ತುಳು ಸಂಸ್ಕೃತಿ ಪ್ರತಿಬಿಂಬದ ತೆನೆ ಹಬ್ಬ ‘ಕುರಲ್‌ ಪರ್ಬ’

By Kannadaprabha News  |  First Published Oct 23, 2022, 7:38 AM IST

ತುಳು ಸಂಸ್ಕೃತಿ ಪ್ರತಿಬಿಂಬದ ನೆತೆ ಹಬ್ಬ ‘ಕುರಲ್‌ ಪರ್ಬ’

ದೈವಗಳ ಕೋಣೆಯಲ್ಲಿ ಭತ್ತದ ತೆನೆಯಿಂದ ಹೊಸ ಅಕ್ಕಿ ತೆಗೆದು ಪೂಜಿಸುವುದು ವಿಶೇಷ


ವಿಶೇಷ ವರದಿ

 ಪುತ್ತೂರು (ಅ.23) : ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಅದರಲ್ಲೂ ಹೆಚ್ಚಾಗಿ ತುಳು ಬಾಷಿಗರು ವಾಸಿಸುತ್ತಿರುವ ತುಳುನಾಡಿನಲ್ಲಿ ಬೇಸಾಯ ಪ್ರಚಲಿತ. ಆದರೆ ಪರಂಪರಾಗತವಾಗಿ ಬೆಳೆದು ಬಂದಿರುವ ಕುರಲ್‌ ಪರ್ಬ ಎಂಬ ತೆನೆಹಬ್ಬವು ಭತ್ತದ ಬೇಸಾಯದ ಪಳೆಯುಳಿಕೆಯಾಗಿ ಉಳಿದುಕೊಂಡಿದೆ.

Tap to resize

Latest Videos

ಸಂಸ್ಕ್ರತಿ ಇಲ್ಲದವರು ಸಂಸ್ಕ್ರತಿ ಬಗ್ಗೆ ಮಾತನಾಡಬಾರದು , ನಟ ಚೇತನ್‌ಗೆ ಸಚಿವ ಸುನೀಲ್ ಕುಮಾರ್ ಟಾಂಗ್

ಭತ್ತದ ಬೇಸಾಯದಲ್ಲಿ ಪ್ರಮುಖವಾಗಿರುವ ಒಂದು ಬೆಳೆಯ ಕಾಲ ಎಣೇಲು. ಈ ಕೊಯ್ಲು ರೈತ ವರ್ಗಕ್ಕೆ ಅತ್ಯಂತ ಆನಂದಾಯಕ. ಕಾರಣ ಮಳೆಯ ತೀವ್ರತೆಯಿಂದ ಕಂಗಾಲಾಗಿದ್ದ ರೈತ ಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬುವುದು ಎಣೇಲು ಕೊಯ್ಲು. ಹಿಂದೆ ಮಳೆಗಾಲ ಕಷ್ಟದ ದಿನಗಳು. ಒಂದು ಹೊತ್ತಿನ ಊಟಕ್ಕೆ ತತ್ವಾರದ ಪರಿಸ್ಥಿತಿ. ಹಾಗಾಗಿ ಈ ಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವುದು ಎಣೇಲು ಕೊಯ್ಲಿನ ನಂತರ ದಿನಗಳು. ಈ ಹಿನ್ನಲೆಯಲ್ಲಿ ಎಣೇಲು ಭತ್ತದ ಫಲ ತುಂಬಿ ನಿಂತ ಭತ್ತದ ತೆನೆಗೆ ಗೌರವ ನೀಡಿ ‘ಕುರಲ್‌ ಪರ್ಬ’ ಮಾಡಿ ಮನೆ ತುಂಬಿಸಿ ಕೊಳ್ಳುವುದು ಸಂಪ್ರದಾಯ. ಸಾಮಾನ್ಯವಾಗಿ ಸೆಪ್ಟಂಬರ್‌ ತಿಂಗಳ ಸಂಕ್ರಮಣದ ದಿನದಂದು ಹಳ್ಳಿ ಜನತೆ ಈ ತೆನೆ ಹಬ್ಬವನ್ನು ಮಾಡುತ್ತಾರೆ. ಕೆಲವರು ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ತೆನೆ ಹಬ್ಬ ನಡೆಸುತ್ತಾರೆ.

ಆಚರಣೆ ಹೇಗೆ?:

ಮುಂಜಾನೆ ಎದ್ದು ಹೊಲಕ್ಕೆ ಹೋಗಿ ಒಂದಷ್ಟುತೆನೆಗಳನ್ನು ಕಿತ್ತು ಅದನ್ನು ಗದ್ದೆಯಲ್ಲಿಯೇ ಇಟ್ಟು ಬರುತ್ತಾರೆ. ನಂತರ ಮನೆ ಮಂದಿ ಸೇರಿಕೊಂಡು ಗದ್ದೆಗೆ ಹೋಗಿ ಭತ್ತದ ತೆನೆಗಳನ್ನು ಹಿಡಿದುಕೊಂಡು ತುಳುವಿನಲ್ಲಿ ‘ಪೊಲಿ.. ಪೊಲಿ.. ಪೊಲಿಯೇರಡ್‌’ ( ಹೆಚ್ಚು.... ಹೆಚ್ಚು.... ಹೆಚ್ಚೇರಲಿ.....) ಎಂದು ಹೇಳುತ್ತಾ ಮನೆಯಂಗಳಕ್ಕೆ ತರುತ್ತಾರೆ.

ಅಲ್ಲಿ ಮೊದಲೇ ತಂದಿಟ್ಟ ಮರದ ಕಳಸೆ, ಹಾಗೂ ಬಳ್ಳಿಯಿಂದ ಮಾಡಿರುವ ‘ಮಿಜ’ ದಲ್ಲಿ ತುಂಬಿ ಅದರಲ್ಲಿ ಮುಳ್ಳು ಸೌತೆ, ಹಾಗೂ ತೆನೆ ಕಟ್ಟಲು ಬಳಸುವ ದಡ್ಡಲ್‌ ಮರದ ನಾರು ಹಗ್ಗ, ಮಾವಿನ ಎಲೆ, ಹಲಸಿನ ಎಲೆ, ಬಿದಿರಿನ ಎಲೆ, ನಾೖಕಂರ್ಬು ಎಲೆ, ಇಲ್‌್ಲ ಬೂರು ಎಲೆಗಳನ್ನು ಇಟ್ಟು ಸಾಂಪ್ರದಾಯಿಕವಾಗಿ ಧೂಪ ಹಾಕುತ್ತಾರೆ. ಬಳಿಕ ಅದನ್ನು ಮನೆ ಮಂದಿ ಸೇರಿಕೊಂಡು ‘ಪೊಲಿ ಪೊಲಿ’ ಎಂದು ಹೇಳುತ್ತಲೇ ಮನೆಯೊಳಗೆ ಸೇರಿಸುತ್ತಾರೆ.

ಸಾಮಾನ್ಯವಾಗಿ ಇದು ದೈವಗಳ ಕೋಣೆಯಲ್ಲಿ ಇಟ್ಟು ಅಲ್ಲಿ ಭತ್ತದ ತೆನೆಯಿಂದ ಹೊಸ ಅಕ್ಕಿ ತೆಗೆದು ಮತ್ತೆ ದೀಪಕ್ಕೆ ಹಾಕಿ ಪೂಜೆ ಮಾಡುತ್ತಾರೆ. ಕೆಲವು ಮಂದಿ ಇದೇ ಕೋಣೆಯಲ್ಲಿ ಭತ್ತದ ತೆನೆಗಳನ್ನು ಇರಿಸಿದರೆ ಕೆಲವರು ಕಳಸೆ ಮತ್ತು ಮಿಜದ ಜೊತೆಗೆ ಈ ತೆನೆಗಳನ್ನು ಇಟ್ಟು ಮನೆಯ ಅಟ್ಟಕ್ಕೆ ಸೇರಿಸುತ್ತಾರೆ. ಅದಕ್ಕೂ ಮೊದಲು ಭತ್ತದ ತೆನೆಗಳನ್ನು ವಿವಿಧ ಎಲೆಗಳಿಂದ ಸುತ್ತಿ ನಾರು ಹಗ್ಗದಿಂದ ಬಿಗಿದು ತೆಂಗು ಕಂಗು, ಮನೆಯ ಮಾಡು, ತಾವು ಬಳಸುವ ವಾಹನಗಳಿಗೆ ಕಟ್ಟುವ ಕ್ರಿಯೆಯೂ ನಡೆಯುತ್ತದೆ. ಮನೆಯ ಬಾಗಿಲುಗಳಿಗೆ ಈ ಭತ್ತದ ತೆನೆ ಹಾಗೂ ಹಲಸು ಮಾವು ಎಲೆಗಳಿಂದ ಶೃಂಗಾರ ಮಾಡುತ್ತಾರೆ. ಈ ಎಲ್ಲಾ ಕೆಲಸಗಳನ್ನೂ ಸೂರ್ಯ ಮೂಡುವ ಮೊದಲು ನಡೆಸಬೇಕು ಎಂಬುದು ಹಿರಿಯರ ನಂಬಿಕೆ ಮತ್ತು ಸಂಪ್ರದಾಯವಾಗಿದೆ.

ಹೊಸ ಅಕ್ಕಿ ಊಟ:

ನಂತರ ರಾತ್ರಿಗೆ ಹೊಸ ಅಕ್ಕಿ ಊಟ ಮಾಡಲಾಗುತ್ತದೆ. ತೆಂಗಿನ ಹಾಲು ಹಾಕಿ ಹೊಸ ಅಕ್ಕಿ ಬೇಯಿಸಿದ ‘ಪೇರ್‌ ಗಂಜಿ’ ಹಾಗೂ ಹಲವಾರು ಬಗೆಯ ಖಾದ್ಯಗಳನ್ನು ಮಾಡಿ ಅಕ್ಕಪಕ್ಕದ ಮನೆ ಮಂದಿಯನ್ನು ಕರೆದು ಊಟ ಹಾಕುವ ‘ಪುದ್ವಾರ್‌’ ಹೆಸರಿನ ಈ ಹೊಸಕ್ಕಿ ಊಟ (ಸಾಮೂಹಿಕ ಭೋಜನ)ದೊಂದಿಗೆ ಕೊನೆಗೊಳ್ಳುತ್ತದೆ. ಕೆಲವರು ಎಣೇಲ್‌ ಭತ್ತದ ಕೊಯ್ಲು ಮುಗಿದ ನಂತರ ಈ ಪುದ್ವಾರ್‌ ಆಚರಣೆ ಮಾಡುವುದು ವಾಡಿಕೆ. ಆದರೆ ಇತ್ತೀಚೆಗೆ ಕುರಲ್‌ ಪರ್ಬ, ಪುದ್ವಾರ್‌ ಆಚರಣೆಗಳು ತುಳುನಾಡಿನ ಜನರಿಂದ ಮಾಯವಾಗುತ್ತಿದೆ.

ತುಳುನಾಡಿದ ಪ್ರತಿ ಹಿಂದೂಗಳ ಮನೆಯಲ್ಲೂ ದೈವಾರಾಧನೆ ಇದೆ: ಚೇತನ್‌ಗೆ ಕಾಂತಾರ ಬರಹಗಾರನ ತಿರುಗೇಟು!

ಇದಕ್ಕೆ ಪ್ರಮುಖ ಕಾರಣ ರೈತ ವರ್ಗ ಲಾಭದಾಯಕವಲ್ಲದ ಭತ್ತದ ಬೇಸಾಯವನ್ನು ದೂರ ಮಾಡಿ, ಅಡಕೆ, ರಬ್ಬರ್‌ನಂತಹ ವಾಣಿಜ್ಯ ಬೆಳೆಗೆ ಬದಲಾಗಿರುವುದು. ಪುದ್ವಾರ್‌ ಪದ್ಧತಿಯೂ ಇಲ್ಲಿನ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಸಮುದಾಯಗಳಲ್ಲಿಯೂ ನಡೆಯುತ್ತಿತ್ತು. ಮಸ್ಲಿಮರು ‘ಪುದಿಯರಿ’ ಎಂಬ ಹೆಸರಿನಲ್ಲಿ ಪುದ್ವಾರ್‌ ಮಾಡಿದರೆ. ಕ್ರಿಶ್ಚಿಯನ್‌ ಸಮುದಾಯ ಮೊಂತಿ ಹಬ್ಬದ ಹೆಸರಿನಲ್ಲಿ ತೆನೆ ಹಬ್ಬ ಆಚರಣೆ ಮಾಡುತ್ತಿದ್ದಾರೆ. ತುಳುನಾಡಿನಲ್ಲಿ ಸಾವಿರಾರು ವರ್ಷಗಳಿಂದ ಬೆಳೆದುಬಂದ ಬೇಸಾಯ ಪದ್ಧತಿಯೂ ಜನರಿಂದ ಮರೆಯಾಗುತ್ತಿದ್ದಂತೆ ಈ ಸಂಪ್ರದಾಯವೂ ಮಾಯವಾಗುತ್ತಿದೆ.

click me!