ಗಣಪತಿ ಬಪ್ಪ ಮೋರಿಯಾ!

By Kannadaprabha News  |  First Published Oct 8, 2023, 12:47 PM IST

ನಾವು ಗಣೇಶೋತ್ಸವ ಆಚರಿಸುತ್ತೇವೆ. ಇಡೀ ಭಾರತವೇ ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿದೆ. ಆದರೆ, ಸಾರ್ವಜನಿಕ ಗಣೇಶೋತ್ಸವವನ್ನು ಇಡೀ ಭಾರತಕ್ಕೆ ದಯಪಾಲಿಸಿದ ರಾಜ್ಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಸಂಭ್ರಮವೇ ಬೇರೆ.


- ಅನನ್ಯ ಗಿರಿ

ಗಣೇಶ ಹಬ್ಬದ ಸಂಭ್ರಮ ಮುಗಿಸಿ ನಾವೀಗ ಕರುನಾಡ ನಾಡಹಬ್ಬ ದಸರೆಗೆ ಸಿದ್ದರಾಗುತ್ತಿದ್ದೇವೆ. ನಮ್ಮ ಮೈಸೂರು ಇಡೀ ವಿಶ್ವವನ್ನು ತನ್ನೆಡೆಗೆ ಸೆಳೆಯುವ ಸೊಬಗಿನ ಕಾಲವಿದು. ಹೀಗೆ ನಾವು ಜಗತ್ತನ್ನು ನಮ್ಮೆಡೆಗೆ ಸೆಳೆಯುವ ನಾಡಹಬ್ಬಕ್ಕೆ ಸಜ್ಜಾಗುತ್ತಿದ್ದರೆ ನೆರೆಯ ಮಹಾರಾಷ್ಟ್ರ ಈಗಷ್ಟೇ ಗಣಪತಿ ಬಪ್ಪ ಮೋರಿಯಾ ಎಂದು ಅಬ್ಬರಿಸಿ ಇಡೀ ವಿಶ್ವವನ್ನು ತನ್ನತ್ತ ತಿರುಗಿ ನೋಡುವಂತೆ ಮಾಡಿದೆ.

Tap to resize

Latest Videos

undefined

ನಾವು ಗಣೇಶೋತ್ಸವ ಆಚರಿಸುತ್ತೇವೆ. ಇಡೀ ಭಾರತವೇ ಗಣೇಶೋತ್ಸವದ ಸಂಭ್ರಮದಲ್ಲಿ ಮಿಂದೆದ್ದಿದೆ. ಆದರೆ, ಸಾರ್ವಜನಿಕ ಗಣೇಶೋತ್ಸವವನ್ನು ಇಡೀ ಭಾರತಕ್ಕೆ ದಯಪಾಲಿಸಿದ ರಾಜ್ಯ ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಸಂಭ್ರಮವೇ ಬೇರೆ. ಮಹಾರಾಷ್ಟ್ರದಲ್ಲಿ ಗಣೇಶೋತ್ಸವ ಎಂದ ಕೂಡಲೇ ಕಣ್ಣ ಮುಂದೆ ಬರುವ ದೃಶ್ಯ ಮುಂಬೈನ ಗಿರಿಗಾವ್‌ ಚೌಪಾಟಿಯ ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲು ಲಾಲ್ಬಾಗ್ ಚಾ ಮಹಾರಾಜ (ಗಣೋತ್ಸವ ಸಂದರ್ಭದಲ್ಲಿ ಮುಂಬೈನ ಲಾಲ್‌ಬಾಗ್ ಪ್ರದೇಶದಲ್ಲಿ ಸಾರ್ವಜನಿಕರ ಪೆಂಡಾಲ್‌ನಲ್ಲಿ ಕೂರಿಸಲಾಗುವ ಗಣಪ ಲಾಲ್ಬಾಗ್‌ ಚಾ ಮಹಾರಾಜ)ನನ್ನು ನಾಲ್ಕೈದು ದಿನಗಟ್ಟಲೇ ಮೆರವಣಿಗೆಯಲ್ಲಿ ಕರೆತರುವ ಭವ್ಯ ದೃಶ್ಯ.

ಜತೆಗೆ, ಮುಂಬೈನ ಚೌಪಾಟಿಯಲ್ಲಿ ವಿಭಿನ್ನ ಆಕಾರದ ಭವ್ಯ ಗಣಪತಿ ಮೂರ್ತಿಗಳನ್ನು ವಿಸರ್ಜನೆ ಕಾಣುವುದೇ ದಿವ್ಯ ಅನುಭೂತಿ. ಹಾಗಂತ ಮಹಾರಾಷ್ಟ್ರದ ಗಣೇಶೋತ್ಸವ ಮುಂಬೈನ ಗಣಪ ಭವ್ಯತೆಗೆ ಮಾತ್ರ ಸೀಮಿತವೇ?

ಈ ಗ್ರಾಮದಲ್ಲಿ ಗಣೇಶನಿಗಿಂತ ಗೌರಿಗೇ ಅಗ್ರಸ್ಥಾನ: ಹೆಂಗಳೆಯರ ಇಷ್ಟಾರ್ಥ ಈಡೇರಿಸೋ ಆರಾಧ್ಯ ದೇವತೆ..!

ಖಂಡಿತ ಇಲ್ಲ. ಮಹಾರಾಷ್ಟ್ರ ರಾಜ್ಯದ ಪ್ರತಿ ಪ್ರದೇಶದ ಗಣೇಶೋತ್ಸವಕ್ಕೂ ತನ್ನದೇ ಆದ ಸೊಬಗಿದೆ. ಭವ್ಯತೆಯಿದೆ, ಇತಿಹಾಸವಿದೆ, ಪರಂಪರೆಯಿದೆ. ಇದರ ಪರಿಚಯವನ್ನು ಇಡೀ ಜಗತ್ತಿಗೆ ಮಾಡಿಕೊಡುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಯು ಇದೇ ಸೆಪ್ಟಂಬರ್‌ 18 ರಿಂದ 28ರವರೆಗೂ ಮಹಾರಾಷ್ಟ್ರದ ಚಾರಿತ್ರಿಕ ನಗರಗಳಾದ ಪುಣೆ, ರತ್ನಗಿರಿ ಹಾಗೂ ಪಾಲ್ಗಾರ್‌ನ ಗಣೇಶೋತ್ಸವದ ಸಂಭ್ರಮವನ್ನು ಜಗತ್ತಿನ ಗಮನಕ್ಕೆ ತರಲು ‘ಅಂತಾರಾಷ್ಟ್ರೀಯ ಗಣೇಶ ಉತ್ಸವ 2023’ ಆಯೋಜಿಸಿತ್ತು.

ಈ ಉತ್ಸವದಲ್ಲಿ ಜಗತ್ತಿನ ಹಾಗೂ ದೇಶದ ವಿವಿಧ ಭಾಗಗಳ ಗಣ್ಯರನ್ನು ಅತಿಥಿಗಳಾಗಿ ಆಹ್ವಾನಿಸಿ ಅವರಿಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಮಹತ್ವದ ನಗರಗಳಾದ ಪುಣೆ, ರತ್ನಗಿರಿ ಹಾಗೂ ಪಾಲ್ಗಾರ್ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ 10 ದಿನಗಳ ಕಾಲದ ಈ ಸಾರ್ವಜನಿಕ ಗಣೇಶೋತ್ಸವ ಪ್ರತ್ಯಕ್ಷ ದರ್ಶನದ ಸೌಭಾಗ್ಯ ಒದಗಿಸಿತ್ತು.

ಈ ಪ್ರತ್ಯಕ್ಷ ದಿವ್ಯಾನುಭವ ಆರಂಭವಾಗಿದ್ದು ಮಹಾರಾಷ್ಟ್ರ ರಾಜ್ಯದ ಪಾಲಿನ ಐಟಿ ಸಿಟಿ ಪುಣೆಯಲ್ಲಿ. ತಲೆತಲಾಂತರದಿಂದ ಪುಣೆ ನಗರವನ್ನು ಶಿಕ್ಷಣಕ್ಕಾಗಿ ನೆಚ್ಚಿರುವ ಉತ್ತರ ಕರ್ನಾಟಕ ಭಾಗದ ಕನ್ನಡಿಗರ ಉಪಸ್ಥಿತಿ ಉತ್ತಮ ಸಂಖ್ಯೆಯಲ್ಲಿರುವ ಪುಣೆ ನಗರ ಇತಿಹಾಸ ಹಾಗೂ ಆಧುನಿಕತೆ ಎರಡನ್ನು ಮೇಳೈಸಿಕೊಂಡಿರುವ ನಗರಿ. ಗಣೇಶೋತ್ಸವವನ್ನು ಸ್ವಾತಂತ್ರೋತ್ಸವದ ಭಾಗವನ್ನಾಗಿ ಮಾಡಿ ಜಗತ್ತಿಗೆ ಸಾರ್ವಜನಿಕ ಗಣೇಶೋತ್ಸವವನ್ನು ಪರಿಚಯ ಮಾಡಿಕೊಟ್ಟವರು ಬಾಲ ಗಂಗಾಧರ ತಿಲಕ್‌. ಅದಕ್ಕೆ ಕಾರಣವಾದ ನೆಲ ಪುಣೆಯ ವಿಂಚಾರ್ಕರ್‌ ವಾಡ ಪ್ರದೇಶ. 1893ರಲ್ಲಿ ಆರಂಭವಾದ ಈ ಸಾರ್ವಜನಿಕ ಗಣೋತ್ಸವ ಇದೀಗ ಇಡೀ ದೇಶವನ್ನು ವ್ಯಾಪಿಸಿದೆ.

ಗಣೇಶನ ನೈವೇದ್ಯದ ಪ್ರಸಾದಕ್ಕೆ ಫುಲ್ ಡಿಮ್ಯಾಂಡ್: 32 ಸಾವಿರಕ್ಕೆ ಲಡ್ಡು ಹರಾಜು

ಇಂತಹ ಆಚರಣೆಯನ್ನು ಜಗತ್ತಿಗೆ ಕೊಟ್ಟ ಪುಣೆಯಲ್ಲಿ ನಿಜಕ್ಕೂ ಅದ್ದೂರಿ ಹಾಗೂ ಅತ್ಯಂತ ಶ್ರೀಮಂತ ಗಣೇಶೋತ್ಸವವೆಂದರೆ ಅದು ನಿಸ್ಸಂಶಯವಾಗಿ ದಗಡುಶೇಟ್ ಹಲ್ವಾಯಿ ಗಣಪತಿ.

ಜಗಮಾನ್ಯವಾಗಿರುವ ಈ ದಗಡುಶೇಟ್ ಗಣಪತಿಯ ಭವ್ಯ ಪರಂಪರೆಯಲ್ಲಿ ಕನ್ನಡಿಗರ ಕೊಡುಗೆ ಅತ್ಯಂತ ಮಹತ್ವದ್ದು. ಏಕೆಂದರೆ, ಗಣಪತಿಗೆ ದಗಡುಶೇಟ್ ಹೆಸರು ಬರಲು ಕಾರಣ ಮತ್ಯಾರೂ ಅಲ್ಲ. ಕರುನಾಡಿನಿಂದ ಪುಣೆ ನಗರಕ್ಕೆ 19ನೇ ಶತಮಾನದಲ್ಲಿ ವಲಸೆ ಹೋದ ಲಿಂಗಾಯತ ಸಮುದಾಯಕ್ಕೆ ಸೇರಿದ ಸಿಹಿ ಮಾರಾಟಗಾರ ಅರ್ಥಾತ್‌ ಹಲ್ವಾಯಿ ಕಿಶನ್ ಗಾಡ್ವೆ ಅವರ ಪುತ್ರ ದಗಡು.

19ನೇ ಶತಮಾನದಲ್ಲಿ ಕರ್ನಾಟಕದಿಂದ ಪುಣೆಗೆ ವಲಸೆ ಹೋಗಿ ಪುಣೆಯ ಬುಧವಾರ ಪೇಟೆಯಲ್ಲಿ ನೆಲೆಸಿ ಸಿಹಿ ಮಳಿಗೆ ತೆರೆದು ವ್ಯಾಪಾರ ಆರಂಭಿಸುವ ಕಿಶನ್‌ಶೇಟ್ ಗಾಡ್ವೆ ಪುಣೆಯ ಅತಿ ದೊಡ್ಡ ವ್ಯಾಪಾರಿಯಾಗಿ ಬೆಳೆಯುತ್ತಾರೆ. ಪುಣೆಯ ಉದ್ಯಮಿಯಾಗಿ ಅವರು 19ನೇ ಶತಮಾನದಲ್ಲಿ ಬ್ರಿಟೀಷರಿಂದ ‘ನಗರ ಶ್ರೇಷ್ಟಿ’ ಎಂಬ ಬಿರುದು ಗಳಿಸುತ್ತಾರೆ. ಪುಣೆಯ ಶ್ರೀಮಂತ ಕುಟುಂಬಗಳ ಪೈಕಿ ಕಿಶನ್ ಶೇಟ್ ಗಾಡ್ವೆಯ ಕುಟುಂಬವು ಒಂದು ಎನಿಸುತ್ತದೆ.

ದೈವಬೀರುವು ಆದ ಕಿಶನ್ ಶೇಟ್ ಅವರಿಗೆ ದಗಡು ಎಂಬ ಪುತ್ರನಿರುತ್ತಾನೆ. ಸುಖವಾಗಿದ್ದ ಈ ಕುಟುಂಬಕ್ಕೆ ಪ್ಲೇಗ್‌ ಮಹಾಮಾರಿ ರೂಪದಲ್ಲಿ ದುರಂತ ಎದುರಾಗುತ್ತದೆ. ಪುತ್ರ ದಗಡು ನಿಧನ ಹೊಂದುತ್ತಾನೆ. ಇದು ಇಡೀ ಕುಟುಂಬವನ್ನು ಬಾಧಿಸುತ್ತದೆ. ಕಿಶನ್‌ ಶೇಟ್‌ ಹಾಗೂ ಅವರ ಪತ್ನಿ ಲಕ್ಷ್ಮೀಬಾಯಿ ಅವರು ತಮ್ಮ ಅಧ್ಯಾತ್ಮ ಗುರು ಮಾಧವನಾಥ ಮಹಾರಾಜರನ್ನು ಭೇಟಿ ಮಾಡಿ ತಮ್ಮ ದುರಂತದ ಬಗ್ಗೆ ಹೇಳಿ ಮುಂದೇನು ಮಾಡಬೇಕು ಎಂದು ಕೇಳಿದಾಗ ಅವರು ನೀಡುವ ಸಲಹೆಯೇ ‘ದಗಡು ಹೆಸರಿನಲ್ಲಿ ಗಣಪತಿ ದೇವಾಲಯ ನಿರ್ಮಾಣ ಮಾಡು’ ಎಂದು.

ಅದರಂತೆ ಕಿಶನ್‌ ಹಾಗೂ ಲಕ್ಷ್ಮೀಬಾಯಿ ದಂಪತಿ ಪುಣೆಯ ಅತ್ಯಂತ ಬ್ಯುಸಿ ಪ್ರದೇಶವಾದ ಬುಧವಾರ ಪೇಟೆಯಲ್ಲಿ ದಗಡುಶೇಟ್ ಗಣಪತಿ ಮಂದಿರ ನಿರ್ಮಾಣ ಮಾಡುತ್ತಾರೆ. ಈ ಗಣಪತಿ ದೇವಾಲಯ ಇಂದು ದೇಶದ ಅತ್ಯಂತ ಶ್ರೀಮಂತ ಗಣೇಶ ಮಂದಿರ. ಈ ಗಣಪತಿ ತೊಟ್ಟಿರುವ ಕಿರೀಟವನ್ನು 9.5 ಕೆ.ಜಿ. ಚಿನ್ನದಿಂದ ಮಾಡಲಾಗಿದ್ದು, 15 ಕೋಟಿ ರು. ಮೌಲ್ಯದ ಚಿನ್ನಾಭರಣವನ್ನು ದಗಡುಶೇಟ್ ಗಣಪ ತೊಟ್ಟಿರುತ್ತಾನೆ. ಇಡೀ ದಗಡು ಶೇಟ್ ಗಣಪತಿ ದೇವಾಲಯವನ್ನು ಬೆಳ್ಳಿಯ ತಗಡಿನಿಂದ ಮಾಡಲಾಗಿದೆ.

ಜಗತ್ತಿನಾದ್ಯಂತ ಬರುವ ಭಕ್ತರಿಂದ ವಾರ್ಷಿಕ ಕೋಟ್ಯಾಂತರ ರು. ದೇಣಿಗೆ ಪಡೆಯುವ ಈ ಗಣಪತಿ ದೇವಾಲಯ ಮಹಾರಾಷ್ಟ್ರದ ಪಾಲಿಗೆ ತಿರುಪತಿ ದೇವಸ್ಥಾನವಿದ್ದಂತೆ. ಆದರೆ, ಈ ದೇಣಿಗೆಯಲ್ಲಿ

ಶೇ.25ರಷ್ಟನ್ನು ಮಾತ್ರ ದೇವಾಲಯದ ಖರ್ಚಿಗೆ ಎಂದು ಇಟ್ಟುಕೊಂಡು ಉಳಿದ ಶೇ.75ರಷ್ಟನ್ನು ಸಮಾಜ ಸೇವಾ ಕಾರ್ಯಗಳಲ್ಲಿ ವಿನಿಯೋಗಿಸುತ್ತದೆ ದೇವಾಲಯ ನಿರ್ವಹಣೆ ಮಾಡುವ ಶ್ರೀಮಂತ ದಗಡುಶೇಟ್‌ ಹಲ್ವಾಯಿ ಗಣಪತಿ ಟ್ರಸ್ಟ್.

ಇಂತಹ ದಗಡು ಶೇಟ್ ಗಣಪನನ್ನು ಸಾರ್ವಜನಿಕ ಗಣೇಶೋತ್ಸವ ನಡೆಯುವ ಅವಧಿಯಲ್ಲಿ ದೇವಾಲಯದಿಂದ ಹೊರ ಭಾಗಕ್ಕೆ ತಂದು ಭವ್ಯ ಪೆಂಡಾಲ್ ನಿರ್ಮಾಣ ಮಾಡಿ 10 ದಿನ ಕೂರಿಸಲಾಗುತ್ತದೆ. ಆದರೆ, ಈ ಗಣಪನ್ನು ವಿಸರ್ಜಿಸಲಾಗುವುದಿಲ್ಲ. ದಗಡುಶೇಟ್ ಗಪಪತಿಯ ಬದಲಾಗಿ ಪುಟ್ಟದೊಂಡು ಗಣಪತಿ ವಿಗ್ರಹವನ್ನು ವಿಸರ್ಜಿಸುವ ಸಂಪ್ರದಾಯ ಇಲ್ಲಿದೆ.

ಇಂತಹ ಭವ್ಯ ಇತಿಹಾಸವುಳ್ಳ ದಗಡುಶೇಟ್ ಗಣಪತಿ ದೇವಾಲಯ ಮುನ್ನೆಡೆಸುವ ಶ್ರೀಮಂತ ದಗಡುಶೇಟ್ ಹಲ್ವಾಯಿ ಗಣಪತಿ ಟ್ರಸ್ಟ್ ಈ ಬಾರಿ ದಗಡುಶೇಟ್ ಸಾರ್ವಜನಿಕ ಗಣಪತಿಗೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ದೇವಾಲಯದ ಪ್ರತಿಕೃತಿಯ ಪೆಂಡಾಲ್‌ ನಿರ್ಮಾಣ ಮಾಡಿತ್ತು.

ವಾಸ್ತವವಾಗಿ ಈ ರಾಮ ಮಂದಿರದ ಪ್ರತಿಕೃತಿಯು ನಿಜಕ್ಕೂ ಪ್ರತಿಕೃತಿಯೇ ಅಥವಾ ನಿಜ ಮಂದಿರವೇ ಎಂದು ಅನುಮಾನ ಮೂಡುವಷ್ಟು ನೈಜವಾಗಿತ್ತು. ಇಂತಹ ಭವ್ಯ ಪೆಂಡಾಲ್‌ನಲ್ಲಿ ವಿರಾಜಮಾನನಾಗಿದ್ದ ಶ್ರೀಮಂತ ದಗಡುಶೇಟ್ ಗಣಪನನ್ನು ಪ್ರತ್ಯಕ್ಷ ನೋಡುವುದೇ ದಿವ್ಯಾನುಭವ. ದೇವಾಲಯದಲ್ಲಿರುವ ಗಣಪತಿಯನ್ನು ಸಾರ್ವಜನಿಕರ ಪೆಂಡಾಲ್‌ನಲ್ಲಿ ಕೂರಿಸಿ ಗಣೋತ್ಸವ ಆಚರಿಸಿ ಉತ್ಸವ ಮುಗಿದ ನಂತರ ಮತ್ತೆ ದೇವಾಲಯ ಹಿಂತಿರುಗಿಸುವ ಸಂಪ್ರದಾಯ ಈ ಶ್ರೀಮಂತ ದಗಡುಶೇಟ್ ಗಣಪನದ್ದು.

ಇಂತಹುದೇ ಮತ್ತೊಂದು ವಿಭಿನ್ನ ಗಣೋತ್ಸವ ಸಂಪ್ರದಾಯವಿರುವುದು ಪುಣೆಯಿಂದ 325 ಕಿ.ಮೀ. ದೂರದ ರತ್ನಗಿರಿಯ ಕೊಂಕಣಿ ಸಮುದ್ರ ತಟದ ಗಣಪತಿ ಪುಲೆ ದೇವಾಲಯದಲ್ಲಿ.

ಮಹಾರಾಷ್ಟ್ರದ ಕೊಂಕಣ ಪ್ರದೇಶದ ನಗರ ರತ್ನಗಿರಿಯಿಂದ ಸುಮಾರು 23 ಕಿ.ಮೀ. ದೂರದಲ್ಲಿದೆ ನಯನ ಮನೋಹರ ಬೀಚ್ ಆರೆವಾರೆ. ಈ ಬೀಚ್ ದಾಟಿದ ಕೆಲ ಹೊತ್ತಿನಲ್ಲೇ ಸಿಗುತ್ತದೆ ಗಣಪತಿ ಪುಲೆ ಬೀಚ್. ಈ ಬೀಚ್‌ಗೆ ಹೊಂದಿಕೊಂಡೇ ಇದೆ ಸ್ವಯಂಭು ಗಣಪತಿ ಪುಲೆ ದೇವಾಲಯ.

ಅರಬ್ಬಿ ಸಮುದ್ರಕ್ಕೆ ಮುಖ ಮಾಡಿ ಕುಳಿತ ಸ್ವಯಂಭು (ಉದ್ಭವ) ಗಣಪತಿಯ ದೇವಾಲಯವಿದು. ಸಾಮಾನ್ಯವಾಗಿ ಗಣಪನ ಮೂರ್ತಿಗಳು ಉತ್ತರ ದಿಕ್ಕಿನಲ್ಲಿ ಮುಖ ಮಾಡಿರುವುದಿಲ್ಲ. ಆದರೆ, ಇಲ್ಲಿಯ ಗಣಪ ಉತ್ತರಾಭಿಮುಖವಾಗಿದ್ದಾನೆ. ಮೊಘಲರ ಕಾಲದಲ್ಲಿ ಸ್ಥಳೀಯ ಗ್ರಾಮದ ಮುಖ್ಯಸ್ಥ ಬಾಲಂಭಟ್ಟ ಭಿಂಡೆ ಈ ಪ್ರದೇಶದ ಹೊಣೆ ಹೊತ್ತಿದ್ದಾಗ ಆತನ ಕುಟುಂಬಕ್ಕೆ ದುರಂತವೊಂದು ಎದುರಾಗುತ್ತದೆ.

ಈ ದುರಂತದಲ್ಲಿ ಚಿಂತಿತನಾಗಿದ್ದ ಭಿಂಡೆಯ ಮನೆಯ ಹಸುವೊಂದು ಮನೆಗೆ ಸಮೀಪದ ಹಾಗೂ ಸಮುದ್ರಕ್ಕೆ ಹತ್ತಿರವಾಗಿರುವ ದಟ್ಟ ಅರಣ್ಯ ತೆರಳಿ ತಾಣವೊಂದರ ಬಳಿ ಹಾಲು ಕರೆಯುತ್ತಿರುತ್ತದೆ. ಇದನ್ನು ಕಂಡ ಕೆಲಸದಾಳು ಮಾಲೀಕ ಭಿಂಡೆಗೆ ವಿಷಯ ಮುಟ್ಟಿಸಿದಾಗ ಈ ಘಟನೆಯ ಹಿನ್ನೆಲೆಯನ್ನು ಭಿಂಡೆ ಕೆದಕುತ್ತಾನೆ. ಆಗ ಅಲ್ಲಿ ಆತನಿಗೆ ಸ್ವಯಂಭು ಗಣಪ ಕಾಣುತ್ತಾನೆ. ಗುರು ಹಿರಿಯರ ಮಾರ್ಗದರ್ಶನದಂತೆ ಭಿಂಡೆ ಈ ಗಣಪನಿಗೆ ದೇವಾಲಯ ನಿರ್ಮಾಣ ಮಾಡಿದಾಗ ಆತನಿಗೆ ಬಂದಿದ್ದ ಸಮಸ್ಯೆ ಬಗೆಹರಿಯಿತಂತೆ. ಹಾಗಂತ ಒಂದು ಐತಿಹ್ಯವಿದೆ.

ಇಂತಹ ಐತಿಹ್ಯವಿರುವ ಸ್ವಯಂಭು ಗಣಪತಿ ಪುಲೆ ದೇವಾಲಯದ ಸುತ್ತಮುತ್ತಲಿನ ಜನ ಗಣೇಶೋತ್ಸವ ಬಂದಾಗ ತಮ್ಮ ಮನೆಯಲ್ಲಿ ಗಣಪನನ್ನು ಕೂರಿಸುವುದಿಲ್ಲ. ಅಷ್ಟೇ ಅಲ್ಲ ಸಾರ್ವಜನಿಕರವಾಗಿಯೂ ಗಣೇಶೋತ್ಸವ ಆಚರಿಸುವುದಿಲ್ಲ. ಬದಲಾಗಿ ಅವರಿಗೆ ಈ ಸ್ವಯಂಭು ಗಣಪತಿ ದೇವಾಲಯದಲ್ಲೇ 10 ದಿನವೂ ಗಣೇಶೋತ್ಸವ ಆಚರಿಸುತ್ತಾರೆ.

ಈ ಭಾಗದ ಇಡೀ ಕೊಂಕಣದ ಗ್ರಾಮಗಳ ಜನರಿಗೆ ಗಣೇಶೋತ್ಸವದ 10 ದಿನ ಮಾತ್ರ ಖುದ್ದಾಗಿ ದೇವಾಲಯಕ್ಕೆ ಆಗಮಿಸಿ ಗಣಪನ್ನು ಸ್ವತಃ ಮಟ್ಟಿ ಪೂಜೆ ಮಾಡುವ ಅಧಿಕಾರ ನೀಡಲಾಗುತ್ತದೆ. ಅಷ್ಟೇ ಅಲ್ಲ, ಈ ಭಾಗದಲ್ಲಿ ಗಣಪನನ್ನು ವಿಸರ್ಜಿಸುವ ಸಂಪ್ರದಾಯವೇ ಇಲ್ಲ. ಏಕೆಂದರೆ, ಇಲ್ಲಿ ಗಣಪ ಸ್ವಯಂಭು.

click me!