Garuda Purana: ಪಕ್ಷಿರಾಜ ಗರುಡ ವಿಷ್ಣುವಿನ ವಾಹನ ಆಗಿದ್ಹೇಗೆ ಗೊತ್ತಾ?

By Suvarna News  |  First Published Mar 11, 2023, 1:44 PM IST

ವಿಷ್ಣುವಿನ ವಾಹನ ಯಾವುದು ಅಂತಾ ಕೇಳಿದ್ರೆ ಥಟ್ ಅಂತ ಗರುಡ ಎನ್ನುತ್ತೇವೆ. ಉತ್ತರ ನೂರಕ್ಕೆ ನೂರು ಸತ್ಯ. ಆದ್ರೆ ಗರುಡನನ್ನೇ ವಿಷ್ಣು ಏಕ ತನ್ನ ವಾಹನವನ್ನಾಗಿ ಆಯ್ಕೆ ಮಾಡಿಕೊಂಡ,  ಅದಕ್ಕೆ ಕಾರಣವೇನು ಎಂಬುದು ಅನೇಕರಿಗೆ ತಿಳಿದಿಲ್ಲ.
 


ಪುರಾಣ ಕಥೆಗಳು ಹೇಳುವಂತೆ ಒಂದೊಂದು ದೇವರಿಗೆ ಒಂದೊಂದು ವಾಹನವಿದೆ. ಉದಾಹರಣೆಗೆ ಗಣೇಶನಿಗೆ ಇಲಿ ವಾಹನ, ಈಶ್ವರನಿಗೆ ನಂದಿ ವಾಹನ, ಸರಸ್ವತಿಗೆ ಹಂಸ ವಾಹನ, ಶನಿಗೆ ಕಾಗೆ ವಾಹನ ಹೀಗೆ ಒಂದೊಂದು ದೇವರು ಒಂದು ವಾಹನವನ್ನು ಏರಿ ಲೋಕ ಸಂಚಾರ ಮಾಡುತ್ತಿದ್ದರು ಎಂಬುದನ್ನು ನಾವು ಪೌರಾಣಿಕ ಕಥೆಗಳಲ್ಲಿ ಕೇಳಿದ್ದೇವೆ. ಎಲ್ಲ ದೇವ ದೇವತೆಯರಂತೆ ವಿಷ್ಣುವಿಗೂ ವಾಹನವಿದೆ. ಗರುಡ ವಿಷ್ಣುವಿನ ವಾಹನವಾಗಿದೆ. ವಿಷ್ಣುವು ಏಕೆ ಗರುಡನನ್ನೇ ತನ್ನ ವಾಹನವನ್ನಾಗಿ ಮಾಡಿಕೊಂಡ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.

ದೇವತೆ (God)ಗಳಿಂದ ಅಮೃತವನ್ನೇ ಕಸಿದುಕೊಂಡ ಗರುಡ (Garuda) : ಹದಿನೆಂಟು ಮಹಾಪುರಾಣಗಳಲ್ಲಿ ಗರುಡ ಪುರಾಣ ಕೂಡ ಒಂದು. ಇದರಲ್ಲಿ ಪಾಪ ಪುಣ್ಯದ ಫಲ, ಮೃತ್ಯು ಮತ್ತು ಮೃತ್ಯು (Death)ವಿನ ನಂತರದ ಘಟನೆಗಳ ಬಗ್ಗೆ ವಿಸ್ತಾರವಾಗಿ ತಿಳಿಸಲಾಗಿದೆ. ಪಕ್ಷಿಗಳಲ್ಲಿ ಗರುಡವೇ ಸರ್ವಶ್ರೇಷ್ಠ ಪಕ್ಷಿ ಎಂದು ಗರುಡ ಪುರಾಣ ಹೇಳುತ್ತದೆ. ಧಾರ್ಮಿಕ (Religious) ಗ್ರಂಥಗಳ ಪ್ರಕಾರ ಕಶ್ಯಪನ ಪತ್ನಿ ವಿನತೆ ಗರುಡನ ಅಮ್ಮ. ಗರುಡ ಅತೀ ವಿಶಾಲ ಮತ್ತು ಬಲಿಷ್ಠ ಮತ್ತು ತನ್ನ ಸಂಕಲ್ಪವನ್ನು ಪೂರ್ತಿ ಮಾಡುವ ಪಕ್ಷಿಯಾಗಿದೆ. ಸಮುದ್ರ ಮಂಥನದ ಸಮಯದಲ್ಲಿ ಉದ್ಭವಿಸಿದ ಅಮೃತವನ್ನು ಪಡೆಯಲು ಸುರರು ಹಾಗೂ ಅಸುರರ ಕಾದಾಟ ಶುರುವಾಯಿತು. ನಂತರ ಅಸುರರು ಪಡೆದ ಅಮೃತ ಕಲಶ ಕೊನೆಗೆ  ದೇವತೆಗಳಿಗೆ ಸಿಕ್ಕಿತು. ಆದರೆ ಗರುಡ ತನ್ನ ಅಮ್ಮನನ್ನು ರಕ್ಷಿಸುವುದಕ್ಕೋಸ್ಕರ ಆ ಅಮೃತ ಕಲಶವನ್ನು ದೇವತೆಗಳಿಂದ ಕಸಿದುಕೊಂಡ.

Tap to resize

Latest Videos

Astrology Tips : ಸ್ವಸ್ತಿಕ ಚಿಹ್ನೆಯ ನಾಲ್ಕು ಭುಜಗಳ ಅರ್ಥ ಏನು ಗೊತ್ತಾ?

ಸರ್ಪ ದಾಸ್ಯದಿಂದ ಅಮ್ಮನಿಗೆ ಮುಕ್ತಿ ಕೊಡಿಸಿದ: ಕಶ್ಯಪ ಋಷಿಗೆ ವಿನತೆ, ಕದ್ರು ಎಂಬ ಇಬ್ಬರು ಪತ್ನಿಯರು. ಇಬ್ಬರೂ ಕಶ್ಯಪನಿಂದ ಸಂತಾನ ಭಾಗ್ಯದ ವರಪಡೆದಾಗ ವಿನತೆ ಎರಡು ಶಕ್ತಿಶಾಲಿ ಪುತ್ರರನ್ನು ಕೇಳಿದಳು. ಕದ್ರು ಮೊಟ್ಟೆಯ ರೂಪದಲ್ಲಿ ಜನಿಸುವ ಸಾವಿರ ನಾಗಪುತ್ರರು ಬೇಕೆಂದು ಕೇಳಿದಳು. ಕದ್ರುವಿಗೆ ಮಕ್ಕಳಾದರೂ ವಿನತೆಗೆ ಇನ್ನೂ ಮಗು ಜನಿಸಿರಲಿಲ್ಲ. ಹಾಗಾಗಿ ವಿನತೆ ಮೊಟ್ಟೆ ತಾನಾಗಿಯೇ ಒಡೆಯುವ ಮೊದಲೇ ಅದನ್ನು ಒಡೆದುಬಿಡುತ್ತಾಳೆ. ಹಾಗಾಗಿ ವಿನತೆಯ ಮೊದಲನೇ ಮಗ ಅರುಣನ ದೇಹ ಪೂರ್ತಿಯಾದ ಬೆಳವಣಿಗೆಯನ್ನು ಕಾಣಲಿಲ್ಲ. ತನ್ನ ತಾಯಿಯಿಂದ ತನ್ನ ಬೆಳವಣಿಗೆ ಕುಂಠಿತವಾಯಿತು ಎಂದು ತಿಳಿದ ಅರುಣ ತಾಯಿ ವಿನತೆಗೆ “ನೀನು ಸೇವಕಿಯಾಗಿಯೇ ಜೀವನವನ್ನು ಕಳೆಯಬೇಕು” ಎಂದು ಶಾಪ ನೀಡುತ್ತಾನೆ. ಮೊದಲ ಮಗನಿಂದಲೇ ಶಾಪಕ್ಕೆ ಗುರಿಯಾಗುವ ವಿನತೆ ತನ್ನ ತಂಗಿಯ ಸೇವಕಿಯಾಗಿ ಬದುಕಬೇಕಾಯಿತು. ವಿನತೆಯ ಎರಡನೇ ಮಗನೇ ಗರುಡ. ಗರುಡನಿಗೆ ತನ್ನ ತಾಯಿ ಆಕೆಯ ತಂಗಿಯ ಬಳಿಯೇ ದಾಸಿಯ ಹಾಗೆ ಬದುಕುತ್ತಿದ್ದಾಳೆ ಎಂದು ತಿಳಿದಾಗ ತಾಯಿಯನ್ನು ಮುಕ್ತಿಗೊಳಿಸಲು ಚಿಕ್ಕಮ್ಮ ಕದ್ರು ಮತ್ತು ಹಾವಿನ ರೂಪದಲ್ಲಿದ್ದ ಆಕೆಯ ಪುತ್ರರನ್ನು ಕೇಳಿಕೊಳ್ಳುತ್ತಾನೆ.

ಈ ರಾಶಿಯವರು ನಿಮಗೆ ಸುಲಭವಾಗಿ ಮೋಸ ಮಾಡಬಹುದು!!

ಸರ್ಪ ದಾಸ್ಯದಿಂದ ಅಮ್ಮನನ್ನು ಮುಕ್ತಗೊಳಿಸಬೇಕೆಂದರೆ ಅಮೃತವನ್ನು ತಂದು ಕೊಡೆಂದು ಕದ್ರುವಿನ ಮಕ್ಕಳು ಹೇಳುತ್ತಾರೆ. ಅಮ್ಮನನ್ನು ಸರ್ಪಗಳಿಂದ ಬಿಡಿಸುವುದಕ್ಕೋಸ್ಕರ ಅಮೃತವನ್ನು ತರಲು ಗರುಡ ಸ್ವರ್ಗಲೋಕಕ್ಕೆ ಹೊರಡುತ್ತಾನೆ. ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಕೊನೆಯಲ್ಲಿ ತನ್ನ ಎರಡೂ ಕಾಲುಗಳಲ್ಲಿ ಹಾವುಗಳನ್ನು ಹಿಡಿದುಕೊಂಡು ಬಾಯಲ್ಲಿ ಅಮೃತ ಕಲಶವನ್ನು ಎತ್ತಿಕೊಂಡು ಬರುವಾಗ ವಿಷ್ಣುವು ಗರುಡನಿಗೆ ಎದುರಾಗುತ್ತಾನೆ. ಗರುಡನ ಶುದ್ಧ ಮನಸ್ಸನ್ನು ನೋಡಿದ ವಿಷ್ಣು ಗರುಡನ ಬಳಿ ನಿನಗೆ ಯಾವ ವರ ಬೇಕೆಂದು ಕೇಳುತ್ತಾನೆ. ಆಗ ಗರುಡ ನನ್ನನ್ನು ನಿಮ್ಮ ವಾಹನವನ್ನಾಗಿ ಮಾಡಿಕೊಳ್ಳಿ ಎಂದು ಕೇಳುತ್ತಾನೆ. ಗರುಡನ ಮಾತಿಗೆ ಒಪ್ಪುವ ವಿಷ್ಣು ಗರುಡನನ್ನು ತನ್ನ ವಾಹನವನ್ನಾಗಿಸಿಕೊಳ್ಳುತ್ತಾನೆ. ಗರುಡನ ಧೈರ್ಯಕ್ಕೆ ಮೆಚ್ಚಿದ ಇಂದ್ರ ದೇವ ಕೂಡ ನಿನಗೆ ಹಾವುಗಳನ್ನು ಆಹಾರವಾಗಿ ತಿನ್ನುವ ಅಪಾರ ಶಕ್ತಿ ದೊರಕಲಿ ಎಂದು ಆಶೀರ್ವದಿಸುತ್ತಾನೆ. ಹೀಗೆ ಗರುಡ ವಿಷ್ಣುವಿನ ವಾಹನವಾಗಿ ಅತ್ಯಂತ ಶಕ್ತಿಶಾಲಿಯಾಗುತ್ತಾನೆ.

click me!