Hindu Tradition: ಈ ಆಚರಣೆ ಪೂರ್ಣವಾಗದೆ, ವಧು ಪತ್ನಿಯಾಗೋಲ್ಲ!

By Suvarna News  |  First Published Feb 7, 2023, 3:39 PM IST

ಮದುವೆಯ ವಿವಿಧ ಸಂಪ್ರದಾಯಗಳಲ್ಲಿ ಸಪ್ತಪದಿಗೆ ವಿಶೇಷ ಮಹತ್ವವಿದೆ. ದಂಪತಿಯಾಗುವವರಿಬ್ಬರೂ ಏಳು ಹೆಜ್ಜೆಗಳನ್ನು ಒಟ್ಟಿಗೇ ಇಡುತ್ತಾರೆ. ಈ ಸಂಪ್ರದಾಯದ ಮಹತ್ವವೇನು ಗೊತ್ತಾ?


ಹಿಂದೂ ಧರ್ಮದಲ್ಲಿ ಒಟ್ಟು 16 ಸಂಸ್ಕಾರಗಳನ್ನು ವಿವರಿಸಲಾಗಿದೆ. ಇವುಗಳಲ್ಲಿ ಮದುವೆಯೂ ಒಂದು ಪ್ರಮುಖ ಸಂಸ್ಕಾರ. ಹಿಂದೂ ಧರ್ಮದಲ್ಲಿ ಮದುವೆಯನ್ನು ಕೇವಲ ಗಂಡು ಹೆಣ್ಣಿನ ಸಂಬಂಧವಲ್ಲದೆ, ಎರಡು ಕುಟುಂಬಗಳ ಒಕ್ಕೂಟ ಎಂದು ಪರಿಗಣಿಸಲಾಗುತ್ತದೆ. ವಿವಾಹದಲ್ಲಿ ಹಲವಾರು ಸಂಪ್ರದಾಯಗಳ ಆಚರಣೆ ಇರುತ್ತದೆ. ಈ ಸಂಪ್ರದಾಯಗಳಲ್ಲಿ ಸಪ್ತಪದಿಯನ್ನು ಅತ್ಯಂತ ಪ್ರಮುಖವೆಂದು ಪರಿಗಣಿಸಲಾಗಿದೆ. ಮದುವೆ ವೇಳೆ ವಧು ಹಾಗೂ ವರ ಅಗ್ನಿಯನ್ನು ಸಾಕ್ಷಿಯಾಗಿಸಿಕೊಂಡು ಸಪ್ತಪದಿ ತುಳಿಯುತ್ತಾರೆ.  ಮಹಾಭಾರತದ ಪ್ರಕಾರ, ಸಪ್ತಪದಿಯ ಆಚರಣೆ ಪೂರ್ಣಗೊಳ್ಳದ ಹೊರತು, ಹುಡುಗಿ ಹೆಂಡತಿಯ ಸ್ಥಾನಮಾನವನ್ನು ಪಡೆಯುವುದಿಲ್ಲ. ಅಂದರೆ ಸಪ್ತಪದಿ ತುಳಿದ ನಂತರವಷ್ಟೇ ವಧು ಪತ್ನಿಯಾಗುತ್ತಾಳೆ. ಸಪ್ತಪದಿ ಎಂದರೇನು ಮತ್ತು ಅದರ ನಂತರ ಹೆಂಡತಿಯನ್ನು ಗಂಡನ ಎಡಭಾಗದಲ್ಲಿ ಏಕೆ ಕೂರಿಸಲಾಗುತ್ತದೆ ಎಂದು ತಿಳಿಸುತ್ತೇವೆ.

ಸಪ್ತಪದಿ ಆಚರಣೆ 
ಮದುವೆಯ ಸಮಯದಲ್ಲಿ ವಧು ಮತ್ತು ವರರು ಕೈ ಹಿಡಿದು ಅಗ್ನಿಗೆ ಏಳು ಸುತ್ತುಗಳನ್ನು ಬರುತ್ತಾರೆ. ಈ ಸಂದರ್ಭದಲ್ಲಿ ಒಂದೊಂದು ಹೆಜ್ಜೆಗೂ ಒಂದೊಂದು ಮಂತ್ರವನ್ನು ಪ್ರತಿಜ್ಞೆಯಂತೆ ಹೇಳಲಾಗುತ್ತದೆ. ಈ ಏಳು ಹೆಜ್ಜೆಗಳಿಂದಾಗಿ ವಧುವರರ ದಾಂಪತ್ಯ ಜೀವನ ಆರಂಭವಾಗುತ್ತದೆ. ಈ ಏಳು ಹೆಜ್ಜೆಗಳು ಏಳೇಳು ಜನ್ಮಕ್ಕೆ ಜೊತೆಯಾಗಿರುವ ಪ್ರತಿಜ್ಞೆಯಾಗಿದೆ. ಮೊದಲನೇ ಹೆಜ್ಜೆಯಲ್ಲಿ ಇಬ್ಬರೂ ಕಷ್ಟಸುಖದಲ್ಲಿ ಒಟ್ಟಿಗೇ ಹೆಜ್ಜೆ ಹಾಕುವ ಪ್ರತಿಜ್ಞೆ ಮಾಡುತ್ತಾರೆ. ಎರಡನೇ ಹೆಜ್ಜೆಯಲ್ಲಿ ಸುಖ ಜೀವನ ಮತ್ತು ಮಗುವಿನ ಕುರಿತಾಗಿ ಇಬ್ಬರೂ ಪ್ರತಿಜ್ಞೆ ಮಾಡುತ್ತಾರೆ. ಮೂರನೇ ಹೆಜ್ಜೆಯಲ್ಲಿ ಪರಪುರುಷ ಹಾಗೂ ಪರಹೆಂಗಸು ತಮಗೆ ಸೋದರ ಸೋದರಿ ಸಮಾನರೆಂದು ಪತಿಪತ್ನಿ ಪ್ರತಿಜ್ಞೆ ಮಾಡುತ್ತಾರೆ. ನಾಲ್ಕನೇ ಸುತ್ತಿನಲ್ಲಿ ವಧು ಹಾಗೂ ವರ ತಮ್ಮ ಪ್ರೀತಿ ಹೆಚ್ಚಾಗುತ್ತಾ ಇರಲಿ ಮತ್ತು ಗೌರವವು ಸ್ಥಿರವಾಗಿರಲಿ ಎಂದು ಬಯಸುತ್ತಾರೆ. ಐದನೇ ಸುತ್ತಿನಲ್ಲಿ ಮಕ್ಕಳಿಂದ ಜೀವನ ಸಂತೋಷವಾಗಿರಲಿ ಎಂದು ದಂಪತಿ ಬೇಡಿಕೊಳ್ಳುತ್ತಾರೆ. ಆರನೇ ಸುತ್ತಿನಲ್ಲಿ ಆರೋಗ್ಯಕರ ಮತ್ತು ಕಾಯಿಲೆಮುಕ್ತ ಜೀವನ ಸಿಗಲಿ ಎಂದು ಬಯಸುತ್ತಾರೆ. ಏಳನೇ ಸುತ್ತಿನಲ್ಲಿ ಜೀವನದ ಅಂತ್ಯದ ತನಕ ಜೊತೆಗಿರುವ ಸಂಕಲ್ಪ ಮಾಡುತ್ತಾರೆ. 

Tap to resize

Latest Videos

ಅಯ್ಯಬ್ಬಾ! ಈ ದೇವಾಲಯದಲ್ಲಿ ದೇವರಿಗೆ ಜೀವಂತ ಚೇಳುಗಳ ನೈವೇದ್ಯ

ಇದರ ನಂತರ, ಹೆಂಡತಿಯನ್ನು ಗಂಡನ ಎಡಭಾಗದಲ್ಲಿ ಕುಳಿತುಕೊಳ್ಳುವಂತೆ ಮಾಡಲಾಗುತ್ತದೆ. ಪುರುಷನ ದೇಹದ ಎಡಭಾಗ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ಇದರ ಹಿಂದೆ ಶಕ್ತಿಯು ಶಿವನ ಎಡಭಾಗದಿಂದ ಉದ್ಭವಿಸಿದ ಕಾರಣವೂ ಇದೆ. ಈ ಸಮಯದಿಂದ ಆಕೆ ವರನ ಅರ್ಧಾಂಗಿಯಾಗುತ್ತಾಳೆ. ಈ ಸಪ್ತಪದಿಯ ಆಚರಣೆ ವೇದಗಳ ಕಾಲದಿಂದಲೇ ಇದೆಯಾದರೂ ಅದರ ಅರ್ಥ, ಆ ಸಮಯದಲ್ಲಿ ಮಾಡುವ ಪ್ರತಿಜ್ಞೆಗಳು ಇಂದಿಗೂ ಪ್ರಸ್ತುತವಾಗಿವೆ. ಜೋಡಿಗೆ ಹೇಗೆ ಬಾಳಬೇಕು ಎಂಬುದನ್ನು ತಿಳಿಸಿಕೊಡುತ್ತದೆ. ಈ ಸಂದರ್ಭದಲ್ಲಿ ವರನನ್ನು ಶಿವನಾಗಿಯೂ, ವಧುವನ್ನು ಪಾರ್ವತಿಯಾಗಿಯೂ ಪರಿಗಣಿಸಲಾಗುತ್ತದೆ. ಹಾಗಾಗಿಯೇ ಈ ವಿವಾಹ ಸಮಯಕ್ಕೆ ದೇವಾನುದೇವತೆಗಳನ್ನು, ಹತ್ತಿರದವರನ್ನು ಆಹ್ವಾನಿಸಲಾಗುತ್ತದೆ. 

ಭೀಷ್ಮರು ಹೇಳಿದ ಸಪ್ತಪದಿಯ ಮಹತ್ವ
ಮಹಾಭಾರತದ ಪ್ರಕಾರ, ಭೀಷ್ಮ ಪಿತಾಮಹರು ಬಾಣಗಳ ಹಾಸಿಗೆಯ ಮೇಲೆ ಮಲಗಿದ್ದಾಗ, ಯುಧಿಷ್ಠಿರನಿಗೆ ಅನೇಕ ಪ್ರಾಪಂಚಿಕ ವಿಷಯಗಳ ಜ್ಞಾನವನ್ನು ನೀಡಿದ್ದರು. ವಧು-ವರರು ಸಪ್ತಪದಿ ತುಳಿಯುವವರೆಗೂ ಪತಿ-ಪತ್ನಿಯರಾಗುವುದಿಲ್ಲ ಎಂದು ಭೀಷ್ಮ ಹೇಳಿದ್ದರು. ಸಪ್ತಪದಿ ತುಳಿದ ನಂತರವೇ ಹೆಣ್ಣು ಹೆಂಡತಿಯಾಗುತ್ತಾಳೆ. ಇದರ ನಂತರವೇ ಗಂಡು ಹೆಂಡತಿಯ ಹಕ್ಕುಗಳನ್ನು ಪಡೆಯುತ್ತಾನೆ.

ನಿಮ್ಮ ರಾಶಿ ಬ್ರೇಕಪ್‌ ಮಾಡಿಕೊಳ್ಳಲೇನು ಕಾರಣ?

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!