ಕೊಪ್ಪಳ ಅಜ್ಜನ ಜಾತ್ರೆ: 8 ಲಕ್ಷ ಭಕ್ತಸಾಗರದ ನಡುವೆ ಗವಿಸಿದ್ದೇಶ್ವರ ತೇರು!

By Kannadaprabha News  |  First Published Jan 9, 2023, 8:27 AM IST

ಅಜ್ಜನ ಜಾತ್ರೆ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವ ಹೊಸ ಇತಿಹಾಸ ಸೃಷ್ಟಿಸಿದ್ದು, ಜಾತ್ರೆ, ರಥೋತ್ಸವಕ್ಕೆ ಹೊಸ ಭಾಷ್ಯ ಬರೆದಿದೆ. ಈ ಬಾರಿ 8 ಲಕ್ಷಕ್ಕೂ ಅಧಿಕ ಭಕ್ತಸಾಗರದ ಸಮ್ಮುಖದಲ್ಲಿ ರಥೋತ್ಸವ ನಡೆದಿದ್ದು, ಕಳೆದೆರಡು ವರ್ಷ ಕೊರೋನಾದಿಂದ ರಥೋತ್ಸವ ಕಣ್ತುಂಬಿಸಿಕೊಳ್ಳಲು ಸಾಧ್ಯವಾಗದ ಭಕ್ತರು ಈ ಬಾರಿ ಸಾಗರೋಪಾದಿಯಲ್ಲಿ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿ ಪುನೀತರಾದರು. ವಿಶಾಲ ಗವಿಮಠದ ಬಯಲಿನಲ್ಲಿ ಎತ್ತ ಕಣ್ಣು ಹಾಯಿಸಿದರೂ ಸಹ ಭಕ್ತಸ್ತೋಮ.


ಸೋಮರಡ್ಡಿ ಅಳವಂಡಿ

ಕೊಪ್ಪಳ (ಜ.9) : ಅಜ್ಜನ ಜಾತ್ರೆ ಎಂದೇ ಖ್ಯಾತಿಯಾಗಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾ ರಥೋತ್ಸವ ಹೊಸ ಇತಿಹಾಸ ಸೃಷ್ಟಿಸಿದ್ದು, ಜಾತ್ರೆ, ರಥೋತ್ಸವಕ್ಕೆ ಹೊಸ ಭಾಷ್ಯ ಬರೆದಿದೆ. ಈ ಬಾರಿ 8 ಲಕ್ಷಕ್ಕೂ ಅಧಿಕ ಭಕ್ತಸಾಗರದ ಸಮ್ಮುಖದಲ್ಲಿ ರಥೋತ್ಸವ ನಡೆದಿದ್ದು, ಕಳೆದೆರಡು ವರ್ಷ ಕೊರೋನಾದಿಂದ ರಥೋತ್ಸವ ಕಣ್ತುಂಬಿಸಿಕೊಳ್ಳಲು ಸಾಧ್ಯವಾಗದ ಭಕ್ತರು ಈ ಬಾರಿ ಸಾಗರೋಪಾದಿಯಲ್ಲಿ ಆಗಮಿಸಿ ತಮ್ಮ ಭಕ್ತಿ ಸಮರ್ಪಿಸಿ ಪುನೀತರಾದರು. ವಿಶಾಲ ಗವಿಮಠದ ಬಯಲಿನಲ್ಲಿ ಎತ್ತ ಕಣ್ಣು ಹಾಯಿಸಿದರೂ ಸಹ ಭಕ್ತಸ್ತೋಮ.

Tap to resize

Latest Videos

ಮುಗಿಲು ಮುಟ್ಟಿದ ‘ಗವಿಸಿದ್ದೇಶ್ವರ ಮಹಾರಾಜ ಕೀ ಜೈ ಎಂಬ ಹರ್ಷೋದ್ಗಾರ. ಉತ್ಸವಕ್ಕೆ ಮೆರುಗು ನೀಡಿದ ವಿವಿಧ ವಾದ್ಯವೃಂದಗಳು. ಜಾನಪದ ಕಲಾ ತಂಡಗಳು, ರಾಜ್ಯ, ಹೊರ ರಾಜ್ಯಗಳ ಭಾರೀ ಸಂಖ್ಯೆಯ ಭಕ್ತಸಾಗರ ತುಂಬಿದ್ದ ಇಷ್ಟೊಂದು ಜನರಿಂದ ಆ ವಿಶಾಲ ಬಯಲು ಚಿಕ್ಕದೆಂಬಂತೆ ಭಾಸವಾಯಿತು.

 

ಕೊಪ್ಪಳದ ಗವಿಮಠ ಜ್ಞಾನದಾಸೋಹ, ಸಾಮಾಜಿಕ ಕಳಕಳಿಯ ಶಕ್ತಿ ಕೇಂದ್ರ

ಉತ್ತರ ಕರ್ನಾಟಕ(Uttara Karnataka)ದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಗವಿಸಿದ್ದೇಶ್ವರ ಮಹಾರಥೋತ್ಸವ(Gavisiddeshwar maharathotsav)ದಲ್ಲಿ ಕಂಡುಬಂದ ದೃಶ್ಯ. ಹೌದು, ಕಳೆದ ಎರಡು ವರ್ಷದಿಂದ ಕೊರೋನಾ(Corona)ದಿಂದ ಕಳಾಹೀನವಾಗಿದ್ದ ಜಾತ್ರಾ ಮಹೋತ್ಸವ ಈ ಬಾರಿ ಸಡಗರ, ಸಂಭ್ರಮದಿಂದ ಗವಿಸಿದ್ದೇಶ್ವರ 207ನೇ ಮಹಾರಥೋತ್ಸವ ಭಾನುವಾರ ಸಂಜೆ ಸುಮಾರು ಎಂಟು ಲಕ್ಷ ಭಕ್ತಸಾಗರದ ಮಧ್ಯೆ ನೆರವೇರಿತು. ಶ್ರೀಮಠದ ಆವರಣ, ಗುಡ್ಡ, ಶಾಲಾ, ಕಾಲೇಜು ಕಟ್ಟಡ ಹಾಗೂ ನಗರದ ರಸ್ತೆಗಳೆಲ್ಲ ಭಕ್ತರಿಂದ ತುಂಬಿ ತುಳುಕುತ್ತಿದ್ದವು.

ಬೆಳಗ್ಗೆ ಮಠದಲ್ಲಿ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಸಂಜೆ ಕರ್ತೃ ಗದ್ದುಗೆಗೆ ವಿಶೇಷ ಅಭಿಷೇಕ ಸಲ್ಲಿಸಲಾಯಿತು. ನಂತರ ಪಲ್ಲಕ್ಕಿಯಲ್ಲಿ ವಾದ್ಯವೃಂದ ಮೇಳದೊಂದಿಗೆ ಗವಿಸಿದ್ದೇಶ್ವರ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದ ಬಳಿ ಆಗಮಿಸಿತು. ತೇರಿಗೆ ಐದು ಸುತ್ತು ಪಲ್ಲಕ್ಕಿ ಪ್ರದಕ್ಷಿಣೆ ಹಾಕಿದ ನಂತರ ರಥದಲ್ಲಿ ಗವಿಸಿದ್ದೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಗವಿಸಿದ್ದೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಹರಗುರುಚರಮೂರ್ತಿಗಳು ಪÜಲ್ಲಕ್ಕಿ ಮುಂದೆ ಹೆಜ್ಜೆ ಹಾಕಿದರು. ಪಲ್ಲಕ್ಕಿ ಪ್ರದಕ್ಷಿಣೆ ಬಳಿಕ ಎಲ್ಲ ಶ್ರೀಗಳು ವೇದಿಕೆಯತ್ತ ಆಗಮಿಸಿದರು.

ಗವಿಮಠ(Gavimatha)ದ ಆವರಣವೆಲ್ಲ ಭಕ್ತಸಾಗರದಿಂದ ತುಂಬಿತ್ತು. ಗವಿಶ್ರೀಗಳು ಹಾಗೂ ಎಲ್ಲ ಸ್ವಾಮಿಗಳು ವೇದಿಕೆ ಆಗಮಿಸುತ್ತಿದ್ದಂತೆ ಲಕ್ಷಾಂತರ ಜನಸ್ತೋಮ ಸ್ತಬ್ದವಾಯಿತು. ಗವಿಸಿದ್ದೇಶ್ವರ ಸ್ವಾಮಿಗಳ ಮಾತಿಗೆ ಕಿವಿಕೊಟ್ಟರು. ಶ್ರೀಗಳು ಕೈ ಸನ್ನೆ ಮಾಡಿ, ಒಂದು ನಿಮಿಷ ಎಂದಾಗಲಂತೂ ಜನಸಾಗರ ಶಾಂತಸಾಗರದಂತಾಯಿತು. ಈ ವೇಳೆ ರಥವನ್ನು ಎಳೆಯಲು ಮುಂದಾದಾಗ ಶ್ರೀಗಳು ನಿಲ್ಲಿಸುವಂತೆ ಸೂಚಿಸಿದರು. ಆ ವೇಳೆ ವಿಜಯಪುರದ ಸಿದ್ದೇಶ್ವರ ಶ್ರೀಗಳಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

 

Koppal: ಗವಿಸಿದ್ದೇಶ್ವರ ಜಾತ್ರೆಗೆ 30 ಟನ್‌ ಶೇಂಗಾ ಹೋಳಿಗೆ, 10 ಕ್ವಿಂಟಲ್‌ ತುಪ್ಪ!

ಬಳಿಕ ಈಶಾ ¶ೌಂಡೇಶನ್‌(Isha Foundation) ಸ್ಥಾಪಕ ಶ್ರೀ ಸದ್ಗುರು(Sadguru vasudev) ಅವರು ಜಾತ್ರೆಯನ್ನುದ್ದೇಶಿಸಿ ಮಾತನಾಡಿದರು. ನಂತರ ಶ್ರೀ ಸದ್ಗುರು ಅವರು ಸಂಜೆ 5.30ಕ್ಕೆ ಬಸವಪಟ ಆರೋಹಣ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ರಥವು ಲಕ್ಷಾಂತರ ಭಕ್ತರ ಹರ್ಷೋದ್ಗಾರದ ಮಧ್ಯೆ ಸಾಂಘವಾಗಿ ಸಾಗಿತು. ರಥ ಸಾಗುತ್ತಿದ್ದಂತೆ ನೆರೆದಿದ್ದ ಲಕ್ಷಾಂತರ ಭಕ್ತರು ‘ಗವಿಸಿದ್ದೇಶ್ವರ ಮಹಾರಾಜಕೀ ಜೈ’ ಎಂಬ ಜಯಕಾರದ ಕೂಗಿದರು. 51 ಅಡಿ ಎತ್ತರದ ರಥ ಸಾಗುವುದನ್ನು ಜನ ಕಣ್ತುಂಬಿಕೊಂಡರು. ಮಹಾರಥೋತ್ಸವ ಸಾಗುತ್ತಿದ್ದ ವೇಳೆ ಉತ್ತತ್ತಿ ಎಸೆದು ಭಕ್ತರು ಪುನೀತರಾದರು. ಈ ಬಾರಿ ಬಾಳೆಹಣ್ಣು ಎಸೆಯದಂತೆ ಶ್ರೀಗಳು ಮನವಿ ಮಾಡಿದ ಹಿನ್ನೆಲೆ ಬಹುತೇಕರು ಕೇವಲ ಉತ್ತತ್ತಿ ಎಸೆದರು. ಮಹಾರಥೋತ್ಸವದಲ್ಲಿ ನಂದಿಕೋಲು ಕುಣಿತ, ಪಲ್ಲಕ್ಕಿ ಮೆರವಣಿಗೆ, ಇಲಾಯಿ, ಮಜಲುಗಳ ಮೇಳಗಳು ರಥೋತ್ಸವಕ್ಕೆ ಕಳೆಗಟ್ಟಿದ್ದವು. ಪಾದಗಟ್ಟೆಯವರೆಗೆ ಸಾಗಿದ ಬಳಿಕ ಸ್ವಸ್ಥಾನಕ್ಕೆ ಮರಳಿತು. ರಥೋತ್ಸವ ಯಶಸ್ವಿಗೊಂಡಿದ್ದಕ್ಕೆ ಭಕ್ತರೆಲ್ಲ ಚಪ್ಪಾಳೆ ತಟ್ಟಿಹರ್ಷ ವ್ಯಕ್ತಪಡಿಸಿದರು.

click me!