
ಬೆಂಗಳೂರು: ನಗರದಲ್ಲಿ ಗೌರಿ ಹಾಗೂ ಗಣೇಶ ಹಬ್ಬದ ಸಂಭ್ರಮ ಜೋರಾಗಿ ಮುಂದುವರಿದಿದೆ. ನಗರದ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಜಯನಗರ ಸೇರಿ ಹಲವು ಕಡೆ ಹೂವು, ಹಣ್ಣು ಹಾಗೂ ತರಕಾರಿ ಖರೀದಿಗೆ ಜನಸಾಗರವೇ ಹರಿದು ಬಂದಿದೆ. ಮುಂಜಾನೆ 3 ಗಂಟೆಯಿಂದಲೇ ಮಾರುಕಟ್ಟೆಗಳಲ್ಲಿ ಜನರ ದಂಡು ಕಿಕ್ಕಿರಿದು ಕಂಡು ಬರುತ್ತಿದ್ದು, ಬೆಳಗ್ಗೆ 4 ಗಂಟೆಯಿಂದ ಗೌರಿ ಹಬ್ಬದ ಶಾಪಿಂಗ್ ಜೋರಾಗಿ ಶುರುವಾಗಿದೆ. ಆದರೆ, ಈ ಸಂಭ್ರಮದ ನಡುವೆ ಹೂವಿನ ಗಗನಕ್ಕೇರಿದ ದರ ಗ್ರಾಹಕರಿಗೆ ದೊಡ್ಡ ಹೊಡೆತವಾಗಿದೆ. ಮಳೆಯಿಂದಾಗಿ ಹೂ, ಹಣ್ಣು ಮತ್ತು ತರಕಾರಿಗಳ ಬೆಳೆ ಹಾನಿಗೊಳಗಾಗಿದ್ದು, ಪೂರೈಕೆ ಕುಂದಿರುವುದರಿಂದ ದರಗಳು ಕಳೆದ ವಾರಕ್ಕೆ ಹೋಲಿಸಿದರೆ ಎರಡು ಪಟ್ಟು ಏರಿಕೆ ಕಂಡಿವೆ.
ಹೂವಿನ ಹೆಸರು ಇಂದಿನ ದರ / ಕಳೆದ ವಾರದ ದರ
ಕನಕಾಂಬರ ₹1000/ ₹500
ಮಳ್ಳೆ ಹೂ ₹10,000/ ₹500
ಸೇವಂತಿಗೆ ₹400/ ₹150
ಮಲ್ಲಿಗೆ ₹1000/ ₹500
ಗುಲಾಬಿ ₹300 ₹150
ಕನಗಿಲೆ ₹200 /₹150
ಕೆ.ಆರ್.ಮಾರ್ಕೆಟ್‌ನಲ್ಲಿ ಜನಸಾಗರ ಇಷ್ಟು ಹೆಚ್ಚಾಗಿದೆ ಎಂದರೆ ಕಾಲಿಡಲು ಜಾಗವೇ ಇಲ್ಲದಂತಾಗಿದೆ. ಹೂವು, ಹಣ್ಣು, ತರಕಾರಿ ಖರೀದಿಸಲು ಗ್ರಾಹಕರು ಅತೀ ಹೆಚ್ಚು ಸಂಖ್ಯೆಯಲ್ಲಿ ಧಾವಿಸಿರುವ ಕಾರಣಕ್ಕೆ ಮಾರುಕಟ್ಟೆ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿದೆ. ವಾಹನಗಳು ಇಂಚಿಂಚಾಗಿ ಸಾಗುತ್ತಿದ್ದು, ಟ್ರಾಫಿಕ್ ಪೊಲೀಸರಿಗೂ ನಿಯಂತ್ರಣ ಕಷ್ಟವಾಗುತ್ತಿದೆ.
ಹೂವಿನ ದರ ಗಗನಕ್ಕೇರಿದ ಕಾರಣದಿಂದ ಗ್ರಾಹಕರು ಬೇಕಾದಷ್ಟು ಹೂ ಖರೀದಿಸಲು ಹಿಂಜರಿಯುತ್ತಿದ್ದಾರೆ. “ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ದರ ಡಬಲ್ ಆಗಿದೆ. ಜನರು ಬೆಲೆ ಕೇಳಿ ಹಿಂತಿರುಗುತ್ತಿದ್ದಾರೆ, ಮಾರಾಟ ಕುಂಠಿತವಾಗಿದೆ ಎಂದು ಕೆ.ಆರ್.ಮಾರ್ಕೆಟ್‌ನ ಹೂ ವ್ಯಾಪಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇತ್ತ, ಗ್ರಾಹಕರೂ ದರ ಏರಿಕೆಯಿಂದ ತತ್ತರಿಸಿದ್ದಾರೆ. ಹಬ್ಬದ ಸಂಭ್ರಮಕ್ಕೆ ಹೂ ಬೇಕೇ ಬೇಕು. ಆದರೆ ಇಷ್ಟು ಬೆಲೆ ಕೊಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಸ್ವಲ್ಪ ಪ್ರಮಾಣದಲ್ಲಿ ಮಾತ್ರ ಖರೀದಿಸುತ್ತಿದ್ದೇವೆ ಎಂದು ಖರೀದಿಗೆ ಬಂದವರು ಅಸಮಾಧಾನ ವ್ಯಕ್ತಪಡಿಸಿದರು.
ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಾದ್ಯಂತ ಶಾಪಿಂಗ್ ಗರಿಗೆದರುತ್ತಿದ್ದರೂ, ಹೂವಿನ ದರ ಏರಿಕೆ ಹಬ್ಬದ ಸಂಭ್ರಮಕ್ಕೆ ಬಿರುಕು ತಂದಿದೆ. ಪ್ರತೀ ವರ್ಷ ಹಬ್ಬದ ಸಮಯದಲ್ಲಿ ಹೂ-ಹಣ್ಣು-ತರಕಾರಿಗಳ ದರ ಏರಿಕೆಯಾಗುವುದು ಸಾಮಾನ್ಯ. ಆದರೆ ಈ ಬಾರಿ ಮಳೆ ಹಾಗೂ ಪೂರೈಕೆ ಕೊರತೆಯಿಂದ ಬೆಲೆ ಏರಿಕೆ ಇನ್ನಷ್ಟು ಹೆಚ್ಚಳವಾಗಿದೆ. ನಗರದ ಎಲ್ಲಾ ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ಸಾಗುತ್ತಿದ್ದರೂ, ಹೂ, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆ ಗ್ರಾಹಕರ ಖರೀದಿ ಸಾಮರ್ಥ್ಯವನ್ನು ಕುಗ್ಗಿಸಿದೆ.