ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಚನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸುತ್ತಿದೆ.
ಚನ್ನಮ್ಮನ ಕಿತ್ತೂರು (ಅ.23): ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರಿನಲ್ಲಿ ಅ.23ರಿಂದ ಮೂರು ದಿನಗಳ ಕಾಲ ಕಿತ್ತೂರು ಉತ್ಸವ ನಡೆಯಲಿದ್ದು, ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರವು ಚನ್ನಮ್ಮನ ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವಾಗಿ ಆಚರಿಸುತ್ತಿದೆ. ಅ.23ರ ಸಂಜೆ 7 ಗಂಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವ ಉದ್ಘಾಟಿಸಲಿದ್ದು, 23, 24 ಹಾಗೂ 25 ರಂದು ಕಾರ್ಯಕ್ರಮಗಳು ನಡೆಯಲಿವೆ.
ಮೂರು ದಿನಗಳ ಉತ್ಸವದಲ್ಲಿ ಮೂರು ವೇದಿಕೆಗಳನ್ನು ನಿರ್ಮಿಸಲಾಗಿದೆ. ಕಿತ್ತೂರು ರಾಣಿ ಚನ್ನಮ್ಮ ಮುಖ್ಯ ವೇದಿಕೆ ಹಾಗೂ ರಾಜಾ ಮಲ್ಲಸರ್ಜ ವೇದಿಕೆ ಮತ್ತು ಸಂಗೊಳ್ಳಿ ರಾಯಣ್ಣ ವೇದಿಕೆಗಳಲ್ಲಿ ಮೂರು ದಿನಗಳವರೆಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಉತ್ಸವದಲ್ಲಿ ಐತಿಹಾಸಿಕ, ಸಾಂಸ್ಕೃತಿಕ ಸಂಭ್ರಮ ಕಳೆಗಟ್ಟಲಿದೆ. ಪ್ರಮುಖ ವೇದಿಕೆಯಾದ ರಾಣಿ ಚನ್ನಮ್ಮಾಜಿಯ ವೇದಿಕೆಯ ಮುಂಭಾಗದಲ್ಲಿ ಬೃಹತ್ ಶಾಮಿಯಾನ ತಲೆ ಎತ್ತಿದ್ದು 20 ಸಾವಿರಕ್ಕೂ ಅಧಿಕ ಆಸನದ ವ್ಯವಸ್ಥೆ ಕೈಗೊಳ್ಳಲಾಗಿದೆ.
1.7 ಲಕ್ಷ ಕೋಟಿ ಯೋಜನೆಗೆ ಅಸ್ತು: ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಅನುಮೋದನೆ
ಮಹಿಳೆಯರಿಗೆ ಮೀಸಲಿಟ್ಟ ದಿನ: ರಾಣಿ ಚನ್ನಮ್ಮಾಜಿ ಸ್ಮರಣಾರ್ಥವಾಗಿ ಈ ಬಾರಿ ಕಿತ್ತೂರು ಉತ್ಸವದ ಮಧ್ಯದ ದಿನವಾದ ಅ.24 ಅನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಸಂಬಂಧಪಟ್ಟಂತೆ ವಿಚಾರಗೋಷ್ಠಿಗಳು ಅಂದು ಜರುಗಲಿವೆ. ವೇದಿಕೆ ಕಾರ್ಯಕ್ರಮಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೂ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಪ್ರಮುಖವಾಗಿ ಖ್ಯಾತ ಗಾಯಕರಾದ ವಿಜಯ ಪ್ರಕಾಶ ಹಾಗೂ ರಘು ದೀಕ್ಷಿತ್ ಜನರನ್ನು ರಂಜಿಸಲಿದ್ದಾರೆ.
ಉತ್ಸವ ಸಿದ್ಧತೆ ಪರಿಶೀಲಿಸಿದ ಡಿಸಿ, ಶಾಸಕ: ಮೂರು ದಿನಗಳ ಕಾಲ ನಡೆಯುವ ಕಿತ್ತೂರು ಉತ್ಸವದ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಎಸ್ಪಿ ಸಂಜೀವ ಪಾಟೀಲ, ಶಾಸಕ ಮಹಾಂತೇಶ ದೊಡ್ಡಗೌಡ್ರ ಉತ್ಸವದ ಮುನ್ನಾದಿನವಾದ ಶನಿವಾರ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಪರಿಶೀಲಿಸಿದರು. ಮುಖ್ಯ ವೇದಿಕೆ, ಎರಡು ಉಪವೇದಿಕೆಗಳನ್ನು ಕೂಡ ಪರಿಶೀಲಿಸಲಾಯಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಮಹಾಂತೇಶ ದೊಡ್ಡಗೌಡ್ರ, ಮೊದಲ ಬಾರಿಗೆ ರಾಜ್ಯಮಟ್ಟದ ಚನ್ನಮ್ಮನ ಕಿತ್ತೂರು ಉತ್ಸವ ಹಮ್ಮಿಕೊಳ್ಳಲಾಗಿದೆ. ವ್ಯವಸ್ಥಿತ, ಅದ್ಧೂರಿ ಉತ್ಸವ ಆಚರಣೆಗೆ ಸರ್ವ ರೀತಿಯಲ್ಲೂ ಸಿದ್ಧತೆ ಕೈಗೊಳ್ಳಲಾಗಿದೆ. ಉತ್ಸವಕ್ಕೆ ಬೇರೆ ಬೇರೆ ಕಡೆಗಳಿಂದ ಬರುವ ಜನರಿಗಾಗಿ ಮೂರು ದಿನಗಳವರೆಗೆ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ರೋಟರಿ ಕ್ಲಬ್‌ನಲ್ಲಿ ಮೂರು ದಿನಗಳವರೆಗೆ ಸಾರ್ವಜನಿಕರು, ಕಲಾವಿದರು, ಮಾಧ್ಯಮದವರು ಸೇರಿ ಸುಮಾರು 22 ಸಾವಿರಕ್ಕೂ ಹೆಚ್ಚು ಜನರಿಗೆ ಊಟದ ವ್ಯವಸ್ಥೆ ಇದೆ ಎಂದು ಹೇಳಿದರು.
ಸೂಕ್ತ ಬಂದೋಬಸ್ತ್ ವ್ಯವಸ್ಥೆ: ಉತ್ಸವದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಕ್ರಿಮಿನಲ್ ಹಿನ್ನೆಲೆ ಉಳ್ಳವರ ಬಗ್ಗೆ ನಿಗಾ ವಹಿಸಲಾಗಿದೆ. 22 ಕಡೆ ಪಾರ್ಕಿಂಗ್ ವ್ಯವಸ್ಥೆ, 590ಕಡೆ ಸಿಸಿಟಿವಿ ಅಳವಡಿಸಲಾಗಿದೆ. ಕೆಎಸ್‌ಆರ್‌ಪಿ, ಡಿಎಆರ್, ಗೃಹ ರಕ್ಷಕ, ಸಿವಿಲ್ ಪೊಲೀಸ್ ಸೇರಿ ಒಟ್ಟು 500 ಸಿಬ್ಬಂದಿನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ ಪಾಟೀಲ ತಿಳಿಸಿದರು.
ಉತ್ಸವಕ್ಕೆ 2 ಕೋಟಿ ಅನುದಾನ ಬಿಡುಗಡೆ: ಮೂರು ದಿನಗಳ ಕಾಲ ಚನ್ನಮ್ಮನ ಕಿತ್ತೂರು ಉತ್ಸವ -2022ರನ್ನು ರಾಜ್ಯಮಟ್ಟದ ಉತ್ಸವವನ್ನು ಆಚರಿಸಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ಸವಕ್ಕೆ ಚಾಲನೆ ನೀಡುವರು. ಈಗಾಗಲೇ ರಾಜ್ಯ ಸರ್ಕಾರ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡ್ರ ಹೇಳಿದರು. ಈ ಉತ್ಸವದಲ್ಲಿ ಹಲವಾರು ಸಚಿವರು ಪಾಲ್ಗೊಳ್ಳುವರು. ಗಾಂಧಿ ಜಯಂತಿಯಂದೇ ಬೆಂಗಳೂರಿನಲ್ಲಿ ಚನ್ನಮ್ಮಾಜಿ ಜ್ಯೋತಿ ಯಾತ್ರೆಗೆ ಸಿಎಂ ಬೊಮ್ಮಾಯಿ ಚಾಲನೆ ನೀಡಿದ್ದರು. ಕಿತ್ತೂರು ಉತ್ಸವದ ಪ್ರಚಾರ ಸಾಮಗ್ರಿಯನ್ನೂ ಬಿಡುಗಡೆ ಮಾಡಿದ್ದರು. ಹಾಗಾಗಿ, ನಾವು ಇಲ್ಲಿ ಬಿಡುಗಡೆ ಮಾಡಿಲ್ಲ ಎಂದರು.
ಕೆಂಪೇಗೌಡ ಥೀಮ್ ಪಾರ್ಕ್‌ಗೆ ಮಣ್ಣು ಸಂಗ್ರಹ ಅಭಿಯಾನಕ್ಕೆ ಸಿಎಂ ಬೊಮ್ಮಾಯಿ ಚಾಲನೆ
ಜಿಲ್ಲಾ ಉಸ್ತುವಾರಿ ಸಚಿವರೇ ಕಿತ್ತೂರು ಉತ್ಸವದ ಕುರಿತು ಸುದ್ದಿಗೋಷ್ಠಿ ನಡೆಸಬೇಕಿತ್ತು. ಭಾನುವಾರ ಚನ್ನಮ್ಮನ ಜ್ಯೋತಿ ಯಾತ್ರೆಯನ್ನು ಸ್ವಾಗತಿಸುವರು. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಅಧಿಕಾರಿಗಳೊಂದಿಗೆ ಸಮನ್ವಯ ಕೊತರೆಯೂ ಇಲ್ಲ. ಕೆಲವೊಂದು ತಪ್ಪು ಆಗುವುದು ಸಹಜ. ಇದಕ್ಕಾಗಿ ಕ್ಷಮೆಯಾಚಿಸುತ್ತೇನೆ ಎಂದರು. ಕಿತ್ತೂರು ಉತ್ಸವದಲ್ಲಿ ಪರಂಪರೆ ಮುರಿಯಲಾಗುತ್ತಿಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾವುದೇ ಶಾಸಕರು ಬಂದಾಗ ಬದಲಾವಣೆಯಾಗಲ್ಲ, ಬೆಳವಣಿಗೆಯಾಗುತ್ತದೆ. ಪರಂಪರೆಯನ್ನು ನಾವು ಮುರಿದಿಲ್ಲ ಎಂದು ಸ್ಪಷ್ಟಪಡಿಸಿದರು.