ರಂಗು ರಂಗಿನ ಹೋಳಿ ಹಬ್ಬಕ್ಕೆ ಹುಬ್ಬಳ್ಳಿ ನಗರ ರಂಗೇರುತ್ತಿದೆ. ಬಹುತೇಕ ಮಳಿಗೆಗಳಲ್ಲಿ ತರಹೇವಾರಿ ಬಣ್ಣ, ಹಲಗೆ, ಮುಖವಾಡ, ಪಿಚಕಾರಿ ಕಣ್ಮನ ಸೆಳೆಯುತ್ತಿವೆ. ಜನರುಹರ್ಬಲ್ ಬಣ್ಣಗಳಿಗೆ ಮೊರೆ ಹೋಗಿದ್ದಾರೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ.
ಹುಬ್ಬಳ್ಳಿ (ಮಾ.7) ರಂಗು ರಂಗಿನ ಹೋಳಿ ಹಬ್ಬಕ್ಕೆ ಹುಬ್ಬಳ್ಳಿ ನಗರ ರಂಗೇರುತ್ತಿದೆ. ಬಹುತೇಕ ಮಳಿಗೆಗಳಲ್ಲಿ ತರಹೇವಾರಿ ಬಣ್ಣ, ಹಲಗೆ, ಮುಖವಾಡ, ಪಿಚಕಾರಿ ಕಣ್ಮನ ಸೆಳೆಯುತ್ತಿವೆ.
ಮಾರುಕಟ್ಟೆಗೆ ಹಲಗೆಗಳು ಲಗ್ಗೆ ಇಟ್ಟಿದ್ದು, ಹಲಗೆ ಸದ್ದು ಎಲ್ಲೆಡೆಯೂ ಮಾರ್ದನಿಸುತ್ತಿದೆ. ರಂಗಿನಾಟದ ಹೋಳಿ ಹುಣ್ಣಿಮೆಯ ಪ್ರಮುಖ ಆಕರ್ಷಣೆಯೇ ಈ ಹಲಗೆ. ಹಲಗೆಗಳಿಗೆ ಈಗ ಭಾರಿ ಬೇಡಿಕೆ ಬಂದಿದೆ. ಗ್ರಾಹಕರು ವಿವಿಧ ಬಗೆಯ ಹಲಗೆಗಳನ್ನು ಖರೀದಿಸಲು ಮುಗಿಬೀಳುತ್ತಿದ್ದಾರೆ.
Holi 2023 : ಆರ್ಥಿಕ ಕೊರತೆ ನೀಗಿಸಲು ಹೋಳಿ ದಿನ ಇವನ್ನು ಖರೀದಿಸಿ
ಮೊದಲೆಲ್ಲ ಚರ್ಮದ ಹಲಗೆಗಳು ಬಳಕೆಯಲ್ಲಿದ್ದವು. ಆದರೀಗ ಫೈಬರ್, ಪ್ಲಾಸ್ಟಿಕ್ ಹಲಗೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಪ್ರವೇಶಿಸುತ್ತಿವೆ.
ಈಗಾಗಲೇ ನಗರದ ಸಾಯಿಬಾಬಾ ಮಂದಿರ, ದುರ್ಗದ ಬಯಲು, ಜನತಾ ಬಜಾರ, ಎಂ.ಜಿ. ಮಾರ್ಕೆಟ್ ಸೇರಿದಂತೆ ಹಲವೆಡೆ ತರಹೇವಾರಿ ಹಲಗೆಗಳು ಮಾರಾಟ ಹೆಚ್ಚಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವ್ಯಾಪಾರ ಚೆನ್ನಾಗಿದೆ. ದಿನಕ್ಕೆ ಸುಮಾರು .3000 ವ್ಯಾಪಾರ ಆಗುತ್ತದೆ. ಸುತ್ತಮುತ್ತಲಿನ ಊರುಗಳಿಂದ ಜನರು ಆಗಮಿಸಿ ಹಲಗೆ ಖರೀದಿಸುತ್ತಿದ್ದಾರೆ. ಇದರಿಂದಾಗಿ ಮಾರಾಟಗಾರರು ಹರ್ಷದಲ್ಲಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ.
ನಾವು ಮೂಲತಃ ಆಂಧ್ರಪ್ರದೇಶದವರು. ಅಜ್ಜಂದಿರ ಕಾಲದಿಂದಲೂ ಹಲಗೆ ವೃತ್ತಿಯಲ್ಲಿ ತೊಡಗಿದ್ದೇವೆ. ಆಂಧ್ರದಿಂದ ವಲಸೆ ಬಂದು ರಾಜ್ಯದ ಉದ್ದಗಲಕ್ಕೂ ಬಗರಿಕಾರ ಸಮುದಾಯ ಹರಡಿಕೊಂಡಿದೆ. ಹಾವೇರಿ, ಗದಗ, ವಿಜಯಪುರ, ರಾಯಚೂರು, ಕಲಬುರಗಿ ಸೇರಿದಂತೆ ವಿವಿಧೆಡೆ ಜೀವನೋಪಾಯ ಕಂಡುಕೊಂಡಿದ್ದೇವೆ. ನಮ್ಮ ಕುಟುಂಬ ಗದಗನಲ್ಲಿದ್ದು, ಕಳೆದ 12 ವರ್ಷಗಳಿಂದ ಹುಬ್ಬಳ್ಳಿಗೆ ಬಂದು ಹಲಗೆ ವ್ಯಾಪಾರ ಮಾಡಿಕೊಂಡು ಹೋಗುತ್ತೇವೆ. ಹೋಳಿಗೂ ತಿಂಗಳು ಮುಂಚೆ ಬರುತ್ತೇವೆ. ಹಬ್ಬ ಇಲ್ಲಿಯೇ ಆಚರಿಸಿ ವಾಪಸಾಗುತ್ತೇವೆ. ಕುಟುಂಬವನ್ನೆಲ್ಲ ಕಟ್ಟಿಕೊಂಡು ಬರುತ್ತೇವೆ. ಊಟ, ನಿದ್ರೆ, ಸ್ನಾನ, ವ್ಯಾಪಾರವೆಲ್ಲ ರಸ್ತೆಬದಿಯಲ್ಲೇ ಆಗುತ್ತೆ. ವ್ಯಾಪಾರ ಚೆನ್ನಾಗಿದೆ. ಹಲಗೆಗಳು .80ರಿಂದ ಆರಂಭವಾಗಿ .1000 ವರೆಗೂ ದರವಿದೆ ಎನ್ನುತ್ತಾರೆ ಗದುಗಿನ ಶಾಂತವ್ವ ಬಗರಿಕಾರ.
ಹರ್ಬಲ್ ಬಣ್ಣಗಳು:
ನಗರದ ಮಳಿಗೆಗಳಲ್ಲಿ ವಿಶೇಷವಾಗಿ ಈ ಬಾರಿ ಹರ್ಬಲ್ ಬಣ್ಣಗಳು ಬಂದಿವೆ. ಈ ಬಣ್ಣಗಳು ಹೆಚ್ಚು ಅಪಾಯಕಾರಿ ಅಲ್ಲ. ಜತೆಗೆ ಇದನ್ನು ಬೇಗನೆ ತೊಳೆದುಕೊಳ್ಳಬಹುದಾಗಿದೆ. ಹರ್ಬಲ್ ಬಣ್ಣವನ್ನು ಗೆಡ್ಡೆಗಳಿಂದ ತಯಾರಿಸಲಾಗುತ್ತದೆ. ಅರ್ಧ ಕೆಜಿ ಬಣ್ಣದ ದರ .200ಯಿಂದ ಆರಂಭವಾಗುತ್ತದೆ. ಉಳಿದ ಬಣ್ಣಗಳು ಕೆಜಿಗೆ .60 ದರವಿದೆ.
ಹುಬ್ಬಳ್ಳಿಯಷ್ಟೇ ಅಲ್ಲ, ಇಡೀ ರಾಜ್ಯಾದ್ಯಂತ ನಮಗೆ ಆರ್ಡರ್‌ಗಳು ಬರುತ್ತವೆ. ಹೋಳಿ ಆಚರಿಸುವ ಈ ತಿಂಗಳಲ್ಲಿ ಬರೋಬ್ಬರಿ 150 ಟನ್ ಬಣ್ಣ ಮಾರಾಟವಾಗುತ್ತದೆ ಎನ್ನುತ್ತಾರೆ ನಗರದ ಪಾನ್ ಬಜಾರ್‌ನ ವ್ಯಾಪಾರಸ್ಥ ಬಸಲಿಂಗಪ್ಪ ಮರಗಾಲ.
Holi : ರಂಗಿನಾಟದ ಜೊತೆ ಸಮೋಸ ಸಹವಾಸ ಬೇಡ
ಮುಖವಾಡಗಳು .20ರಿಂದ .250ಕ್ಕೆ ಮಾರಾಟವಾದರೆ, ಪಿಚಕಾರಿಗಳು .20ರಿಂದ .160ರ ವರೆಗೆ ದರ ಹೊಂದಿವೆ. ಮುಖವಾಡಕ್ಕಿಂತ ಪಿಚಕಾರಿ, ಬಣ್ಣಗಳೇ ಹೆಚ್ಚು ಮಾರಾಟವಾಗುತ್ತಿವೆ. ಆದರೂ ವ್ಯಾಪಾರ ಚೆನ್ನಾಗಿದೆ ಎನ್ನುತ್ತಾರೆ ಬಣ್ಣದ ವ್ಯಾಪಾರಿ ಅಶೋಕ.