕ್ಷರಗಳ) ಎಂದೂ ಪ್ರಸಿದ್ಧ. ಇದನ್ನೇ ಮಹಾದೇವನು ತನ್ನ ಪತ್ನಿ ಪಾರ್ವತಿಗೆ ಉಪದೇಶ ನೀಡಿದ ಮಹಾಮಂತ್ರ ಎನಿಸಿದೆ.

ಇದರೊಂದಿಗೆ, ಹರೇ ಕೃಷ್ಣ ಮಹಾಮಂತ್ರ ಜಪವೂ ಬಹು ಪ್ರಸಿದ್ಧವೇ ಆಗಿದೆ ! 
ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ ರಾಮ ರಾಮ ಹರೇ ಹರೇ ||
ಇದು ಕಲಿಸಂತರಣ(ಕಲಿಯಬಾಧೆ ನಾಶಕ) ಉಪನಿಷತ್ ಸಾರಿದ ಮಹಾಮಂತ್ರ.
ಶೋಡಶಾಕ್ಷರೀ(16 ಅಕ್ಷರ) ಮಂತ್ರ ಅಥವಾ
ದ್ವಾತ್ರಿಂಶತೀ (32 ಅಕ್ಷರ) ಮಂತ್ರವೆಂದೂ ಕರೆವರು.

ಇದರೊಂದಿಗೆ, ಪಂಚಾದಶಾಕ್ಷರೀ(15 ಅಕ್ಷರ)
"ವಿಜಯಮಂತ್ರ"ವೂ ನಿತ್ಯ ಜಪದಲ್ಲಿ ಬಂದಿದೆ.
ಜಯ ರಾಮ ಶ್ರೀ ರಾಮ ಜಯ ಕೃಷ್ಣ ಹರಿನಾಮ
ಹೆರೇರ್ನಾಮ ಜಯತು ಹರೇ ಕೃಷ್ಣ ಜಯಜಯ ||

ಗಣೇಶನ ಕೃಪೆ ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯಮ್‌ನ ರಕ್ಷಿಸಿತ್ತಾ? ಗಣಪನ ವಿಗ್ರಹ ಜೊತೆಗೊಯ್ದಿದ್ದ ಸುನೀತಾ!

ಶ್ರೀರಾಮ ತಾರಕ ಮಂತ್ರ , ಹರೇಕೃಷ್ಣ ಮಂತ್ರ ಮತ್ತು ವಿಜಯಮಂತ್ರ - ನಿತ್ಯವೂ ಎಲ್ಲಿಯೂ ಜಪಿಸುತ್ತ ಪಾಪನಾಶ , ಪುಣ್ಯವಂತರಾಗಬಹುದು. ಮುಖ್ಯವಾಗಿ ಪೇಜಾವರ ಶ್ರೀಗಳ ಈ ಸರಳ ವಿಡಿಯೋ ನೋಡಿ!....ಭಗವನ್ನಾಮಗಳ ಗಟ್ಟಿಯಾಗಿ ಉಚ್ಛರಿಸುವುದು ನಮಗೆಲ್ಲ, ವಿಶೇಷವಾಗಿ ನಮ್ಮ ಮಕ್ಕಳಿಗೆ ಅಭ್ಯಾಸವಾಗಬೇಕು .

 

PREV
click me!

Recommended Stories

ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!
ಈ 3 ರಾಶಿಯ ಪುರುಷರಿಗೆ ಶ್ರೀಮಂತ ಹೆಣ್ಮಕ್ಕಳನ್ನು ಮದುವೆಯಾಗುವ ಅದೃಷ್ಟ ಇದೆ