ನವವೃಂದಾವನ ಗಡ್ಡೆಯಲ್ಲಿ ಉತ್ತರಾದಿ ಮಠದಿಂದ ರಘುವರ್ಯ ತೀರ್ಥರ ಆರಾಧನೆಗೆ ಹೈಕೋರ್ಟ್ ಆದೇಶ

By Kannadaprabha NewsFirst Published Jun 6, 2023, 6:48 AM IST
Highlights

ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂ. 5, 6 ಮತ್ತು 7ರಂದು ರಘುವರ್ಯತೀರ್ಥರ ಆರಾಧನೆಯನ್ನು ಉತ್ತರಾದಿ ಮಠದವರು ನೆರವೇರಿಸಲು ಧಾರವಾಡ ಹೈಕೋರ್ಟ್ ಆದೇಶ ನೀಡಿದೆ.

ಗಂಗಾವತಿ (ಜೂ.6) ತಾಲೂಕಿನ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿ ಜೂ. 5, 6 ಮತ್ತು 7ರಂದು ರಘುವರ್ಯತೀರ್ಥರ ಆರಾಧನೆಯನ್ನು ಉತ್ತರಾದಿ ಮಠದವರು ನೆರವೇರಿಸಲು ಧಾರವಾಡ ಹೈಕೋರ್ಟ್ ಆದೇಶ ನೀಡಿದೆ.

ಮೂರು ದಿನಗಳ ಕಾಲ ಆರಾಧನೆ ನೆರವೇರಿಸಲು ಅನುಮತಿ ನೀಡಬೇಕು ಎಂದು ಉತ್ತರಾದಿ ಮಠದವರು ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಹೈಕೋರ್ಚ್‌ ನ್ಯಾಯಾಧೀಶರು, ಉತ್ತರಾದಿ ಮಠದವರು ಮೂರು ದಿನಗಳ ಕಾಲ ಆರಾಧನೆ ನೆರವೇರಿಸಲು ಅನುಮತಿ ನೀಡಿದ್ದ ಹಿನ್ನೆಲೆಯಲ್ಲಿ ನವವೃಂದಾವನ ಗಡ್ಡೆಯಲ್ಲಿ ಸೋಮವಾರ ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ರಘುವರ್ಯ ತೀರ್ಥರ ಪೂರ್ವಾರಾಧನೆ, ಶ್ರೀ ರಾಮದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.

ಆನೆಗೊಂದಿಯಲ್ಲಿ ರಾಯರಮಠ, ಉತ್ತರಾದಿ ಮಠದ ಅರ್ಚಕರ ಜಗಳ

ಉತ್ತರಾದಿಮಠದ ಪರ ಹೈಕೋರ್ಚ್‌ ಆದೇಶ:

ಪ್ರತಿವರ್ಷದಂತೆ ಸಹ, ನವವೃಂದಾವನ ಗಡ್ಡೆಯ ಶ್ರೀ ರಘುವರ್ಯತೀರ್ಥರ ಮೂಲವೃಂದಾವನ ಸನ್ನಿಧಿಯಲ್ಲಿ ಆರಾಧನೆಯನ್ನು ಉತ್ತರಾದಿಮಠದಿಂದ ನೆರವೇರಿಸಲಾಗುತ್ತಿದ್ದು, ಇದೇ ಜೂ. 5, 6 ಹಾಗೂ 7ರಂದು ಆರಾಧನೆಗೆ ಸೂಕ್ತ ಭದ್ರತಾ ವ್ಯವಸ್ಥೆ ಕೋರಿ ಉತ್ತರಾದಿ ಮಠವು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿತ್ತು. ಆದರೆ, ಅದೇ ದಿನಾಂಕಗಳಂದು ಶ್ರೀರಾಯರ ಮಠದವರೂ ಸುಧಾ ಸಮರ್ಪಣ ಸಂಸ್ಮರೋಣೋತ್ಸವ ಮಾಡುವುದಾಗಿ ಪೊಲೀಸರಿಗೆ ಅರ್ಜಿ ಸಲ್ಲಿಸಿದ್ದರು.

ಎರಡೂ ಅರ್ಜಿಗಳನ್ನು ಪರಿಶೀಲಿಸಿ, ಉಭಯ ಮಠಗಳ ಸಭೆ ನಡೆಸಿದ್ದ ಉಪ ವಿಭಾಗಾಧಿಕಾರಿಗಳು, ನ್ಯಾಯಾಲಯದಿಂದ ಸೂಕ್ತ ಆದೇಶ ಪಡೆದು ಕಾರ್ಯಕ್ರಮಗಳ ಆಚರಣೆ ಮಾಡುವಂತೆ ಮತ್ತು ನ್ಯಾಯಾಲಯದ ಆದೇಶ ಇಲ್ಲದೆ ಯಾವುದೇ ಕಾರ್ಯಕ್ರಮ ಆಚರಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶಿಸಿದ್ದರು.

ಈ ಆದೇಶ ಪ್ರಶ್ನಿಸಿ, ಸೂಕ್ತ ಪರಿಹಾರ ಕೋರಿ ಉತ್ತರಾದಿಮಠವು ಧಾರವಾಡ ಹೈಕೋರ್ಚ್‌ ಪೀಠದಲ್ಲಿ ರಿಟ್‌ ಅರ್ಜಿ ಸಲ್ಲಿಸಿತ್ತು. ರಿಟ್‌ ಅರ್ಜಿ ಮಾನ್ಯ ಮಾಡಿದ ಹೈಕೋರ್ಚ್‌ ನ್ಯಾಯಾಧೀಶರಾದ ಪ್ರದೀಪ್‌ ಸಿಂಗ್‌ ಏರೂರು ಸೋಮವಾರ ವಾದ ಪ್ರತಿವಾದಗಳನ್ನು ಆಲಿಸಿ, ಉತ್ತರಾದಿಮಠದ ಪರ ವಾದ ಎತ್ತಿ ಹಿಡಿದರು.

ಉತ್ತರಾದಿಮಠದ ವತಿಯಿಂದ ಆರಾಧನೆಯನ್ನು ನೆರವೇರಿಸಲು ಬೇಕಾದ ಸೂಕ್ತ ಸುರಕ್ಷತೆಯನ್ನು ನೀಡುವ ಮೂಲಕ ಆರಾಧನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಇರುವಂತೆ, ಶಾಂತಿ ಕದಡದೆ ಇರುವಂತೆ ನೋಡಿಕೊಳ್ಳಲು ಜಿಲ್ಲಾಡಳಿತಕ್ಕೆ ಆದೇಶ ನೀಡಿದರು. ಅಲ್ಲದೆ, ಶ್ರೀ ರಘುವರ್ಯತೀರ್ಥರ ಆರಾಧನೆ ವಿಷಯವು ಈಗಾಗಲೇ ಉಭಯ ಮಠಗಳ ಮಧ್ಯೆ ನಡೆಯುತ್ತಿರುವ ಯಾವುದೇ ಕೇಸುಗಳಲ್ಲಿ ವಿವಾದದ ವಿಷಯವೇ ಆಗಿಲ್ಲ ಎಂದು ಹೇಳಿದರು.

ಉತ್ತರಾದಿ ಮಠದ ಪರವಾಗಿ ಹಿರಿಯ ನ್ಯಾಯವಾದಿಗಳಾದ ಬೆಂಗಳೂರಿನ ಜಯಕುಮಾರ ಪಾಟೀಲ…, ಕಲಬುರಗಿಯ ಅಮಿತ ದೇಶಪಾಂಡೆ ವಾದ ಮಂಡಿಸಿದರು. ಧಾರವಾಡದ ಸತೀಶ ರಾಯಚೂರು, ಹೈದರಾಬಾದಿನ ಶ್ರೀಧರಮೂರ್ತಿ, ಧಾರವಾಡದ ಭೂಷಣ ಕುಲಕರ್ಣಿ, ಅನಿಲ ಕೆಂಭಾವಿ, ವಾದಿರಾಜ ವಡವಿ ಉಪಸ್ಥತರಿದ್ದರು.

ಉಪವಾಸವಿದ್ದ ಸತ್ಯಾತ್ಮ ಶ್ರೀಗಳು

ಸೋಮವಾರ ಬೆಳಗ್ಗೆ ಉಚ್ಚ ನ್ಯಾಯಾಲಯದ ಅದೇಶ ನಿರೀಕ್ಷೆ ಇತ್ತಾದರೂ ಶ್ರೀ ರಾಯರಮಠದ ಅರ್ಚಕರು ಶ್ರೀ ಪದ್ಮನಾಭತೀರ್ಥಾದಿ ಎಲ್ಲ ಗುರುಗಳಿಗೂ ಹಸ್ತೋದಕವನ್ನು ನೆರವೇರಿಸಿದ್ದರು. ಯತಿಗಳಿಗೆ ಒಂದೇ ಅಧಿಷ್ಠಾನದಲ್ಲಿ ಒಂದು ಬಾರಿ ಮಾತ್ರ ಹಸ್ತೋದಕ ನೀಡಬೇಕು ಎಂಬುದು ಉತ್ತರಾದಿಮಠದ ದೃಢವಾದ ನಿಲುವು. ಆದರೆ, ರಾಯರಮಠದವರು ಈಗಾಗಲೇ ಹಸ್ತೋದಕ ಮಾಡಿ ಮುಗಿಸಿದ್ದರಿಂದ ನವವೃಂದಾವನಸ್ಥ ಎಲ್ಲ ಯತಿಗಳಿಗೆ ಕೇವಲ ಫಲನಿವೇದನೆಯನ್ನು ಮಾತ್ರ ಮಾಡಿದರು. ಹಸ್ತೋದಕವನ್ನು ಮಾಡಲಾಗಲಿಲ್ಲ. ಗುರುಗಳಿಗೆ ಹಸ್ತೋದಕವನ್ನು ನೀಡದೇ ನಾನು ಭೋಜನ ಮಾಡುವುದು ಯೋಗ್ಯವಲ್ಲ ಎಂದು ಸತ್ಯಾತ್ಮತೀರ್ಥರು ಸೋಮವಾರ ಉಪವಾಸ ಆಚರಿಸಿದರು. ಮಂಗಳವಾರ ಮತ್ತು ಬುಧವಾರ ಮಧ್ಯಾರಾಧನೆ ಹಾಗೂ ಉತ್ತರಾರಾಧನೆ ನಡೆಯಲಿದ್ದು, ಈ ಎರಡೂ ದಿನಗಳ ಕಾಲ ಸತ್ಯಾತ್ಮತೀರ್ಥರು ನಡುಗಡ್ಡೆಯಲ್ಲಿಯೇ ಇದ್ದು ಶ್ರೀ ಮೂಲರಾಮದೇವರ ಸಂಸ್ಥಾನಪೂಜೆ, ಶ್ರೀ ರಘುವರ್ಯ ತೀರ್ಥರಿಗೆ ಪಂಚಾಮೃತ, ಹಸ್ತೋದಕಗಳನ್ನು ನೇರವೇರಿಸುವ ಮೂಲಕ ಆರಾಧನೆಯನ್ನು ವಿಜೃಂಭಣೆಯಿಂದ ನೆರವೇರಿಸಲಿದ್ದಾರೆ ಎಂದು ಮಠದ ಆಡಳಿತಾಧಿಕಾರಿಗಳಾದ ಪಂ. ವಿದ್ಯಾಧೀಶಾಚಾರ್ಯ ಗುತ್ತಲ ತಿಳಿಸಿದ್ದಾರೆ.

ನವವೃಂದಾವನ ಪೂಜೆ: ಹೈಕೋರ್ಟ್ ಗೇ ಹೋಗಿ ಎಂದ ಸುಪ್ರೀಂ!

ಹೈಕೋರ್ಟ್  ಆದೇಶದ ಮೇರೆಗೆ ಆನೆಗೊಂದಿಯ ನವವೃಂದಾವನ ಗಡ್ಡೆಯಲ್ಲಿರುವ ರಘುವರ್ಯತೀರ್ಥರ ಮೂಲ ವೃಂದಾವನದಲ್ಲಿ ಜೂ. 5, 6, 7ರಂದು ಮೂರು ದಿನಗಳ ಕಾಲ ಆರಾಧನೆ ನೆರವೇರಿಸಲು ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಉತ್ತರಾದಿ ಮಠಾಧೀಶರಾಗಿರುವ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಆರಾಧನೆ ನೆರವೇರಸಲಿದ್ದಾರೆ. ಅಲ್ಲದೇ ಹೈಕೋರ್ಚ್‌ ಸೂಕ್ತ ಪೊಲೀಸ್‌ ರಕ್ಷಣೆ ನೀಡುವಂತೆ ಸೂಚನೆ ನೀಡಿದೆ.

ಗೋಪಿನಾಥ ಆಲೂರು, ಆಡಳಿತಾತ್ಮಕ ಸಲಹೆಗಾರರು, ಉತ್ತರಾದಿ ಮಠ

click me!