ಇಂದು ಮಕರ ಸಂಕ್ರಮಣ: ಭರ್ಜರಿ ವ್ಯಾಪಾರ

By Kannadaprabha NewsFirst Published Jan 15, 2023, 8:29 AM IST
Highlights

ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬು, ಕಡ್ಲೆ, ಗೆಣಸು, ಅವರೆಕಾಯಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಮಾರುಕಟ್ಟೆ, ಬಡಾವಣೆಗಳ ಅಂಗಡಿ ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲ-ಸಕ್ಕರೆ ಮಾರಾಟದ ಭರಾಟೆಯೂ ಹೆಚ್ಚಾಗಿತ್ತು. ಕೆ.ಆರ್‌.ಮಾರುಕಟ್ಟೆ, ಗಾಂಧಿ ಬಜಾರ್‌, ಮಲ್ಲೇಶ್ವರ, ಯಶವಂತಪುರ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್‌.ಪುರ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಕಂಡುಬಂತು.

ಬೆಂಗಳೂರು(ಜ.15):  ವರ್ಷದ ಮೊದಲ ಹಬ್ಬ ‘ಮಕರ ಸಂಕ್ರಮಣದ’ ಸಡಗರ ರಾಜಧಾನಿಯಲ್ಲಿ ಕಳೆಗಟ್ಟಿದ್ದು, ಭಾನುವಾರ ನಗರದ ಪ್ರಮುಖ ದೇವಾಲಯಗಳಲ್ಲಿ ದಿನವಿಡೀ ಪೂಜಾ ಕೈಂಕರ್ಯಗಳು ಜರುಲಿವೆ. ಹಬ್ಬದ ವಿಶೇಷವಾದ ಎಳ್ಳು ಬೆಲ್ಲ ಹಂಚಿಕೊಳ್ಳುವುದು, ಎತ್ತುಗಳನ್ನು ಕಿಚ್ಚು ಹಾಯಿಸುವ ಆಚರಣೆಗಳು ನಡೆಯಲಿವೆ.

ಹಬ್ಬದ ಮುನ್ನಾ ದಿನವಾದ ಶನಿವಾರ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಕಬ್ಬು, ಕಡ್ಲೆ, ಗೆಣಸು, ಅವರೆಕಾಯಿ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಮಾರುಕಟ್ಟೆ, ಬಡಾವಣೆಗಳ ಅಂಗಡಿ ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲ-ಸಕ್ಕರೆ ಮಾರಾಟದ ಭರಾಟೆಯೂ ಹೆಚ್ಚಾಗಿತ್ತು. ಕೆ.ಆರ್‌.ಮಾರುಕಟ್ಟೆ, ಗಾಂಧಿ ಬಜಾರ್‌, ಮಲ್ಲೇಶ್ವರ, ಯಶವಂತಪುರ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್‌.ಪುರ ಸೇರಿ ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ಹಬ್ಬದ ವ್ಯಾಪಾರ ಕಂಡುಬಂತು.

ಶಬರಿಮಲೆ: ಲಕ್ಷಾಂತರ ಭಕ್ತರಿಗೆ ಮಕರಜ್ಯೋತಿ ದರ್ಶನ

ಭಾನುವಾರ ನಗರದ ಗವಿಗಂಗಾಧರೇಶ್ವರ ದೇವಸ್ಥಾನ, ಬನಶಂಕರಿಯ ಶ್ರೀ ಬನಶಂಕರಿದೇವಿ ದೇವಸ್ಥಾನ, ಮಲ್ಲೇಶ್ವರದ ಕಾಡುಮಲ್ಲೇಶ್ವರ ದೇವಸ್ಥಾನ, ಬಸವನಗುಡಿ ದೊಡ್ಡಬಸವಣ್ಣ ದೇವಾಲಯ, ಕೆ.ಆರ್‌.ಮಾರುಕಟ್ಟೆಯ ಕೋಟೆ ವೆಂಕಟರಮಣ ದೇವಸ್ಥಾನ, ಹಲಸೂರಿನ ಸೋಮೇಶ್ವರ ದೇವಸ್ಥಾನ ಸೇರಿದಂತೆ ನಗರದ ಪ್ರಮುಖ ದೇವಾಲಯಗಳಲ್ಲಿ ದಿನವಿಡೀ ವಿಶೇಷ ಪೂಜಾ ಕೈಂಕರ್ಯಗಳು ಜರುಗಲಿವೆ.

ಸಾಮಾನ್ಯವಾಗಿ ಕೆ.ಆರ್‌.ಮಾರುಕಟ್ಟೆಗೆ 6-7 ಲಾರಿ ಕಬ್ಬಿನ ಜಲ್ಲೆ ಜರುತ್ತದೆ. ಸಂಕ್ರಾಂತಿಗಾಗಿ ನಾಲ್ಕೈದು ದಿನಗಳಿಂದ 12-15 ಲಾರಿ ಲೋಡ್‌ ಕಬ್ಬು ಬರುತ್ತಿದೆ. ಪ್ರತಿ ಜಲ್ಲೆಗೆ .80-120ರವರೆಗೆ ಮಾರಾಟವಾಗುತ್ತಿದೆ. ಕಡಲೆಕಾಯಿ ಪ್ರತಿ ಕೇಜಿಗೆ .80-100, ಅವರೆಕಾಯಿ .90-100, ಸಿಹಿ ಗೆಣಸು .50-60 ಮಾರಾಟವಾಯಿತು. ಸಂಕ್ರಾಂತಿಗೆ ಮಲ್ಲಿಗೆ ಹೂವಿನ ಪೂರೈಕೆ ಕೊರತೆ ಕಾರಣ ದರ ಹೆಚ್ಚಾಗಿದ್ದು .800-1000 ಬೆಲೆಯಿದೆ. ಉಳಿದಂತೆ ಸೇವಂತಿಗೆ ಕೇಜಿಗೆ .160-180, ಗುಲಾಬಿ .220-250, ತುಳಸಿ .70-80 ಇದೆ.

ಗವಿಗಂಗಾಧರೇಶ್ವರಗೆ ಸೂರ್ಯ ನಮನ

ಮಕರ ಸಂಕ್ರಮಣ ಸೂರ್ಯದೇವ ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸುವ ದಿನ. ಸಂಜೆ 5.20ರಿಂದ 5.36 ಸಮಯದಲ್ಲಿ ಗವಿಗಂಗಾಧರೇಶ್ವರ ಸ್ವಾಮಿಯ ಮೇಲೆ ಸೂರ್ಯ ರಶ್ಮಿ ಬೀಳಲಿದೆ. ಈ ವೇಳೆ ದೇವಾಲಯಕ್ಕೆ ಬರುವ ಭಕ್ತರಿಗೆ ಆಡಳಿತ ಮಂಡಳಿ ಸಕಲ ವ್ಯವಸ್ಥೆ ಮಾಡಿದೆ. ಶಿವನ ವಿಗ್ರಹಕ್ಕೆ ಸೂರ್ಯಾಭಿಷೇಕ ಆಗುವ ವೇಳೆಗೆ ಎಳನೀರು ಮತ್ತು ಹಾಲಿನಿಂದ ಸ್ವಾಮಿಗೆ ಅಭಿಷೇಕ ಮಾಡಲಾಗುವುದು. ಬಳಿಕ ಸಂಕಲ್ಪ ಪೂಜೆ ಮಾಡಿ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಗುವುದು ಎಂದು ದೇವಾಲಯದ ಪ್ರಧಾನ ಅರ್ಚಕ ಡಾ. ಸೋಮಸುಂದರ ದೀಕ್ಷಿತ್‌ ತಿಳಿಸಿದ್ದಾರೆ.

Sankranti 2023 Wishes: ಸರ್ವರಿಗೂ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು

ಕಿಚ್ಚು ಹಾಯಲಿವೆ ಗೋವುಗಳು

ರಾಜರಾಜೇಶ್ವರಿ ನಗರ, ಮತ್ತಿಕೆರೆ, ಯಶವಂತಪುರ, ಯಲಹಂಕ ಉಪನಗರ, ಪದ್ಮನಾಭ ನಗರ ಸೇರಿ ವಿವಿಧೆಡೆಗಳಲ್ಲಿ ಸಂಘ ಸಂಸ್ಥೆಗಳು ಸಂಕ್ರಾಂತಿ ಹಬ್ಬವನ್ನು ವಿಶೇಷವಾಗಿ ಆಚರಿಸಲು ಸಜ್ಜಾಗಿವೆ. ಗೋವುಗಳನ್ನು ಅಲಂಕರಿಸಿ, ಬೆನ್ನ ಮೇಲೆ ಸಿಂಗಾರದ ಬಟ್ಟೆಹೊದಿಸಿ, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಿಗೆ ಗಂಟೆ ಮಾಲೆ ಹಾಕಿ ಸಿಂಗರಿಸಿ ಸ್ಥಳೀಯ ಮೈದಾನಗಳಲ್ಲಿ ಕಿಚ್ಚು ಹಾಯಿಸಲು ಸಿದ್ಧತೆ ನಡೆದಿದೆ.

ಬಿಡಿ ಹೂವು ಪ್ರತಿ ಕೇಜಿಗೆ (ಕೆ.ಆರ್‌. ಮಾರುಕಟ್ಟೆ)

ಮಲ್ಲಿಗೆ ಹೂವು - .800-1000
ಕನಕಾಂಬರ - .1000
ಕಾಕಡ - .500-600
ಸುಗಂಧರಾಜ - .150
ಕರಿಷ್ಮಾ ಹೂವು .100-120
ಸೇವಂತಿಗೆ ಹೂವು .80-150
ಸೇವಂತಿಗೆ (1 ಮಾರು) .80-100
ಎಳ್ಳು-ಬೆಲ್ಲ ಕೆಜಿಗೆ .250-360
ಸಕ್ಕರೆ ಅಚ್ಚು .250-300
ಬಿಳಿ ಕಬ್ಬು ಜೋಡಿ .80-120
ಕರಿಕಬ್ಬು ಜೋಡಿಗೆ .100-140

click me!