ಜ್ಯೋತಿಷ್ಯದಲ್ಲಿ ಗಣಗಳು ಹೇಳುತ್ತೆ ನಿಮ್ಮ ಗುಣ, ವಿವಾಹಕ್ಕೂ ಬೇಕು ಗಣ ಸಾಮ್ಯತೆ!

By Suvarna News  |  First Published Jun 18, 2020, 5:06 PM IST

ಜಾತಕ ನೋಡಿ ಮದುವೆ ಮಾಡುವುದರ ಹಿಂದೆ ಕನ್ಯೆ ಮತ್ತು ವರನ ಮುಂದಿನ ಭವಿಷ್ಯಅಡಗಿರುತ್ತದೆ. ಹಾಗೆ ಜಾತಕ ನೋಡುವಾಗ ಹೊಂದಾಣಿಕೆ ಮಾಡುವ ಗುಣಗಳ ಪೈಕಿ ಗಣ ಕೂಟವು ಒಂದು. ಕನ್ಯೆ ಮತ್ತು ವರನದ್ದು ಒಂದೇ ಗಣವಾದರೆ ಉತ್ತಮ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ಬೇರೆ ಬೇರೆ ಗಣವಾದರೆ, ಗಣಗಳು ಹೊಂದಾಣಿಕೆಯಾಗದಿದ್ದಾಗ ಅದು ಮದುವೆಗೆ ಯೋಗ್ಯವಲ್ಲವೇ ಅಥವಾ ಅದಕ್ಕೆ ಬೇರೆ ಮಾರ್ಗವಿದೆಯೇ ಎಂಬ ವಿಷಯಗಳ ಬಗ್ಗೆ ಇಲ್ಲಿ ನೋಡೋಣ.


ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಗಣಗಳ ಪಾತ್ರ ಮಹತ್ವದ್ದು. ಗಣಗಳು ಮೂರು ಅವು ದೇವ ಗಣ, ಮನುಷ್ಯ ಗಣ, ರಾಕ್ಷಸ ಗಣ. ವಿವಾಹಕ್ಕೂ ಮುನ್ನ ಜಾತಕಗಳನ್ನು ಹೊಂದಿಸುವಾಗ ಗಣಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಗಣಗಳ ವಿಧದಂತೆ ಅವುಗಳ ಗುಣ ಸ್ವಭಾವಗಳು ಭಿನ್ನವಾಗಿರುತ್ತದೆ. ಮದುವೆಯಾಗುವ ವರ-ವಧುವಿನ ಜಾತಕದಲ್ಲಿ ಗಣಗಳು ಹೊಂದಾಣಿಕೆಯು ಮುಖ್ಯವಾಗುತ್ತದೆ. 

ಜ್ಯೋತಿಷ್ಯದಲ್ಲಿ ಗಣದ ವಿಶೇಷತೆಗಳು ಮತ್ತು ಯಾವ ನಕ್ಷತ್ರಕ್ಕೆ ಯಾವ ಗಣ?, ಗಣಗಳ ಸ್ವಭಾವಗಳೇನು?, ಮದುವೆಗೆ ಜಾತಕ ಹೊಂದಾಣಿಕೆ ಮಾಡುವಾಗ ಗಣಗಳ ಪ್ರಾಮುಖ್ಯತೆ ಎಷ್ಟು? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳುವುದು ಅವಶ್ಯಕ. ಮೊದಲಿಗೆ ಗಣ ಸ್ವಭಾವಗಳ ಬಗ್ಗೆ ನೋಡೋಣ.



ಮನುಷ್ಯ ಗಣ
ಸಂಸಾರಕ್ಕಾಗಿ ದುಡಿಯುವ ಇವರಿಗೆ ಸಂಬಂಧ, ಸ್ನೇಹಿತರು ಹೀಗೆ ಭಾವನಾತ್ಮಕವಾಗಿರುತ್ತಾರೆ. ಸಾಮಾನ್ಯ ಮನುಷ್ಯರಂತೆ ಇವರ ಜೀವನ. ದುಡಿಮೆಗೆ ಪ್ರಾಮುಖ್ಯತೆ ನೀಡುವ ಇವರು ಯಾರಾದರೂ ಸಹಾಯ ಕೇಳಿದರೆ ತಾವು ಕೆಲಸದಲ್ಲಿ ನಿರತರಾಗಿದ್ದಂತೆ ತೋರ್ಪಡಿಸಿಕೊಳ್ಳುತ್ತಾರೆ. ಹಾಗಂತ ಇವರಲ್ಲೂ ಸಹಾಯ ಮಾಡುವ ಗುಣವನ್ನು ಹೊಂದಿದವರು ಇಲ್ಲವೆಂದಲ್ಲ. ಈ ವಿಚಾರದಲ್ಲಿ ಈ ಗಣದವರು ಮಿಶ್ರಗುಣವನ್ನು ಹೊಂದಿರುತ್ತಾರೆ.

ದೇವ ಗಣ
ಹೆಸರೇ ಹೇಳುವಂತೆ ದೈವಿಕ ಗುಣವನ್ನು ಹೊಂದಿರುತ್ತಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆಯೇ ಇತರರಿಗೆ ಸಹಾಯ ಮಾಡುವ ಗುಣವನ್ನು ಇವರು ಹೊಂದಿರುತ್ತಾರೆ. ಬೇರೆಯವರ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಾರೆ. ಉತ್ತಮ ಮಾರ್ಗದರ್ಶನ ನೀಡುತ್ತಾರೆ. ಕೆಲಸದಲ್ಲಿ ನಿರತರಾಗಿರುವ ಇವರು ಬೇಡದ ವಿಷಯಗಳಿಗೆ ತಲೆಹಾಕುವುದಿಲ್ಲ. ಬೇರೆಯವರ ಬಗ್ಗೆ ಕಾಳಜಿ ಇರುವ ಇವರು, ಮೃದುವಾಗಿ ಮಾತನಾಡುವುದಲ್ಲದೆ, ಉದಾರ ಗುಣವನ್ನು ಹೊಂದಿರುತ್ತಾರೆ.

ಇದನ್ನು ಓದಿ: ವಿವಾಹದ ಬಳಿಕ ಕುಜ ದೋಷವಿದ್ದದ್ದು ತಿಳಿದರೆ ಈ ರೀತಿ ಮಾಡಿ! 

ರಾಕ್ಷಸ ಗಣ
ಹೆಸರು ಹೇಳುವಂತೆ ಇವರು ರಾಕ್ಷಸರಲ್ಲ. ಅತಿಮಾನುಷ ಗುಣವನ್ನು ಹೊಂದಿರುತ್ತಾರೆ. ಸ್ವಾರ್ಥ ಸ್ವಭಾವವನ್ನು ಹೊಂದಿರುತ್ತಾರೆ. ಸಹಾಯ ಮಾಡುವ ಗುಣ ಇವರಲ್ಲಿರುವುದಿಲ್ಲ. ಮೊದಲ ಎರಡು ಗಣಗಳಿಗೆ ಹೋಲಿಸಿದಾಗ ರಾಕ್ಷಸ ಗಣದವರು ಅವರ ಪ್ರಭಾವಶಾಲಿ ಶಕ್ತಿಯ ಉಪಯೋಗ ಪಡೆಯುತ್ತಾರೆ. ಅಲ್ಲದೇ ಸಿಕ್ಸ್ತ್ ಸೆನ್ಸ್ (6ನೇ ಅತೀಂದ್ರಿಯ ಶಕ್ತಿ) ನ  ಅನುಕೂಲ ಪಡೆಯುತ್ತಾರೆ. ನಕಾರಾತ್ಮಕ ಶಕ್ತಿಯನ್ನು ಬೇಗ ಮತ್ತು ಸುಲಭವಾಗಿ ಗುರುತಿಸುತ್ತಾರೆ. ಹಿಂಸಾತ್ಮಕ ಸ್ವಭಾವ ಇವರಲ್ಲಿರುತ್ತದೆ.

ಯಾವ ನಕ್ಷತ್ರಕ್ಕೆ ಯಾವ ಗಣ?

- ದೇವ ಗಣ: ಅಶ್ವಿನಿ, ಮೃಗಶಿರ, ಪುನರ್ವಸು, ಪುಷ್ಯ, ಹಸ್ತ, ಸ್ವಾತಿ, ಅನುರಾಧ, ಶ್ರವಣ, ರೇವತಿ.

- ಮನುಷ್ಯ ಗಣ: ಭರಣಿ, ರೋಹಿಣಿ, ಆರ್ದ್ರಾ, ಪೂರ್ವಫಲ್ಗುಣಿ, ಉತ್ತರಫಲ್ಗುಣಿ, ಪೂರ್ವಾಷಾಢ, ಉತ್ತರಾಷಾಢ, ಪೂರ್ವಾಭಾದ್ರಾ, ಉತ್ತರಾಭಾದ್ರಾ.

- ರಾಕ್ಷಸ ಗಣ: ಕೃತಿಕಾ, ಆಶ್ಲೇಷಾ, ಮಘಾ, ಚಿತ್ರಾ, ವಿಶಾಖ, ಜ್ಯೇಷ್ಠ, ಮೂಲಾ, ಧನಿಷ್ಠ, ಶತಭಿಷ.

ಇದನ್ನು ಓದಿ: ಗರ್ಭಧರಿಸಿದ ನವಮಾಸಕ್ಕಿದೆ ನವಗ್ರಹಗಳ ನಂಟು! 

ವಿವಾಹಕ್ಕೆ ಬೇಕು ಗಣಕೂಟ
ಹುಡುಗ ಮತ್ತು ಹುಡುಗಿಯ ಜಾತಕವನ್ನು ಪರಿಶೀಲಿಸುವಾಗ ಗಣಕೂಟವನ್ನು ನೋಡುತ್ತಾರೆ. ಯಾವ ಗಣದವರು ಮದುವೆಯಾದರೆ ಅನ್ಯೋನ್ಯತೆಯಿಂದ ಬಾಳುತ್ತಾರೆ ಎಂಬುದನ್ನು ನೋಡಲಾಗುತ್ತದೆ. ಜಾತಕ ಹೊಂದಾಣಿಕೆ ಮಾಡುವಾಗ ಇನ್ನು ಅನೇಕ ಬಗೆಯ ವಿಚಾರಗಳನ್ನು ಗಮನದಲ್ಲಿಟ್ಟು ಕೊಳ್ಳಲಾಗುತ್ತದೆ. ಗಣಕೂಟವು ಸಹ ಅವುಗಳಲ್ಲೊಂದು.

ಒಟ್ಟು ಗುಣಕೂಟ ಎಂಟು. ಪ್ರತಿ ಗುಣಕ್ಕೂ ಅಂಕಗಳನ್ನಿಟ್ಟು ಹೊಂದಾಣಿಕೆಯನ್ನು ನೋಡಲಾಗುತ್ತದೆ.ವಿವಾಹಕ್ಕೆ ಕನಿಷ್ಠ  18 ಗುಣಗಳು ಹೊಂದಾಣಿಕೆಯಾಗುವುದು ಅವಶ್ಯಕ. 32 ರಿಂದ 36ಗುಣಗಳು ಹೊಂದಿದರೆ ಅದು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ.

ಗಣಕೂಟಕ್ಕೆ ಗುಣಾಂಕಗಳು
ಕನ್ಯೆ ಮತ್ತು ವರ ಇಬ್ಬರದ್ದು ಒಂದೇ ಗಣವಾದರೆ ಆರು ಅಂಕ. ಕನ್ಯೆಯದ್ದು ಮನುಷ್ಯ ಗಣವಾಗಿ ವರನದ್ದು ದೇವ ಗಣವಾದರೆ ಅದಕ್ಕೆ ಐದು ಅಂಕ. ಅಲ್ಲದೇ ವರನದ್ದು ಮನುಷ್ಯ ಗಣವಾಗಿ ಕನ್ಯೆಯದ್ದು  ದೇವ ಗಣವಾದರೆ ಅದಕ್ಕೂ ಐದು ಅಂಕ. ಮನುಷ್ಯ ಮತ್ತು ರಾಕ್ಷಸ ಅಥವಾ ರಾಕ್ಷಸ ಮತ್ತು ಮನುಷ್ಯ ಗಣವಾದರೆ ಅದಕ್ಕೆ ಒಂದು ಅಂಕ. ರಾಕ್ಷಸ ಗಣ ಮತ್ತು ದೇವ ಗಣದ ವರ ಮತ್ತು ಕನ್ಯೆಯಾದರೆ ಅಂಕ ಶೂನ್ಯ. ಹಾಗೆಯೇ ದೇವ ಗಣದ ವರ ಮತ್ತು ಮನುಷ್ಯ ಗಣದ ಕನ್ಯೆಯಾದರೂ ಅಂಕ ಶೂನ್ಯವೇ ಆಗುತ್ತದೆ.

ಇದನ್ನು ಓದಿ: ಜೂನ್ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಹೀಗಿರತ್ತೆ! 

ಗಣದೋಷದಿಂದಾಗುವ ತೊಂದರೆಗಳು
ಗಣದೋಷದಿಂದ ವಿವಾಹ ನಂತರದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದಂಪತಿಗಳಲ್ಲಿ ವಿರಸ, ಸಾಮರಸ್ಯದ ಕೊರತೆ, ಅನೈತಿಕ ಸಂಬಂಧಗಳ ಸಾಧ್ಯತೆ ಉಂಟಾಗುತ್ತದೆ.

ಗಣದೋಷ ನಗಣ್ಯವಾಗುವುದು ಯಾವಾಗ?

- ಜಾತಕ ಹೊಂದಾಣಿಕೆಗೆ ಅನೇಕ ಗುಣಗಳನ್ನು ಪರಿಶೀಲಿಸಲಾಗುವುದು. ಕನ್ಯೆ ಮತ್ತು ವರನ ರಾಶಿಯ ಅಧಿಪತಿ ಮಿತ್ರರಾಗಿದ್ದಾಗ, ಒಂದೇ ನವಾಂಶವನ್ನು ಹೊಂದಿದ್ದರೆ ಗಣದೋಷವನ್ನು ನಿರ್ಲಕ್ಷ್ಯ ಮಾಡಬಹುದಾಗಿದೆ.

- ಗ್ರಹಮೈತ್ರಿ ಕೂಟ, ರಾಶಿ ಕೂಟಗಳು ಹೊಂದಾಣಿಕೆಯಾದರೆ ಗಣಕೂಟ ಅಶುಭವಾದರೂ ಚಿಂತೆಯಿಲ್ಲ.

Tap to resize

Latest Videos



- ಗ್ರಹ ಮೈತ್ರಿ, ರಜ್ಜು, ನಾಡಿ ಕೂಟಗಳು ಶುಭವಾಗಿದ್ದಲ್ಲಿ ಕನ್ಯೆಯದು ರಾಕ್ಷಸ ಗಣವಾಗಿ ವರನದ್ದು ಮನುಷ್ಯ ಗಣವಾದರೂ ದೋಷವಿಲ್ಲ.

- ಕನ್ಯೆಯ ಜನ್ಮ ನಕ್ಷತ್ರದಿಂದ ವರನ ಜನ್ಮ ನಕ್ಷತ್ರಕ್ಕೆ 14 ನಕ್ಷತ್ರಗಳ ಅಂತರವಿದ್ದಲ್ಲಿ ಗಣ ಕೂಟದ ದೋಷವಿರುವುದಿಲ್ಲ.

ಕನ್ಯೆ ಮತ್ತು ವರನ ಜಾತಕವನ್ನು ಹೊಂದಾಣಿಕೆ ಮಾಡುವಾಗ ಗಣ ಕೂಟದ ಜೊತೆಗೆ ಉಳಿದ ಗುಣಗಳನ್ನು ಗಮನಿಸಿ 36 ಗುಣಗಳಲ್ಲಿ ಕನಿಷ್ಠ 18 ಗುಣಗಳು ಕೂಡಿ ಬಂದರೆ ಮದುವೆಗೆ ಯೋಗ್ಯವೆಂದು ಅರ್ಥ. ಸರಿಯಾದ ರೀತಿಯಲ್ಲಿ ಎಲ್ಲ ಗುಣಗಳ ಹೊಂದಾಣಿಕೆ ಮಾಡಿಯೇ ಜಾತಕ ಹೊಂದಾಣಿಕೆ ಆಗುವುದೋ ಇಲ್ಲವೋ ಎಂಬುದನ್ನು ಹೇಳಬೇಕು. ಕೆಲವು ಗುಣಗಳನ್ನು ನೋಡಿ ಅಂತಿಮ ತೀರ್ಮಾನಕ್ಕೆ ಬರುವುದು ಸರಿಯಲ್ಲ, ಶಾಸ್ತ್ರ ಸಮ್ಮತವಲ್ಲ. 

click me!