
ವಾಯುಪುತ್ರ ಆಂಜನೇಯನ ಜನ್ಮ ದಿನವನ್ನು ಭಾರತದೆಲ್ಲೆಡೆ ಭಕ್ತಿ ಭಾವದಿಂದ ಆಚರಿಸಲಾಗುತ್ತದೆ. ಶಕ್ತಿ ಹಾಗೂ ಬುದ್ಧಿಗೆ ಹೆಸರಾದ ಆಂಜನೇಯನನ್ನು ತಮ್ಮದೇ ರೀತಿಯಲ್ಲಿ ಭಕ್ತಿಭಾವದಿಂದ ಜನ ಪೂಜಿಸುತ್ತಾರೆ. ಹನುಮಾನ್ ಚಾಲೀಸಾ ಎಂಬುದು ಭಕ್ತರು, ವಿಶೇಷವಾಗಿ ಈ ದಿನದಂದು, ಹನುಮಂತನನ್ನು ಆರಾಧಿಸಲು ಪಠಿಸುವ ಜನಪ್ರಿಯ ಪ್ರಾರ್ಥನೆಯಾಗಿದೆ. ಆದರೆ ಕುತೂಹಲಕಾರಿ ವಿಚಾರ ಎಂದರೆ ಕರ್ನಾಟಕದ ಅಂಜನಾದ್ರಿಯಲ್ಲಿ ಜನಿಸಿದ ಈ ಆಂಜನೇಯನಿಗೆ, ಲಕ್ಷಣನ ಜೀವ ಉಳಿಸಿದ ಹನುಮನಿಗೆ, ರಾಮನ ಪ್ರಿಯಭಕ್ತನಿಗೆ ಭಾರತದಲ್ಲಿ ವರ್ಷಕ್ಕೆರಡು ಬಾರಿ ಜಯಂತಿ ಅಥವಾ ಹುಟ್ಟುಹಬ್ಬವನ್ನು ಆಚಚರಣೆ ಮಾಡ್ತಾರೆ ಎಂಬ ವಿಚಾರ ನಿಮಗೆ ಗೊತ್ತಾ?
ಭಾರತ ದೇಶಾದ್ಯಂತ ಒಂದೇ ದಿನಾಂಕದಂದು ಹನುಮಾನ್ ಜಯಂತಿಯನ್ನು (Hanuman Jayanti 2025) ಆಚರಿಸಲಾಗುವುದಿಲ್ಲ. ಹನುಮನ ಹುಟ್ಟುಹಬ್ಬವನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತದೆ, ಇದು ಪ್ರಾದೇಶಿಕ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಅವಲಂಬಿಸಿರುತ್ತದೆ. ಆದರೆ ಈ ವಿಶೇಷ ದಿನವನ್ನು ಗುರುತಿಸಲು ಪ್ರಯತ್ನಿಸುತ್ತಿರುವ ಭಕ್ತರಿಗೆ ಇದು ಹೆಚ್ಚಾಗಿ ಗೊಂದಲಕ್ಕೆ ಕಾರಣವಾಗುತ್ತದೆ. ಈ ಬಾರಿ ಹನುಮ ಜಯಂತಿ ಅಥವಾ ಅಂಜನೇಯ ಜಯಂತಿಯೂ ಆತನ ಪ್ರಿಯ ಪ್ರಭು ಶ್ರೀರಾಮನವಮಿಯ ಜೊತೆ ಜೊತೆಗೆ ಬಂದಿದೆ. ಕಳೆದ ವಾರವಷ್ಟೇ ರಾಮನವಮಿ ಅದ್ದೂರಿಯಾಗಿ ನಡೆಯಿತು. ಅಷ್ಟರಲ್ಲಿ ರಾಮನ ದೂತ ಹನುಮನ ಹುಟ್ಟುಹಬ್ಬವೂ ಬಂದಿದೆ.
ವಾಯುಪುತ್ರನಿಗೆ ಎರಡು ಜಯಂತಿಗಳು
ಸಾಮಾನ್ಯವಾಗಿ ಹನುಮ ಜಯಂತಿಯು ಚೈತ್ರ ಮಾಸದ ಚೈತ್ರ ಪೂರ್ಣಿಮೆ ಎಂದು ಕರೆಯಲ್ಪಡುವ ಹುಣ್ಣಿಮೆಯ ದಿನದಂದು ಬರುತ್ತದೆ. ಇದು ಉತ್ತರ ಭಾರತದಲ್ಲಿ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ಹನುಮಜಯಂತಿಯಾಗಿದೆ., ವಾಯು ದೇವರ ಆಶೀರ್ವಾದದೊಂದಿಗೆ ಹನುಮಂತನು ಅಂಜನಾ ಮತ್ತು ಕೇಸರಿ ದಂಪತಿಗಳಿಗೆ ಈ ದಿನದಂದು ಜನಿಸಿದನೆಂದು ನಂಬಲಾಗಿದೆ. ಆದರೆ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ,ಇದೇ ಹನುಮ ಜಯಂತಿಯನ್ನು ಡಿಸೆಂಬರ್‌ನಿಂದ ಜನವರಿಯ ನಡುವೆ ಬರುವ ಮಾರ್ಗಶಿರ ಮಾಸದಲ್ಲಿಯೂ ಆಚರಿಸುತ್ತಾರೆ. ಈ ಪ್ರದೇಶಗಳಲ್ಲಿ ಭಕ್ತರು ಹನುಮಾನ್ ಜಯಂತಿಯವರೆಗೆ 41 ದಿನಗಳ ದೀಕ್ಷೆಯನ್ನು ಆಚರಿಸುತ್ತಾರೆ. ಹನುಮಮಾಲೆಯನ್ನು ಹಾಕಿ ಅಂಜನಾದ್ರಿಗೆ ಪಾದಯಾತ್ರೆ ಕೈಗೊಳ್ಳುತ್ತಾರೆ. ಇದು ಹನುಮಂತನ ಆಂಜನೇಯ ಜಯಂತಿ' ಯಂದು ಕೊನೆಗೊಳ್ಳುತ್ತದೆ . ಈ ದಿನವನ್ನು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.
ಹನುಮ ಜಯಂತಿಯಲ್ಲಿ ಈ ವ್ಯತ್ಯಾಸ ಏಕೆ?
ಎರಡು ವಿಭಿನ್ನ ದಿನಾಂಕಗಳ ಹಿಂದಿನ ಕಾರಣ ಪ್ರಾದೇಶಿಕ ಸಂಪ್ರದಾಯಗಳು ಮತ್ತು ಪ್ರಾಚೀನ ಗ್ರಂಥಗಳಲ್ಲಿರುವ ಮಾಹಿತಿಯಿಂದ ಮಿಳಿತವಾಗಿದೆ. ಪುರಾಣಗಳಂತಹ ಪ್ರಾಚೀನ ಹಿಂದೂ ಧರ್ಮಗ್ರಂಥಗಳಲ್ಲಿನ ಕೆಲವು ಪಠ್ಯಗಳಲ್ಲಿ ಹನುಮನ ಜನನವನ್ನು ಚೈತ್ರಮಾಸದಲ್ಲಿ ಉಲ್ಲೇಖಿಸಿದರೆ, ಇನ್ನು ಕೆಲವು ಗ್ರಂಥಗಳು ಅದನ್ನು ಮಾರ್ಗಶಿರಾ ಮಾಸವೆಂದು ಉಲ್ಲೇಖಿಸಿವೆ. ಹೀಗಾಗಿ ಶತಮಾನಗಳಿಂದಲೂ ಉತ್ತರ ಹಾಗೂ ದಕ್ಷಿಣದಲ್ಲಿ ವಿಭಿನ್ನ ದಿನಾಂಕಗಳಂದು ಹನುಮಾನ್ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಎರಡೂ ಸಂಪ್ರದಾಯಗಳು ಸ್ವತಂತ್ರವಾಗಿ ವಿಕಸನಗೊಂಡಿದ್ದು, ಎರಡನ್ನೂ ಜನ ಗೌರವಿಸುವುದರ ಜೊತೆ ವ್ಯಾಪಕವಾಗಿ ಅನುಸರಿಸುತ್ತಾರೆ.
ದಿನಾಂಕಗಳಲ್ಲಿ ವ್ಯತ್ಯಾಸವಿದ್ದರೂ, ಹನುಮಾನ್ ಜಯಂತಿಯ ಚೈತನ್ಯ ಒಂದೇ ಆಗಿರುತ್ತದೆ. ಭಕ್ತರು ಹನುಮಾನ್ ಚಾಲೀಸಾ ಪಠಿಸುತ್ತಾರೆ, ಪ್ರಾರ್ಥನೆ ಸಲ್ಲಿಸುತ್ತಾರೆ, ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗುತ್ತಾರೆ. ಹನುಮಂತನನ್ನು ಶಕ್ತಿ, ಭಕ್ತಿ, ನಮ್ರತೆ ಮತ್ತು ನಿರ್ಭಯತೆಯ ಸಂಕೇತವೆಂದು ಪೂಜಿಸುತ್ತಾರೆ. ಅಂದಹಾಗೆ ನಾಳೆ ಹನುಮ ಜಯಂತಿ ಇದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಈ ಸಂದರ್ಭವು ಏಪ್ರಿಲ್ 12 2025ರ ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮ ತಿಥಿಯಂದು ಬರುತ್ತದೆ. ಈ ವರ್ಷ, ಪೂರ್ಣಿಮ ತಿಥಿ ಏಪ್ರಿಲ್ 12 ರಂದು ಬೆಳಿಗ್ಗೆ 3:21 ಕ್ಕೆ ಪ್ರಾರಂಭವಾಗಿ ಏಪ್ರಿಲ್ 13 ರಂದು ಬೆಳಗ್ಗೆ 5:51 ಕ್ಕೆ ಕೊನೆಗೊಳ್ಳುತ್ತದೆ.