ಈ ಗಣಪನಿಗೆ ನಿತ್ಯ ಸಾವಿರ ಕೊಡ ಅಭಿಷೇಕ ಆಗಲೇಬೇಕು!

Suvarna News   | Asianet News
Published : May 30, 2020, 07:12 PM IST
ಈ ಗಣಪನಿಗೆ ನಿತ್ಯ ಸಾವಿರ ಕೊಡ ಅಭಿಷೇಕ ಆಗಲೇಬೇಕು!

ಸಾರಾಂಶ

ಈ ವಿನಾಯಕನಿಗೆ ಪ್ರತಿದಿನ ಸಾವಿರ ಕೊಡಪಾನ ನೀರಿನ ಅಭಿಷೇಕ ಆಗಬೇಕು. ಆದರೂ ಮುಂದಿನ ಆರು ವರ್ಷಕ್ಕಾಗುವಷ್ಟು ಅಭಿಷೇಕಗಳು ಬುಕ್‌ ಆಗಿವೆ.  

ಕುಂದಾಪುರ ಬಳಿ ಹಳ್ಳಿ ವಾತಾವರಣದಲ್ಲಿ, ಕಾಡಿನ ನಡುವೆ ಒಂದು ವಿನಾಯಕ ದೇವಸ್ಥಾನವಿದೆ. ಈ ವಿನಾಯಕನನ್ನು ನೋಡಬೇಕಾದರೆ ನೀವು ಒಂದು ಗುಹೆಯನ್ನು ಪ್ರವೇಶಿಸಬೇಕು. ಇಲ್ಲಿನ ಗರ್ಭಗುಡಿಯಲ್ಲಿ ತಣ್ಣಗೆ ಕೂತಿರುವ ವಿನಾಯಕನಿಗೆ ಪ್ರತಿದಿನ ಸಾವಿರ ಕೊಡಪಾನಗಳಷ್ಟು ತಣ್ಣೀರಿನ ಅಭಿಷೇಕ ಆಗಲೇಬೇಕು! ಇದೊಂದು ವಿಶಿಷ್ಟ ಪದ್ಧತಿ ಮತ್ತು ಪರಂಪರೆ. ಪ್ರತಿದಿನ ಇಲ್ಲಿಗೆ ಸಾವಿರ ಕೊಡಪಾನ ನೀರಿನ ಅಭಿಷೇಕದ ಹರಕೆ ಹೊತ್ತವರೂ ಸಾವಿರಾರು ಮಂದಿ. ಒಂದು ವರ್ತಮಾನದ ಪ್ರಕಾರ, ಮುಂದಿನ ಆರು ವರ್ಷಗಳಿಗೆ ಬೇಕಾದಷ್ಟು ಮಂದಿ ಇಲ್ಲಿ ಅಭಿಷೇಕ ಮಾಡಲು ಬುಕ್‌ ಮಾಡಿದ್ದಾರೆ. ಅಂದರೆ ನೀವು ಈಗ ಅಭಿಷೇಕದ ಹರಕೆ ಹೊತ್ತರೆ ನಿಮ್ಮ ಸರದಿ ಬರುವುದು ಆರು ವರ್ಷದ ನಂತರ!

ಧರ್ಮಸ್ಥಳದ ಅಣ್ಣಪ್ಪ ದೇವರ ಬಗ್ಗೆ ತಿಳಿಯದ ವಿಚಾರಗಳಿವು..
 

ಈ ಸೇವೆಯನ್ನು ಆಯರ್‌ ಕೊಡ ಅಭಿಷೇಕ ಎಂದು ಕರೆಯಲಾಗುತ್ತದೆ. ಆಯರ್‌ ಎಂದರೆ ಸಾವಿರ. ತುಂಬಾ ಪ್ರಾಚೀನವಾದ ಈ ದೇವಾಲಯ 800 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ. ಗುಡ್ಡಟ್ಟು ವಿನಾಯಕ ಮಂದಿರ ರಾಷ್ಟ್ರೀಯ ಹೆದ್ದಾರಿ 66ರಿಂದ 10 ಕಿಮೀ ದೂರವಿದ್ದು ಮಂಗಳೂರು ಪಟ್ಟಣದಿಂದ 90 ಕಿಮೀ ದೂರವಿದೆ. ಮಲಗಿದ ಆನೆಯಂತೆ ಕಾಣುವ ಬೃಹತ್ ಗ್ರಾನೈಟ್ ಕಲ್ಲಿನ ಗುಹೆಯ ಕೆಳಗಿರುವ ವಿನಾಯಕನ ಮುಖ್ಯ ಮೂರ್ತಿಯು ತಾನೇ ತಾನಾಗಿ ಉದ್ಭವಿಸಿದೆಯೆಂದು ನಂಬಲಾಗಿದೆ. ವಿನಾಯಕನ ಮೂರು ಅಡಿಗಳ ಮೂರ್ತಿಯು ಸ್ವಯಂ ಭೂ ಎಂದು ಹೇಳಲಾಗುತ್ತದೆ. ಗಣಪತಿಯ ಕಪ್ಪು ಕಲ್ಲಿನ ಶಿಲ್ಪವು ಕುಳಿತುಕೊಂಡಿರುವ ಭಂಗಿಯಲ್ಲಿದೆ. ಅವನ ಸೊಂಡಿಲು, ಕಣ್ಣುಗಳು ಮತ್ತು ಕಾಲುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಗುಹೆ ಯಾವಾಗಲೂ ನೀರಿನಿಂದ ತುಂಬಿರುತ್ತದೆ. ಈ ನೀರಿನಲ್ಲಿ ಗಣಪತಿ ಕುತ್ತಿಗೆವರೆಗೆ ಮುಳುಗಿರುತ್ತಾನೆ. ಭಕ್ತರು ಗಣೇಶನ ದರ್ಶನವನ್ನು ಗಣಪತಿಯ ಮುಂದೆ ಇರುವ ರಂಧ್ರದ ಮೂಲಕ ಪಡೆಯಬಹುದು. ದೇವಸ್ಥಾನವು ಆಕರ್ಷಕ ಮುಖಮಂಟಪ, ತೀರ್ಥಮಂಟಪ, ಹೆಬ್ಬಾಗಿಲು ಮತ್ತು ಪೌಲಿಯಿಂದ ನವೀಕರಿಸಲ್ಪಟ್ಟಿದೆ. ಆಯರ್‌ ಕೊಡ ಅಭಿಷೇಕ ಆಚರಣೆಯಲ್ಲಿ ಗರ್ಭಗೃಹವನ್ನು ಒಣಗಿಸಿ ಮೂರ್ತಿಯ ಮೇಲೆ ಮಂದಿರದ ಬಾವಿಯಿಂದ ಸಾವಿರಾರು ಮಡಕೆ ನೀರನ್ನು ತಂದು ಅಭಿಷೇಕ ಮಾಡಲಾಗುತ್ತದೆ. ಗುಹೆಯೊಳಗಿರುವ ಗರ್ಭಗೃಹದಿಂದ ನೀರು ಹರಿದುಬರುವ ತನಕ ಈ ಜಲಾಭಿಷೇಕ ನಡೆಯುತ್ತದೆ. ಈ ಆಚರಣೆ ಭಕ್ತರಿಗೆ ಅದೃಷ್ಟ ತರುತ್ತದೆಂದು ನಂಬಲಾಗಿದೆ. ಇಲ್ಲಿನ ಇತರ ಜನಪ್ರಿಯ ಆಚರಣೆಗಳು ಗಣಹೋಮ, ಪಂಚಕಜ್ಜಾಯ, ಕಡಬು ಮತ್ತಿತರ ಆಚರಣೆಗಳು. ಚೌತಿಯಂದು ಈ ದೇವಾಲಯ ಭಕ್ತರಿಂದ ಕಿಕ್ಕಿರಿದು ನೆರೆದಿರುತ್ತದೆ.

 

ರಾಶಿ ಅನುಸಾರ ನಿಮ್ಮ ಈ ಅಂಗಗಳು ಆಕರ್ಷಕವಾಗಿರುತ್ತವೆ!

 

ಇದರ ಇತಿಹಾಸ ಹೀಗಿದೆ

ಗುಡ್ಡಟ್ಟು ದೇವಾಲಯದ ಸ್ಥಳಪುರಾಣ ಹೇಳುವಂತೆ ಇದು ಶಿವ- ತ್ರಿಪುರಾಸುರರ ಕಾಳಗದ ಕಾಲದ್ದು. ಅಂದು ತ್ರಿಪುರಾಸುರರ ಜೊತೆಗೆ ಕಾಳಗ ಮಾಡಲು ಶಿವ ತೆರಳಿದಾಗ ಅವನಿಗೆ ಜಯವಾಗಲೇ ಇಲ್ಲ. ಅದಕ್ಕೆ ಕಾರಣ ಕಾಳಗಕ್ಕೆ ಹೋಗುವಾಗ ಆತ ಗಣಪತಿಯನ್ನು ಪ್ರಾರ್ಥಿಸದೇ ಇದ್ದದ್ದು. ಇದು ಗೊತ್ತಾಗಿ ಕೋಪದಿಂದ ಶಿವನು ಮಗನ ಮೇಲೇ ಆಗ್ನೇಯಾಸ್ತ್ರ ಪ್ರಯೋಗ ಮಾಡುತ್ತಾನೆ. ಆದರೆ ಆಗ್ನೇಯಾಸ್ತ್ರಕ್ಕೆ ಗಣೊತಿಯನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅದರ ಪ್ರಭಾವದಿಂದ ಗಣಪತಿ ಜೇನಿನ ಹೊಂಡವೊಂದರಲ್ಲಿ ಬಿದ್ದುಬಿಡುತ್ತಾನೆ.

 

ಇವುಗಳಲ್ಲಿ ಅರ್ಧಕ್ಕೂ ಹೆಚ್ಚು ಗುಣಗಳು ಅವನಲ್ಲಿದ್ದರೆ ಕಣ್ಣು ಮುಚ್ಚಿ ಕೊರಳೊಡ್ಡಿ...

 

ಯಥೇಚ್ಛವಾಗಿ ಜೇನನ್ನು ಸೇವಿಸಿ ಸಂತೃಪ್ತನಾಗಿ, ತನ್ನನ್ನು ಇಲ್ಲಿ ಹಾಕಿದವರಿಗೆ ಜಯವಾಗಲಿ ಎಂದು ಆಶೀರ್ವಾದ ಮಾಡುತ್ತಾನೆ. ಹಾಗೆ ಶಿವನಿಗೆ ತ್ರಿಪುರಾಸುರ ಸಂಹಾರ ಸಾಧ್ಯವಾಗುತ್ತದೆ. ಆದರೆ ಯಥೇಚ್ಛವಾಗಿ ಜೇನನ್ನು ಸೇವಿಸಿದ್ದರಿಂದ ಗಣಪತಿಗೆ ಉಷ್ಣ ಹಾಗೂ ಪಿತ್ತ ಪ್ರಕೋಪ ಬಾಧಿಸುತ್ತದೆ. ಇದನ್ನು ಕಳೆದುಕೊಳ್ಳಲು ನರಸಿಂಹ ತೀರ್ಥದಲ್ಲಿ ಜಲಾಧಿವಾಸನಾಗಿರು ಎಂದು ಶಿವ ಸೂಚಿಸುತ್ತಾನೆ. ಹಾಗೆ ವಾರಾಹಿ ನದಿ ದಡದಲ್ಲಿರುವ ನರಸಿಹ ತೀರ್ಥದಲ್ಲಿ ಗಣಪತಿಯು ಬಂದು ನೀರಿನಲ್ಲಿ ನೆಲೆಸಿರುತ್ತಾನೆ ಎಂದು ಕತೆ ಹೇಳುತ್ತದೆ.

 

ಜ್ಯೋತಿಷ್ಯ ಪ್ರಕಾರ ಹೀಗೆ ಮಾಡಿದ್ರೆ, ಸಂತಾನ ಪ್ರಾಪ್ತಿ ಗ್ಯಾರಂಟಿ!...
 

ಗುಹೆಯಲ್ಲಿ ಗಣಪತಿಯ ಕುತ್ತಿಗೆಯವರೆಗೆ ನೀರು ತುಂಬಿರುತ್ತದೆ. ಅದು ಸಾಲದೆಂದು ಗಣಪತಿ ತಂಪಾಗಲೆಂದು ಪ್ರತಿದಿನ ಸಾವಿರ ಕೊಡ ನೀರು ಅಭಿಷೇಕವನ್ನೂ ಮಾಡಲಾಗುತ್ತದೆ. ಈ ಅಭಿಷೇಕ ಸೇವೆ ಮಾಡಿಸಿದವರಿಗೆ ಸಕಲ ಇಷ್ಟಾರ್ಥಗಳನ್ನು ವಿನಾಯಕ ಅನುಗ್ರಹಿಸುತ್ತಾನೆ ಎಂದು ಪ್ರತೀತಿ.

ಈ ದೇವಾಲಯ ಕುಂದಾಪುರದ ಕೋಟೇಶ್ವರ ಸಮೀಪದಲ್ಲಿದೆ. ಸ್ವಂತ ವಾಹನದಲ್ಲಿ ಹೋಗುವುದು ಉತ್ತಮ.

PREV
click me!

Recommended Stories

ನಾಳೆ ಡಿಸೆಂಬರ್ 7 ಅಪರೂಪದ ಚತುರ್ಗ್ರಹಿ ಯೋಗ, ಐದು ರಾಶಿಗೆ ಅದೃಷ್ಟ, ಹೆಚ್ಚಿನ ಲಾಭ
ಈ ರಾಶಿ ಜನರು ಹೊಸ ವರ್ಷ 2026 ರಲ್ಲಿ ಲಕ್ಷಾಧಿಪತಿಗಳಾಗುತ್ತಾರೆ, ಬಂಪರ್ ಯಶಸ್ಸು, ಸಂತೋಷ ಮತ್ತು ಸಮೃದ್ಧಿ