
ಆದಿಯಲ್ಲಿ ಮೊದಲು ಪೂಜಿಸಲ್ಪಡುವ ಗಣಪತಿಯ ಆಗಮನ ನಾಳೆ ಅಂದ್ರೆ ಆಗಸ್ಟ್ 27 ರಂದು ಆಗ್ತಿದೆ. ಇಂದು ಗೌರಿ ಪೂಜೆ (Gauri Puja)ಯಲ್ಲಿ ಭಕ್ತರು ನಿರತರಾಗಿದ್ದಾರೆ. ಗೌರಿ ಹಿಂದೆಯೇ ಗಣಪತಿ ಭೂಲೋಕಕ್ಕೆ ಬರಲಿದ್ದಾನೆ. ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನದಂದು ಗಣಪತಿ ಪೂಜೆ ಎಲ್ಲೆಡೆ ಅದ್ಧೂರಿಯಿಂದ ನಡೆಯಲಿದೆ. ಗಣಪತಿ ಪ್ರತಿಷ್ಠಾಪನೆ ಮಾಡುವ ಭಕ್ತರು, ಅನಂತ ಚತುರ್ದಶಿಯವರೆಗೆ ಹಬ್ಬ ಆಚರಿಸಬಹುದು. ನಾಳೆ ಗಣಪತಿ ಹಬ್ಬದ ಮೊದಲ ದಿನ. ಚೌತಿ ದಿನ ಭಕ್ತರು ಏನೆಲ್ಲ ಮಾಡ್ಬೇಕು, ಏನೆಲ್ಲ ಮಾಡ್ಬಾರದು ಎಂಬ ಮಾಹಿತಿ ಇಲ್ಲಿದೆ.
ಗಣೇಶ ಚತುರ್ಥಿ (Ganesha Chaturthi) ಬಹಳ ವಿಶೇಷ. ಯಾಕೆಂದ್ರೆ ಮನೆ – ಮನೆಗೆ ಗಣಪತಿ ಬಪ್ಪನ ಆಗಮನವಾಗುತ್ತದೆ. ಮೊದಲ ದಿನ ಮನೆ, ಸಾರ್ವಜನಿಕ ಪ್ರದೇಶ, ದೇವಸ್ಥಾನಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಪೂಜೆ ಮಾಡಲಾಗುತ್ತದೆ.
ಮೊದಲ ದಿನ ಭಕ್ತರು ಮಾಡ್ಬೇಕು ಈ ಕೆಲ್ಸ :
• ನೀವು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತೀರಿ ಎಂದಾದ್ರೆ ಪೂಜಾ ಸ್ಥಳ, ದೇವರ ಮನೆಯನ್ನು ಮೊದಲು ಸ್ವಚ್ಛಗೊಳಿಸಿ, ಅಲಂಕಾರ ಮಾಡಬೇಕು.
• ವಾಸ್ತು ಶಾಸ್ತ್ರದಲ್ಲಿ ಹೇಳಿದಂತೆ ಮನೆಗೆ ಗಣಪತಿ ಮೂರ್ತಿಯನ್ನು ತರಬೇಕು.
• ವಿಧಿವಿಧಾನ ಮತ್ತು ಶುಭ ಸಮಯದಲ್ಲಿ ಬಪ್ಪನ ಮೂರ್ತಿ ಸ್ಥಾಪನೆ ಮಾಡಬೇಕು. ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಬೆಳಿಗ್ಗೆ 11 ಗಂಟೆ 5 ನಿಮಿಷದಿಂದ ಮಧ್ಯಾಹ್ನ 1 ಗಂಟೆ 40 ನಿಮಿಷದವರೆಗೆ ಶುಭ ಮುಹೂರ್ತವಿದೆ.
• ನೀವು ಮಾರುಕಟ್ಟೆಯಿಂದ ತಂದ ಗಣಪತಿಯನ್ನು ಮುಖ್ಯ ದ್ವಾರದಲ್ಲಿಟ್ಟು, ಅದಕ್ಕೆ ಆರತಿ ಎತ್ತಿ ಅದನ್ನು ಮನೆಯೊಳಗೆ ಕರೆದುಕೊಳ್ಳಬೇಕು.
• ಗಣೇಶನ ಮೂರ್ತಿ ಅಥವಾ ಮೂರ್ತಿಯನ್ನು ಸ್ಥಾಪಿಸುವ ಮೊದಲು, ನೀವು ಶುದ್ಧರಾಗಿ. ನಿತ್ಯ ಕೆಲ್ಸ ಮುಗಿಸಿ, ಸ್ಥಾನ ಮಾಡಿ, ಹೊಸ ಬಟ್ಟೆ ಧರಿಸಿ, ಶಾಂತ ಮನಸ್ಸಿನಿಂದ ಪೂಜೆಗೆ ಸಿದ್ಧರಾಗಿ.
• ಮೂರ್ತಿ ಪ್ರತಿಷ್ಠಾಪನೆ ಮುನ್ನ ಸಂಕಲ್ಪ ಮಾಡಿ. ನೀವು ಒಂದು ದಿನ, ಒಂದೂವರೆ ದಿನ, ಮೂರು ದಿನ, ಐದು ದಿನ, ಏಳು ದಿನ ಅಥವಾ 10 ದಿನಗಳವರೆಗೆ ಮೂರ್ತಿಯನ್ನು ಸ್ಥಾಪಿಸಬಹುದು. ನೀವು ಮನೆಯಲ್ಲಿ ಎಷ್ಟು ದಿನಗಳವರೆಗೆ ಮೂರ್ತಿಯನ್ನು ಇಟ್ಟುಕೊಳ್ತೀರಿ ಎಂಬ ಸಂಕಲ್ಪವನ್ನು ಮೊದಲ ದಿನವೇ ತೆಗೆದುಕೊಳ್ಳಬೇಕು. ಅದರಂತೆ ಗಣಪತಿ ಮೂರ್ತಿ ವಿಸರ್ಜನೆ ಮಾಡ್ಬೇಕು.
• ಇದೇ ದಿನ ಕಲಶ ಸ್ಥಾಪನೆ ಕೂಡ ಮಾಡ್ಬೇಕು. ನೀವು ಗಣೇಶ ಮೂರ್ತಿ ಪ್ರತಿಷ್ಠಾಪನೆ ಜೊತೆ ಕಲಶ ಸ್ಥಾಪನೆ ಮಾಡಿ. ಗಣೇಶನ ಮೂರ್ತಿಯ ಬಳಿ ಕಲಶವನ್ನು ಸ್ಥಾಪಿಸಿ. ಕಲಶಕ್ಕೆ ಗಂಗಾಜಲ ಹಾಕಿ. ಮಾವಿನ ಎಲೆಗಳು, ವೀಳ್ಯದೆಲೆ, ನಾಣ್ಯ, ಅಕ್ಷತೆ, ಕುಂಕುಮ ಇತ್ಯಾದಿಗಳನ್ನು ಹಾಕಿ ಮತ್ತು ಅದ್ರ ಮೇಲೆ ತೆಂಗಿನಕಾಯಿ ಇಡಿ.
• ಹಬ್ಬದ ದಿನ ಮೋದಕ, ಪಂಚಕಜ್ಜಾಯ, ಲಡ್ಡನ್ನು ಅಗತ್ಯವಾಗಿ ಮಾಡ್ಬೇಕು. ಗಣಪತಿ ಮೋದಕ ಪ್ರಿಯನಾಗಿದ್ದು, ಮೋದಕವಿಲ್ಲದೆ ನಿಮ್ಮ ಪೂಜೆ ಫಲ ನೀಡುವುದಿಲ್ಲ ಎಂದು ನಂಬಲಾಗಿದೆ.
• ಗಣಪತಿ ಪ್ರತಿಷ್ಠಾಪನೆ ನಂತ್ರ, ನೈವೇದ್ಯ, ಪೂಜೆಯನ್ನು ಮಾಡಿ ಪ್ರಸಾದ ಸ್ವೀಕರಿಸಬೇಕು.
ಗಣೇಶ ಚತುರ್ಥಿ ದಿನ ಏನು ಮಾಡಬಾರದು? :
• ಗಣೇಶ ಚತುರ್ಥಿಯ ಪವಿತ್ರ ದಿನದಂದು ಬಪ್ಪ ಆಗಮಿಸುತ್ತಾನೆ. ನೀವು ಈಗ ದಿನ ನಕಾರಾತ್ಮಕ ಆಲೋಚನೆ ಮಾಡ್ಬಾರದು. ಜಗಳ, ಗಲಾಟೆಯಿಂದ ದೂರ ಇರಬೇಕು. ಶಾಂತ ಮನಸ್ಸಿನಿಂದ ಗಣಪತಿಯ ಪ್ರಾರ್ಥನೆ ಮಾಡ್ಬೇಕು.
• ಗಣೇಶನನ್ನು ಪ್ರತಿಷ್ಠಾಪಿಸುವಾಗ ತುಳಸಿಯನ್ನು ಮೂರ್ತಿಗೆ ಅರ್ಪಿಸಬೇಡಿ. ಶಾಸ್ತ್ರಗಳ ಪ್ರಕಾರ ಗಣೇಶನಿಗೆ ತುಳಸಿಯನ್ನು ಅರ್ಪಿಸುವುದನ್ನು ನಿಷೇಧಿಸಲಾಗಿದೆ.
• ಗಣೇಶ ಚತುರ್ಥಿಯಂದು ಚಂದ್ರ ದರ್ಶನ ಮಾಡಬಾರದು. ಈ ದಿನ ಚಂದ್ರನನ್ನು ನೋಡುವ ವ್ಯಕ್ತಿಯ ಮೇಲೆ ಸುಳ್ಳು ಆರೋಪ ಬರುತ್ತದೆ ಎಂದು ನಂಬಲಾಗಿದೆ.
• ಮನೆಯಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ ನಂತ್ರ ಮೂರ್ತಿಯನ್ನು ಬಿಟ್ಟು ನೀವು ಮನೆಯಿಂದ ಹೊರಗೆ ಹೋಗಬೇಡಿ. ಮನೆಯಲ್ಲಿ ಒಬ್ಬರಾದ್ರೂ ಇರ್ಲೇಬೇಕು. ವಿಗ್ರಹವನ್ನು ಏಕಾಂಗಿಯಾಗಿ ಬಿಡಬಾರದು.