
ಇದುವರೆಗೂ 60 ಕೋಟಿಗೂ ಹೆಚ್ಚು ಮಂದಿ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದು ಪುನೀತರಾಗಿದ್ದಾರೆ. ನೀವು ಆಸ್ತಿರಾಗಿದ್ದರೆ, ಕುಂಭದಲ್ಲಿ ಗಂಗೆಯಲ್ಲಿ ಪುಣ್ಯಸ್ನಾನ ಮಾಡಬೇಕು ಎಂಬುದು ನಿಮ್ಮ ಕನಸು ಆಗಿದ್ದಿರಬಹುದು. ಆದರೆ ಯಾವ್ಯಾವುದೋ ಕಾರಣಗಳಿಂದಾಗಿ ಅದು ಸಾಧ್ಯ ಆಗಿರಲಿಕ್ಕಿಲ್ಲ. ಬೇಸರ ಬೇಡ, ಮನೆಯಲ್ಲೇ ಇದ್ದುಕೊಂಡೂ ಗಂಗಾಸ್ನಾನ ಮಾಡಿದ ಪುಣ್ಯದ ಫಲ ನಿಮಗೆ ಸಿಗಬಹುದು ಎಂದು ಹಿಂದೂ ಧರ್ಮದ ಶಾಸ್ತ್ರಗಳು ಹೇಳುತ್ತವೆ. ಅದು ಹೇಗೆ?
ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಮುಖ್ಯ. ಆದರೆ ಮಹಾ ಕುಂಭದ ಸಮಯದಲ್ಲಿ ಅದರ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚು. 144 ವರ್ಷಗಳ ನಂತರ ನಡೆಯುತ್ತಿರುವ ಮಹಾಕುಂಭಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಮಹಾಕುಂಭದ ಸಮಯದಲ್ಲಿ ಗಂಗಾ ಸ್ನಾನ ಮಾಡುವುದರಿಂದ ಭಕ್ತನ ಎಲ್ಲಾ ಪಾಪಗಳು ದೂರವಾಗುತ್ತವೆ ಮತ್ತು ಮರಣದ ನಂತರ ಅವನು ಜನನ ಮತ್ತು ಮರಣದ ಚಕ್ರದಿಂದ ಮುಕ್ತನಾಗಿ ಮೋಕ್ಷವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಆದರೆ ಮನೆಯಲ್ಲಿಯೂ ಗಂಗಾ ಸ್ನಾನ ಮಾಡಿದ ಪುಣ್ಯವನ್ನು ಪಡೆಯಬಹುದು. ಇದಕ್ಕೆ ಹಲವು ವಿಧಾನಗಳಿವೆ.
1) ಇದಕ್ಕಾಗಿ ಸೂರ್ಯೋದಯಕ್ಕೆ ಸುಮಾರು 1 ಗಂಟೆ 36 ನಿಮಿಷಗಳ ಮೊದಲು ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಬೇಕು. ಇದಕ್ಕಾಗಿ ಮೊದಲು ಗಂಗಾಜಲವನ್ನು ನೀರಿನಲ್ಲಿ ಬೆರೆಸಿ ಗಂಗಾಮಾತೆಯನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ಸ್ನಾನ ಮಾಡಿ. ಸ್ನಾನದ ಸಮಯದಲ್ಲಿ ಗಂಗೆಯನ್ನು ಧ್ಯಾನಿಸಿ. ಹರ ಹರ ಗಂಗೆ ಎಂದು ಜಪಿಸಿ. ಹರನ ಜಟೆಯಿಂದ, ಮಹಾವಿಷ್ಣುವಿನ ಪಾದಗಳಿಂದ ಗಂಗೆ ಇಳಿದು ಬಂದವಳು. ಈ ದೇವತೆಗಳನ್ನು ನೆನೆಯಿರಿ.
2) ನಿಮ್ಮ ಮನೆಯ ಸಮೀಪದಲ್ಲಿರುವ ಯಾವುದೇ ಪುಣ್ಯ ನದಿಯಲ್ಲಿ ಸ್ನಾನ ಮಾಡಬಹುದು. ಸ್ನಾನ ಮಾಡುವಾಗ, ನೀವು ಈ ಮಂತ್ರವನ್ನು ಪಠಿಸಬೇಕು- "ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತೀ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು". ಇದರ ಅರ್ಥ ಹೀಗೆ- 'ಓ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ಮಾತೆಯರೇ, ದಯವಿಟ್ಟು ಈ ನೀರಿನಲ್ಲಿ ಉಪಸ್ಥಿತರಿರಿ ಮತ್ತು ಈ ನೀರನ್ನು ಪವಿತ್ರಗೊಳಿಸಿ" ಹೀಗೆ ಧ್ಯಾನಿಸಿ ಸ್ನಾನ ಮಾಡಿ. ಇದರಿಂದಲೂ ಅನಂತ ಪುಣ್ಯಫಲ ಪ್ರಾಪ್ತಿ.
3) ಮೇಲಿನ ವಿಧಾನದ ಪ್ರಕಾರ ಸ್ನಾನವನ್ನು ಮಾಡಿದ ನಂತರ, ಭಗವದ್ಗೀತೆ, ರಾಮಾಯಣ, ಶಿವ ಪುರಾಣ ಮುಂತಾದ ಪವಿತ್ರ ಗ್ರಂಥಗಳನ್ನು ಓದಿ ಅಥವಾ ಆಲಿಸಿ. ಇದರೊಂದಿಗೆ, ನೀವು ಶಾಹಿ ಸ್ನಾನದ ದಿನಾಂಕಗಳಂದು (ಇದೀಗ ಮುಖ್ಯವಾಗಿ ಬರುವ ಶಿವರಾತ್ರಿಯಂದು) ಮನೆಯಲ್ಲಿ ಪೂರ್ಣ ದಿನ ಉಪವಾಸವನ್ನು ಮಾಡಬಹುದು. ಶಿವನನ್ನು ನೆನೆದು ದಾನ ನೀಡಿ. ಇದು ಜೀವನದಲ್ಲಿ ಸಾಧಕನಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ.
Indian Mythology: ದ್ರೌಪದಿಯ ಸೌಂದರ್ಯಕ್ಕೆ ಮರುಳಾಗಿದ್ದರು ಈ 12 ಮಂದಿ ರಾಜರು!
4) ಮಹಾಕುಂಭದ ನಿಮಿತ್ತದಲ್ಲಿ ದಾನ ಮಾಡುವುದರಿಂದ ಸಾಧಕನಿಗೆ ಶುಭ ಫಲವೂ ದೊರೆಯುತ್ತದೆ. ಸ್ನಾನದ ನಂತರ ನೀವು ಮನೆಯಲ್ಲಿ ಬಡವರು ಮತ್ತು ನಿರ್ಗತಿಕರಿಗೆ ಅನ್ನ, ಬಟ್ಟೆ, ಹಣ ಮತ್ತು ಇತರ ಅಗತ್ಯ ವಸ್ತುಗಳನ್ನು ದಾನ ಮಾಡಬಹುದು. ಬಳಸಿದ ವಸ್ತುಗಳನ್ನು ಕೊಡಬೇಡಿ. ಉಪಯೋಗವಾಗುವಂಥ, ಹಸಿವು ನೀಗಿಸುವಂಥವನ್ನು ಕೊಡಿ.
5) ಅಮೃತ ಸ್ನಾನದ ಪುಣ್ಯವನ್ನು ಪಡೆಯಲು ಸ್ನಾನ ಮಾಡುವಾಗ ಸೋಪು, ಡಿಟರ್ಜೆಂಟ್ ಮತ್ತು ಶಾಂಪೂ ಬಳಸಬೇಡಿ. ಇದರೊಂದಿಗೆ ಪುಣ್ಯ ಸ್ನಾನ ಮಾಡಿದ ನಂತರ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರ ಸೇವನೆಯಿಂದ ದೂರವಿರಿ. ನಿಮ್ಮ ದೇಹವನ್ನು ಶುದ್ಧವಾಗಿ ಇಡುವುದರ ಜೊತೆಗೆ ನಿಮ್ಮ ಆಲೋಚನೆಗಳನ್ನೂ ಶುದ್ಧವಾಗಿಡಿ. ಸ್ನಾನದ ಸಂದರ್ಭದಲ್ಲಿ ಹಾಗೂ ದಿನವಿಡೀ ದೈವಿಕವಾದ ಆಲೋಚನೆಗಳು, ಧ್ಯಾನ, ಮಂತ್ರಪಠನ ಇರಲಿ.
ಮಹಾಶಿವರಾತ್ರಿ ಸ್ನಾನಕ್ಕೆ ಭರ್ಜರಿ ವ್ಯವಸ್ಥೆ; ಮಹಾಕುಂಭದಲ್ಲಿ ಯೋಗಿ ಸರ್ಕಾರದ ದೊಡ್ಡ ಬದಲಾವಣೆ!